ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಅತ್ಯಾಚಾರ, ಕೊಲೆ, ದರೋಡೆಯಂತಹ ಹಲವಾರು ಪ್ರಕರಣಗಳು ನಡೆಯುತ್ತಿದ್ದು, ಯಾವುದಕ್ಕೂ ತಾರ್ಕಿಕ ಅಂತ್ಯ ಇಲ್ಲ. ಈ ನಿಟ್ಟಿನಲ್ಲಿ ಧರ್ಮಸ್ಥಳದಲ್ಲಿ ನಡೆಯುತ್ತಿವೆ ಎನ್ನಲಾದ ಎಲ್ಲಾ ಅಸಹಜ ಸಾವು, ಕೊಲೆ, ಅತ್ಯಾಚಾರಗಳಂತಹ ಪ್ರಕರಣಗಳ ಸಮಗ್ರ ತನಿಖೆಯನ್ನು ಎಸ್‌ಐಟಿಗೆ ವಹಿಸುವಂತೆ ಸೌಜನ್ಯ ಹೋರಾಟ ಸಮಿತಿ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಮಿತಿಯ ಮುಖಂಡ ಕೆ ದಿನೇಶ್ ಗಾಣಿಗ, “1983ರಲ್ಲಿ ಧರ್ಮಸ್ಥಳದಲ್ಲಿ ನಡೆದ ಸಾವುಗಳ ಬಗ್ಗೆ ಅಂದಿನ ವಿಧಾನ ಸಭೆಯಲ್ಲಿ ಕೂಡಾ ಚರ್ಚೆಗಳು ನಡೆದಿದ್ದವು. ನಂತರ 1995ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಯುವ ಶಾಲೆಯ ಶಿಕ್ಷಕಿ ವೇದವಲ್ಲಿ ಎನ್ನುವವರನ್ನು ಪೆಟ್ರೋಲ್ ಸುರಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಆರೋಪಿ ಸಿಕ್ಕಿಲ್ಲ. ನಂತರ 1999ರಲ್ಲಿ ಎಸ್.ಡಿ.ಎಮ್ ಕಾಲೇಜು ವಿದ್ಯಾರ್ಥಿನಿ ಪದ್ಮಲತಾ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು. ಇದರಲ್ಲೂ ಆರೋಪಿ ಸಿಕ್ಕಿಲ್ಲ. ನಂತರ 2012 ರಲ್ಲಿ ಶ್ರೀ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಆನೆ ಮಾವುತ ನಾರಾಯಣ ಮತ್ತು ಯಮುನಾರವರ ಕೊಲೆ, ದರೋಡೆ ನಡೆದಿತ್ತು. ಈ ಪ್ರಕರಣದಲ್ಲೂ ಆರೋಪಿ ಸಿಕ್ಕಿಲ್ಲ. ಇದಾಗಿ 20 ದಿನದಲ್ಲೇ ಅಂದರೆ 2012ರ ಅ.9ರಂದು ಸೌಜನ್ಯ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು. ಇಲ್ಲಿಯೂ ಆರೋಪಿ ಸಿಕ್ಕಿಲ್ಲ, ಅಲ್ಲದೇ ಈ ಮಧ್ಯೆ ಧರ್ಮಸ್ಥಳ ಮತ್ತು ಉಜಿರೆಯಲ್ಲಿ 2002 ರಿಂದ 2012 ರವರೆಗೆ 452 ಅಸಹಜ ಸಾವು ಪ್ರಕರಣ ದಾಖಲಾಗಿವೆ. ಇದರಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ನೀಡಿರುವ ಶವಗಳಿಗೂ ಪೊಲೀಸ್ ಇಲಾಖೆ ನೀಡಿರುವ ಯು.ಡಿ.ಆರ್.ಗೂ ವ್ಯತ್ಯಾಸ ಕಂಡು ಬರುತ್ತದೆ. ಅಲ್ಲದೇ 1970 ರಿಂದ 2025ರವರೆಗೆ ಹಲವಾರು ಕೊಲೆ ಮತ್ತು ಅತ್ಯಾಚಾರದಂತಹ ಪ್ರಕರಣಗಳು ನಡೆದಿದೆ. ಇಷ್ಟೆಲ್ಲಾ ಪ್ರಕರಣಗಳು ಧರ್ಮಸ್ಥಳದಲ್ಲಿ ನಡೆಯುತ್ತಿದ್ದರೂ ಕೂಡಾ ಯಾವ ಪ್ರಕರಣದಲ್ಲೂ ಆರೋಪಿ ಸಿಗುತ್ತಿಲ್ಲ”
