‘ನೆಪಗಳನ್ನಿಟ್ಟು ಒಳಮೀಸಲಾತಿ ಜಾರಿ ತಡಮಾಡದಿರಿ’; ಅನಿರ್ದಿಷ್ಟಾವಧಿ ಹೋರಾಟ ಆರಂಭ

Date:

Advertisements
"ಜ್ಞಾನಪ್ರಕಾಶ್ ಸ್ವಾಮೀಜಿಯವರು ವರದಿಯನ್ನು ಸುಟ್ಟು ಹಾಕಿದ್ದಾರೆ. ಇಂತಹ ಕೆಲಸವನ್ನು ಸಣ್ಣಮಕ್ಕಳೂ ಮಾಡುವುದಿಲ್ಲ. ಸಾಮಾಜಿಕ ನ್ಯಾಯದ ಕುರಿತು ಮಾತನಾಡುವ ಅವರಿಗೆ  ಒಂದಿಷ್ಟು ತಾಳ್ಮೆಯಾದರೂ ಇರಬೇಕಿತ್ತು" ಎಂದು ಹೋರಾಟಗಾರ ಎಸ್.ಮಾರೆಪ್ಪ ಹೇಳಿದರು.

ಈಗ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲೇ ಒಳಮೀಸಲಾತಿಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಸತ್ಯಾಗ್ರಹ ಇಂದು (ಸೋಮವಾರ) ಶುರುವಾಗಿದೆ.

ಐತಿಹಾಸಿಕ ಹೋರಾಟ ತಾರ್ತಿಕ ಅಂತ್ಯ ಕಾಣುವ ಕಾಲ ಸನ್ನಿಹಿತವಾಗಿದ್ದು, ಮೂರು ದಶಕಗಳಿಂದ ಚಳವಳಿಯ ಮುಂಚೂಣಿಯಲ್ಲಿದ್ದ ಮುಖಂಡರ ಸಾಮೂಹಿಕ ನಾಯಕತ್ವದಲ್ಲಿ ಅಂತಿಮ ಹೋರಾಟ ಶುರುವಾಗಿದೆ. ಜಸ್ಟಿಸ್ ಎಚ್.ಎನ್. ನಾಗಮೋಹನ ದಾಸ್ ಏಕಸದಸ್ಯ ಆಯೋಗದ ವರದಿ ಜಾರಿಗೆ ಪಟ್ಟುಹಿಡಿಯಲಾಗಿದೆ.

ಅಧಿವೇಶನದಲ್ಲಿ ಒಳಮೀಸಲಾತಿ ವಿಚಾರವು ಸರ್ವಪಕ್ಷಗಳ ಸರ್ವಾನುಮತದೊಂದಿಗೆ ಅನುಮೋದನೆಯಾಗಿ ರಾಜ್ಯಪಾಲರ ಅಂಕಿತವಾಗಬಹುದಾದ ಎಲ್ಲಾ ಸಾಧ್ಯತೆಗಳು ಬೆಟ್ಟದಷ್ಟಿವೆ. ಇದರ ಬದಲಿಗೆ ಮತ್ತೊಂದು ಸಂಪುಟ ಉಪಸಮಿತಿಯ ರಚನೆ ಅಥವಾ ತಜ್ಞರ ಸಲಹೆಯ ನೆಪದಲ್ಲಿ ಮತ್ತಷ್ಟು ತಿಂಗಳುಗಳ ಕಾಲ ಮುಂದೂಡುವುದನ್ನು ನಾವು ಒಪ್ಪುವುದಿಲ್ಲ. ಈಗಾಗಲೇ ಒಳ ಮೀಸಲಾತಿ ಕಾರಣಕ್ಕೆ ನೇಮಕಾತಿಗಳನ್ನು ತಡೆಹಿಡಿದಿರುವುದರಿಂದ ಎಲ್ಲಾ ಸಮುದಾಯದ ಯುವಜನರು ಕಾಯುತ್ತಿದ್ದಾರೆ. ಹಾಗಾಗಿ ಒಳಮೀಸಲಾತಿ ತುರ್ತಾಗಿ ಅನುಷ್ಠಾನಕ್ಕೆ ಬರಬೇಕೆಂದು ಹೋರಾಟಗಾರರು ಆಗ್ರಹಿಸಿದ್ದಾರೆ.

