ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಭಾಗವಾಗಿ ಕೆಲಸ ಮಾಡುವ ಮಹಿಳೆಯರು ತಮ್ಮ ಗೌರವಧನ ಹೆಚ್ಚಿಸುವಂತೆ ಆಗ್ರಹಿಸಿ ಪ್ರತಿಭಟನೆ ಕೈಗೊಂಡಿದ್ದಾರೆ.
ಬೆಂಗಳೂರಿನ ಫ್ರೀಡಂಪಾರ್ಕ್‌ಗೆ ರಾಜ್ಯದ ಮೂಲೆಮೂಲೆಯಿಂದ ಬಂದಿರುವ ‘ರಾಜ್ಯ ಗ್ರಾಮ ಪಂಚಾಯಿತಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರು’ (ಎಂಬಿಕೆ), ‘ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು’ (ಎಲ್‌ಸಿಆರ್‌ಪಿ), ‘ಕೃಷಿ ಸಖಿಯರು’ (ಕೆಎಸ್), ‘ಪಶು ಸಖಿಯರು’ (ಪಿಎಸ್) ತಮ್ಮ ಗೌರವಧನ ಹೆಚ್ಚಿಸುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ.
ಪ್ರತಿಭಟನೆಯ ವೇಳೆ ‘ಈದಿನ ಡಾಟ್ ಕಾಮ್’ ಜೊತೆ ಮಾತನಾಡಿದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಸ್ವರೂಪ ಎ.ಸಿ. ಅವರು ತಮ್ಮ ಕಷ್ಟಗಳನ್ನು ವಿವರಿಸಿದರು. “ಎಲ್‌ಸಿಆರ್‌ಪಿಗಳಿಗೆ 3000 ರೂ., ಕೃಷಿ ಸಖಿ, ಪಶುಸಖಿಯರಿಗೆ 3750 ರೂ., ಎಂಬಿಕೆಗಳಿಗೆ 5,000 ರೂ. ಗೌರವ ಧನ ಕೊಡುತ್ತಾರೆ. ಈ ಹಣದಲ್ಲಿ ನಾವು ಸಂಸಾರ ಮಾಡಲು ಸಾಧ್ಯವಿಲ್ಲ. ತಿಂಗಳಿಗೆ ಎಷ್ಟು ಸಂಬಳ ಬರುತ್ತದೆ ಎಂದು ಯಾರಾದರೂ ಕೇಳಿದರೆ ಹೇಳಿಕೊಳ್ಳಲಾಗದಷ್ಟು ಕಡಿಮೆ ಗೌರವಧನವನ್ನು ಸರ್ಕಾರ ನಮಗೆ ಕೊಡುತ್ತಿದೆ. ಕೂಲಿಕಾರ್ಮಿಕರಿಗಿಂತ ಕಡಿಮೆ ಹಣವನ್ನು ನಾವು ಪಡೆಯುತ್ತಿದ್ದೇವೆ” ಎಂದರು.

