ಕಳೆದ ಒಂದೆರಡು ತಿಂಗಳಿನ ಅವಧಿಯಲ್ಲಿ ಹಾವೇರಿ ಮತ್ತು ರಟ್ಟಿಹಳ್ಳಿ ತಾಲೂಕುಗಳಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಚ್ಚುತ್ತಿರುವ ಕೃಷಿ ವೆಚ್ಚ, ಕೃಷಿ ಉತ್ಪನ್ನಗಳಿಗೆ ಸಿಗದ ನ್ಯಾಯದ ಬೆಲೆ, ನಿರಂತರ ಇಳುವರಿ ಕುಸಿತಗಳಿಂದ ಜರ್ಜರಿತರಾಗಿರುವ ರೈತರು ಬದುಕುವುದೇ ದುಸ್ತರವಾಗಿರುವ ಈ ಕಾಲಘಟ್ಟದಲ್ಲಿ ಸರ್ಕಾರಗಳು ರೈತರ ನೆರವಿಗೆ ನಿಲ್ಲುವುದು ಇನ್ಯಾವಾಗ?
ಇತ್ತೀಚೆಗೆ ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳ ಪಟ್ಟಿ ಬಿಡುಗಡೆ ಮಾಡಿದೆ. ಇದೇನು ತರಾತುರಿ ಅಥವಾ ಒತ್ತಡ ಶಿಫಾರಸು ಆಧರಿಸಿ ಆಯ್ಕೆಯಾಗಿರುವ ಪಟ್ಟಿಯೇ? ಅಥವಾ ಏನಾದರೂ ಮಾನದಂಡಗಳನ್ನು ಆಧರಿಸಿ, ಕೂಲಂಕುಶವಾಗಿ ಪರಿಶೀಲನೆ ನಡೆಸಿ ಅಂತಿಮಗೊಂಡಿರುವ ನಿರ್ಧಾರವೇ? ಎಂಬ ಬಗ್ಗೆ ಹಲವು ಅನುಮಾನಗಳು ಏಳುವಂತಾಗಿದೆ.
ಹಾವೇರಿ ಜಿಲ್ಲೆಯ ಯಾವುದೇ ತಾಲೂಕನ್ನಾದರೂ ಬರಪೀಡಿತ ತಾಲೂಕುಗಳ ಪಟ್ಪಿಗೆ ಸೇರದಿರುವುದನ್ನು ನೋಡಿದರೆ, ಜಿಲ್ಲೆಯ ಶಾಸಕರಾರೂ ಅಂಥ ಬೇಡಿಕೆಯನ್ನೇ ಸಲ್ಲಿಸಿರಲಿಕ್ಕಿಲ್ಲ ಅಥವಾ ಅಂಥ ರಾಜಕೀಯ ಒತ್ತಡ ಸರ್ಕಾರದ ಮೇಲೆ ಬಿದ್ದಿರಲಿಕ್ಕಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಏಕೆಂದರೆ, ಬರಪೀಡಿತ ತಾಲೂಕುಗಳ ಪಟ್ಟಿ ನೋಡಿದಾಗ ರಾಜ್ಯಸರ್ಕಾರವು ಬರಪೀಡಿತ ಪ್ರದೇಶ ಘೋಷಣೆಗೆ ಅನುಸರಿಸುತ್ತದೆ ಎನ್ನಲಾದ ಮಾನದಂಡಗಳು ಏನು? ಅವು ಎಷ್ಟರಮಟ್ಪಿಗೆ ಸಮರ್ಪಕ? ಮತ್ತು ವೈಜ್ಞಾನಿಕ? ಎಂಬ ಪ್ರಶ್ನೆಗಳೂ ಬರಲಾರಂಭಿಸಿವೆ.
