‘ಜನತಂತ್ರಕ್ಕೆ ವಿರುದ್ಧವಿರುವ ಧರ್ಮತಂತ್ರ, ಸಮೂಹ ಸನ್ನಿಗೆ ಉತ್ತರವಾಗಿ ಶೋಷಿತರ ಸಮಾವೇಶ’

Date:

Advertisements

ಜನತಂತ್ರಕ್ಕೆ ವಿರುದ್ಧವಿರುವ ಧರ್ಮತಂತ್ರ ಮತ್ತು ಸಮೂಹ ಸನ್ನಿಗೆ ಉತ್ತರವಾಗಿ ಶೋಷಿತರ ಜಾಗೃತಿ ಸಮಾವೇಶ ಜನವರಿ 28ರಂದು ಚಿತ್ರದುರ್ಗದಲ್ಲಿ ನಡೆಯಲಿದೆ ಎಂದು ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕರಾದ ಮಾವಳ್ಳಿ ಶಂಕರ್‌ ಹೇಳಿದರು.

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಜನವರಿ 28ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ’ಸಂವಿಧಾನ, ಸಾಮಾಜಿಕ ನ್ಯಾಯ, ಸಹಬಾಳ್ವೆ ಮತ್ತು ಸ್ವಾಭಿಮಾನದ ಸಂರಕ್ಷಣೆಗಾಗಿ ಶೋಷಿತರ ಜಾಗೃತಿ ಬೃಹತ್‌ ಸಮಾವೇಶ’ಕ್ಕೆ ಸಂಬಂಧಿಸಿದಂತೆ ಬುಧವಾರ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

“ಸಾಮಾಜಿಕ ನ್ಯಾಯದ ದನಿ ಎದ್ದಾಗಲೆಲ್ಲ ಜನತಂತ್ರದ ವಿರುದ್ಧ ಈ ಧರ್ಮತಂತ್ರ ಯಾವಾಗಲೂ ಕೆಲಸ ಮಾಡುತ್ತಾ ಇರುತ್ತದೆ. ಜನತಂತ್ರ ಉಳಿದರೆ ಮಾತ್ರ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಉಳಿಯುತ್ತದೆ. ಮನುವಾದಿ ಧರ್ಮತಂತ್ರದಲ್ಲಿ  ಶೋಷಿತ ಜಾತಿಗಳ ಪರಿಸ್ಥಿತಿ ಹೀನಾಯವಾಗಿತ್ತು ಎಂಬುದು ಗೊತ್ತಿರುವ ವಿಚಾರ. ಹೀಗಾಗಿ ಈ ಧರ್ಮತಂತ್ರದ ಸಂಚನ್ನು ನಮ್ಮ ಸಮುದಾಯಗಳು ಅರ್ಥಮಾಡಿಕೊಂಡಿವೆ. ದೇಶದಲ್ಲಿ ಎದ್ದಿರುವ ಸಮೂಹ ಸನ್ನಿಗೆ ‌ಈ ಸಮಾವೇಶ ಉತ್ತರ ಕೊಡುತ್ತದೆ” ಎಂದರು.

Advertisements

“ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಿದ ಮಂಡಲ್ ಆಯೋಗದ ವರದಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿಲ್ಲ. ಆದರೆ ಮೂರ್ನಾಲ್ಕು ಪರ್ಸೆಂಟ್ ಇರುವ ಜಾತಿಗಳಿಗೆ ಹತ್ತು ಪರ್ಸೆಂಟ್ ಇಡಬ್ಲ್ಯುಎಸ್‌ ಕೋಟಾವನ್ನು ಬಿಜೆಪಿ ಸರ್ಕಾರ ನೀಡಿದೆ” ಎಂದು ಎಚ್ಚರಿಸಿದರು.