ಇದನ್ನೂ ಓದಿರಿ: ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಸರ್ಕಾರ ಬಳಸಿಕೊಂಡಿದ್ದೆಷ್ಟು? ಇಲ್ಲಿದೆ ನೋಡಿ…
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಎಂಬಿಕೆಯಾಗಿ ಕೆಲಸ ಮಾಡುತ್ತಿರುವ ಲತಾ ಅವರು ಮಾತನಾಡಿ, “ನಮಗೆ ತರಬೇತಿಯಲ್ಲಿ ಹೇಳಿದ್ದೇ ಬೇರೆ, ನಡೆಸಿಕೊಳ್ಳುತ್ತಿರುವ ರೀತಿಯೇ ಬೇರೆ. ಪಂಚಾಯಿತಿಯಲ್ಲಿ ಒಂದು ಕೊಠಡಿ ನಿಮಗೆ ಮೀಸಲಿಡಲಾಗುತ್ತದೆ, ನೀವು ಕೂತು ಕೆಲಸ ಮಾಡಬೇಕಷ್ಟೇ ಎಂದಿದ್ದರು. ಆದರೆ ನಮ್ಮ ಕೆಲಸಗಳು ಇಷ್ಟೇ ಅಲ್ಲವಾಗಿದೆ. ಹೊಸ ಸಂಘಟನೆಗಳನ್ನು ಪ್ರತಿ ತಿಂಗಳು ರಚನೆ ಮಾಡಬೇಕು. ಪ್ರತಿ ತಿಂಗಳು ಮಹಿಳೆಯರಿಗೆ ಸಾಲವನ್ನು ಒದಗಿಸಬೇಕು. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ನಡೆಯುವ ಸಭೆಗಳಿಗೆ ಹೋಗಿ ಉತ್ತರಗಳನ್ನು ಕೊಡಬೇಕು. ಬೆಳಿಗ್ಗೆ ಹತ್ತೂವರೆಯಿಂದ ಸಂಜೆ ಐದೂವರೆಯವರೆಗೆ ಕೆಲಸ ಎಂದು ಹೇಳಿದ್ದಾರೆ. ಆದರೆ ನಮಗೆ ನಿರ್ದಿಷ್ಟ ಸಮಯ ನಿಗದಿ ಇರುವುದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಮುಂದುವರಿದು, “ಭಾನುವಾರವೂ ಕೆಲಸ ಮಾಡಬೇಕು, ಎರಡನೇ ಹಾಗೂ ಮೂರನೇ ಶನಿವಾರವೂ ಕೆಲಸ ಮಾಡಬೇಕು ಎನ್ನುತ್ತಾರೆ. ಗ್ರಾಮಗಳಿಂದ ಗ್ರಾಮಕ್ಕೆ ವಾಹನ ಸೌಲಭ್ಯವಿರುವುದಿಲ್ಲ. ಕಾರ್ಯನಿರ್ವಹಣಾ ವರದಿ ಸಲ್ಲಿಸಿದ ಮೇಲೆಯೇ ಗೌರವ ಧನ ಬರುತ್ತದೆ. ನಮ್ಮ ದುಡ್ಡಲ್ಲೇ ಪ್ರಿಂಟ್ ಔಟ್ ತೆಗೆಸಬೇಕು. ಸಂಘಗಳನ್ನು ನಡೆಸಬೇಕಾದರೆ ಸಂಜೆ ಮೇಲೆಯೇ ಹೋಗಬೇಕಾಗುತ್ತದೆ. ದತ್ತಾಂಶವನ್ನು ಅಪ್‌ಲೋಡ್ ಮಾಡಲು ಇಂಟರ್‌ನೆಟ್ ಸೌಲಭ್ಯ ಇರುವುದಿಲ್ಲ. ಮೊಬೈಲ್ ಡೇಟಾಕ್ಕೂ ನಾವೇ ಹಣ ಖರ್ಚು ಮಾಡಬೇಕು. ಈ ಕಡಿಮೆ ಗೌರವಧನದಿಂದ ಜೀವನ ನಡೆಸಲು ಸಾಧ್ಯವೇ?” ಎಂದು ಪ್ರಶ್ನಿಸಿದರು.
ಮಂಡ್ಯ ಜಿಲ್ಲೆಯ ನಿವಿತಾ ಅವರು ಮಾತನಾಡಿ, “ಗೌರವಧನ ಮೀರಿದ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಕನಿಷ್ಠ ನರೇಗಾ ಕೂಲಿಯಷ್ಟಾದರೂ ಕೊಡಬೇಕು. ಟಿಎ, ಡಿಎ ಒದಗಿಸಬೇಕು” ಎಂದು ಆಗ್ರಹಿಸಿದರು.

