ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅತ್ಯಾಚಾರ, ನಿಗೂಢ ಕೊಲೆಗಳ ಅಪರಾಧ ಕೃತ್ಯ ಪ್ರಕರಣ ಬಗ್ಗೆ ತನಿಖೆ ನಡೆಸಲು ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಇಬ್ಬರು ಅಧಿಕಾರಿಗಳು ಹೊರಗುಳಿಯಲು ಮುಂದಾಗಿದ್ದಾರೆ.
ಧರ್ಮಸ್ಥಳದ ಸುತ್ತಲಿನ ಅರಣ್ಯ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ಇತ್ತೀಚೆಗೆ ತಲೆ ಬುರಡೆ ಸಮೇತ ಪೊಲೀಸರ ಮುಂದೆ ಹಾಜರಾಗಿ, ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದರು. ಇದನ್ನು ಉಲ್ಲೇಖಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಕೋರಿದ್ದರು.
ಮಹಿಳಾ ಆಯೋಗದ ಅಧ್ಯಕ್ಷರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ, ಬೆಂಗಳೂರು ಆಂತರಿಕ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಡಾ. ಪ್ರಣವ ಮೊಹಂತಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದೆ. ಎಸ್‌ಐಟಿ ತಂಡದಲ್ಲಿ ನೇಮಕಾತಿ ವಿಭಾಗದ ಉಪ ಪೊಲೀಸ್ ಮಹಾ ನಿರೀಕ್ಷಕ ಎಂ.ಎನ್ ಅನುಚೇತ್, ಸಿಎಆರ್ ಕೇಂದ್ರಸ್ಥಾನದ ಉಪ ಪೊಲೀಸ್ ಆಯುಕ್ತರಾದ ಸೌಮ್ಯಲತಾ ಹಾಗೂ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ತಂಡದ ಸದಸ್ಯರನ್ನಾಗಿ ನೇಮಿಸಿತ್ತು.
ಆದರೆ, ಎಸ್‌ಐಟಿ ತಂಡ ರಚಿಸಿ ದಿನ ಕಳೆಯುವಷ್ಟರಲ್ಲೇ ಐಪಿಎಸ್ ಅಧಿಕಾರಿಗಳಾದ ಎಂ.ಎನ್ ಅನುಚೇತ್ ಮತ್ತು ಸೌಮ್ಯಲತಾ ಅವರು ವೈಯಕ್ತಿಕ ಕಾರಣ ಮುಂದಿಟ್ಟು ತಂಡದಿಂದ ಹೊರಗುಳಿಯಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಎಂ.ಎನ್ ಅನುಚೇತ್ ಅವರು ಯಾವುದೇ ಭಯದಿಂದ ಧರ್ಮಸ್ಥಳ ಪ್ರಕರಣ ತನಿಖೆಯಿಂದ ದೂರು ಉಳಿಯುತ್ತಿಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಅನುಚೇತ್ ಅವರು 2009ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು, ಪುತ್ತೂರು ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಎಸ್‌ಪಿ) ಮೊದಲ ಭಾರಿಗೆ ಅಧಿಕಾರ ವಹಿಸಿಕೊಂಡಿದ್ದರು. ಅನುಚೇತ್ ಅವರು ಪುತ್ತೂರಿನ ಎಎಸ್‌ಪಿಯಾಗಿದ್ದಾಗಲೇ ಸೌಜನ್ಯ ಪ್ರಕರಣ ನಡೆದಿದೆ.
ಈಗಾಗಲೇ ಸೌಜನ್ಯ ಪ್ರಕರಣದಲ್ಲಿ ತನಿಖಾ ಅಧಿಕಾರಿಗಳಾಗಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ಭಾಸ್ಕರ್ ರೈ ಮತ್ತು ಸಬ್-ಇನ್ಸ್‌ಪೆಕ್ಟರ್ ಯೋಗೇಶ್ ಕುಮಾರ್ ನಾಯಕ್ ಅವರ ಮೇಲೆ ಸಾಕ್ಷ ನಾಶ ಮಾಡಿರುವ ಗಂಭೀರ ಆರೋಪಗಳಿವೆ. ಇವರೊಂದಿಗೆ ಆ ವೇಳೆ ತಮ್ಮ ಮೇಲೂ ಆಗಾಗ ಇಂತಹ ಆರೋಪಗಳು ಸ್ಥಳೀಯರಿಂದ ಕೇಳಿಬಂದಿವೆ ಎನ್ನುವ ಕಾರಣ ಮುಂದಿಟ್ಟುಕೊಂಡು ಎಸ್‌ಐಟಿ ತಂಡದಿಂದ ತಮ್ಮನ್ನು ಕೈಬಿಡುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಸಿದ್ಧತೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ಖಚಿತ ಪಡಿಸಿವೆ. ಹಾಗೆಯೇ ಅವರು ಎಸ್‌ಐಟಿ ತೊರೆಯಲು ಇದಕ್ಕಿಂತ ಬೇರೆ ಕಾರಣ ಇದೆಯೇ ಎಂಬುದು ಅವರ ಪತ್ರ ಬರೆದ ಮೇಲೆಯೇ ಬಹಿರಂಗವಾಲಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮ: ಪೊಲೀಸ್ ಇಲಾಖೆಯ ಮಾದರಿ ಹೆಜ್ಜೆ
ಎಂ.ಎನ್ ಅನುಚೇತ್ ಅವರ ಬಗ್ಗೆ ಗಮನಿಸಬೇಕಾದ ಸಂಗತಿಯೊಂದಿದೆ. ಅನುಚೇತ್ ಅವರು ಈಗಾಗಲೇ ತನಿಖಾ ವಿಭಾಗದಲ್ಲಿ ದಕ್ಷ ಅಧಿಕಾರಿ ಎಂಬ ಪಾತ್ರಕ್ಕೆ ಒಳಗಾಗಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆಗಾಗಿ ರಚಿಸಲಾದ ಎಸ್‌ಐಟಿಯನ್ನು ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ. ಸಿಂಗ್ ಹಿಂದೆ ಮುನ್ನಡೆಸಿದ್ದರು. ಇವರ ತಂಡದಲ್ಲಿದ್ದ ಎಂ.ಎನ್ ಅನುಚೇತ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ತನಿಖಾ ವಿಭಾಗದಲ್ಲಿ ಅನುಭವ ಇರುವ ಎಂ.ಎನ್ ಅನುಚೇತ್ ಅವರು ಧರ್ಮಸ್ಥಳ ಪ್ರಕರಣದ ತನಿಖೆಯಿಂದ ದೂರ ಉಳಿಯುವ ಬದಲು ತನಿಖೆಯಲ್ಲಿ ಮುಂದುವರಿದರೆ ಒಳ್ಳೆಯದು ಎನ್ನುವ ಅಭಿಪ್ರಾಯಗಳು ಸಾರ್ವಜನಿಕರಿಂದ ಸಹ ವ್ಯಕ್ತವಾಗಿವೆ.
ಸೌಮ್ಯಲತಾ ಅವರು ಯಾವ ಕಾರಣದಿಂದ ತನಿಖೆಯಿಂದ ದೂರ ಉಳಿಯುತ್ತಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸರ್ಕಾರಕ್ಕೆ ಅವರು ಬರೆಯುವ ಪತ್ರದ ಮೇಲೆ ತಿಳಿಯಲಿದೆ.