ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಪಡೆಯುವ ಇಂತಹ ಪಾರ್ಟಿಗಳು ಮೊದಲು ಶುರುವಾಗಿದ್ದು ದೆಹಲಿ ಮತ್ತು ಮುಂಬೈನಂತಹ ನಗರಗಳಲ್ಲಿ.
ಇದು ಮದುವೆಯ ಥರ, ಆದರೆ ಮದುವೆಯಲ್ಲ. ಮದುವೆ ಮನೆಯಲ್ಲಿರುವ ಎಲ್ಲ ಸಂಭ್ರಮ ಇಲ್ಲಿ ಇರುತ್ತದೆ, ಆದರೆ ವಧು-ವರರು ಮಾತ್ರ ಇರುವುದಿಲ್ಲ. ಒಟ್ಟಿಗೆ ಸೇರಿ ಪಾರ್ಟಿಗಳನ್ನು ಮಾಡಲು ಒಂದು ನೆಪವೋ, ಸಂಸ್ಕೃತಿಯನ್ನು ಮರುಸೃಷ್ಟಿಸುತ್ತೇವೆಂದು ಮಾಡುತ್ತಿರುವ ಹೊಸ ಟ್ರೆಂಡೋ? ನೀವೇ ಹೇಳಬೇಕು. ಅಂತೂ ಇಂತೂ ನಕಲಿ ಮದುವೆ ಪಾರ್ಟಿ ಎಂಬ ಕಲ್ಚರ್ ಬೆಂಗಳೂರು ನಗರವನ್ನೂ ಪ್ರವೇಶಿಸಿದೆ.
ದುಡ್ಡು ಕೊಟ್ಟರೆ ನಿಮಗೂ ಇಲ್ಲಿ ಎಂಟ್ರಿ ಇರುತ್ತದೆ. ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ಕಾಣಿಸಿಕೊಳ್ಳಬಹುದು. ಇಲ್ಲಿ ಮೆಹಂದಿ ಮತ್ತು ಬಳೆ ಕೌಂಟರ್‌ಗಳು ಇರುತ್ತವೆ. ಭವ್ಯ ಕಮಾನುಗಳು, ಅಲಂಕೃತ ವೇದಿಕೆಗಳು, ಹೂವಿನ ಅಲಂಕಾರಗಳು, ರಂಗೋಲಿಗಳು, ಡೋಲ್‌ಗಳು, ಬಾಲಿವುಡ್ ಹಾಡುಗಳನ್ನು ಹಾಕಿ ರಂಜಿಸುವ ಡಿಜೆಗಳು, ಆಹಾರ- ಪಾನೀಯಗಳು, ಡ್ರಿಂಕಿಂಗ್ ಕೌಂಟರ್‌ಗಳು- ಹೀಗೆ ಮೊದಲಾದ ಸೌಲಭ್ಯಗಳಿರುವ ಈ ಪಾರ್ಟಿಗಳಲ್ಲಿ ಜೆನ್ ಝಡ್ ಗುಂಪಿನವರು (ಅಂದರೆ 13- 28 ವಯಸ್ಸಿನವರು) ಹೆಚ್ಚು ಭಾಗಿಯಾಗುತ್ತಿದ್ದಾರೆ.