Advertisements

ಮುಖ್ಯಮಂತ್ರಿಗಳು ತಾವೇ ನೀಡಿದ್ದ ಒಳಮೀಸಲಾತಿ ಗ್ಯಾರಂಟಿಯನ್ನು ತಮ್ಮ ಪರಮಾಧಿಕಾರ ಬಳಸಿ ಜಾರಿಮಾಡಬೇಕು. ಒಳ ಮೀಸಲಾತಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

internal 1

ವೇದಿಕೆಯಲ್ಲಿ ಮಾತನಾಡಿದ ಹೋರಾಟಗಾರ ಅಂಬಣ್ಣ ಅರೋಲಿಕರ್, “ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಕಳಕಳಿ ಉಳ್ಳವರು ಎಂದು ನಾವು ಭಾವಿಸುತ್ತೇವೆ. ಆದ್ದರಿಂದ, ಅವರ ಸಮುದಾಯ ಪರವಾದ ಬದ್ಧತೆ ಬಹಿರಂಗ ಆಗುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ” ಎಂದು ಎಚ್ಚರಿಸಿದರು.

ಇದನ್ನೂ ಓದಿರಿ: GROUND REPORT: ಸಾಮಾನ್ಯರ ಬದುಕು ಹೈರಾಣಾದ ‘ಧರ್ಮಸ್ಥಳ’ದಲ್ಲಿ ಕಂಡಿದ್ದಿಷ್ಟು…

“ಇದು ಆರಂಭ ಮಾತ್ರ. ಇಲ್ಲಿ ಹಲವು ತಜ್ಞರು ಮತ್ತು ಹೋರಾಟಗಾರರು ಬಂದಿದ್ದಾರೆ. ಇದು ಯಾವುದೋ ಒಂದು ಸಂಘಟನೆಯ ಹೋರಾಟವಲ್ಲ. ಇದು ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತಿರುವ ಹೋರಾಟ. ಒಳಮೀಸಲಾತಿ ಕುರಿತು ನಾವು ಇಲ್ಲಿ ಮುಕ್ತವಾಗಿ ಚರ್ಚೆ ಮಾಡಬೇಕಿದೆ” ಎಂದು ತಿಳಿಸಿದರು.

“ಮೊದಲು ಜಸ್ಟಿಸ್ ನಾಗಮೋಹನ್‌ ದಾಸ್‌ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಬೇಕು, ಸಣ್ಣಪುಟ್ಟ ಬದಲಾವಣೆಗಳಿದ್ದರೆ ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಬಹುದು” ಎಂದು ಹೇಳಿದರು.

“ಮಾದಿಗ ಸಮುದಾಯ 35 ವರ್ಷಗಳ ಕಾಲ ಮಾಡಿರುವ ಹೋರಾಟ ಯಾವುದೋ ಒಂದು ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಆದರೆ, ಕೆಲವು ಸಂದರ್ಭಗಳಲ್ಲಿ ನಾವು ಒಂದು ಪಕ್ಷದ ಪರವಾಗಿ ನಿಂತಿರಬಹುದು. ಆದ್ದರಿಂದ ಕಾಂಗ್ರೆಸ್ ಪಕ್ಷ ನಾಗಮೋಹನ್‌ ದಾಸ್ ಆಯೋಗದ ವರದಿಯನ್ನು ಕೂಡಲೇ ಅಂಗೀಕರಿಸಬೇಕು” ಎಂದರು.

