ಅರಣ್ಯ ಇಲಾಖೆಯ ಸಚಿವರಾದ ಈಶ್ವರ್ ಖಂಡ್ರೆ ಅವರು ಅರಣ್ಯ ಒತ್ತುವರಿಯನ್ನು ತೆರವುಗೊಳಿಸುವ ಬಗ್ಗೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಈ ಒತ್ತುವರಿಯು ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷದ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅವುಗಳನ್ನು ತೆರವುಗೊಳಿಸುವ ಕಾರ್ಯ ವಿಧಾನಸೌಧದಿಂದಲೇ ಆರಂಭವಾಗಲಿ ಎಂದು ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.
ಈ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಅವರಿಗೆ ಪತ್ರ ಬರೆದಿರುವ ನೈಜ ಹೋರಾಟಗಾರರ ವೇದಿಕೆಯ ಮುಖಂಡರಾದ ಹೆಚ್ ಎಂ ವೆಂಕಟೇಶ್, ಕುಣಿಗಲ್ ನರಸಿಂಹಮೂರ್ತಿ, ಜಗದೀಶ್ ಟಿ ಹಾಗೂ ಮಲ್ಲಿಕಾರ್ಜುನ್ ಎಲ್ಎಸ್, ವಿಧಾನಸೌಧದಲ್ಲಿರುವ ಜನಪ್ರತಿನಿಧಿಗಳು, ಸಚಿವರುಗಳು ಮತ್ತು ರಾಜಕೀಯ ಪಕ್ಷದ ನಾಯಕರುಗಳು ಮಾಡಿಕೊಂಡಿರುವ ಒತ್ತುವರಿ ಮೊದಲು ತೆರವುಗೊಳಿಸಿ ಎಂದು ಒತ್ತಾಯಿಸಿದ್ದಾರೆ.
ಅರಣ್ಯ ಸಚಿವರಾಗಿ ತಮ್ಮ ಕಾರ್ಯ ವೈಖರಿಯನ್ನು ಶ್ಲಾಘಿಸುತ್ತೇವೆ. ಒತ್ತುವರಿ ತೆರವು ಆದೇಶದಲ್ಲಿ 2015ರಿಂದೀಚೆಗೆ ಅರಣ್ಯ ಒತ್ತುವರಿ ತೆರೆವುಗೊಳಿಸುವಂತೆ ತಿಳಿಸಿದ್ದೀರಿ. 2015ರಿಂದ ಎನ್ನುವುದೇ ಒಂದು ದೊಡ್ಡ ಅನುಮಾನಕ್ಕೆ ಎಡೆ ಉಂಟಾಗಿದೆ. 2015ಕ್ಕಿಂತಲೂ ಹಿಂದೆ ಪಶ್ಚಿಮ ಘಟ್ಟ ಗಿರಿ ಪ್ರದೇಶಗಳಲ್ಲಿ ಕಾಫಿ ಪ್ಲಾಂಟೇಶನ್, ಅಡಿಕೆ, ಏಲಕ್ಕಿ ರಬ್ಬರ್, ಶುಂಠಿ ವಾಣಿಜ್ಯ ಬೆಳೆಗಳ ತೋಟಗಳನ್ನು ಹಾಗೂ ಪ್ರಮುಖವಾಗಿ ರೆಸಾರ್ಟ್ ಗಳನ್ನು ನಿರ್ಮಿಸಿರುವವರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಅವುಗಳನ್ನೂ ತೆರವುಗೊಳಿಸಿ ಎಂದು ತಿಳಿಸಿದ್ದಾರೆ.
2015ಕ್ಕಿಂತ ಮೊದಲಿನ ಒತ್ತುವರಿದಾರರು ಸಾಮಾನ್ಯ ರೈತರಲ್ಲ, ಬಡ ರೈತರು ಅಲ್ಲ, ರಾಜಕೀಯವಾಗಿ ಗುರುತಿಸಿಕೊಂಡವರು, ಜನಪ್ರತಿನಿಧಿಗಳು, ಬಲಾಡ್ಯರು ಹೆಚ್ಚಾಗಿ ಈ ಒತ್ತುವರಿಗಳನ್ನು ಮಾಡಿರುತ್ತಾರೆ ಎಂಬುದು ನಿಮ್ಮ ಗಮನದಲ್ಲಿಯೂ ಇದೆ. ಆದರೆ ಸಾಮಾನ್ಯ ಜನರು, ರೈತರು, ಕೂಲಿ ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ಸ್ವಲ್ಪ ಮಟ್ಟಿನ ಅರಣ್ಯ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸುವುದು ಸಮಂಜಸವೂ ಅಲ್ಲ, ನ್ಯಾಯ ಸಮ್ಮತವು ಅಲ್ಲ ಎಂದು ನೈಜ ಹೋರಾಟಗಾರರ ವೇದಿಕೆ ಕಿಡಿಕಾರಿದೆ.
