ಧರ್ಮಸ್ಥಳ | ‘ಪದ್ಮಲತಾ ಕಳೇಬರ ಹೊರತೆಗೆದು ಮರುತನಿಖೆ ನಡೆಸಿ’; SITಗೆ ಸಹೋದರಿ ಇಂದ್ರಾವತಿ ದೂರು

Date:

Advertisements
“ಅದು ಒಂದು ಯೋಜಿತ ಅಪಹರಣ, ಅತ್ಯಾಚಾರ, ಕೊಲೆ ಎಂಬ ನಮ್ಮ ಅನುಮಾನದಂತೆ ಮುಂದೆಯಾದರೂ ತನಿಖೆ ನಡೆಸಿ ನ್ಯಾಯ ಪಡೆಯಬೇಕೆಂದು ನನ್ನ ತಂಗಿಯ ಕಳೇಬರವನ್ನು ದಹನ ಮಾಡದೆ ಹೂತಿಟ್ಟಿದ್ದೇವೆ" ಎಂದಿದ್ದಾರೆ ಇಂದ್ರಾವತಿ.

38 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಅಪಹರಣ, ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿರುವ ಪದ್ಮಲತಾ ಅವರ ಕಳೇಬರವನ್ನು ಹೊರತೆಗೆದು ಮರು ತನಿಖೆ ಮಾಡಿ ಅಪರಾಧಿಗಳನ್ನು ಪತ್ತೆ ಹಚ್ಚುವಂತೆ ಕೋರಿ ಎಸ್‌ಐಟಿಗೆ ಪದ್ಮಲತಾ ಸಹೋದರಿ ಇಂದ್ರಾವತಿ ದೂರು ನೀಡಿದ್ದಾರೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಎಸ್‌ಐಟಿ ತನಿಖೆಯ ಬೆನ್ನಲ್ಲೇ ಹಳೆಯ ಪ್ರಕರಣಗಳೆಲ್ಲ ಮುನ್ನೆಲೆಗೆ ಬರುತ್ತಿವೆ. ಇಂದು (ಸೋಮವಾರ) ಬೆಳಿಗ್ಗೆ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ತೆರಳಿದ ಪದ್ಮಲತಾ ಅವರ ಅಕ್ಕ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?

Advertisements

“ನಾನು ಪ್ರಸ್ತುತ ನೆಲ್ಯಾಡಿ ನಿವಾಸಿಯಾಗಿದ್ದು ದಿವಂಗತ ದೇವಾನಂದ ಅವರ ಮಗಳು. ಕೊಲೆಗೀಡಾದ ಪದ್ಮಲತಾಳ ಅಕ್ಕನಾಗಿರುತ್ತೇನೆ. 38 ವರ್ಷಗಳ ಹಿಂದೆ ಎಸ್.ಡಿ.ಎಂ. ಕಾಲೇಜು ಉಜಿರೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ನನ್ನ ತಂಗಿ ಪದ್ಮಲತಾ ದಿನಾಂಕ 22.12.1986ರಂದು ಉಜಿರೆ ಕಾಲೇಜಿಗೆ ಹೋದವಳು ಸಂಜೆ ಧರ್ಮಸ್ಥಳ ತನಕ ಬಂದು ಕಾಣೆಯಾಗಿರುತ್ತಾಳೆ. ಆಕೆಯ ಮೃತದೇಹ ದಿನಾಂಕ 17.02.1987 ರಂದು ನೆರಿಯ ಹೊಳೆಯ ಬದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಮ್ಮ ತಂದೆ ಮನೆಯು ಧರ್ಮಸ್ಥಳ ಗ್ರಾಮದ ಬೊಳಿಯಾರು ಎಂಬಲ್ಲಿ ಇತ್ತು” ಎಂದು ವಿವರಿಸಿದ್ದಾರೆ.

