ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲಾಗಿದ್ದು, ಈ ಸಮೀಕ್ಷಾ ಕಾರ್ಯದಲ್ಲಿ ನಿಯೋಜಿಸಲ್ಪಡುವ ಅಧಿಕಾರಿ/ನೌಕರರು ಸಮೀಕ್ಷಾ ಕಾರ್ಯಕ್ಕೆ ಹಾಜರಾಗದೇ ಮತ್ತು ಕರ್ತವ್ಯಗಳನ್ನು ನಿರ್ವಹಿಸದೇ ಇರುವಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಬೆಂಗಳೂರು ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಅಧಿಕಾರವನ್ನು ನೀಡಲಾಗಿದೆ.
ಈ ಸಂಬಂಧ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಕಾನೂನು, ನ್ಯಾಯಾಂಗ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಹಾಗೂ ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಸಭೆಯಲ್ಲಿ ಹಲವಾರು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. “ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಮುಂಬಡ್ತಿಗಾಗಿ ಕಡ್ಡಾಯ ತರಬೇತಿ) ನಿಯಮಗಳು 2025″ಕ್ಕೆ ಅನುಮೋದನೆ ನೀಡಲಾಗಿದೆ. ಉನ್ನತ ಶಿಕ್ಷಣ ಇಲಾಖೆಯಡಿ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶದ ಎರಡನೇ ಆವೃತ್ತಿಯನ್ನು (UUCMS-V-2.0) ರೂ.40.29 ಕೋಟಿಗಳಲ್ಲಿ ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ. ಕರ್ನಾಟಕ ರಸ್ತೆ ಸುರಕ್ಷತಾ ನಿಧಿಯಿಂದ ಬೆಂಗಳೂರಿನಲ್ಲಿ 110 ಜಂಕ್ಷನ್‌ಗಳಲ್ಲಿ ಅಗತ್ಯವಿರುವ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲು ರೂ.56.45 ಕೋಟಿ ವೆಚ್ಚದಲ್ಲಿ ಯೋಜನೆಗೆ ಮಂಜೂರಾತಿ ದೊರೆತಿದೆ. ಇದೇ ವೇಳೆ “ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ-2025-32″ಕ್ಕೂ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಹಲವು ಸುಧಾರಣೆಗಳೂ ಅನುಮೋದನೆಗೊಂಡಿವೆ. ಕೊಡಗು ಜಿಲ್ಲೆಯ ವಿರಾಜಪೇಟೆ ಆಸ್ಪತ್ರೆಯನ್ನು 60 ಹಾಸಿಗೆಯಿಂದ 250 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಗೆ ವಿಸ್ತರಿಸಲು ರೂ.95.60 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕು ಆಸ್ಪತ್ರೆಗೆ 50 ಹಾಸಿಗೆಗಳ ತೀವ್ರ ನಿಗಾ ಆರೈಕೆ ಘಟಕವನ್ನು ರೂ.23.75 ಕೋಟಿಗಳಲ್ಲಿ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟೋಎಂಟ್ರಾಲಜಿ, ಬೆಂಗಳೂರು ಸಂಸ್ಥೆಗೆ ರೂ.20 ಕೋಟಿ ವೆಚ್ಚದಲ್ಲಿ ರೋಬೋಟಿಕ್ ಉಪಕರಣ ಖರೀದಿ ಮಾಡಲು ಅನುಮೋದನೆ ನೀಡಲಾಗಿದೆ. ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯನ್ನು 150 ಎಂಬಿಬಿಎಸ್ ಪ್ರವೇಶ ಮಿತಿಯೊಂದಿಗೆ ಪ್ರಾರಂಭಿಸಲು ಅಗತ್ಯ ಮೂಲಸೌಕರ್ಯಗಳಿಗೆ ರೂ.450 ಕೋಟಿ ಮಂಜೂರಾತಿ ದೊರೆತಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಿರೋಧದ ನಡುವೆಯೂ ಕಾವೇರಿಗೆ ಕಾಂಗ್ರೆಸ್ಸಿಗರ ಮೊಂಡಾರತಿ
ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಸ್ತರಣೆ ಮತ್ತು ಆಧುನೀಕರಣಕ್ಕಾಗಿ 15ನೇ ಹಣಕಾಸು ಆಯೋಗದಡಿ ರೂ.329 ಕೋಟಿ ವೆಚ್ಚದ ಪರಿಷ್ಕೃತ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ಹೊಸ ತಾಲ್ಲೂಕು ಪ್ರಜಾಸೌಧ ಕಟ್ಟಡ (Type-C ಮಾದರಿ) ನಿರ್ಮಾಣಕ್ಕೆ ರೂ.16 ಕೋಟಿ ಅನುಮೋದಿಸಲಾಗಿದೆ. ಇದರ ಜೊತೆಗೆ “ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2025” ಮತ್ತು “ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ, 2025″ಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೂ ನಿರ್ಣಯ ಕೈಗೊಳ್ಳಲಾಗಿದೆ. ಚನ್ನಪಟ್ಟಣ ನಗರಕ್ಕೆ ಎರಡನೇ ಹಂತದ ಒಳಚರಂಡಿ ಯೋಜನೆಗೆ ರೂ.128.74 ಕೋಟಿ ಮಂಜೂರಾತಿ ದೊರೆತಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ರಾಜಕಾಲುವೆ ಹಾಗೂ ಬೇರೆ ಬೇರೆ ಪ್ರದೇಶಗಳಲ್ಲಿ ನೀರು ಶುದ್ಧೀಕರಣ ಘಟಕಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೂ ಮಂಜೂರಾತಿ ಮಾಡಲಾಗಿದ್ದು, ಇದರಲ್ಲಿ ಬೆಳ್ಳಂದೂರು ತ್ಯಾಜ್ಯ ನೀರು ಶುದ್ಧೀಕರಣ ಘಟಕ, ಹೊರಮಾವು, ಎಲೆಮಲ್ಲಪ್ಪ ಚೆಟ್ಟಿ ಹಾಗೂ ಸಾದರಮಂಗಲ ಪ್ರದೇಶಗಳ ಯೋಜನೆಗಳೂ ಸೇರಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ 1200 ಚದರ ಅಡಿಗಿಂತ ಹೆಚ್ಚಿನ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಇದೇ ವೇಳೆ ಪ್ರತಿದಿನ 1750 ಮೆಟ್ರಿಕ್ ಟನ್ ಕಟ್ಟಡ ಹಾಗೂ ನಿರ್ಮಾಣ ಸಾಮಗ್ರಿಗಳ ಭಗ್ನಾವಶೇಷ ತ್ಯಾಜ್ಯ ವಿಲೇವಾರಿ ಮಾಡಲು ಪಿಪಿಪಿ ಮಾದರಿಯಲ್ಲಿ ಯೋಜನೆ ಅನುಮೋದನೆಗೊಂಡಿದೆ.
ಇದೇ ಸಭೆಯಲ್ಲಿ ಗಣಪತಿ ಆತ್ಮಹತ್ಯೆ ಪ್ರಕರಣದ ಕುರಿತು ಕೇಶವನಾರಾಯಣ ಆಯೋಗದ ವರದಿಯಲ್ಲಿದ್ದ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸುವ ಶಿಫಾರಸ್ಸನ್ನು ಸಚಿವ ಸಂಪುಟ ತಿರಸ್ಕರಿಸಿದೆ. ಹಿಂದಿನ ಗೃಹಸಚಿವ ಕೆ.ಜೆ. ಜಾರ್ಜ್ ಮತ್ತು ಕೆಲವು ಹಿರಿಯ ಅಧಿಕಾರಿಗಳ ವಿರುದ್ಧ ಎತ್ತಲಾದ ಆರೋಪಗಳನ್ನು ಆಯೋಗ ತಳ್ಳಿಹಾಕಿದ್ದರೂ, ಕೆಲ ಅಧಿಕಾರಿ/ಸಿಬ್ಬಂದಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಶಿಫಾರಸ್ಸನ್ನು ಸರ್ಕಾರ ಅಂಗೀಕರಿಸಿಲ್ಲ. ಸಿಬಿಐ ವರದಿ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಎಚ್.ಕೆ ಪಾಟೀಲ ತಿಳಿಸಿದರು.