internal 3

“ಜ್ಞಾನ ಪ್ರಕಾಶ ಸ್ವಾಮೀಜಿ ಜಸ್ಟಿಸ್ ನಾಗಮೋಹನ್‌ ದಾಸ್ ಆಯೋಗದ ವರದಿಯನ್ನು ಸುಟ್ಟಿದ್ದು ಸರಿಯಲ್ಲ. ಆ ಮೂಲಕ ನೀವು ಒಂದೂವರೆ ಕೋಟಿ ಜನಸಂಖ್ಯೆಯ ಬದುಕನ್ನು ಸುಡಲು ಹೊರಟಿದ್ದೀರಿ. ಒಳ ಮೀಸಲಾತಿಗಾಗಿ ನಡೆದ ಹೋರಾಟಗಳಲ್ಲಿಅವರು ಈ ಹಿಂದೆ ಭಾಗವಹಿಸಿದ್ದರು. ಆದಿ ಕರ್ನಾಟಕ-ಆದಿ ದ್ರಾವಿಡ ವಿವಾದವನ್ನು ನಾವು ಮಾತನಾಡುವುದು ಸರಿಯಲ್ಲ. ಯಾವ ಜಾತಿ ಯಾವ ಗುಂಪಿನಲ್ಲಿ ಇರಬೇಕು ಎಂಬುದನ್ನು ಅದೇ ಸಮುದಾಯ ನಿರ್ಧರಿಸಬೇಕು. ಬೇಕಿದ್ದರೆ ನೀವು ಸರ್ಕಾರದೊಂದಿಗೆ ಚರ್ಚೆ ಮಾಡಿ, ಈ ಬಿಡಾರಕ್ಕೆ ಬಂದು ನೀವು ನಮ್ಮೊಂದಿಗೆ ಮುಕ್ತವಾಗಿ ಚರ್ಚೆ ಮಾಡಿ. ನಾವೇ ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು” ಎಂದು ಪ್ರತಿಕ್ರಿಯಿಸಿದರು.

ಹಿರಿಯ ಹೋರಾಟಗಾರ ಎಸ್‌.ಮಾರೆಪ್ಪ ಮಾತನಾಡಿ, “ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರ ಗುಂಪು ನಮಗೆ ಮಾತ್ರ ಸೇರಬೇಕು ಎನ್ನುವುದು ಮೊಂಡುವಾದ. 4,47,000 ಜನರು ಎಲ್ಲೆಲ್ಲಿ ಹಂಚಿಹೋಗಿದ್ದಾರೆಂದು ಗಮನಿಸಬೇಕು. ಆ ಜಿಲ್ಲೆಗಳಲ್ಲಿ ಯಾವ ಸಮುದಾಯದ ಪ್ರಮಾಣ ಎಷ್ಟಿದೆ ಎನ್ನುವುದರ ಮೇಲೆ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಬರೆಸಿದವರು ಯಾರೆಂದು ಗುರುತಿಸಬಹುದು. ಹೀಗೆ ಬರೆಸಿದವರ ಪೈಕಿ 1,80,000 ಜನ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದಾರೆ. ಇವರೆಲ್ಲರೂ ಪೌರಕಾರ್ಮಿಕರಾಗಿದ್ದಾರೆ. ಹೊಲೆಯ ಮತ್ತು ಛಲವಾದಿ ಸಮುದಾಯದಲ್ಲಿ ಅಷ್ಟು ಪ್ರಮಾಣದ ಪೌರಕಾರ್ಮಿಕರು ಇರಲಿಕ್ಕಿಲ್ಲ” ಎಂದು ಅಭಿಪ್ರಾಯಪಟ್ಟರು.

