ಕರ್ತವ್ಯದ ವೇಳೆ ಮಾರ್ಗಮಧ್ಯೆ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಎ.ಆರ್ ಮುಲ್ಲಾ ಅವರನ್ನು ಅಮಾನತು ಮಾಡಲಾಗಿದೆ. ಚಾಲಕ ಮುಲ್ಲಾ ಅವರು ಹಾನಗಲ್ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರನ್ನು ಅಮಾನತುಗೊಳಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಆದೇಶಿಸಿದೆ.
ಏಪ್ರಿಲ್ 29ರಂದು ಹುಬ್ಬಳ್ಳಿಯಿಂದ ಹಾವೇರಿ ಮಾರ್ಗದಲ್ಲಿ ಮುಲ್ಲಾ ಅವರು ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ, ಮಾರ್ಗ ಮಧ್ಯೆ ಬಸ್ ನಿಲ್ಲಿಸಿ, ಮುಲ್ಲಾ ಅವರು ನಮಾಜ್ ಮಾಡಿದ್ದಾರೆ. ಅವರು ನಮಾಜ್ ಮಾಡುತ್ತಿದ್ದುದ್ದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ವಿಡಿಯೋ ವೈರಲ್ ಆದ ಬಳಿಕ, ಮುಲ್ಲಾ ಅವರನ್ನು ಮೇ 1ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿಸ್ತುಪಾಲನೆ ಅಧಿಕಾರಿ ಅಮಾನತು ಮಾಡಿದ್ದಾರೆ. ಘಟನೆ ಬಗ್ಗೆ ಸಂಪೂರ್ಣ ವಿವರಣೆ ನೀಡುವಂತೆ ನೋಟಿಸ್ ನೀಡಿದ್ದಾರೆ.
ಈ ವರದಿ ಓದಿದ್ದೀರಾ?: ಗೋಮೂತ್ರ ರೋಗ ಪರಿಹಾರಕವೇ? ಸಂಶೋಧನೆಗಳು ಏನು ಹೇಳಿವೆ?
ಘಟನೆಯ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಹಿಂದು ದೇವತೆಗಳ ಫೋಟೋಗಳನ್ನು ಇರಿಸಲಾಗುತ್ತದೆ. ಪೂಜೆ ಮಾಡಲಾಗುತ್ತದೆ. ಆಯುಧ ಪೂಜೆ ಸೇರಿದಂತೆ ನಾನಾ ಹಬ್ಬಗಳ ಸಮಯದಲ್ಲಿ ವಿಶೇಷ ಪೂಜೆಗಳನ್ನು ಮಾಡಲಾತ್ತದೆ. ಹೀಗಿರುವಾಗ, ಮುಲ್ಲಾ ಅವರು ಬಸ್‌ನಲ್ಲಿ ನಮಾಜ್ ಮಾಡಿದರೆ ತಪ್ಪೇನು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. “ಪ್ರತಿ ವ್ಯಕ್ತಿಗೂ ಧಾರ್ಮಿಕ ಸ್ವಾತಂತ್ರ್ಯವಿದೆ. ಆದರೆ, ಸಾರ್ವಜನಿಕ ಸೇವೆಯಲ್ಲಿರುವವರು ಕರ್ತವ್ಯದ ವೇಳೆ ಹೊರತುಪಡಿಸಿ ಉಳಿದ ಸಮಯದಲ್ಲಿ ತಮ್ಮ ಧರ್ಮವನ್ನು ಪಾಲಿಸಬಹುದು. ಕರ್ತವ್ಯದ ಸಮಯದಲ್ಲಿ ಮಾರ್ಗ ಮಧ್ಯೆ ಬಸ್ ನಿಲ್ಲಿಸಿ ನಮಾಜ್ ಆಕ್ಷೇಪಾರ್ಹ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪು ಕಂಡುಬಂದಲ್ಲಿ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದೇನೆ” ಎಂದು ಹೇಳಿದ್ದಾರೆ.