ಕಳೆದ ತಿಂಗಳು ಬೆಂಗಳೂರು ನಗರದಲ್ಲಿಯೇ ಇಂತಹ ಎರಡು ಪಾರ್ಟಿಗಳು ನಡೆದಿವೆ. 500 ರೂ.ಗಳಿಂದ 3,000 ರೂ.ವರೆಗೆ ಪ್ರವೇಶ ಶುಲ್ಕವನ್ನು ನಿಗದಿ ಮಾಡಲಾಗಿತ್ತು. ಜೂನ್ 1 ರಂದು ವಿಟ್ಟಲ್ ಮಲ್ಯ ರಸ್ತೆಯ ಸ್ಟಾರ್ ಹೋಟೆಲ್‌ನಲ್ಲಿ ನಡೆದ ‘10s Only Szn: Big Fat Fake Wedding’ ಕಾರ್ಯಕ್ರಮದಲ್ಲಿ 1,300 ಅತಿಥಿಗಳು ಭಾಗವಹಿಸಿದ್ದರು. ವೇದಿಕೆಗಳನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಫೋಟೋ ಬೂತ್‌ಗಳು, ಬಳೆ ಮತ್ತು ಗೋರಂಟಿ ಟ್ಯಾಟೂ ಕೌಂಟರ್‌ಗಳು, ಆಹಾರ ಮಳಿಗೆಗಳು ಮತ್ತು ಬಾರ್ ಕೌಂಟರ್‌ಗಳಿದ್ದವು. ಮೂರು ಡಿಜೆಗಳು, ಹಲವಾರು ಡೋಲ್ ವಾದಕರು ಪ್ರಮುಖ ಆಕರ್ಷಣೆ ಆಗಿದ್ದರು. ‘ವಧು-ವರರು’ ಕುಳಿತುಕೊಳ್ಳುವ ಜಾಗವೆಂದು ನಮೂದಿಸಿದ ಸ್ಥಳವನ್ನು ಖಾಲಿ ಬಿಡಲಾಗಿತ್ತು. ‘ಜಸ್ಟ್ ಮ್ಯಾರೀಡ್’ ಎಂದು ಇಮಿಟೇಟ್ ಮಾಡುತ್ತಾ, ಅಲ್ಲಿದ್ದ ಯುವಕ- ಯುವತಿಯರು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದರು.
23-28 ವರ್ಷ ವಯಸ್ಸಿನ ಹೆಚ್ಚಿನವರು ಸೀರೆ, ಲೆಹೆಂಗಾ ಮತ್ತು ಕುರ್ತಾ-ಪೈಜಾಮಾ ಧರಿಸಿದ್ದರು. “ಭಾಗಶಃ ವಧುವನ್ನು ಇಮಿಟೇಟ್ ಮಾಡುವ ರೀತಿಯಲ್ಲಿ ಒಬ್ಬ ಅತಿಥಿ ಶೇರ್ವಾನಿಯಲ್ಲಿ ಆಗಮಿಸಿದ್ದರು” ಎಂದು ಆಫ್‌ಲೈನ್ ಸಾಮಾಜಿಕ ಕಾರ್ಯಕ್ರಮಗಳ ಕಂಪನಿಯಾದ 8 ಕ್ಲಬ್‌ನ ಸಹ-ಸಂಸ್ಥಾಪಕ ಮಧುರ್ ರಾವ್ ಹೇಳಿದ್ದಾರೆ. ಬೆಂಗಳೂರು ಮೂಲಕ ಕಂಪನಿ ಇದಾಗಿದೆ.
ಅದೇ ದಿನ, ‘ಒನ್ ಲವ್: ಶಾದಿ ಮುಬಾರಕ್ ಎಡಿಷನ್’ ಎಂಬ ಮತ್ತೊಂದು ನಕಲಿ ವಿವಾಹ ಪಾರ್ಟಿಯನ್ನು ಕೋರಮಂಗಲದ ರೆಸ್ಟೋರೆಂಟ್ ಮತ್ತು ಬಾರ್‌ನಲ್ಲಿ ನಡೆಸಲಾಗಿದೆ. ಸುಮಾರು 250 ಜನರು ಇದರಲ್ಲಿ ಭಾಗವಹಿಸಿದ್ದರು. ಎಲ್‌ಜಿಬಿಟಿಕ್ಯುಎಡಿ+ ಸಮುದಾಯದ ಪ್ರೈಡ್ ಮಂತ್ ಆರಂಭದ ಸಂಕೇತವಾಗಿ ಕ್ವೀರ್ ಸಮುದಾಯ ಮತ್ತು ಅವರ ಮಿತ್ರರಿಗಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಣೆಯ ಮೇಲೆ ತಿಲಕ ಇಡುವುದರೊಂದಿಗೆ ಅತಿಥಿಗಳನ್ನು ಸ್ವಾಗತಿಸಲಾಯಿತು. ಸಂಜೆ ಬಾರಾತ್ ಶೈಲಿಯ ನೃತ್ಯ, ಶಾದಿ- ಥೀಮ್‌ನ ಕ್ರೀಡೆಗಳು, ಗೋರಂಟಿ ಕೌಂಟರ್‌ಗಳು ಮತ್ತು ಸಂಗೀತ ಕಚೇರಿ ಮೊದಲಾದ ಸೌಲಭ್ಯವನ್ನು ಕಲ್ಪಿಸಲಾಗಿತ್ತು.