“ಉಡುಪಿ ಜಿಲ್ಲೆಯಲ್ಲಿ 33,000 ಜನ ಆದಿ ದ್ರಾವಿಡ ಎಂದು ಬರೆಸಿದ್ದಾರೆ. ಅಲ್ಲಿಯೂ ಹೊಲೆಯ ಮಾದಿಗರಿಲ್ಲ. ದಕ್ಷಿಣ ಕನ್ನಡದಲ್ಲಿ 31,000 ಜನ ಈ ಗುಂಪಿಗೆ ಬಂದಿದ್ದಾರೆ. ಹೀಗೆ ಲೆಕ್ಕ ಹಾಕುತ್ತಾ ಹೋದರೆ 2ರಿಂದ 3 ಲಕ್ಷ ಜನ ಕಡಿತಗೊಳ್ಳುತ್ತಾರೆ. ಹೀಗಿರುವಾಗ ನಮ್ಮ ಸಹೋದರರು ಹೇಗೆ ಎ.ಕೆ., ಎ.ಡಿ., ಎಎ ತಮ್ಮದೆಂದು ಪ್ರತಿಪಾದಿಸುತ್ತಾರೆ? ಏನಾದರೂ ತಪ್ಪುಗಳಾಗಿದ್ದರೆ ಕೂತು ಬಗೆಹರಿಸಿಕೊಳ್ಳೋಣ. ನಮ್ಮ ನಡುವೆ ಚರ್ಚೆಗಳು ನಡೆಯಲಿ” ಎಂದು ಆಶಿಸಿದರು.

ಇದನ್ನೂ ಓದಿರಿ: ಇಂದಿನಿಂದ ವಿಧಾನಮಂಡಲ ಮುಂಗಾರು ಅಧಿವೇಶನ: ಸರ್ಕಾರದ ವಿರುದ್ಧ ವಾಕ್ಸಮರಕ್ಕೆ ವಿಪಕ್ಷಗಳು ಸಜ್ಜು

“ಜ್ಞಾನಪ್ರಕಾಶ್ ಸ್ವಾಮೀಜಿಯವರು ವರದಿಯನ್ನು ಸುಟ್ಟು ಹಾಕಿದ್ದಾರೆ. ಇಂತಹ ಕೆಲಸವನ್ನು ಸಣ್ಣಮಕ್ಕಳೂ ಮಾಡುವುದಿಲ್ಲ. ಸಾಮಾಜಿಕ ನ್ಯಾಯದ ಕುರಿತು ಮಾತನಾಡುವ ಅವರಿಗೆ  ಒಂದಿಷ್ಟು ತಾಳ್ಮೆಯಾದರೂ ಇರಬೇಕಿತ್ತು. ನಾಗಮೋಹನ ದಾಸ್ ಅವರ ವರದಿಯಲ್ಲಿ ಮಾದಿಗರಿಗೂ ಕೂಡ ಅಲ್ಪಸ್ವಲ್ಪ ಅನ್ಯಾಯವಾಗಿದೆ. ಈ ವರದಿಯಾಗಲೀ, ಇನ್ಯಾವುದೇ ವರದಿಯಾಗಲೀ ನೂರಕ್ಕೆ ನೂರರಷ್ಟು ಸರಿ ಇರಲು ಸಾಧ್ಯವೇ ಇಲ್ಲ. ಶೇ.5ರಿಂದ 10ರಷ್ಟು ಏರಿಳಿತಗಳು ಇದ್ದೇ ಇರುತ್ತವೆ” ಎಂದು ಮಾರ್ಮಿಕವಾಗಿ ನುಡಿದರು.