“ಒಬಿಸಿ ಸಮುದಾಯಗಳಿಗೆ ನ್ಯಾಯ ಒದಗಿಸಲು ಮುಂದಾದಾಗಲೆಲ್ಲ ಅದನ್ನು ವಿರೋಧಿಸುವ ಶಕ್ತಿಗಳು ಕೆಲಸ ಮಾಡುತ್ತಲೇ ಇವೆ. ಹಾವನೂರು ಆಯೋಗದ ವರದಿ, ಚಿನ್ನಪ್ಪ ರೆಡ್ಡಿ ವರದಿ, ವೆಂಕಟಸ್ವಾಮಿ ವರದಿ ಬಂದಾಗಲೂ ಇದೇ ಶಕ್ತಿಗಳು ನಿರಂತರ ಪ್ರತಿಭಟನೆಗಳನ್ನು ಮಾಡಿದ್ದವು” ಎಂದು ನೆನೆದರು.

“ಮಂಡಲ್ ವರದಿ ಜಾರಿಯಾದಾಗ ಅಡ್ವಾನಿಯವರು ರಾಮ ರಥಯಾತ್ರೆಯನ್ನು ಮಾಡಿದರು. ಈ ಹಿಂದುಳಿದ ಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ದನಿ ಎತ್ತಿದಾಗಲೆಲ್ಲ ಈ ರೀತಿಯ ದಬ್ಬಾಳಿಕೆ ಮೇಲ್ವರ್ಗದಿಂದ ನಿರಂತರವಾಗಿ ಆಗಿದೆ. ಈಗ ನಮಗೆ ಮನವರಿಕೆಯಾಗಿದೆ. ನಾವೆಲ್ಲ ಬಿಡಿಬಿಡಿಯಾಗಿದ್ದೆವು. ಈಗ ಒಂದಾಗುವ ಮೂಲಕ ಸಂವಿಧಾನದ ಹಕ್ಕು ಪಡೆಯಲು ಮುಂದಾಗಿದ್ದೇವೆ. ಇದಕ್ಕೆ  ಈ ಸಮಾವೇಶ ಸಾಕ್ಷಿ ಆಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಸಮಾವೇಶಕ್ಕೆ ಬರುತ್ತಾರೆ. ಸಚಿವ ಸಂಪುಟದ ಮಂತ್ರಿಗಳೂ ಬರುತ್ತಾರೆ. ಮಾದಾರ ಚೆನ್ನಯ್ಯ ಪೀಠದ ಪಕ್ಕದ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ” ಎಂದು ಮಾಹಿತಿ ನೀಡಿದರು.

ಶೋಷಿತ ಸಮುದಾಯಗಳ ಒಕ್ಕೂಟದ ಪ್ರಧಾನ ಸಂಚಾಲಕರಾದ ಕೆ.ಎಂ.ರಾಮಚಂದ್ರಪ್ಪ ಮಾತನಾಡಿ, “ಕಾಂತರಾಜ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂಬುದು ಈ ಸಮಾವೇಶದ ಪ್ರಮುಖ ಒತ್ತಾಯವಾಗಿದೆ.  ಸ್ವಾತಂತ್ರ್ಯ  ಬಂದು 75 ವರ್ಷಗಳಾದವು. ಈ ರಾಜ್ಯದ ಬಹುಸಂಖ್ಯಾತರು ನಾವು. ನಾವೆಲ್ಲ ಶೋಷಿತರು. ರಾಜ್ಯದಲ್ಲಿ ನಾವು ಶೇ. 70ರಷ್ಟು ಇದ್ದೇವೆ. ನಮ್ಮ ಒತ್ತಾಯ ಕಾಂತರಾಜ ವರದಿ ಬೇಕು ಎಂಬುದಾಗಿದೆ. ಆ ಮೂಲಕ ನಮ್ಮ ಸ್ಥಿತಿಗತಿಯನ್ನು ತಿಳಿಯಬೇಕಿದೆ. 1931ರ ಜಾತಿಗಣತಿಯ ಆಧಾರದಲ್ಲಿ ಈವರೆಗೂ ಅಂದಾಜಿನ ಮೇಲೆ ಮೀಸಲಾತಿ ಕೊಡುತ್ತಾ ಬಂದಿದ್ದಾರೆ. ನಾವು ಯಾವ ಸ್ಥಿತಿಯಲ್ಲಿ ಇದ್ದೇವೆ ಎಂಬುದು ಸರ್ಕಾರಕ್ಕೆ ತಿಳಿದಿರಲಿಲ್ಲ. ಜಾತಿ ಗಣತಿಯಿಂದ ಈ ಎಲ್ಲ ಮಾಹಿತಿಗಳು ಲಭ್ಯವಾಗಿವೆ. ಇದು ಅವೈಜ್ಞಾನಿಕ ಎನ್ನುವವರು ವರದಿ ನೋಡಿದ್ದಾರಾ? ಬಿಡುಗಡೆ ಆಗದ ವರದಿಯನ್ನು ಅವೈಜ್ಞಾನಿಕ ಅನ್ನಲು ಸಾಧ್ಯವೆ?” ಎಂದು ಪ್ರಶ್ನಿಸಿದರು.

