ತಹಶೀಲ್ದಾರ್ ಕೋರ್ಟ್ ವ್ಯಾಜ್ಯ 90 ದಿನ ಮೀರಿದರೆ ಶಿಸ್ತು ಕ್ರಮ: ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ

Date:

Advertisements

ತಹಶೀಲ್ದಾರ್ ನ್ಯಾಯಾಲಯಗಳಲ್ಲಿನ ತಕರಾರು ಪ್ರಕರಣಗಳು ನಿಗದಿತ ದಿನಗಳ ಒಳಗೆ ವಿಲೇವಾರಿ ಆಗದಿದ್ದರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಎಚ್ಚರಿಸಿದರು.

ಸೋಮವಾರ ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲ ತಹಶೀಲ್ದಾರರುಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, “ಕಳೆದ ಎರಡು ವರ್ಷಗಳಿಂದ ತಹಶೀಲ್ದಾರ್ ನ್ಯಾಯಾಲಯಗಳ ತಕರಾರು ಅರ್ಜಿಗಳ ವಿಲೇ ಕೆಲಸ ಗಮನಾರ್ಹ ರೀತಿಯಲ್ಲಿ ಪ್ರಗತಿ ಕಂಡಿತ್ತು. ಈ ಮೊದಲು ಒಂದು ಪ್ರಕರಣದ ಇತ್ಯರ್ಥಕ್ಕೆ 212 ದಿನ ತೆಗೆದುಕೊಳ್ಳುತ್ತಿದ್ದರೆ, ಪ್ರಸ್ತುತ 82 ದಿನಕ್ಕೆ ಇಳಿಸಲಾಗಿತ್ತು. ಆದರೆ, ಬರುಬರುತ್ತಾ ತಕರಾರು ಅರ್ಜಿಗಳ ವಿಲೇ ಕೆಲಸ ಮತ್ತೆ ವೇಗ ಕಳೆದುಕೊಳ್ಳುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ” ಎಂದು ಬೇಸರ ಹೊರಹಾಕಿದರು.

ತಕರಾರು ಅರ್ಜಿಗಳ ವಿಲೇಗಾಗಿ ಜನ ಸಾಮಾನ್ಯರು ದಿನನಿತ್ಯ ತಹಶೀಲ್ದಾರ್ ಕಚೇರಿ ಅಲೆಯುವುದನ್ನು ಶಾಶ್ವತವಾಗಿ ತಡೆಯಬೇಕು ಎಂಬ ಕಾರಣದಿಂದಲೇ ಅಭಿಯಾನ ಮಾದರಿಯಲ್ಲಿ ಕೋರ್ಟ್ ಕೇಸ್ ವಿಲೇ ಅಂಕಿತ ಹಾಕಲಾಗಿತ್ತು. ಹಲವು ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಕೆಲವು ಅಧಿಕಾರಿಗಳ ಅಸಡ್ಡೆ, ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ತನದಿಂದ ಇಲಾಖೆ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಅಧಿಕಾರಿಗಳ ಇಂತಹ ವರ್ತನೆ ಸಹಿಸುವುದು ಅಸಾಧ್ಯ. ಹೀಗಾಗಿ ಮುಂದಿನ ದಿನಗಳಲ್ಲಿ ಅಧಿಕಾರಿಗಳು 90 ದಿನ ಮೀರಿ ಒಂದು ಪ್ರಕರಣ ಉಳಿಸಿಕೊಂಡಿದ್ದರೂ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.

Advertisements

ಪೋಡಿ ದುರಸ್ಥಿಗೂ ಚುರುಕು ಮುಟ್ಟಿಸಲು ಸೂಚನೆ

ರಾಜ್ಯಾದ್ಯಂತ ಪೋಡಿ ದುರಸ್ಥಿ ಅಭಿಯಾನಕ್ಕೆ ಚಾಲನೆ ನೀಡಿದ್ದರೂ ಈ ಕೆಲಸ ನಿರೀಕ್ಷಿತ ವೇಗ ಪಡೆದಿಲ್ಲ ಎಂದು ತಹಶೀಲ್ದಾರರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ಹೊರಹಾಕಿದರು.

ದಶಕಗಳ ಹಿಂದೆಯೇ ಸರ್ಕಾರ ಬಡ ರೈತರಿಗೆ ಜಮೀನು ಮಂಜೂರು ಮಾಡಿದೆ. ಆದರೆ, ನಾನಾ ಕಾರಣಗಳಿಂದ ಜಮೀನು ದುರಸ್ಥಿಯಾಗದೆ ಲಕ್ಷಾಂತರ ರೈತರು ಸಂಕಷ್ಟಕ್ಕೆ ಒಳಗಾಗಬೇಕಾದ ಸ್ಥಿತಿ ಇದೆ. ರೈತರು ತಮ್ಮ ಪಾಲಿನ ಜಮೀನು ಇದ್ದರೂ ಸಹ ಅದರ ಪೋಡಿಯಾಗದೆ ಸರ್ಕಾರಿ ಕಚೇರಿಗಳಿಗೆ ಸುತ್ತುವುದು ಪರಿಪಾಟವಾಗಿದೆ. ಹೀಗಾಗಿಯೇ ಪೋಡಿ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ನಮೂನೆ 1-5 ಹಾಗೂ 6-10 ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿತ್ತು.