“ನಾವು ಅನಿರ್ದಿಷ್ಟಾವಧಿ ಧರಣಿಗೆ ಕೂತಿದ್ದೇವೆ. ನಾವೆಲ್ಲ ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಶಕ್ತಿಯನ್ನು ತೋರಿಸುತ್ತೇವೆ. ನಾವ್ಯಾರು ಬಿಟ್ಟಿಬಿದ್ದಿಲ್ಲ. ಹೆಣ್ಣುಮಕ್ಕಳ ಅಭಿವೃದ್ಧಿ ಎಲ್ಲಿ ಆಗುತ್ತಿದೆ. ನಮ್ಮ ಜೀವಕ್ಕೆ ಹಾನಿಯಾದರೆ ಯಾರು ಹೊಣೆ? ಶಾಂತಯುತವಾಗಿ ಮೂರ್ನಾಲ್ಕು ಪ್ರತಿಭಟನೆಗಳನ್ನು ಮಾಡಿದ್ದೇವೆ. ಅದ್ಯಾವುದಕ್ಕೂ ಇವರು ಜಗ್ಗಲ್ಲ, ಬಗ್ಗಲ್ಲ. ನಾವು ಈಗ ಬಂದು ಹೋರಾಟಕ್ಕೆ ಕೂತಿದ್ದೇವೆ” ಎಂದರು.
“ನಮಗೆ ಜೀವ ಭದ್ರತೆಯನ್ನು ಕೊಡಿ. ಯಾವುದೇ ಸಂದರ್ಭದಲ್ಲಿ ಕೆಲಸ ಮಾಡಲೇಬೇಕಾದರೆ ಕನಿಷ್ಠ ವೇತನ ಪಾವತಿ ಮಾಡಿ” ಎಂದು ಒತ್ತಾಯಿಸಿದರು.
ಇದನ್ನೂ ಓದಿರಿ: ಪೌರತ್ವ ಪ್ರಮಾಣಪತ್ರ ನೀಡುವುದು ಚುನಾವಣಾ ಆಯೋಗದ ಕೆಲಸವಲ್ಲ; ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಹೀಗಂದಿದ್ದೇಕೆ?
ವಿಜಯಪುರ ಜಿಲ್ಲೆಯ ಹೇಮಾ ದಳವಾಯಿ ಮಾತನಾಡಿ, “ಎಲ್‌ಸಿಆರ್‌ಪಿ ಆಗಿ ದುಡಿಯುತ್ತಿರುವ ನನಗೆ 2500 ರೂ. ಬರುತ್ತಿದೆ. ನಮ್ಮ ಸೇವೆಗೆ ಸಂಜೀವಿನಿ ಎಂದು ಹೆಸರಿಡಲಾಗಿದೆ. ಇದೊಂಥರ ಗೋಮುಖ ವ್ಯಾಘ್ರದ ಸ್ಕೀಮ್ ರೀತಿ ಇದೆ. ವಸ್ತುಗಳಿಗೆ ಇರುವ ಬೆಲೆ ನಮಗೆ ಇಲ್ಲವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಮಹಿಳಾ ಅಭಿವೃದ್ಧಿಗಾಗಿ ಮಾಡಿರುವ ಯೋಜನೆ ಮಹಿಳಾ ಶೋಷಣೆಯ ಅಸ್ತ್ರವಾಗಿ ಬದಲಾಗಿದೆ. ಅತ್ತೆ ಮನೆಯಲ್ಲಿ ನಡೆಯುತ್ತಿದ್ದ ಶೋಷಣೆಗಳನ್ನು ತಡೆದಿರುವ ಸರ್ಕಾರ ಅಭಿವೃದ್ಧಿ ಹೆಸರಲ್ಲಿ ನಮ್ಮ ಮೇಲೆ ಶೋಷಣೆ ಮಾಡುತ್ತಿದೆ. ಕಡಿಮೆ ಗೌರವಧನದಲ್ಲಿ ದುಡಿಸಿಕೊಳ್ಳುವುದು ಶೋಷಣೆಯಲ್ಲವೇ?” ಎಂದು ಪ್ರಶ್ನಿಸಿದರು.
ಎಂಬಿಕೆ, ಎಲ್‌ಸಿಆರ್‌ಪಿ, ಸಖಿಯರ ಮಹಾ ಒಕ್ಕೂಟದ ಅಧ್ಯಕ್ಷೆ ರುದ್ರಮ್ಮ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
