ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ಹೊನ್ನಪ್ಪ ಹೀರಪ್ಪ ರೋಡಗಿ ಎಂಬ 40 ವರ್ಷದ ಬಡ ಯುವರೈತ 11 ಲಕ್ಷ ರೂ.ಗಳ ಸಾಲಬಾಧಿತನಾಗಿ, ಹೊಲದಲ್ಲಿಯೇ ವಿಷ ಸೇವಿಸಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಆದರೆ, ಕೇಂದ್ರ ಸರ್ಕಾರ ಬಂಡವಾಳದಾರರ ಸಾಲ ಮನ್ನಾ ಮಾಡುವುದರಲ್ಲಿ ಬ್ಯುಸಿಯಾಗಿದೆ. ರಾಜ್ಯ ಸರ್ಕಾರ ಬಂಡವಾಳದಾರರನ್ನು ಆಹ್ವಾನಿಸುವ, ಅವರಿಗೆ ಸಾವಿರಾರು ಕೋಟಿ ಸಹಾಯಧನ, ಪುಕ್ಕಟೆ ಸಾವಿರಾರು ಎಕರೆ ಜಮೀನು ನೀಡುವುದರಲ್ಲಿ ಬ್ಯುಸಿಯಾಗಿದೆ ಎಂದು ಕೆಪಿಆರ್‌ಎಸ್ ರಾಜ್ಯ ಅಧ್ಯಕ್ಷ ಯು.ಬಸವರಾಜ ಅವರು ಟೀಕಿಸಿದರು.
ಈ ಕುರಿತು ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತಾನಾಡಿದ ಅವರು, “ಈ ಸರ್ಕಾರಗಳಿಗೆ ಬರಪೀಡಿತ ಜನರ ಪ್ರಾಣಗಳು, ಹಸಿವು ಲೆಕ್ಕಕ್ಕೇ ಇಲ್ಲವಾಗಿದೆ. ಎರಡೂ ಸರ್ಕಾರಗಳ ಈ ನಿರ್ಲಕ್ಷ್ಯ ತೀವ್ರ ಖಂಡನೀಯ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಮಣ್ಣೂರು ಗ್ರಾಮದ ರೈತ ಹೊನ್ನಪ್ಪ ಹೀರಪ್ಪ ರೋಡಗಿ ಅವರ ಎಲ್ಲ ಸಾಲವನ್ನು ಸರ್ಕಾರಗಳು ವಹಿಸಿಕೊಳ್ಳಬೇಕು. ಕುಟುಂಬಕ್ಕೆ ₹25 ಲಕ್ಷ ರೂ.ಗಳ ಪರಿಹಾರ ವಿತರಿಸಬೇಕು. ಕುಟುಂಬದವರಿಗೆ ಸರ್ಕಾರಿ ಉದ್ಯೋಗ ಒದಗಿಸಬೇಕು” ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಪರವಾಗಿ ಆಗ್ರಹಿಸಿದರು.
“ಬರಗಾಲದ ಹಿನ್ನೆಲೆಯಲ್ಲಿ ಕೂಡಲೇ ಎರಡೂ ಸರ್ಕಾರಗಳು, ಬಡ ಹಾಗೂ ಮಧ್ಯಮ ರೈತರು, ಕೂಲಿಕಾರರ ಎಲ್ಲ ರೀತಿಯ ಸಾಲ ಮನ್ನಾ ಘೋಷಿಸಬೇಕು. ಅದೇ ರೀತಿ ಖಾಸಗಿ ಸಾಲಗಾರರೂ ಸೇರಿದಂತೆ ಎಲ್ಲ ಸಾಲ ನೀಡಿಕೆಯ ಸಂಸ್ಥೆಗಳ ಸಾಲ ವಸೂಲಾತಿಯನ್ನು ತಕ್ಷಣವೇ ತಡೆಯಬೇಕು. ಬೆಳೆವಿಮೆ ವಿತರಿಸಬೇಕು. ಇಡೀ ರಾಜ್ಯವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಸಾಲ ಮನ್ನಾಕ್ಕೆ ಕ್ರಮವಹಿಸಬೇಕು” ಎಂದು ಒತ್ತಾಯಿಸಿದರು.
“ಮುಂಗಾರು ತೀವ್ರ ವೈಫಲ್ಯಗೊಂಡ ಆಧಾರದಲ್ಲಿ ರಾಜ್ಯವನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಲು ಮೀನಾಮೇಷ ಎಣಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ ಖಂಡನೀಯ. ಕೂಡಲೇ ಇಡೀ ರಾಜ್ಯವನ್ನೇ ಬರಗಾಲ ಪೀಡಿತವೆಂದು ಘೋಷಿಸಬೇಕು” ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಪರವಾಗಿ ಒತ್ತಾಯಿಸಿದರು.