ನಿಯಮದಂತೆ ತಹಶೀಲ್ದಾರರು ನಿಗದಿತ ಜಮೀನಿಗೆ ಸಂಬಂಧಿಸಿದ ನಮೂನೆ 1-5 ದಾಖಲೆಯನ್ನು ಸಿದ್ದಪಡಿಸಿ ಮುಂದಿನ ಹಂತಕ್ಕೆ ನಮೂನೆ 6-10 ಕೆಲಸಕ್ಕಾಗಿ ಭೂ ಮಾಪನ ಇಲಾಖೆಗೆ ಕಡತ ಕಳುಹಿಸಬೇಕು. ಆದರೆ, ಬಹುತೇಕ ಜಿಲ್ಲೆಗಳಲ್ಲಿ ಈ ಸಂಖ್ಯೆ ಸಮಾಧಾನಕರವಾಗಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ಹೊರಹಾಕಿದರು.

ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಹಾಗೂ ತುಮಕೂರು ಜಿಲ್ಲೆಯಲ್ಲಿ ಪೋಡಿ ದುರಸ್ಥಿ ಕೆಲಸ ಚುರುಕುಗೊಂಡಿರುವ ಬಗ್ಗೆ ಅಧಿಕಾರಿಗಳ ಶ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಅವರು, ಇತರೆ ಜಿಲ್ಲೆಗಳೂ ಪೋಡಿ ದುರಸ್ಥಿ ಕೆಲಸಕ್ಕೆ ವೇಗ ನೀಡಬೇಕು. ಅಲ್ಲದೆ, ರೈತರ ಬಳಿ ಭೂ ಮಂಜೂರಿಗೆ ಸಂಬಂಧಿಸಿ ಕನಿಷ್ಠ 3 ದಾಖಲೆ ಇದ್ದರೂ ಸಹ ಅಂತಹ ಪ್ರಕರಣಗಳನ್ನು ಪೋಡಿ ಮಾಡಿಕೊಡಬೇಕು ಎಂದು ತಾಕೀತು ಮಾಡಿದರು.

ಭೂ ದಾಖಲೆಗಳ ಸ್ಕ್ಯಾನಿಂಗ್ ಗೆ ಒತ್ತು

ರಾಜ್ಯದ ಎಲ್ಲ ತಹಶೀಲ್ದಾರ್ ಕಚೇರಿಗಳಲ್ಲಿರುವ ಭೂ ದಾಖಲೆಗಳನ್ನು ಈಗಾಗಲೇ ಅಭಿಯಾನ ಮಾದರಿಯಲ್ಲಿ ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸಲಾಗುತ್ತಿದೆ. ಆದರೆ, ಈ ಕೆಲಸದಲ್ಲೂ ಅಸಡ್ಡೆ ತೋರಿರುವ ಕೆಲ ತಹಶೀಲ್ದಾರರಿಗೆ ನೊಟೀಸ್ ನೀಡುವ ಬಗ್ಗೆ ಸಚಿವರು ಸಭೆಯಲ್ಲಿ ಎಚ್ಚರಿಕೆ ನೀಡಿದರು.

ಈ ಬಗ್ಗೆ ಮಾತನಾಡಿದ ಅವರು, “ಭೂ ದಾಖಲೆಗಳ ಕಳವು ಮತ್ತು ತಿದ್ದುವಂತಹ ಕೃತ್ಯಗಳಿಂದ ಬಡ ರೈತರು ಶೋಷಣೆಗೆ ಒಳಗಾಗುತ್ತಿದ್ದಾರೆ. ಇಂತಹ ಪ್ರಸಂಗಗಳಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಸರ್ಕಾರ ಮುಂದಾಯಿತು. ಮೊದಲು 31 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸಿ ಇದೀಗ ಎಲ್ಲಾ ತಾಲೂಕುಗಳಲ್ಲೂ ದಾಖಲೆಗಳ ಸ್ಕ್ಯಾನ್ಗೆ ಒತ್ತು ನೀಡಲಾಗಿದೆ. ದಾಖಲೆಗಳ ಡಿಜಿಟಲೀಕರಣಕ್ಕೆ ಸಹಾಯವಾಗಲಿ ಎಂಬ ಕಾರಣಕ್ಕೆ ರಾಜ್ಯದ ಎಲ್ಲಾ ತಹಶೀಲ್ದಾರ್ ಕಚೇರಿಗಳಿಗೆ ಅಗತ್ಯ ಸ್ಕ್ಯಾನರ್ಗಳ ಜೊತೆಗೆ ತಲಾ ಆರು ಕಂಪ್ಯೂಟರ್ ಗಳನ್ನೂ ನೀಡಲಾಗಿದೆ. ಇದರ ಜೊತೆಗೆ ಆರು ಜನ ಡಾಟಾ ಎಂಟ್ರಿ ಆಪರೇಟರ್ಗಳಿಗೂ ಸರ್ಕಾರವೇ ವೇತನ ನೀಡುತ್ತಿದೆ. ಆದರೆ, ಇಷ್ಟೆಲ್ಲಾ ಸೌಲಭ್ಯ ಒದಗಿಸಿಯೂ ಕೆಲ ತಹಶೀಲ್ದಾರರು ಗುರಿ ಮುಟ್ಟುವಲ್ಲಿ ವಿಫಲವಾಗಿರುವುದು ಬೇಸರದ ಸಂಗತಿ” ಎಂದರು.