“ಇದರಿಂದಾಗಿ ಶ್ರೀ ಕ್ಷೇತ್ರದ ಹೆಸರು ಹಾಳಾಗುತ್ತಿದೆ; ಜನರಲ್ಲಿ ಕ್ಷೇತ್ರದ ಬಗ್ಗೆ ಅಪನಂಬಿಕೆ ಬರುತ್ತಿದೆ. ಇದಕ್ಕೆಲ್ಲ ಕಾರಣ ಪೊಲೀಸ್ ಇಲಾಖೆ ಆರೋಪಿಗಳನ್ನು ಹಿಡಿಯದೆ ಇರೋದು. ಹಾಗಾಗಿ, ಈ ಬಗ್ಗೆ ಹಿಂದಿನ ಎಲ್ಲಾ ಪ್ರಕರಣಗಳನ್ನು ತನಿಖೆ ಮಾಡಿ ಆರೋಪಿಗಳನ್ನು ಹಿಡಿಯಬೇಕು ಎಂದು ರಾಜ್ಯದ ಸರಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ದೂರು ನೀಡಲಾಗಿದೆ”

“ಈ ಮಧ್ಯೆ ಕೆಲವು ರಾಜಕೀಯ ನಾಯಕರು ಮತ್ತು ಸಂಘಟನೆಯ ನಾಯಕರು, ʼಶ್ರೀಕ್ಷೇತ್ರದ ಹೆಸರು ಹಾಳಾಗುತ್ತಿದೆ, ಹಿಂದೂ ಧರ್ಮ ಹಾಳಾಗುತ್ತಿದೆʼ ಎಂದು ಪತ್ರಿಕಾಗೋಷ್ಠಿ ಮಾಡುತ್ತಿದ್ದಾರೆ. ಅಲ್ಲದೇ ಕೆಲವು ಶಾಸಕರು ವಿಧಾನಸಭೆಯಲ್ಲೂ ಕೂಡಾ ಈ ವಿಷಯ ಚರ್ಚೆ ಮಾಡುತ್ತಿದ್ದಾರೆ. ಈ ಹಿಂದೆ ನಡೆದಂತಹ ವೇದವಲ್ಲಿ, ಪದ್ಮಲತಾ, ನಾರಾಯಣ ಮತ್ತು ಯಮುನಾ, ಸೌಜನ್ಯ ಕೊಲೆ ನಡೆದಾಗ ಮಾತನಾಡದ ಮತ್ತು ಅಕ್ವಿಟಲ್ ಕಮಿಟಿ ಮಾಡುವುದರ ಬಗ್ಗೆ ಮಾತನಾಡದ ಈ ಶಾಸಕರು ಈಗ ಯಾಕೆ ಹೋರಾಟ ನಡೆಸುತ್ತಿದ್ದಾರೆ. ಯಾರನ್ನು ಉಳಿಸುವ ಸಲುವಾಗಿ ಈಗ ಹೋರಾಟ ನಡೆಸುತ್ತಿದ್ದಾರೆ ಈ ಬಗ್ಗೆ ಜನಸಾಮಾನ್ಯರಿಗೆ ತಿಳಿದಿದೆ”
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | 13ನೇ ಪಾಯಿಂಟ್ ಶೋಧ ಕಾರ್ಯ ಬುಧವಾರವೂ ಮುಂದುವರಿಕೆ
“ಹಾಗಾಗಿ ಈ ನಾಲ್ಕು ಪ್ರಕರಣಗಳನ್ನು ಎಸ್.ಐ.ಟಿಗೆ ವಹಿಸಿ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಬೇಕು ಮತ್ತು ಈಗ ನಡೆಯುತ್ತಿರುವ ಎಸ್.ಐ.ಟಿ ತನಿಖೆಗೆ ಬೆಂಬಲ ವ್ಯಕ್ತಪಡಿಸಿ, ರಾಜ್ಯದ ಎಲ್ಲಾ ಭಾಗದ ಜನರೊಂದಿಗೆ ಸೇರಿ ಇದೇ ಆಗಸ್ಟ್ 24ರ ಭಾನುವಾರದಂದು ‘ಉಜಿರೆ ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.