ಕಾರ್ಯಕ್ರಮದ ಕ್ಯುರೇಟರ್‌ಗಳಲ್ಲಿ ಒಬ್ಬರಾದ ವೈಭವ್ ಕುಮಾರ್ ಮೋದಿ ಪ್ರತಿಕ್ರಿಯಿಸಿದ್ದು, “ಕ್ವೀರ್ ವಿವಾಹವು ನಮ್ಮ ದೇಶದಲ್ಲಿ ವಿವಾದಾತ್ಮಕವಾಗಿದೆ. ಈ ಪಾರ್ಟಿ ಮೂಲಕ ಕ್ವೀರ್ ವ್ಯಕ್ತಿಗಳಿಗೆ ಮದುವೆ ಅನುಭವ ನೀಡುವ ಮನಪೂರ್ವಕ ಪ್ರಯತ್ನ ಮಾಡಲಾಗಿದೆ” ಎಂದಿದ್ದಾರೆ.
ಹೈದರಾಬಾದ್ ಮೂಲದ ಡಾರ್ಕ್ ವೈಬ್ ಸೊಸೈಟಿಯ ಸಂಸ್ಥಾಪಕರೂ ಆಗಿರುವ ವೈಭವ್, “ಭಾರತದಲ್ಲಿ, ಕ್ವೀಟ್ ಮನಸ್ಥಿತಿಯನ್ನು ಅನೇಕರು ವಿದೇಶಿ ಪರಿಕಲ್ಪನೆಯಾಗಿ ನೋಡುತ್ತಾರೆ. ಆದರೆ ನಾವು ಇಂತಹ ಪಾರ್ಟಿಯನ್ನು ನಡೆಸಿ ಅದಕ್ಕೊಂದು ದೇಸಿತನವನ್ನು ನೀಡಿದ್ದೇವೆ” ಎಂದು ಬಣ್ಣಿಸಿದ್ದಾರೆ.
ಬೆಂಗಳೂರಿನಲ್ಲಿ ಇನ್ನೂ 10-15 ಜನರು ಈ ‘ನಕಲಿ ಶಾದಿ’ ಪಾರ್ಟಿಗಳನ್ನು ಆಯೋಜಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಮಧುರ್ ರಾವ್ ಹೇಳಿದರೆ, ಇದೇ ರೀತಿಯ ಮತ್ತಷ್ಟು ಕೋರಿಕೆಗಳು ಬಂದಿವೆ ಎಂದು ವೈಭವ್ ಅವರೂ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಪಡೆಯುವ ಇಂತಹ ಪಾರ್ಟಿಗಳು ಮೊದಲು ಶುರುವಾಗಿದ್ದು ದೆಹಲಿ ಮತ್ತು ಮುಂಬೈನಂತಹ ನಗರಗಳಲ್ಲಿ. ತಮ್ಮ ಊರುಗಳನ್ನು ತೊರೆದು ವಲಸೆ ಬರುವ ಮಂದಿ, ಈ ರೀತಿಯ ಆಚರಣೆಗಳಲ್ಲಿ ಭಾಗಿಯಾಗಲು ಆಸಕ್ತರಾಗುತ್ತಿದ್ದಾರೆ ಎಂದು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ಇತ್ತೀಚೆಗೆ ವರದಿ ಮಾಡಿದೆ.
ಮಾಹಿತಿ ಕೃಪೆ: ಡೆಕ್ಕನ್ ಹೆರಾಲ್ಡ್