ಭತ್ತ, ರಾಗಿ, ತರಕಾರಿ ಬೆಳೆಯುವ ಸಣ್ಣಪುಟ್ಟ ರೈತರು ಹೈನುಗಾರಿಕೆಯನ್ನು ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ. ಇವರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ತೆರವುಗೊಳಿಸುವಂತೆ ಸೂಚನೆ ನೀಡುವುದು ಮತ್ತು ಕಿರುಕುಳವನ್ನು ನೀಡುತ್ತಿರುವುದನ್ನು ಮೊದಲು ನಿಲ್ಲಿಸಬೇಕು. ಸಿಎಂ ಸಿದ್ದರಾಮಯ್ಯನವರು ‘ಮುಖ್ಯಮಂತ್ರಿಗಳ ವಿಶಿಷ್ಟ ಸೇವಾ ಪದಕ ಪ್ರದಾನ ಮಾಡುವ ಸಂದರ್ಭದಲ್ಲಿ ಅರಣ್ಯ ಒತ್ತುವರಿಯನ್ನು ನಿಷ್ಠುರವಾಗಿ ತಡೆಯಿರಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಮೊದಲು ಒತ್ತುವರಿ ತೆರವುಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಬೇಕಾಗಿತ್ತು ಊರು ಹೋದ ಮೇಲೆ ಹೆಬ್ಬಾಗಿಲು ಹಾಕುವಂತೆ ಎಂಬಂತೆ ಆಗಿದೆ ಮುಖ್ಯಮಂತ್ರಿಗಳಿಗೆ ಹೇಳಿಕೆ ಇದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ಸಾರ್ವಜನಿಕರ ಎದುರಲ್ಲೇ ಹೊಡೆದಾಡಿಕೊಂಡ ಖಾಸಗಿ ಬಸ್ ಸಿಬ್ಬಂದಿ: ವಿಡಿಯೋ ವೈರಲ್
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬೇಡ. ಮೊದಲು ಅರಣ್ಯ ಒತ್ತುವರಿಯು ವಿಧಾನಸೌಧದಿಂದಲೇ ನಡೆಯಲಿ. ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ವಿವಿಧ ಪಕ್ಷದ ರಾಜಕಾರಣಿಗಳು ಎಷ್ಟು ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಸರ್ವೆ ನಡೆಯಲಿ. ಅವರು ಸ್ವಯಂ ಪ್ರೇರಿತರಾಗಿ ಅರಣ್ಯ ಒತ್ತುವರಿಯನ್ನು ಸ್ವತಃ ತೆರವುಗೊಳಿಸಿ ಅರಣ್ಯ ಇಲಾಖೆಗೆ ವಹಿಸಲಿ ಇದರಿಂದ ಪ್ರಾಮಾಣಿಕವಾದ ಸಂದೇಶ ರವಾನೆ ಆಗುತ್ತದೆ. ಮತ್ತು ಇತರರಿಗೆ ಮಾದರಿಯಾಗುತ್ತದೆ ಎಂದು ನೈಜ ಹೋರಾಟಗಾರರ ವೇದಿಕೆಯ ಮುಖಂಡರು ತಿಳಿಸಿದ್ದಾರೆ.
ನಿಜವಾಗಲೂ ಭತ್ತ, ರಾಗಿ, ಜೋಳ ,ತರಕಾರಿ ಬೆಳೆಯುವ ಮತ್ತು ಹೈನುಗಾರಿಕೆ ಮಾಡುವ ರೈತರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕು. ಹಾಗೂ ಇವರಿಗೆ ಅರಣ್ಯ ಅಧಿಕಾರಿಗಳು ನೀಡುತ್ತಿರುವ ಕಿರುಕುಳಗಳನ್ನು ನಿಲ್ಲಿಸಬೇಕು ಎಂಬುದು ನೈಜ ಹೋರಾಟಗಾರರ ವೇದಿಕೆಯ ಒತ್ತಾಯ ಎಂದು ಮುಖಂಡರು ತಿಳಿಸಿದ್ದಾರೆ.