ಪಶ್ಚಿಮ ನೈರುತ್ಯ ಮಾರುತಗಳು ಹಾವೇರಿ ಜಿಲ್ಲೆಯನ್ನು ಪ್ರವೇಶಿಸುವುದೇ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ಧಾಪುರ, ಮುಂಡಗೋಡ ಹಾಗೂ ಯಲ್ಲಾಪುರ ಭಾಗದಿಂದ. ಆದರೂ ಪಶ್ಚಿಮಘಟ್ಟದ ಕೆಳಗಿನ ಪ್ರದೇಶಗಳಾದ ಯಲ್ಲಾಪುರ ಮತ್ತು ಮುಂಡಗೋಡ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿರುವ ರಾಜ್ಯ ಸರ್ಕಾರವು ಬಯಲು ಪ್ರದೇಶವಾದ ಹಾವೇರಿ ಜಿಲ್ಲೆಯ ಒಂದೇ ಒಂದು ತಾಲೂಕನ್ನೂ ಬರಪೀಡೀತ ತಾಲೂಕುಗಳ ಪಟ್ಟಿಗೆ ಸೇರಿಸದೇ ಇರುವುದು ಯಾವ ನ್ಯಾಯ?
ನಿಜಕ್ಕೂ ಇದು ಆಶ್ಚರ್ಯದ ಸಂಗತಿಯೇ ಸರಿ. ಬರಪೀಡಿತವೆಂಬ ಘೋಷಣೆಗೆ ಸರ್ಕಾರ ಅನುಸರಿಸುವ ಮಾನದಂಡಗಳ ಬಗ್ಗೆಯೇ ಅನುಮಾನ ಮೂಡಿಸುವ ನಡೆ ಇದು.
ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರಿನಲ್ಲಿ ಶೇ.40ಕ್ಕಿಂತ ಹೆಚ್ಚು ಮಳೆ ಕೊರತೆಯಾಗಿರುವುದಾಗಿ ಅಂಕಿ ಅಂಶಗಳಿಂದ ಸಾಬೀತಾಗಿದೆ. ಶೇ.60ಕ್ಕಿಂತ ಹೆಚ್ಚು ಮಳೆ ಅಭಾವ ಇರಬೇಕು ಎಂಬ ಮಾನದಂಡವನ್ನು ಒಪ್ಪೋಣ. ಆದರೆ, ಶೇ.40ಕ್ಕಿಂತ ಹೆಚ್ಚು ಮಳೆ ಕೊರತೆಯಾದರೆ ಬೆಳೆಗಳು ಸಮೃದ್ಧವಾಗಿ ಬೆಳಯುತ್ತವೆ ಎಂದರ್ಥವೆ?
ನಿರಂತರವಾಗಿ 21 ದಿನಗಳವರೆಗೆ ಮಳೆ ಕೈ ಕೊಟ್ಪಿರಬೇಕು ಎಂಬುದೂ ಸರಿಯೇ. ಆದರೆ, ವಾರದಲ್ಲಿ ಎರಡು ದಿನ 0.05 ಮೀ. ಮೀ ಮಳೆ ಬಿದ್ದರೆ ಬೆಳೆಗಳಿಗೆ ಅದು ಸಾಕಷ್ಟು ತೇವಾಂಶ ಒದಗಿಸುತ್ತದೆ ಎಂದು ಅರ್ಥವೇ?
ನಿಗದಿ ಪಡಿಸಿದ ಗುರಿಗಿಂತ ಶೇ.75ಕ್ಕಿಂತ ಕಡಿಮೆ ಪ್ರದೇಶದಲ್ಲಿ ಬಿತ್ತನೆ ಆಗಿರಬೇಕು. ಬಿತ್ತನೆಯಾದ ಬೆಳೆಗಳಲ್ಲಿ ಶೇ.50ರಷ್ಟು ಬೆಳೆ ನಾಶವಾಗಿರಬೇಕು ಎಂಬ ಮಾನದಂಡಗಳನ್ನು ನೋಡುವುದಾದರೆ, ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳ ಪಟ್ಟಿ ಬಿಡುಗಡೆಗೆ ಇನ್ನು ಸ್ವಲ್ಪ ದಿನ ಕಾದಿದ್ದರೆ ಸೂಕ್ತವಾಗುತಿತ್ತು. ಏಕೆಂದರೆ, ಅಲ್ಲಿವರೆಗೆ ಸಂಪೂರ್ಣವಾಗಿ ನಾಶವಾಗಿರವ ಪ್ರದೇಶಗಳ ಕರಾರುವಕ್ಕಾದ ಮಾಹಿತಿ ಸಿಗುತಿತ್ತು!