“ನೀರಾವರಿ ಪ್ರದೇಶದಲ್ಲಿಯೂ ನೀರಿನ ಕೊರತೆಯಿಂದ ಬಿತ್ತನೆಗೆ ಎರಡು ತಿಂಗಳು ತಡವಾಯಿತು. ಬಿತ್ತಿದ ಬೆಳೆಗೆ ಪೂರ್ಣ ನೀರು ದೊರೆಯುವ ಸಂಭವಗಳು ಅನುಮಾನಾಸ್ಪದವಾಗಿವೆ. ಸರ್ಕಾರಗಳ ಈ ದುರ್ನಡೆಗಳಿಂದ ಮತ್ತು ಈ ಬಾರಿ ಬೆಳೆಯ ಗ್ಯಾರಂಟಿ ಇಲ್ಲದ್ದರಿಂದ ಹಾಗೂ ಸರ್ಕಾರಗಳು ಸಾಲ ಮನ್ನಾಕ್ಕೆ ಕ್ರಮ ವಹಿಸದೇ ಇರುವುದರಿಂದ, ಸಾಲಬಾಧಿತ ರೈತರು ನಿತ್ಯವೂ ಆತ್ಮಹತ್ಯೆಗಳೆಂಬ ಸರ್ಕಾರಗಳ ಕಗ್ಗೊಲೆಗಳಿಗೀಡಾಗುತ್ತಿರುವುದು ಮುಂದುವರೆದಿದೆ” ಎಂದು ಆರೋಪಿಸಿದರು.
“ಈಗಲೂ ಹಲವು ತಾಲೂಕುಗಳಲ್ಲಿ ಮತ್ತು ಪ್ರದೇಶಗಳಲ್ಲಿ ಉದ್ಯೋಗ ಖಾತ್ರಿ ಕೆಲಸಗಳನ್ನು ನೀಡುತ್ತಿಲ್ಲ. ಇದು ತಡವಾಗಿದ್ದರಿಂದ ಲಕ್ಷಾಂತರ ಕೂಲಿಕಾರರು, ಬಡರೈತರು ಗುಳೆ ಹೋಗಿದ್ದಾರೆ. ಇದನ್ನು ತಡೆಗಟ್ಟಲು ಕೂಡಲೇ ಎಲ್ಲೆಡೆ ಕನಿಷ್ಠ 200 ದಿನಗಳ ಬರಗಾಲ ಕಾಮಗಾರಿ ಕೈಗೊಳ್ಳಬೇಕು. ಎಲ್ಲ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ದಾರರಿಗೆ ಅಗತ್ಯವಿರುವ 16 ಆಹಾರಧಾನ್ಯ ಮತ್ತು ವಸ್ತುಗಳನ್ನು ಉಚಿತವಾಗಿ ಮುಂದಿನ ಮಳೆಗಾಲದವರೆಗೆ ಒದಗಿಸಬೇಕು” ಎಂದು ಒತ್ತಾಯಿಸಿದರು.
“ಉತ್ತರ ಕರ್ನಾಟಕದ ಕಳಸಾ ಬಂಡೋರಿ ನಾಲಾ ಯೋಜನೆ, ಆಲಮಟ್ಟಿ ಎತ್ತರ ಹೆಚ್ಚಳ ಜಾರಿ, ತುಂಗಭದ್ರಾ ನದಿ ಹೂಳೆತ್ತುವ ಕೆಲಸ ಹಾಗೂ ಸಮಾನಾಂತರದ ಜಲಾಶಯಗಳ ನಿರ್ಮಾಣದ ಕುರಿತು ಎರಡೂ ಸರ್ಕಾರಗಳು ಪ್ರಾಮಾಣಿಕವಾಗಿಲ್ಲದೇ ಇರುವುದರಿಂದ ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕ ಪ್ರದೇಶವು ಕೃಷ್ಣಾ ಎರಡನೇ ತೀರ್ಪಿನ 177 ಟಿಎಂಸಿ, ಮಹಾದಾಯಿಯ 18 ಟಿಎಂಸಿ ಮತ್ತು ತುಂಗಭದ್ರಾ 30 ಟಿಎಂಸಿ ಸೇರಿ ಸುಮಾರು 225 ಟಿಎಂಸಿ ನೀರು ಬಳಕೆಗೆ ಸಿಗದೆ ಸುಮಾರು 25 ಲಕ್ಷ ಎಕರೆ ಪ್ರದೇಶವು ನೀರಾವರಿಯಿಂದ ವಂಚನೆಗೊಳಗಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಾಜಕೀಯ ಇಚ್ಛಾಶಕ್ತಿ, ಜನವಿರೋಧಿ ಜತೆಗೆ ಲೂಟಿಕೋರ ಕಾರ್ಪೋರೇಟ್ ಪರ ಇರುವ ಆರ್ಥಿಕ ನೀತಿಗಳೇ ಕಾರಣವಾಗಿವೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡುವಂತೆ ಮತ್ತು ರಾಜ್ಯ ಸರ್ಕಾರ ಹಾಗೂ ಸಂಸದರು ಉದಾಸೀನ ಮಾಡದೆ ಒತ್ತಡ ಹೇರಬೇಕು” ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಪರವಾಗಿ ಒತ್ತಾಯಿಸಿದರು.
ಇದನ್ನೂ ಓದಿದ್ದೀರಾ? ಧಾರವಾಡ | ಸಪ್ಟೆಂಬರ್ 10 ರಂದು ಅಂಗವಿಕಲರ ಕುಂದುಕೊರತೆಗಳ ಸಭೆ
ಈ ವೇಳೆ ಕೆಪಿಆರ್‌ಎಸ್ ಕಲಬುರಗಿ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಾಯಿಬಣ್ಣಾ ಗುಡುಬಾ, ಉಪಾಧ್ಯಕ್ಷ ಸುಭಾಶ್ ಜೇವರ್ಗಿ, ಸದಸ್ಯ ಚೆಂದಪ್ಪಾ ಪೂಜಾರಿ ಇದ್ದರು.





