ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಹೊಣೆಗಾರಿಕೆಯೇ ಬುನಾದಿಯಾಗಿದೆ. ಎಲ್ಲರೂ ಸರ್ಕಾರಕ್ಕೆ ಕುರುಡಾಗಿ ತಲೆಬಾಗುವುದೇ ಪ್ರಜಾಪ್ರಭುತ್ವದ ಬಲವಲ್ಲ, ಬದಲಿಗೆ ಪ್ರತಿಯೊಬ್ಬ ನಾಗರಿಕನಿಗೂ ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಮೂಲಭೂತ ಸ್ವಾತಂತ್ರ್ಯ ಇರುವುದೇ ನಿಜವಾದ ಪ್ರಜಾಪ್ರಭುತ್ವದ ಲಕ್ಷಣ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಳಿದ್ದಾರೆ.
ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) 34ನೇ ವಾರ್ಷಿಕ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸರ್ಕಾರದೊಂದಿಗೆ ಏಕಾಭಿಪ್ರಾಯ ಹೊಂದಿರಬೇಕು ಎಂದೇನಿಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾರವನ್ನು ಪ್ರಶ್ನಿಸುವ ಹಕ್ಕಿದೆ. ನೀವೇ ಜವಾಬ್ದಾರರು, ನೀವೇ ಹೊಣೆಗಾರರು ಹಾಗೂ ಸಂವಿಧಾನವು ನಿಮಗೆ ನೀಡಿರುವ ಹಕ್ಕುಗಳು ಮತ್ತು ಸರಿಪಡಿಸುವ ಶಕ್ತಿ ನಿಮ್ಮ ಬಳಿಯಿದೆ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
“ಇಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗಳು ವಿವಿಧ ಪರೀಕ್ಷೆಗಳನ್ನು ಎದುರಿಸುತ್ತಿದ್ದು, ಸಾಂಸ್ಥಿಕ ವ್ಯವಸ್ಥೆಗಳು ಭಾರಿ ಒತ್ತಡಕ್ಕೆ ಸಿಲುಕಿವೆ. ಹೀಗಾಗಿ ಸಮಾಜಕ್ಕೆ ಪ್ರಶ್ನಿಸುವ, ಚರ್ಚಿಸುವ, ವಿಚಾರಗಳನ್ನು ಸವಾಲಿಗೆ ಒಡ್ಡುವ ಮತ್ತು ಅದಕ್ಕೆ ಸೂಕ್ತ ಪರಿಹಾರಗಳನ್ನು ಒದಗಿಸುವ ಯುವಜನರ ತುರ್ತು ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ.
“ಯಾವುದೇ ಕಾರಣಕ್ಕೂ ಪ್ರಶ್ನೆಗಳನ್ನು ಕೇಳಲು ಹೆಂಜಾರಬೇಡಿ. ಆದರೆ ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಜವಾಬ್ದಾರಿಯನ್ನು ಹೊರಲೂ ಸಿದ್ಧರಾಗಿರಿ.ಕಾನೂನು ವೃತ್ತಿಪರರು ಸಾಂವಿಧಾನಿಕ ನೈತಿಕತೆಯ ಕಾವಲುಗಾರರಾಗಿ ಕಾರ್ಯನಿರ್ವಹಿಸಬೇಕು” ಎಂದು ಅವರು ಯುವ ಕಾನೂನು ಪದವೀಧರರಿಗೆ ಕಿವಿಮಾತು ಹೇಳಿದ್ದಾರೆ.
“ಭಾರತಕ್ಕೆ ಕೇವಲ ಹೆಚ್ಚಿನ ಸಂಖ್ಯೆಯ ವಕೀಲರ ಅಗತ್ಯವಿಲ್ಲ; ಬದಲಿಗೆ ಪ್ರಾಮಾಣಿಕತೆ, ಕರುಣೆ ಹಾಗೂ ಧೈರ್ಯವಿರುವ ವಕೀಲರು ಬೇಕಾಗಿದ್ದಾರೆ. ಕೇವಲ ಕಾನೂನನ್ನು ತಿಳಿದುಕೊಳ್ಳುವುದು ವ್ಯಕ್ತಿಯನ್ನು ವೃತ್ತಿಪರರನ್ನಾಗಿ ಮಾಡುತ್ತದೆ, ಆದರೆ ನ್ಯಾಯದ ಮೌಲ್ಯವನ್ನು ಅರ್ಥಮಾಡಿಕೊಳ್ಳುವುದು ಅವರನ್ನು ನಾಯಕರನ್ನಾಗಿ ರೂಪುಗೊಳಿಸುತ್ತದೆ” ಎಂದು ತಿಳಿಸಿದ್ದಾರೆ.