ಹಾವೇರಿ ಜಿಲ್ಲೆಯಲ್ಲಿ ಹಿರೇಕೆರೂರು, ರಟ್ಟಿಹಳ್ಳಿ, ಬ್ಯಾಡಗಿ, ಹಾನಗಲ್ಲು ಮತ್ತು ಶಿಗ್ಗಾವಿ ಮಲೆನಾಡಿನ ತಾಲೂಕುಗಳಾಗಿದ್ದು, ಮುಂಗಾರು ಪೂರ್ವ ಮಳೆ ಇಲ್ಲಿ ವಾರ್ಷಿಕ ವಾಡಿಕೆಗಿಂತ ತೀರಾ ಕಡಿಮೆಯಾಗಿದೆ. ಪಶ್ಚಿಮ ಮಾರುತಗಳು ಈ ತಾಲೂಕುಗಳ ಮೂಲಕವೇ ಜಿಲ್ಲಾದ್ಯಂತ ಪಸರಿಸುತ್ತವೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮತ್ತು ಮುಂಡಗೋಡ ತಾಲೂಕುಗಳು ಬರಪೀಡಿತ ಆಗುವುದಾದರೆ, ಆ ಪ್ರದೇಶದಿಂದಲೇ ಮಳೆ ಮಾರುತಗಳನ್ನು ಪಡೆವ ಹಾವೇರಿ ಜಿಲ್ಲೆಯ ಈ ತಾಲೂಕುಗಳು ಏಕೆ ಬರಪೀಡಿತ ಪ್ರದೇಶಗಳಲ್ಲ?
ಬಿತ್ತುವ ಹಂಗಾಮಿನಲ್ಲಿ ಬಿತ್ತನೆಗೆ ಹದವರಿತ ತೇವಾಂಶ ಸಿಕ್ಕ ಮೇಲೆಯೆ ರೈತರು ಬಿತ್ತನೆ ಮಾಡುತ್ತಾರೆ. ಎರಡು ಮೂರು ವಾರಗಳ ಕಾಲ ಅಂದರೆ, ಬೆಳೆಸಾಲು ಅಥವಾ ಎಡೆ ಹೊಡೆಯುವ ತನಕ ಬೆಳೆಗೆ ಹೆಚ್ಚು ತೇವಾಂಶದ ಅಗತ್ಯ ಇರುವುದಿಲ್ಲ. ಎಡೆ ಹೊಡೆದು ಗೊಬ್ಬರ ಹಾಕಿದ ಮೇಲೆ ಬೆಳೆಗಳಿಗೆ ಹೆಚ್ಚು ಮಳೆ ಆದಷ್ಟು ಉತ್ತಮ. ಬಿತ್ತನೆಯ ನಂತರ ಒಂದು ತಿಂಗಳಿನ ನಂತರ ಸಾಕಷ್ಟು ಮಳೆಯಾಗದಿದ್ದರೆ ಅಥವಾ ಮಳೆ ಅಭಾವ ಆದರೆ ಇಳುವರಿ ಕುಸಿತ ಕಾಣುವುದಿಲ್ಲವೇ? ಮತ್ತೆ ಇಂಥ ಮಾನದಂಡಗಳು ಎಷ್ಟು ವೈಜ್ಞಾನಿಕ? ಮತ್ತು ನಿಖರ?
