ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಕೆಲ ನಾಯಕರಿಂದ ಎಸ್‌ಐಟಿ ರಚನೆಗೆ ಸೂಚನೆ ಬಂದಿದ್ದು, ಸಿಎಂ ಸಿದ್ದರಾಮಯ್ಯ ಅವರು ಅವರ ಹೆಸರುಗಳನ್ನು ಬಹಿರಂಗಪಡಿಸಬೇಕು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ.
ಸೋಮವಾರ ಕರ್ನಾಟಕ ಬಿಜೆಪಿ ಆಯೋಜಿಸಿದ್ದ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ‘ಧರ್ಮ ಯಾತ್ರೆ’ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದು ಕೇವಲ ತನಿಖೆಯ ವಿಚಾರವಲ್ಲ, ಕರ್ನಾಟಕದ ಪ್ರಮುಖ ಹಿಂದೂ ಧಾರ್ಮಿಕ ಸಂಸ್ಥೆಯನ್ನು ಅಪಕೀರ್ತಿ ಪಡಿಸಿ ಅಸ್ಥಿರಗೊಳಿಸುವ ದೊಡ್ಡ ಷಡ್ಯಂತ್ರದ ಭಾಗವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೋರಿದ “ತುರ್ತುತನ ಮತ್ತು ಉತ್ಸಾಹ”ವೇ ಸಂಶಯಾಸ್ಪದವಾಗಿದೆ ಎಂದು ಹೇಳಿದ್ದಾರೆ.
“ಸಾವಿರಾರು ಹತ್ಯೆಗಳು ನಡೆದಿವೆ ಎಂಬ ಅನಾಮಿಕ ಪೌರ ಕಾರ್ಮಿಕನ ಆರೋಪದ ಮೇಲೆ, ಯಾವುದೇ ಪ್ರಾಥಮಿಕ ತನಿಖೆ ನಡೆಸದೇ, ಆ ವ್ಯಕ್ತಿಯ ಹಿನ್ನೆಲೆ ಪರಿಶೀಲನೆ ಮಾಡದೇ, ತಕ್ಷಣವೇ ಎಸ್‌ಐಟಿ ರಚಿಸಲು ಸಿಎಂ ಯಾಕೆ ಇಷ್ಟು ತುರ್ತು ತೋರಿಸಿದರು? ಇದೇ ರೀತಿಯ ಆರೋಪಗಳು ಯಾವುದೇ ಬೇರೆ ಧರ್ಮದ ಸಂಸ್ಥೆಯ ವಿರುದ್ಧ ಬಂದಿದ್ದರೆ ಸಿಎಂ ಇದೇ ಆತುರ ತೋರಿಸುತ್ತಿದ್ದರೆ? ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಾಥಮಿಕ ವಿಚಾರಣೆ ಮಾಡದೆ ಎಸ್‌ಐಟಿ ರಚಿಸಬಾರದೆಂದು ಸರ್ಕಾರಕ್ಕೆ ಸಲಹೆ ನೀಡಿದ್ದರೂ ಅದನ್ನು ಸಿಎಂ ನಿರ್ಲಕ್ಷಿಸಿದ್ದಾರೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಲೆಮಾರಿ ಸಮುದಾಯಗಳಿಗೆ ಅನ್ಯಾಯ – ಜಾತಿಗಣತಿಯ ಮೇಲೂ ಕರಿನೆರಳು: ರಾಹುಲ್ ಗಾಂಧಿ ಗಮನಿಸುವರೇ?
“ದೆಹಲಿಯ ಕೆಲ ನಾಯಕರಿಂದಲೇ ಎಸ್‌ಐಟಿ ರಚನೆಗೆ ಸೂಚನೆ ಬಂದಿತೆಂದು ತಿಳಿಯುತ್ತದೆ. ಯಾರು ಆ ದೆಹಲಿ ನಾಯಕರು? ಕರ್ನಾಟಕದ ಪ್ರತಿಯೊಂದು ಹಿಂದು ಭಕ್ತನಿಗೂ, ಪ್ರತಿಯೊಬ್ಬ ನಾಗರಿಕನಿಗೂ ಇದನ್ನು ತಿಳಿದುಕೊಳ್ಳುವ ಹಕ್ಕು ಇದೆ” ಎಂದು ಹೇಳಿದರು.
ಪೌರ ಕಾರ್ಮಿಕನ ಪರವಾಗಿ ಖ್ಯಾತ ವಕೀಲರನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಗಿದೆ. ಇದಕ್ಕೆಲ್ಲ ಯಾರು ಹಣ ನೀಡಿದರು? ಯಾರು ಈ ಸಂಚನ್ನು ರೂಪಿಸಿದರು? ಇದರ ಹಿಂದೆ ಯಾವ ಸಂಘಟನೆಗಳಿವೆ? ಇದು ರಾಹುಲ್ ಗಾಂಧಿಯವರ ‘ಸನಾತನ ಧರ್ಮ ನಿರ್ಮೂಲನೆ ಯೋಜನೆ’ಯ ಭಾಗವೇ ಎಂದು ಪ್ರಶ್ನಿಸಿದರು.
“ಸಿಎಂ ಎಸ್‌ಐಟಿಗೆ ತೋರಿದ ಉತ್ಸಾಹವನ್ನು ಸಿಬಿಐ ತನಿಖೆಗೆ ಸಹ ತಕ್ಷಣ ತೋರಿಸಬೇಕು. ಇಲ್ಲವಾದರೆ ಇದು ಕೇವಲ ಧರ್ಮಸ್ಥಳವನ್ನು ಅಪಕೀರ್ತಿ ಪಡಿಸುವ ಯೋಜನೆಯಲ್ಲ, ಬೃಹತ್ ಮಟ್ಟದ ಸನಾತನ ಧರ್ಮ ನಿರ್ಮೂಲನೆ ಯೋಜನೆಯ ಭಾಗವೆಂಬ ಪ್ರಶ್ನೆ ಉದ್ಭವಿಸುತ್ತದೆ” ಎಂದು ಹೇಳಿದ್ದಾರೆ.
