ಧರ್ಮಸ್ಥಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಮೃತದೇಹಗಳನ್ನು ಅಕ್ರಮವಾಗಿ ಹೂಳಲಾಗಿದೆ ಎಂದು ಸಾಕ್ಷಿ ದೂರುದಾರನೊಬ್ಬ ತನ್ನ ಹೇಳಿಕೆಯನ್ನು ವಕೀಲರ ಮೂಲಕ 2025ರ ಜೂನ್ 22ರಂದು ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದ್ದ. ಆ ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಆಗಿ, ಎಸ್‌ಐಟಿ ತನಿಖೆ ಕೂಡ ನಡೆಯುತ್ತಿದೆ. ಈವರೆಗೆ 13 ಪಾಯಿಂಟ್‌ಗಳಲ್ಲಿ ಉತ್ಖನನ ಕೂಡ ನಡೆದಿದೆ.
ಈವರೆಗೆ ಅಂದರೆ ಆಗಸ್ಟ್ 14, 2025ರವರೆಗೆ ಆತ ಎಲ್ಲಿಯೂ ಬಹಿರಂಗವಾಗಿ ಹೇಳಿಕೆಯಾಗಲೀ, ಸಂದರ್ಶನವಾಗಲೀ ನೀಡಿರಲಿಲ್ಲ. ಇಂದು ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಧರ್ಮಸ್ಥಳ ಪ್ರಕರಣ ಚರ್ಚೆಯಾಗುತ್ತಿರುವಾಗಲೇ, ಮೊದಲ ಬಾರಿಗೆ ‘ಇಂಡಿಯಾ ಟುಡೇ’ ಟಿವಿ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದಾನೆ.
ಸಂದರ್ಶನದಲ್ಲಿ ಹಲವಾರು ಮಾಹಿತಿಗಳನ್ನು ಹಂಚಿಕೊಂಡಿರುವ ಸಾಕ್ಷಿ ದೂರುದಾರ, “ಹೆಣ ಹೂಳಲು ಗ್ರಾಮ ಪಂಚಾಯ್ತಿಯವರು ಹೇಳಿಲ್ಲ, ದೇವಸ್ಥಾನಕ್ಕೆ ಸಂಬಂಧಿಸಿದ ಮಾಹಿತಿ ಕೇಂದ್ರದಿಂದಲೇ ಸೂಚನೆ ಬರುತ್ತಿತ್ತು. ಹೂತು ಹಾಕಿದ್ದ ಬುರುಡೆಗಳು ನನಗೆ ಕನಸಲ್ಲಿ ಬಂದು ಮುಕ್ತಿ ನೀಡುವಂತೆ ಕೇಳುತ್ತಿದ್ದವು. ನನಗೂ ನನ್ನ ಪಾಪಪ್ರಜ್ಞೆ ಕಾಡಿದ್ದರಿಂದ ಈಗ ಬಂದು ದೂರು ನೀಡಿದ್ದೇನೆ. ನೂರಾರು ಗುರುತಿಲ್ಲದ ಶವಗಳನ್ನು ಕಾಡು ಪ್ರದೇಶಗಳಲ್ಲಿ ಸಮಾಧಿ ಮಾಡಿದ್ದೇನೆ” ಎಂದು ತಿಳಿಸಿದ್ದಾನೆ.
“ತಾನು ಸಮಾಧಿ ಮಾಡಿದ ಸುಮಾರು 100 ಶವಗಳಲ್ಲಿ 90 ಶವಗಳು ಮಹಿಳೆಯರದ್ದಾಗಿದ್ದವು ಮತ್ತು ಅನೇಕ ಶವಗಳ ಮೇಲೆ ಹಿಂಸೆ ಮತ್ತು ಸಂಭವನೀಯ ಲೈಂಗಿಕ ದೌರ್ಜನ್ಯದ ಗುರುತುಗಳಿದ್ದವು. ಕೆಲವು ಶವಗಳ ಮೇಲೆ ಸ್ಪಷ್ಟವಾದ ಗಾಯದ ಗುರುತುಗಳಿದ್ದವು. ಕೆಲವು ದೌರ್ಜನ್ಯಕ್ಕೊಳಗಾದಂತೆ ಕಾಣುತ್ತಿದ್ದವು. ಲೈಂಗಿಕ ದೌರ್ಜನ್ಯವನ್ನು ವೈದ್ಯಕೀಯ ತಜ್ಞರಿಂದ ಮಾತ್ರ ದೃಢೀಕರಿಸಬಹುದು. ಶವಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗಿನವರಿದ್ದರು” ಎಂದು ಸಾಕ್ಷಿ ದೂರುದಾರ ಸಂದರ್ಶನದಲ್ಲಿ ತಿಳಿಸಿದ್ದಾನೆ.
ಇದನ್ನು ಓದಿದ್ದೀರಾ? ನಟ ದರ್ಶನ್, ಪವಿತ್ರಾ ಗೌಡ ಸೇರಿ ಏಳು ಆರೋಪಿಗಳ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್
“ಹಲವಾರು ಪ್ರದೇಶಗಳಲ್ಲಿ ಹೂತಿದ್ದೇನೆ. ಹಲವಾರು ವರ್ಷಗಳ ಬಳಿಕ ನಾನು ಬಂದಿರುವುದರಿಂದ ಕೆಲವೊಂದು ಪ್ರದೇಶಗಳನ್ನು ನನಗೆ ಈಗ ಗುರುತಿಸಲೂ ಕೂಡ ಆಗುತ್ತಿಲ್ಲ. ಆರನೇ ಸ್ಪಾಟ್ ಅನ್ನು ನಾನು ಸರಿಯಾಗಿ ಗುರುತಿಸಿದ್ದರಿಂದ ಕಳೇಬರ ಸಿಕ್ಕಿದೆ. ಹಿಂದೆ ಒಂದು ಹಳೆಯ ರಸ್ತೆ ಇತ್ತು, ಅದನ್ನು ಗುರುತಿಸಬಹುದಿತ್ತು. ಆದರೆ ಜೆಸಿಬಿ ಕೆಲಸದ ನಂತರ ಕೆಲವು ಸ್ಥಳಗಳನ್ನು ಗುರುತಿಸಲು ಸಾಧ್ಯವಿಲ್ಲ. ಕಾಡು ಹಿಂದೆ ತೆಳ್ಳಗಿತ್ತು, ಈಗ ದಟ್ಟವಾಗಿದೆ” ಸಾಕ್ಷಿ ದೂರುದಾರ ಹೇಳಿದ್ದಾನೆ.