ಹಾವೇರಿ ಜಿಲ್ಲೆಯ ಉಳಿದ ತಾಲೂಕುಗಳಾದ ರಾಣೇಬೆನ್ನೂರು, ಹಾವೇರಿ ಹಾಗೂ ಸವಣೂರು ಸಂಪೂರ್ಣ ಬಯಲು ಸೀಮೆಯಾಗಿದ್ದು, ಕನಿಷ್ಠ ಈ ತಾಲೂಕುಗಳನ್ನಾದರೂ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದೇ ಇರುವುದು ಕುಚೋದ್ಯವೇ ಸರಿ. ಮುಂಗಾರು ಪೂರ್ವ ಮಳೆ ಮಾರುತಗಳು ಈ ತಾಲೂಕುಗಳಲ್ಲಿ ಹೆಚ್ಚು ತೂಗುತ್ತವೆ. ಹಾಗೆಂದೇ ಇಲ್ಲಿ ನಿಗದಿತ ಗುರಿಗಿಂತ ಹೆಚ್ಚು ಬಿತ್ತನೆಯಾಗಿದೆ. ಪಶ್ಚಿಮ ಮಾರುತಗಳು ಈ ಪ್ರದೇಶದಲ್ಲಿ ಮಳೆ ಸುರಿಸುವ ಪ್ರಮಾಣ ಮಲೆನಾಡಿಗೆ ಹೋಲಿಸಿದರೆ ಇಲ್ಲಿ ಕಡಿಮೆಯೇ. ವಸ್ತು ಸ್ಥಿತಿ ಹೀಗಿರುವಾಗ ಈ ಸಂಗತಿಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ?
ಇತ್ತೀಚೀನ ವರ್ಷಗಳಲ್ಲಿ ಹಾವೇರಿ ಜಿಲ್ಲಾದ್ಯಂತ ಗೋವಿನ ಜೋಳ ಬೆಳೆಯೇ ಪ್ರಮುಖ ಬೆಳೆಯಾಗಿದೆ. ಗೋವಿನ ಜೋಳ ಸಹಜವಾಗಿ ಹೆಚ್ಚು ಮಳೆ/ ತೇವಾಂಶ ಬೇಡುವ ಬೆಳೆ. ಹೀಗಿರುವಾಗ ಪ್ರಸಕ್ತ ಮುಂಗಾರಿನ ಮಳೆ ಕೊರತೆಯಿಂದ ಗೋವಿನಜೋಳ ಇಳುವರಿ ಸಹಜವಾಗಿ ಕುಂಠಿತಗೊಳ್ಳುತ್ತದೆ. ಎಕರೆಗೆ ಕನಿಷ್ಠ 20ರಿಂದ 25ಸಾವಿರ ರೂ. ಖರ್ಚು ತಗಲುವ ಗೋವಿನ ಜೋಳದ ಇಳುವರಿ ಕುಂಠಿತವಾದರೆ ರೈತರು ಹಾಕಿದ ಬಂಡವಾಳ, ಶ್ರಮ ಹಾಗೂ ಸಮಯದ ಬೆಲೆಯನ್ನು ಯಾರು ತುಂಬಿ ಕೊಡಬೇಕು?
ಹಾವೇರಿ ಜಿಲ್ಲೆಯಲ್ಲಿ ಅಂದಾಜು 2,000 ಕೆರೆಕಟ್ಟೆಗಳಿವೆ ಎನ್ನಲಾಗುತ್ತಿದೆ. ಕಳೆದ ವರ್ಷದಿಂದ ಈಚೆಗೆ ಕೆರೆಕಟ್ಟೆ ತುಂಬಿ ಹಳ್ಳ ಕೊಳ್ಳ ಹರಿಯುವಂತಹ ಮಳೆಯೇ ಆಗಿಲ್ಲ. ಆದಕಾರಣ ಜಿಲ್ಲೆಯ ಬಹುತೇಕ ಕೆರೆಗಳು ಬತ್ತಿವೆ. ಬಹಳಷ್ಟು ಕೆರೆಗಳಲ್ಲಿ ಶೇ.10, ಇಲ್ಲವೇ 20ರಷ್ಟು ನೀರಿದೆ. ಕಳೆದ ವರ್ಷದಂತೆ ಈ ವರ್ಷವೂ ಹಿಂಗಾರು ಕೈ ಕೊಟ್ಟರೆ ಅಂತರ್ಜಲ ಮಟ್ಟ ಸಂಪೂರ್ಣ ಕುಸಿಯಲಿದೆ. ಬರುವ ಬೇಸಿಗೆಗೆ ಕುಡಿಯುವ ನೀರಿಗೂ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಬಹುದಾದ ಸಾಧ್ಯತೆಗಳಿವೆ.