ಮುಂದುವರೆದು, “ಈ ಹಿಂದೆ ಪ್ರತಿಯೊಂದು ತಹಶೀಲ್ದಾರ್ ಕಚೇರಿಗೂ ದಿನಕ್ಕೆ 6,000 ಪುಟಗಳನ್ನು ಸ್ಕ್ಯಾನ್ ಮಾಡುವ ಗುರಿ ನೀಡಲಾಗಿತ್ತು. ಆದರೆ, ಹಲವು ಕಚೇರಿಗಳಲ್ಲಿ ಸರಾಸರಿ 2,000 ಪುಟಗಳನ್ನೂ ಸಹ ಸ್ಕ್ಯಾನ್ ಮಾಡಲಾಗುತ್ತಿಲ್ಲ. ಕೆಲವು ಅಧಿಕಾರಿಗಳಿಂದ ನಮ್ಮ ಗುರಿಯನ್ನು ಸಾಧಿಸಲಾಗುತ್ತಿಲ್ಲ ಎಂದು ಸಚಿವರು ಆಕ್ರೋಶ ಹೊರಹಾಕಿದರು.

“ರಾಜ್ಯಾದ್ಯಂತ ತಹಶೀಲ್ದಾರ್ ಕಚೇರಿಗಳ ರೆಕಾರ್ಡ್ ರೂಮ್ಗಳಲ್ಲಿ ಅಂದಾಜು 100 ಕೋಟಿ ಪುಟಗಳಷ್ಟು ಭೂ ದಾಖಲೆಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 37.6 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಅಲ್ಲದೆ, ಈಗಾಗಲೇ 6.32 ಲಕ್ಷ ಪುಟಗಳನ್ನು ಸ್ಕ್ಯಾನ್ ಮಾಡಿ ದಾಖಲೆಗಳ ಅಸಲಿಯತ್ತನ್ನು ಪರಿಶೀಲಿಸಿ ಸಾರ್ವಜನಿಕ ಡೊಮೈನ್ನಲ್ಲೂ ಅಪ್ಲೋಡ್ ಮಾಡಲಾಗಿದೆ. ಉಳಿದ ಕಡತಗಳನ್ನೂ ಈ ವರ್ಷಾಂತ್ಯದೊಳಗೆ ಅಭಿಯಾನ ಮಾದರಿ ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಬೇಕು” ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಫೌತಿ ಖಾತೆ ಆಂದೋಲನಕ್ಕೆ ವೇಗ ತುಂಬಲು ಸೂಚನೆ

“ರಾಜ್ಯದಲ್ಲಿ 52 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿದೆ. ಈ ಪೈಕಿ ಫೌತಿ ಖಾತೆ ಆಂದೋಲನದ ಮೂಲಕ 3,35,727 ಪ್ರಕರಣಗಳಲ್ಲಿ ಮೃತರ ಹೆಸರಿನಿಂದ ಅವರ ವಾರಸುದಾರರ ಹೆಸರಿಗೆ ಜಮೀನು ವರ್ಗಾವಣೆ ಮಾಡಲಾಗಿದೆ. ಆದರೆ, ಈ ಸಾಧನೆ ತೃಪ್ತಿಕರವಾಗಿಲ್ಲ. ಹೀಗಾಗಿ ಶೀಘ್ರದಲ್ಲಿ ಎಲ್ಲಾ ತಾಲೂಕುಗಳಲ್ಲೂ ಅಭಿಯಾನ ಮಾದರಿಯಲ್ಲಿ ಫೌತಿಖಾತೆ ಕೆಲಸ ನಡೆಯಬೇಕು” ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

