ಲೋಕಸಭಾ ಕ್ಷೇತ್ರಗಳ ದೇಶವ್ಯಾಪಿ ಮರುವಿಂಗಡಣೆಯನ್ನು ಶಾಶ್ವತವಾಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಜನಾಂದೋಲ ರೂಪಿಸುವ ನಿರ್ಣಯವನ್ನು ಜಾಗೃತ ಕರ್ನಾಟಕ ಗುರುವಾರ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಕೈಗೊಳ್ಳಲಾಯಿತು.
ಲೋಕಸಭಾ ಕ್ಷೇತ್ರಗಳ ದೇಶವ್ಯಾಪಿ ಮರುವಿಂಗಡಣೆಯನ್ನು ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಇದನ್ನು ಎರಡು ಬಾರಿ ಬೇರೆ ಬೇರೆ ರಾಜಕೀಯ ಪಕ್ಷಗಳ (ಕಾಂಗ್ರೆಸ್ ಮತ್ತು ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರಗಳು 25 ವರ್ಷಗಳ ಕಾಲ ಮುಂದೂಡಿದ್ದವು. ಈ ಅಸಮಾನ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳು ಹಾಗೂ ಇನ್ನಿತರ ಕೆಲವು ರಾಜ್ಯಗಳ ಪ್ರಾತಿನಿಧ್ಯ ಗಣನೀಯವಾಗಿ ಕಡಿಮಯಾಗಲಿದೆ. ಇದು ದೇಶದ ಒಕ್ಕೂಟ ವ್ಯವಸ್ಥೆಯ ಸ್ವರೂಪವನ್ನೇ ಬದಲಿಸಲಿದೆ. ದೇಶದಲ್ಲಿ ಹತ್ತು ಹಲವು ರೀತಿಯ ಕ್ಷೋಭೆಗೆ ಕಾರಣವಾಗಲಿದೆ. ಒಕ್ಕೂಟ ತತ್ವವು ಈ ದೇಶದ ಹುಟ್ಟಿಗೆ ಕಾರಣವಾದ ಸ್ವಾತಂತ್ರ್ಯ ಆಂದೋಲನ ಮತ್ತು ಸಂವಿಧಾನದ ಮೂಲ ಆಶಯಗಳ ಭಾಗ. ಅದರಲ್ಲಿ ರಾಜಿ ಮಾಡಿಕೊಳ್ಳುವ ಯಾವುದೇ ಸರ್ಕಾರ ಅಥವಾ ಪಕ್ಷದ ಧೋರಣೆಯು ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಅಪಾಯವಿದೆ. ಈ ವಿಚಾರದಲ್ಲಿ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ನಿಲುವನ್ನು ಬಹಿರಂಗವಾಗಿ ಸ್ಪಷ್ಟಪಡಿಸಬೇಕೆಂದು ಆಗ್ರಹಿಸುವ ತೀರ್ಮಾನ ಮಾಡಲಾಯಿತು.
ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂಕೋರ್ಟು ವ್ಯಾಖ್ಯಾನಿಸಿರುವಂತೆ ಸಂವಿಧಾನದ ಮೂಲ ಆಶಯಗಳ ಭಾಗವಾಗಿರುವ ಒಕ್ಕೂಟ ತತ್ವದ ವಿರುದ್ಧ ಈ ಮರುವಿಂಗಡಣೆಯ ಪ್ರಸ್ತಾಪ ಇದೆ. ಹಾಗಾಗಿ ಪ್ರತಿಯೊಂದು ಪಕ್ಷವೂ ಇದರ ಬಗ್ಗೆ ನಿಲುವನ್ನು ಹೇಳುವುದು