ಹಾವೇರಿ ಜಿಲ್ಲೆಯ ರೈತರು ಕಳೆದ ವರ್ಷದಿಂದಲೇ ಬರದಿಂದ ಕಂಗೆಟ್ಟಿದ್ದಾರೆ. ಕಳೆದ ವರ್ಷ ಗಣೇಶ ಚೌತಿಯ ನಂತರ ದೊಡ್ಡ ಮಳೆಯೇ ಆಗಿಲ್ಲ ಮತ್ತು ಹಿಂಗಾರು ಮಳೆ ಅಷ್ಟಕ್ಕಷ್ಟೆ ಎಂಬಂತಾಗಿದ್ದು, ಕಳೆದ ಐದಾರು ವರ್ಷಗಳಿಂದ ಜಿಲ್ಲೆಯ ರೈತರು ಬೆಳೆವಿಮೆ ಪರಿಹಾರದಿಂದಲೂ ವಂಚಿತರಾಗುತಿದ್ದಾರೆ. 2023ರಲ್ಲಿ ಅತಿವೃಷ್ಟಿ ಪರಿಣಾಮ ಶೇ.25ರಷ್ಟು ಬೆಳೆವಿಮೆ ಪರಿಹಾರ ನೀಡಿದ್ದು ಬಿಟ್ಟರೆ, 2020ರಿಂದೀಚೆಗೆ ಜಿಲ್ಲೆಯ ರೈತರಿಗೆ ಸರಿಯಾಗಿ ಬೆಳೆವಿಮೆ ಪರಿಹಾರವೇ ದೊರಕುತ್ತಿಲ್ಲ. ಸರ್ಕಾರ ಹಾಗೂ ಖಾಸಗಿ ವಿಮಾ ಕಂಪನಿಗಳು ಬೆಳೆವಿಮೆ ಪರಿಹಾರವನ್ನು ಯಾವ ಆಧಾರ ಅಥವಾ ಮಾನದಂಡಗಳನ್ನು ಅನುಸರಿಸಿ ನೀಡಬೇಕೆನ್ನುತ್ತಿವೆ ಎಂಬುದನ್ನಾದರೂ ಸಾರ್ವಜನಿಕಗೊಳಿಸಿದರೆ, ರೈತರು ವಿಮೆ ಕಂತು ತುಂಬುವುದನ್ನಾದರೂ ನಿಲ್ಲಿಸುತ್ತೇವೆ.
ಇದನ್ನೂ ಓದಿದ್ದೀರಾ? ಮಣ್ಣೂರು ಗ್ರಾಮದ ರೈತ ಆತ್ಮಹತ್ಯೆ: ರೈತರ ಸಾಲಮನ್ನಾಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಕೆಪಿಆರ್‌ಎಸ್ ಒತ್ತಾಯ
ಕಳೆದ ಒಂದೆರಡು ತಿಂಗಳಿನ ಅವಧಿಯಲ್ಲಿ ಹಾವೇರಿ ಮತ್ತು ರಟ್ಟಿಹಳ್ಳಿ ತಾಲೂಕುಗಳಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಚ್ಚುತ್ತಿರುವ ಕೃಷಿ ವೆಚ್ಚ, ಕೃಷಿ ಉತ್ಪನ್ನಗಳಿಗೆ ಸಿಗದ ನ್ಯಾಯದ ಬೆಲೆ, ನಿರಂತರ ಇಳುವರಿ ಕುಸಿತಗಳಿಂದ ಜರ್ಜರಿತರಾಗಿರುವ ರೈತರು ಬದುಕುವುದೇ ದುಸ್ತರವಾಗಿರುವ ಈ ಕಾಲಘಟ್ಟದಲ್ಲಿ ಸರ್ಕಾರಗಳು ರೈತರ ನೆರವಿಗೆ ನಿಲ್ಲುವುದು ಇನ್ಯಾವಾಗ?