“ಮೃತರ ಹೆಸರಿನಲ್ಲಿರುವ ಜಮೀನುಗಳಿಗೆ ಪಿಎಂ ಕಿಸಾನ್, ಹನಿ ನೀರಾವರಿ ಹಾಗೂ ಯಂತ್ರೋಪಕರಣ ಖರೀದಿ ಸಬ್ಸಿಡಿ ನೀಡದಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ರೈತರಿಗೆ ತೊಂದರೆಯಾಗಲಿದೆ, ಅನ್ಯಾಯವಾಗಲಿದೆ. ಹೀಗಾಗಿ ಜನರಿಂದ ಅರ್ಜಿ ಕರೆಯದೆ ನಾವೇ ರೈತರ ಮನೆ ಬಾಗಿಲಿಗೆ ತೆರಳಿ ಅಭಿಯಾನ ಮಾದರಿಯಲ್ಲಿ ಫೌತಿ ಖಾತೆ ಮಾಡಿಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಅಭಿಯಾನಕ್ಕೆ ಮತ್ತಷ್ಟು ವೇಗ ತುಂಬಬೇಕು ಎಂದು ತಾಕೀತು ಮಾಡಿದರು.

ಕಂದಾಯ ಗ್ರಾಮಗಳಿಗೆ ಹಕ್ಕುಪತ್ರ ನೀಡಿ ವಿರಮಿಸುವಂತಿಲ್ಲ

ತಹಶೀಲ್ದಾರರು ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ಹಕ್ಕುಪತ್ರ ನೀಡಿದಾಕ್ಷಣ ತಮ್ಮ ಕೆಲಸ ಮುಗಿಯಿತು ಎಂದು ವಿರಮಿಸುವಂತಿಲ್ಲ. ಬದಲಿಗೆ ಇ-ಖಾತಾ ಜನರೇಟ್‌ ಮಾಡಿ ಇ-ಆಸ್ತಿ ಮಾಡಿಕೊಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಾಕೀತು ಮಾಡಿದರು.

“ಈಗಾಗಲೇ ಕಳೆದ ಮೇ ತಿಂಗಳಲ್ಲಿ ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಗ್ರಾಮಗಳ 1.11 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಇನ್ನೂ 1.62 ಲಕ್ಷ ಕುಟುಂಬದ ಫಲಾನುಭವಿಗಳಿಗೆ ಇ-ಖಾತಾ- ನೋಂದಣಿ ಮಾಡಿಸಿದ ಪಕ್ಕಾ ಹಕ್ಕುಪತ್ರ ನೀಡುವ ಗುರಿಯನ್ನು ನವೆಂಬರ್ ತಿಂಗಳ ಅಂತ್ಯದೊಳಗೆ ಯಶಸ್ವಿಗೊಳಿಸಬೇಕು” ಎಂದು ಎಲ್ಲಾ ತಹಶೀಲ್ದಾರರಿಗೂ ಗುರಿ ನೀಡಿದರು.

ಸಭೆಯಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ ಸೇರಿದಂತೆ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ದೆಹಲಿ ನಾಯಕರಿಂದ ಎಸ್‌ಐಟಿ ರಚನೆಗೆ ಸೂಚನೆ: ಸಂಸದ ತೇಜಸ್ವಿ ಸೂರ್ಯ

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಕೆಲ ನಾಯಕರಿಂದ ಎಸ್‌ಐಟಿ ರಚನೆಗೆ ಸೂಚನೆ...

ಎಸ್‌ಸಿ, ಎಸ್ಟಿ ದೌರ್ಜನ್ಯ ಕಾಯ್ದೆ | 60 ದಿನದ ಒಳಗಾಗಿ ಆರೋಪ ಪಟ್ಟಿ ಸಲ್ಲಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ...

ಗ್ರಾಮೀಣ ಆರ್ಥಿಕತೆಯ ಶಕ್ತಿಯೇ ಕೃಷಿ ಕೂಲಿ ಕಾರ್ಮಿಕರು: ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸುವುದೇ ಸರ್ಕಾರ?

ಗ್ರಾಮೀಣ ಜೀವನವನ್ನು ಹೊತ್ತೊಯ್ಯುವ ಪ್ರಮುಖ ಶಕ್ತಿಯೇ ಕೃಷಿ ಕೂಲಿ ಕಾರ್ಮಿಕರು. ರೈತನು...

ಡಿ ಕೆ ಶಿವಕುಮಾರ್‌ ಆರ್​ಎಸ್​ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆ ಕೇಳಬೇಕು: ಬಿ ಕೆ ಹರಿಪ್ರಸಾದ್ ಆಗ್ರಹ

ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್‌ ಆರ್​ಎಸ್​ಎಸ್ ಗೀತೆ ಹಾಡಿದ್ದರೆ ಕ್ಷಮೆ...

Download Eedina App Android / iOS

X