“ನಮ್ಮ ಜನ ಮುಗ್ಧರಿದ್ದಾರೆ. ಯಾವ ಸವಲತ್ತುಗಳು ಕೈ ಜಾರಿ ಹೋಗುತ್ತಿವೆ ಎಂಬ ಕಿಂಚಿತ್ತೂ ಮಾಹಿತಿ ಅವರಿಗಿಲ್ಲ. ಹಿಂದುಳಿದ ಸುಮಾರು 200ಕ್ಕೂ ಹೆಚ್ಚು ಸಮುದಾಯಗಳನ್ನು, ಪರಿಶಿಷ್ಟ ಜಾತಿಯ 101 ಜಾತಿಗಳನ್ನು, ಪರಿಶಿಷ್ಟ ಪಂಗಡದ 51 ಜಾತಿಗಳನ್ನು, ಅಲ್ಪಸಂಖ್ಯಾತ ಸಮುದಾಯದ ಸಂಘಟನೆಗಳನ್ನು ಈ ಒಕ್ಕೂಟ ಸಂಘಟಿಸಿದೆ” ಎಂದು ಹೇಳಿದರು.

ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷರಾದ ಖಲೀದ್ ಅಹಮ್ಮದ್‌ ಮಾತನಾಡಿ, “ಕಾಂತರಾಜ ಆಯೋಗದ ವರದಿ ಬಂದು ಎಂಟು ವರ್ಷಗಳಾಯಿತು. ಸದಾಶಿವ ಕಮಿಷನ್ ಬಂದು ಹದಿನೆಂಟು ವರ್ಷಗಳಾಯಿತು. 2005ರಲ್ಲಿ ಬಂದ ಸಾಚಾರ್‌ ವರದಿ ನೆನೆಗುದಿಗೆ ಬಿದ್ದಿತು. ಈ ಎಲ್ಲವನ್ನು ಚಿಂತಿಸಬೇಕಿದೆ. ರಾಜ್ಯದ ಅಲ್ಪಸಂಖ್ಯಾತ ಮುಖಂಡರು ಈ ಸಮಾವೇಶಕ್ಕೆ ಬರಲು ಸಂಘಟಿತರಾಗುತ್ತಿದ್ದಾರೆ” ಎಂದರು.

ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕರಾದ ಎಣ್ಣೆಗೆರೆ ಆರ್‌.ವೆಂಕಟರಾಮಯ್ಯ, ಅನಂತ ನಾಯ್ಕ್‌, ಅಬ್ದುಲ್ ಮನ್ನಾನ್ ಸೇಠ್‌, ದಲಿತ ಮುಖಂಡರಾದ ವಿ.ನಾಗರಾಜ್, ಕುರುಬ ಸಮುದಾಯದ ಮುಖಂಡರಾದ ಈರಣ್ಣ, ಮಡಿವಾಳ ಸಮಾಜದ ಮುಖಂಡರಾದ ನಂಜಪ್ಪ, ಹಿಂದುಳಿದ ಜಾತಿಗಳ ಮುಖಂಡರಾದ ಸುಬ್ಬಣ್ಣ, ಗೋಪಾಲ್‌, ಕೃಷ್ಣಮೂರ್ತಿ, ನಾರಾಯಣಗೌಡ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X