“ನಾಗಮೋಹನ ದಾಸ್ ಅವರ ವರದಿಯಲ್ಲಿ ಜನಪ್ರತಿನಿಧಿಗಳ ಜಾತಿಯು ಕ್ಯಾಸ್ಟ್‌ವೈಸ್ ನಮೂದಿತವಾಗಿಲ್ಲ. 1997ರಿಂದ ಇಲ್ಲಿಯವರೆಗೆ ಪ್ರತಿ ವಿಧಾನಸಭಾ ಚುನಾವಣೆಯ ಎಂಎಲ್‌ಎಗಳ ಪಟ್ಟಿ ತೆಗೆದು ನೋಡಿದರೆ, ಒಮ್ಮೆಯೂ ಮಾದಿಗ ಸಮುದಾಯದವರ ಪ್ರಾತಿನಿಧ್ಯ ಹತ್ತನ್ನೂ ದಾಟಿಲ್ಲ. 36 ಮೀಸಲು ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳಲ್ಲಿ ಗೆದ್ದವರು ಯಾರು? ಆಯೋಗ ಅದನ್ನೇಕೆ ವರದಿಯಲ್ಲಿ ಉಲ್ಲೇಖಿಸಿಲ್ಲ? ಹಾಗೆಂದು ವರದಿಯನ್ನು ನಾವು ಹರಿದು ಹಾಕಲು ಸಾಧ್ಯವೇ? ತಪ್ಪುಗಳು ಇದ್ದೇ ಇರುತ್ತವೆ. ಹಾಗೆಂದು ಆಯೋಗದ ವರದಿ ಅವೈಜ್ಞಾನಿಕ ಎನ್ನುವುದು ಒಳ್ಳೆಯದಲ್ಲ” ಎಂದು ವಿಶ್ಲೇಷಿಸಿದರು.

“ಆಗಸ್ಟ್ ಹದಿನಾರನೇ ತಾರೀಕು ಒಳಮೀಸಲಾತಿ ವಿಚಾರ ಸದನದ ಮುಂದೆ ಬರುತ್ತದೆ. ಹದಿನೈದನೇ ತಾರೀಕು ಪ್ರತಿ ಜಿಲ್ಲಾ ಕೇಂದ್ರಗಳಿಗೆ ಸ್ವಾತಂತ್ರ್ಯ ದಿನದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸುತ್ತಾರೆ. ನಾವು ಸಚಿವರುಗಳ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಕು” ಎಂದು ಸಲಹೆ ನೀಡಿದರು.

internal 2

ದಸಂಸ ಮುಖಂಡರಾದ ಪಿಚ್ಚಳ್ಳಿ ಶ್ರೀನಿವಾಸ್ ಮಾತನಾಡಿ, “ನಮ್ಮ 30 ವರ್ಷಗಳ ಹೋರಾಟದ ಫಲವಾಗಿ ಇಂದು ಒಂದು ಹಣ್ಣು ಸಿಗುತ್ತಿದೆ, ಅದನ್ನು ನಾವು ಕಳೆದುಕೊಳ್ಳಬಾರದು. ವರದಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅದನ್ನು ಸರಿಪಡಿಸಿಕೊಂಡು ಜಾರಿಗಾಗಿ ಆಗ್ರಹಿಸಬೇಕು” ಎಂದು ಅಭಿಪ್ರಾಯಪಟ್ಟರು.

“ವರದಿಯ ಸಾಧಕ-ಬಾಧಕಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಅಧಿಕೃತವಲ್ಲ. ವರದಿಯಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅವೆಲ್ಲವನ್ನೂ ಕೂಡ ಹೊಲೆಯ-ಮಾದಿಗ ಸೇರಿದಂತೆ ಅಸ್ಪೃಶ್ಯ ಕುಲಗಳೆಲ್ಲಾ ಒಟ್ಟಿಗೆ ಕೂತು ಮಾತನಾಡಿಕೊಳ್ಳಬೇಕು. ನಮಗೆಲ್ಲಾ ಒಪ್ಪಿತ ವರದಿಯನ್ನು ಜಾರಿ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಬೇಕಿದೆ” ಎಂದು ಕಿವಿಮಾತು ಹೇಳಿದರು.