ಅತ್ಯಗತ್ಯ. ರಾಜ್ಯದ ಎಲ್ಲಾ ಜನತೆಯು ಈ ವಿಚಾರದಲ್ಲಿ ಒಗ್ಗಟ್ಟಾಗಿ ಹೋರಾಡುವ ಅಗತ್ಯವಿದೆ. ಕ್ಷೇತ್ರ ಮರುವಿಂಗಡಣೆಯ ಮಾಹಿತಿ ಮತ್ತು ಸೀಟುಗಳನ್ನು ಹೆಚ್ಚಿಸಿ, ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯದ ಪ್ರಮಾಣ ತಗ್ಗಿಸುವ ಹುನ್ನಾರ ಎಲ್ಲರಿಗೂ ತಿಳಿಸುವ ಅಗತ್ಯವೂ ಇದೆ. ಹಾಗಾಗಿ ಮೊದಲ ಹಂತದಲ್ಲಿ ರಾಜ್ಯದ ಎಲ್ಲಾ ಜನಪ್ರತಿನಿಧಿಗಳು, ಅದರಲ್ಲೂ ಲೋಕಸಭಾ ಸದಸ್ಯರು, ಸಾಹಿತಿಗಳು, ಹೋರಾಟಗಾರರು, ಧಾರ್ಮಿಕ ಮುಖಂಡರು, ಸಮುದಾಯಗಳ ಮುಖಂಡರು ಎಲ್ಲರೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ತಮ್ಮ ವಿರೋಧವನ್ನು ದಾಖಲಿಸಬೇಕೆಂದು ಆಗ್ರಹಿಸುತ್ತೇವೆ. ಅದಕ್ಕಾಗಿ ಒಂದು ಮನವಿ ಪತ್ರದ ಮುಖಾಂತರ ಅಂಥವರನ್ನು ಭೇಟಿ ಮಾಡಿ ಪತ್ರ ಬರೆಯಲು ಒತ್ತಾಯಿಸಲಿದ್ದೇವೆ. ರಾಜ್ಯದ ಎಲ್ಲೆಡೆ ವಿಧಾನಸಭಾ ಕ್ಷೇತ್ರವಾರು ಕಾರ್ಯಕ್ರಮಗಳನ್ನು ಸಂಘಟಿಸಲೂ ಸಮಾನ ಮನಸ್ಕರೊಡಗೂಡಿ ಪ್ರಯತ್ನಿಸುವ ನಿರ್ಣಯ ಕೈಗೊಳ್ಳಲಾಯಿತು.
ಈ ಸಲೋಚನಾ ಸಭೆಯಲ್ಲಿ ಜಾಗೃತ ಕರ್ನಾಟಕದ ಸಂಚಾಲಕರಲ್ಲಿ ಒಬ್ಬರಾದ ಮುತ್ತುರಾಜ್ ಅವರು ಡಿಲಿಮಿಟೇಷನ್ ಅಪಾಯಗಳು, ದಕ್ಷಿಣದ ರಾಜ್ಯಗಳಿಗೆ ಆಗಲಿರುವ ಅನ್ಯಾಯಗಳು, ಅಸ್ಸಾಂ ಮತ್ತು ಜಮ್ಮುವಿನಲ್ಲಿ ಮಾಡಲಾದ ಕ್ಷೇತ್ರ ಪುನರ್‌ವಿಂಗಡನೆಯ ಅನ್ಯಾಯಗಳ ಬಗ್ಗೆ ಸವಿಸ್ತಾರವಾದ ವಿಷಯ ಮಂಡನೆ ಮಾಡಿದರು.
ದಲಿತ ಮುಖಂಡ ಬಸವರಾಜ್ ಕೌತಾಳ್, ಡಾ. ಸುನಿಲ್ ಕುಮಾರ್ ಡಿ ಆರ್, ಹಿರಿಯ ಪತ್ರಕರ್ತ ಡಿ ಉಮಾಪತಿ, ಸಾಮಾಜಿಕ ಹೋರಾಟಗಾರರಾದ ಆದರ್ಶ್ ಅಯ್ಯರ್, ನಗರಗೆರೆ ರಮೇಶ್, ರಮೇಶ್ ಬೆಲ್ಲಕೊಂಡ, ಜಾಗೃತ ಕರ್ನಾಟಕದ ಡಾ ವಾಸು ಎಚ್ ವಿ, ಬಿ ಸಿ ಬಸವರಾಜು, ರಾಜಶೇಖರ ಅಕ್ಕಿ, ಸುಹೇಲ್ ಅಹಮದ್, ಸ್ವಾತಿ, ಗಂಗಾಧರ್ ಮುಳುಗುಂದ್, ಹೈಕೋರ್ಟ್ ವಕೀಲರಾದ ಅರವಿಂದ್ ಎಚ್, ಮಹದೇವ ಸ್ವಾಮಿ ಬೆಂದರವಾಡಿ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.