ಮುಂದುವರಿದು, “ನನ್ನ ತಂಗಿಯ ಈ ಅಪಹರಣ, ಅತ್ಯಾಚಾರ, ಕೊಲೆ ಆಗಿರುವ ಕಾರಣ ಆಕೆಯ ಅಸಹಜ ಸಾವಿಗೆ ಕಾರಣರಾದ ನೈಜ ಆರೋಪಿಗಳನ್ನು ಪತ್ತೆ ಹಚ್ಚಲು ಆಗ್ರಹಿಸಿ ಸಿಪಿಐಎಂ ಮುಖಂಡರೂ ಆಗಿದ್ದ ನನ್ನ ತಂದೆ ದಿವಂಗತ ದೇವಾನಂದ ಅವರು ಸಿಪಿಐಎಂ ನೇತೃತ್ವದಲ್ಲಿ ಹಲವಾರು ಹೋರಾಟಗಳನ್ನು ರೂಪಿಸಿದ್ದರು. ಹೋರಾಟಕ್ಕೆ ಮಣಿದ ಸರಕಾರ ಕೊನೆಗೆ ಪ್ರಕರಣದ ತನಿಖೆ ನಡೆಸಲು ಸಿಓಡಿ ತನಿಖೆಗೆ ಆದೇಶಿಸಿತು. ವಿಧಾನ ಸಭೆಯಲ್ಲಿ ಚರ್ಚೆ ಆಗಿರುವುದು ಕೂಡಾ ವಿಧಾನಸಭಾ ದಾಖಲೆಯಲ್ಲಿ ಇರಬೇಕು. ಅಂದು ಸಚಿವರಾಗಿದ್ದ ರಾಚಯ್ಯ ಅವರೂ ಧರ್ಮಸ್ಥಳ ಗ್ರಾಮದ ಬೊಳಿಯಾರಲ್ಲಿರುವ ನಮ್ಮ ಮನೆಗೆ ಬಂದು ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಆದರೆ ಕೊನೆಗೆ ತನಿಖೆಯು ಪತ್ತೆಯಾಗದ ಪ್ರಕರಣ ಎಂದು ವರದಿ ನೀಡಿ ನಮಗೆ ನ್ಯಾಯ ಸಿಗದಂತಾಗಿತ್ತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

pl 1
ಪದ್ಮಲತಾ

ಇದನ್ನೂ ಓದಿರಿ: GROUND REPORT: ಸಾಮಾನ್ಯರ ಬದುಕು ಹೈರಾಣಾದ ‘ಧರ್ಮಸ್ಥಳ’ದಲ್ಲಿ ಕಂಡಿದ್ದಿಷ್ಟು…

“ಅದು ಒಂದು ಯೋಜಿತ ಅಪಹರಣ, ಅತ್ಯಾಚಾರ, ಕೊಲೆ ಎಂಬ ನಮ್ಮ ಅನುಮಾನದಂತೆ ಮುಂದೆಯಾದರೂ ತನಿಖೆ ನಡೆಸಿ ನ್ಯಾಯ ಪಡೆಯಬೇಕೆಂದು ನನ್ನ ತಂಗಿಯ ಕಳೆಬರಹವನ್ನು ದಹನ ಮಾಡದೆ ಹೂತಿಟ್ಟಿದ್ದೇವೆ. ಅದನ್ನು ತೆಗೆದು ತನಿಖೆ ನಡೆಸಿದರೆ ಕೊಲೆಯಾದ ಖಚಿತತೆ ಸಿಗಲಿದೆ ಹಾಗೂ ನನಗೆ ತಿಳಿದ ಸಾಕ್ಷಿನುಡಿಯಲು ನಾನು ಸಿದ್ಧಳಿದ್ದೇನೆ. ಆದ್ದರಿಂದ ನನ್ನ ತಂಗಿಯ ಪ್ರಕರಣವನ್ನು ರೀ-ಓಪನ್ ಮಾಡಿ, ಹೂತಿಟ್ಟ ಕಳೆಬರವನ್ನು ತೆಗೆದು ತನಿಖೆ ನಡೆಸಿ ತಂಗಿಯ ಸಾವಿಗೆ ನ್ಯಾಯ ಒದಗಿಸಬೇಕಾಗಿ ಹಾಗೂ ಅಪರಾಧಿಗಳ ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಮಾಡುತ್ತೇನೆ” ಎಂದಿದ್ದಾರೆ.

ದೇವಾನಂದರ ಹೋರಾಟ ಹತ್ತಿಕ್ಕಲು ಮಗಳ ಕೊಲೆ?

ಸ್ಥಳೀಯ ಕಮ್ಯುನಿಸ್ಟ್ ನಾಯಕರಾಗಿದ್ದ ಎಂ.ಕೆ. ದೇವಾನಂದ ಅವರು ಅನ್ಯಾಯಗಳ ವಿರುದ್ಧ ಹೋರಾಡುತ್ತಿದ್ದವರು. ಅವರನ್ನು ಬೆದರಿಸಲೆಂದೇ ಮಗಳ ಮೇಲೆ ಅತ್ಯಾಚಾರ ನಡೆಸಿ, ಭೀಕರವಾಗಿ ಕೊಲೆ ಮಾಡಲಾಯಿತು ಎನ್ನುತ್ತಾರೆ ಹೋರಾಟಗಾರರು.