“ಒಳ ಮೀಸಲಾತಿ ಜಾರಿಗಾಗಿ ಆರಂಭವಾಗಿರುವ ಈ ಧರಣಿಯಯನ್ನು ನಾವು ಮುಂದುವರಿಸಬೇಕಿದೆ. ಹಾಗಾಗಿ, ಎಲ್ಲಿವರೆಗೂ ಮುಂದುವರಿಯುತ್ತದೆಯೋ ಅಲ್ಲಿವರೆಗೂ ನಾವು ನಮ್ಮ ಬದ್ಧತೆ ಮತ್ತು ಪ್ರಾಮಾಣಿಕವಾಗಿ ಈ ಹೋರಾಟದಲ್ಲಿ ಕಾರ್ಯಕರ್ತರಾಗಿ ತನು, ಮನ, ಧನವನ್ನು ಸಲ್ಲಿಸಬೇಕಾಗಿದೆ” ಎಂದರು.

ಇದನ್ನೂ ಓದಿರಿ: ದಾವಣಗೆರೆ | ಶ್ರಮಿಕ ಶಕ್ತಿ ಸಂಯೋಜಿತ ಕಾಯಕಜೀವಿ ಕಟ್ಟಡ ಕಾರ್ಮಿಕ ಸಂಘಟನೆ ಘಟಕ ಉದ್ಘಾಟನೆ

“ನಾನು ಕಲಾವಿದನಾಗಿ ಇಡೀ ರಾಜ್ಯದ ಹಳ್ಳಿಹಳ್ಳಿಗಳಿಗೆ ದಸಂಸ ವಿಚಾರಗಳನ್ನು ಮನೆಮನಗಳನ್ನು ಮುಟ್ಟಿಸಿದ್ದೇನೆ. ಈ ತರಹದ ಸಾಮಾಜಿಕ ಜವಾಬ್ದಾರಿಯನ್ನು ನಾವು ಸಂಘಟನೆ ಮುಖಾಂತರವೇ ಹಲವಾರು ವರ್ಷಗಳಿಂದ ಒತ್ತಾಯ ಮಾಡುತ್ತಿದ್ದೇವೆ. ವಿಶೇಷವಾಗಿ, 30 ವರ್ಷಗಳ ಫಲವಾಗಿ ಇಂದು ಒಂದು ಹಣ್ಣು ಸಿಗುವ ಸಂದರ್ಭದಲ್ಲಿ ನಾವು ಕಳೆದುಕೊಳ್ಳಬಾರದು. ನಮ್ಮ ಹಕ್ಕು ಪಡೆದುಕೊಳ್ಳುವ ಸಲುವಾಗಿ, ಸಣ್ಣಪುಟ್ಟ ಮನಸ್ಥಾಪಗಳನ್ನು ಪಕ್ಕಕ್ಕೆ ಇಡಬೇಕಾಗಿದೆ. ನಾನು ಈ ಹೋರಾಟದಲ್ಲಿ ಪೂರ್ಣಪ್ರಮಾಣದಲ್ಲಿ ಭಾಗವಹಿಸುತ್ತೇನೆ” ಎಂದು ಅವರು ಘೋಷಿಸಿದರು.

