ರಾಜ್ಯದಲ್ಲಿ ಡೆಂಘೀ ಹಾವಳಿ ಅಧಿಕವಾಗಿದ್ದು ಈ ವರ್ಷ ಅಧಿಕ ಪ್ರಕರಣಗಳು ದಾಖಲಾಗಿದೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ 25 ಸಾವಿರದ ಗಡಿ ದಾಟಿದೆ. ಈವರೆಗೆ ಡೆಂಘೀ 12 ಮಂದಿಯನ್ನು ಬಲಿಪಡೆದುಕೊಂಡಿದೆ.
ಕರ್ನಾಟಕದಲ್ಲಿ 2017ರಲ್ಲಿ 17,844 ಡೆಂಘೀ ಪ್ರಕರಣಗಳು ದೃಢಪಟ್ಟಿದ್ದವು. ಅದಾದ ಬಳಿಕ 2020ರಲ್ಲಿ 3,823 ಡೆಂಘೀ ಪ್ರಕರಣಗಳು ದಾಖಲಾಗಿದೆ. ತದನಂತರ ಡೆಂಘೀ ಜ್ವರ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಿಗಿತ ಕಾಣುತ್ತಾ ಬಂದಿದೆ.
ಕಳೆದ ವರ್ಷ (2023) 16,539 ಡೆಂಘೀ ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷದ ಎಂಟು ತಿಂಗಳ ಅವಧಿಯಲ್ಲೇ 25,802 ಪ್ರಕರಣಗಳು ದೃಢಪಟ್ಟಿದೆ. ಇನ್ನು ಬಾಕಿ ಇರುವ ನಾಲ್ಕು ತಿಂಗಳಲ್ಲಿ ಅಗತ್ಯ ನಿಯಂತ್ರಣ ಕ್ರಮ ಸರಿಯಾಗಿ ಕೈಗೊಳ್ಳದಿದ್ದರೆ ಡೆಂಘೀ ಪೀಡಿತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಇದನ್ನು ಓದಿದ್ದೀರಾ? ಡೆಂಘೀಯನ್ನು ‘ಸಾಂಕ್ರಾಮಿಕ ಕಾಯಿಲೆ’ ಎಂದು ಘೋಷಿಸಿದ ರಾಜ್ಯ ಸರ್ಕಾರ
45 ದಿನಗಳಲ್ಲೇ 15 ಸಾವಿರ ಪ್ರಕರಣ!
ಇನ್ನು ಕಳೆದ 45 ದಿನಗಳಲ್ಲೇ 15 ಸಾವಿರಕ್ಕೂ ಅಧಿಕ ಡೆಂಘೀ ಪ್ರಕರಣಗಳು ದಾಖಲಾಗಿದೆ. 1,526 ಸಕ್ರಿಯ ಡೆಂಘೀ ಪ್ರಕರಣಗಳಿದ್ದರೆ, ಈ ಪೈಕಿ 193 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಡೆಂಘೀ ‘ಸಾಂಕ್ರಾಮಿಕ ಕಾಯಿಲೆ’
ಕರ್ನಾಟಕದಲ್ಲಿ ಡೆಂಘೀ ಪ್ರಕರಣಗಳು ಅಧಿಕವಾಗುತ್ತಿರುವ ನಡುವೆ ರಾಜ್ಯ ಸರ್ಕಾರವು ಮಂಗಳವಾರ ಡೆಂಘೀಯನ್ನು ‘ಸಾಂಕ್ರಾಮಿಕ ಕಾಯಿಲೆ’ ಎಂದು ಘೋಷಿಸಿದೆ. ಹಾಗೆಯೇ ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ 2020ಗೆ ತಿದ್ದುಪಡಿ ಮಾಡಿದ್ದು, ಆಗಸ್ಟ್ 31ರ ಕರ್ನಾಟಕ ಗೆಜೆಟ್ನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಇನ್ನು ಮುಂದೆ ನೈರ್ಮಲ್ಯ(ಸ್ವಚ್ಚತೆ) ಕಾಪಾಡದವರಿಗೆ ದಂಡ ಬೀಳಲಿದೆ.