pl 2
ದಿವಂಗತ ಎಂ.ಕೆ. ದೇವಾನಂದ

1986ರವರೆಗೂ ಧರ್ಮಸ್ಥಳದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆದಿರಲಿಲ್ಲ. ಇಲ್ಲಿನ ಪ್ರಭಾವಿಗಳು ಸೂಚಿಸಿದವರಷ್ಟೇ ಗ್ರಾಪಂ ಅಧ್ಯಕ್ಷರಾಗಿ ಮುಂದುವರಿಯುತ್ತಿದ್ದರು. ಇದನ್ನು ಗಮನಿಸಿದ ಸಿಪಿಐಎಂ, ಚುನಾವಣೆಗೆ ನಿಲ್ಲಲು ನಿರ್ಧರಿಸಿತು. ದೇವಾನಂದರನ್ನು ಅಭ್ಯರ್ಥಿಯನ್ನಾಗಿ ಮಾಡಿತು. “ನೀವು ನಾಮಪತ್ರ ವಾಪಸ್ ಪಡೆಯಬೇಕು” ಎಂದು ಪ್ರಭಾವಿಗಳು ಬೆದರಿಸಿದ್ದರು. ಆದರೆ ಇದ್ಯಾವುದಕ್ಕೂ ಹೆದರದ ದೇವಾನಂದರು, “ಇದು ಪಾರ್ಟಿಯ ನಿರ್ಧಾರ. ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದರು. ಆನಂತರ ಪದ್ಮಲತಾ ಅಪಹರಣಕ್ಕೊಳಗಾದರು. ಎರಡು ತಿಂಗಳ ಬಳಿಕ ಕಳೇಬರದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಆಕೆಯ ಬಟ್ಟೆಯನ್ನು ನೋಡಿ, ಗುರುತು ಹಚ್ಚಲಾಯಿತು. “ಧರ್ಮಸ್ಥಳ ರಿಪಬ್ಲಿಕ್‌ನಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದು, ಪ್ರಜಾಪ್ರಭುತ್ವ ಉಳಿಯಲು ಕಾರಣವಾದ ದೇವಾನಂದರು ತಮ್ಮ ಮಗಳನ್ನು ಈ ಹೋರಾಟದಲ್ಲಿ ಕಳೆದುಕೊಂಡರು” ಎನ್ನುತ್ತಾರೆ ಸ್ಥಳೀಯ ಕಮ್ಯುನಿಸ್ಟ್ ನಾಯಕರು.

“ಚುನಾವಣೆಗೆ ಸ್ಪರ್ಧಿಸಿದ್ದಷ್ಟೇ ಅಲ್ಲ, ಶೋಷಿತ ಮಲೆಕುಡಿಯ ಸಮುದಾಯದವರ ಭೂಮಿಯನ್ನು ಉಳಿಸಲು ದೇವಾನಂದರು ಹೋರಾಡಿದ್ದರು. ಪ್ರಭಾವಿಗಳ ವಿರುದ್ಧ ನಿಂತು, ಮಲೆಕುಡಿಯರಿಗೆ ಭೂಮಿಯನ್ನು ಉಳಿಸಿದ್ದರು. ಈ ಎಲ್ಲ ಕಾರಣಕ್ಕೆ ದೇವಾನಂದರನ್ನು ಈ ರೀತಿಯಲ್ಲಿ ಬೆದರಿಸಲಾಯಿತು” ಎನ್ನುತ್ತಾರೆ ಚಳವಳಿಗಾರರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಗಪುರ ದೀಕ್ಷಾಭೂಮಿ ಯಾತ್ರೆಗೆ 7,700 ಯಾತ್ರಾರ್ಥಿಗಳ ಆಯ್ಕೆ – ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ

ಡಾ. ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಗಳನ್ನು ಮಹಾರಾಷ್ಟ್ರದ ನಾಗಪುರದ ದೀಕ್ಷಾಭೂಮಿಗೆ ಕಳುಹಿಸುವ...

‘ನನ್ನ ಜೀವಕ್ಕೆ ಅಪಾಯವಾದರೆ ಸರ್ಕಾರವೇ ಹೊಣೆ’ ಎಂದು ಹೇಳಿ ಠಾಣೆಗೆ ತೆರಳಿದ ಮಹೇಶ್ ಶೆಟ್ಟಿ ತಿಮರೋಡಿ

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ ಅವರ ತೇಜೋವಧೆ...

ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಬಸವ ಸಂಸ್ಕೃತಿ ಅಭಿಯಾನ, ಸೆ.1ರಿಂದ ಆರಂಭ

ಲಿಂಗಾಯತ ಮಠಾಧೀಶರ ಒಕ್ಕೂಟವು ಸೆ.1ರಿಂದ ಅ.1ರವರೆಗೆ ರಾಜ್ಯದಲ್ಲಿ ನಡೆಸಲಿರುವ ಬಸವ ಸಂಸ್ಕೃತಿ...

ಧರ್ಮಸ್ಥಳ | ಅನನ್ಯಾ ಭಟ್ ಪ್ರಕರಣ ಎಸ್‌ಐಟಿಗೆ ಹಸ್ತಾಂತರ

ಧರ್ಮಸ್ಥಳ ಗ್ರಾಮದಲ್ಲಿ ಅಕ್ರಮವಾಗಿ ನೂರಾರು ಶವಗಳನ್ನು ಹೂಳಲಾಗಿದೆ ಎನ್ನುವ ಆರೋಪ ಪ್ರಕರಣ...

Download Eedina App Android / iOS

X