ದೃಷ್ಟಿದೋಷ ನಿವಾರಣೆಗೆ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ‘ಆಶಾಕಿರಣ’ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ರಾಜ್ಯದ ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳಲ್ಲಿ ನೂತನವಾಗಿ 393 ಆಶಾಕಿರಣ ದೃಷ್ಟಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವರು, ನೂತನ ಆಶಾಕಿರಣ ದೃಷ್ಟಿ ಕೇಂದ್ರಗಳಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು, ಇದೇ ತಿಂಗಳ 3 ರಂದು ಬುಧವಾರ ಕೇಂದ್ರಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.
ಈ ಮೊದಲು ಆಶಾಲಿರಣ ಯೋಜನೆಯಡಿ ಆಶಾ ಕಾರ್ಯಕರ್ತೆಯರು ಅಭಿಯಾನದ ಮೂಲಕ ಮನೆ ಮನೆಗೆ ತೆರಳಿ ಕಣ್ಣಿನ ತಪಾಸಣೆ ನಡೆಸಿ ಚಿಕಿತ್ಸೆಗೆ ಅನುವಾಗುತ್ತಿದ್ದರು. ನಿಗದಿತ ಸಮಯದಲ್ಲಿ ಅಭಿಯಾನದ ರೀತಿಯಲ್ಲಿ ತಪಾಸಣಾ ಕಾರ್ಯ ನಡೆಯುತ್ತಿತ್ತು. ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲಿ ಶಾಶ್ವತ ದೃಷ್ಟಿ ಕೇಂದ್ರಗಳನ್ನೇ ಪ್ರಾರಂಭಿಸಲಾಗುತ್ತಿದ್ದು, ನಿರಂತರವಾಗಿ ಕಣ್ಣಿನ ಆರೋಗ್ಯ ಸೇವೆ ಈ ಕೇಂದ್ರಗಳಲ್ಲಿ ದೊರೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಎಲ್ಲ ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಸೇರಿದಂತೆ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಶಾಶ್ವತ ದೃಷ್ಟಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಈ ಕೇಂದ್ರಗಳಿಗೆ ನೇರವಾಗಿ ತೆರಳಿ ದೃಷ್ಟಿ ತಪಾಸಣೆ ಮಾಡಿಸಿಕೊಳ್ಳಬಹುದಾಗಿರುತ್ತದೆ.
ಆಶಾ ಕಾರ್ಯಕರ್ತೆಯರು ಹಾಗೂ ಸಮುದಾಯ ಆರೋಗ್ಯ ಅಧಿಕಾರಿ ಅವರ ದಿನನಿತ್ಯದ ಚಟುವಟಿಕೆ ಅಡಿಯಲ್ಲಿ ಮನೆಮನೆಗೆ ಭೇಟಿ ನೀಡಿದಾಗ ಪ್ರಾಥಮಿಕ ದೃಷ್ಟಿ ತಪಾಸಣೆ ಮಾಡಬಹುದಾಗಿರುತ್ತದೆ. ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ಹೆಚ್ಚಿನ ತಪಾಸಣೆಗೆ ಹತ್ತಿರದ ದೃಷ್ಟಿ ಕೇಂದ್ರಗಳಿಗೆ ಕಳುಹಿಸಿ ಅಗತ್ಯ ಚಿಕಿತ್ಸೆಗೆ ನೆರವಾಗಲಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪತ್ರಿಕಾ ದಿನಾಚರಣೆ: ಅತಿರೇಕ ಅಳಿಯುತ್ತದೆ, ಒಳಿತು ಉಳಿಯುತ್ತದೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) 11 ಆಶಾಕಿರಣ ದೃಷ್ಟಿ ಕೇಂದ್ರಗಳಲ್ಲಿ 5 ಕೇಂದ್ರಗಳು Sight Savers India ರವರ ಸಿಎಸ್‌ಆರ್ ಸಹಭಾಗಿತ್ವದಲ್ಲಿ ಮಾನವ ಸಂಪನ್ಮೂಲ, ಉಪಕರಣಗಳು ಹಾಗೂ ಕನ್ನಡಕಗಳ ವಿತರಣೆಗಳ ಸೇವೆಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ. OneSight Essilor Luxottica Foundation ಸೇರಿದಂತೆ ಒಟ್ಟು 13 ಅಶಾಕಿರಣ ದೃಷ್ಟಿ ಕೇಂದ್ರಗಳು ವಿವಿಧ ಸಿಎಸ್‌ಆರ್ ಪಾಲುದಾರರ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿದೆ.
ಆಶಾಕಿರಣ ಕಾರ್ಯಕ್ರಮದ ಎರಡು ಹಂತಗಳಲ್ಲಿ 8 ಜಿಲ್ಲೆಗಳಲ್ಲಿ ಒಟ್ಟು 1.40 ಕೋಟಿ ಜನರು ಪ್ರಾಥಮಿಕ ನೇತ್ರ ತಪಾಸಣೆ ಒಳಗಾಗಿದ್ದು, ಇವರಲ್ಲಿ 24.50 ಲಕ್ಷ ಜನರಿಗೆ ಹೆಚ್ಚಿನ ನೇತ್ರ ತಪಾಸಣೆಗೆ ಸಂಬಂಧಿಸಿದಂತೆ ತೊಂದರೆಗಳಿರುವುದು ಪತ್ತೆಯಾಗಿ, ಇವರನ್ನು ದ್ವಿತೀಯ ಹಂತದ ನೇತ್ರ ತಪಾಸಣೆಗೆ ಒಳಪಡಿಸಲಾಗಿರುತ್ತದೆ. 4.3 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಿಸಲಾಗಿದ್ದು ಉಳಿದ ಕನ್ನಡಕಗಳನ್ನು ಆಶಾಕಿರಣ ದೃಷ್ಟಿ ಕೇಂದ್ರಗಳಲ್ಲಿ ಇರಿಸಲಾಗಿದೆ. ಹಾಗೂ ಒಟ್ಟು 1.05 ಲಕ್ಷ ಜನರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಆಶಾಕಿರಣ ಕಾರ್ಯಕ್ರಮದಲ್ಲಿ ಸಾಧಿಸಿದ ಪ್ರಗತಿ
ಹಂತ-1 (2022-23): ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾವೇರಿ ಮತ್ತು ಕಲಬುರ್ಗಿ
68.21 ಲಕ್ಷ ಜನರ ಪ್ರಾಥಮಿಕ ತಪಾಸಣೆ
10.82 ಲಕ್ಷ ಜನರ ಎರಡನೇ ಹಂತದ ತಪಾಸಣೆ
2.70 ಲಕ್ಷ ಉಚಿತ ಕನ್ನಡಕಗಳ ವಿತರಣೆ
59,842 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ
ಹಂತ-II (2023-24): ಚಿತ್ರದುರ್ಗ, ಮಂಡ್ಯ, ರಾಯಚೂರು ಮತ್ತು ಉತ್ತರ ಕನ್ನಡ
72.15 ಲಕ್ಷ ಜನರ ಪ್ರಾಥಮಿಕ ತಪಾಸಣೆ
13.65 ಲಕ್ಷ ಜನರು ಎರಡನೇ ಹಂತದ ತಪಾಸಣೆ
1.60 ಲಕ್ಷ ಉಚಿತ ಕನ್ನಡಕಗಳ ವಿತರಣೆ (ಪುಗತಿಯಲ್ಲಿದೆ)
45,267 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