ಮುಖಂಡರಾದ ಬಸವರಾಜು ಕೌತಾಳ್, ಹೆಣ್ಣೂರು ಶ್ರೀನಿವಾಸ್‌, ಡಿ.ಟಿ.ವೆಂಕಟೇಶ್‌, ಪಿಟಿಸಿಎಲ್‌ ಮಂಜುನಾಥ್, ಉಮಾದೇವಿ, ಸಿದ್ದಲಿಂಗಯ್ಯ ಕಮಲಾನಗರ, ಶಿವಲಿಂಗಮ್‌, ಭೀಮನಕೆರೆ ಶಿವಮೂರ್ತಿ, ಶಿವಲಿಂಗಣ್ಣ, ಪಾರ್ತಿಭನ್‌, ಡಾ ಹುಲಿಕುಂಟೆ ಮೂರ್ತಿ, ಮುತ್ತುರಾಜ್‌, ಸಣ್ಣ ಮಾರೆಪ್ಪ, ಶಿವರಾಯ ಅಕ್ಕರಕಿ, ಕರಿಯಪ್ಪ ಗುಡಿಮನಿ, ಜೆ.ಬಿ.ರಾಜು, ಚಾವಡಿ ಲೋಕೇಶ್‌, ನರಸಿಂಹಮೂರ್ತಿ, ಓಬಳೇಶ್‌, ನಾರಾಯಣ, ಮೈಲಾರಪ್ಪ, ಜನಶಕ್ತಿ ಗೌರಿ, ಗಂಗಾಧರ್ ಹೆಣ್ಣೂರು, ಸಿರಿಮನೆ ನಾಗರಾಜ್, ಸಂಜು, ಮಂಜು ಸಂಡೂರು, ಪ್ರೊ. ದೊರೆರಾಜು, ಕೇಶವಮೂರ್ತಿ, ಚಂದ್ರು ತರಹುಣಸೆ ಮೊದಲಾದವರು ಹೋರಾಟದಲ್ಲಿ ಭಾಗಿಯಾಗಿದ್ದಾರೆ.

ಹೋರಾಟದ ಹಕ್ಕೊತ್ತಾಯಗಳು:

• ಜಸ್ಟಿಸ್ ನಾಗಮೋಹನ್ ದಾಸ್‌ರವರ ವರದಿಯನ್ನು ಅಧಿವೇಶನದಲ್ಲಿ ಅಂಗೀಕರಿಸಿ, ಒಳಮೀಸಲಾತಿ ಜಾರಿಗೊಳಿಸಬೇಕು.
• ಮತ್ತೊಂದು ಉಪ ಸಮಿತಿ ರಚಿಸದೇ, ಸಚಿವ ಸಂಪುಟದಲ್ಲಿ ಜಾರಿಗೆ ಒಮ್ಮತದ ನಿರ್ಧಾರ ಕೈಗೊಳ್ಳಬೇಕು.
• ಮುಖ್ಯಮಂತ್ರಿಗಳು ತಾವೇ ನೀಡಿದ್ದ ಒಳಮೀಸಲಾತಿ ಗ್ಯಾರಂಟಿಯನ್ನು ತಮ್ಮ ಪರಮಾಧಿಕಾರ ಬಳಸಿ ಜಾರಿಮಾಡಬೇಕು.
• ಒಳ ಮೀಸಲಾತಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಕೈಬಿಡಬೇಕು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ: SIT ತನಿಖೆ ನಿಷ್ಪಕ್ಷಪಾತವಾಗಿ ಮುಂದುವರಿಸಲು ಸರ್ಕಾರಕ್ಕೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಆಗ್ರಹ

ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರ ನಾಪತ್ತೆ, ಅತ್ಯಾಚಾರ ಮತ್ತು ಬರ್ಬರ ಕೊಲೆಗಳ ಪ್ರಕರಣಗಳ...

ಪಿಒಪಿ ಬಳಸಲ್ಲ ಎಂದು ಗಣೇಶೋತ್ಸವ ಸಮಿತಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಿ: ಈಶ್ವರ ಖಂಡ್ರೆ ಸೂಚನೆ

ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪಿಒಪಿ ಗಣಪತಿ ಮೂರ್ತಿ ಬಳಸುವುದಿಲ್ಲವೆಂದು ಪೆಂಡಾಲ್‌ಗೆ ಅನುಮತಿ ನೀಡುವ...

ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್‌ ವಶಕ್ಕೆ, ಬ್ರಹ್ಮಾವರ ಪೊಲೀಸ್ ಠಾಣೆ ಸುತ್ತ ಒಂದು ದಿನದ ನಿಷೇಧಾಜ್ಞೆ ಜಾರಿ

ಮಹೇಶ್ ಶೆಟ್ಟಿ ತಿಮರೋಡಿ ತೀವ್ರ ವಿಚಾರಣೆಯ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ...

Download Eedina App Android / iOS

X