ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಿ, ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ‘ರೈತ ಸಂತೆ’ಯ ಪ್ರಯೋಗ ಆರ್ ಆರ್ ನಗರದಲ್ಲಿ ಆರಂಭವಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಾಮೂಹಿಕ ನಾಯಕತ್ವದಲ್ಲಿ ‘ನೇರ ಮಾರಾಟದ ಮೂಲಕ ನಮ್ಮ ಹೋರಾಟ’ – ‘ನಮ್ಮ ಬೆಳೆಗೆ ನಮ್ಮದೇ ಬೆಲೆ’ ಎಂಬ ಶೀರ್ಷಿಕೆಯಡಿ ರೈತ ಸಂತೆ ಆಯೋಜನೆಗೊಂಡಿದೆ.
ಆರ್.ಆರ್ ನಗರದ ಐಡಿಯಲ್ ಹೋಮ್ಸ್ ಲೇಔಟ್‌ನಲ್ಲಿರುವ ಮುನಿವೆಂಕಟಯ್ಯ ಸ್ಮಾರಕ ಬಯಲು ರಂಗಮಂದಿರದಲ್ಲಿ ಚುಕ್ಕಿ ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ಮೂರು ದಿನಗಳ ರೈತರಿಂದ ಗ್ರಹಕರಿಗೆ ತರಕಾರಿ ದವಸ ಧಾನ್ಯಗಳ ನೇರ ಮಾರಾಟ ಉದ್ಘಾಟನೆಯಾಗಿದೆ.
ಏಪ್ರಿಲ್ 12 ರಿಂದ 14ರವರೆಗೆ ಆಯೋಜಿಸಿರುವ ‘ರೈತ ಸಂತೆ’ಯಲ್ಲಿ ರೈತರೇ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿರುವ ರೈತರು ದವಸ – ಧಾನ್ಯ, ತರಕಾರಿ-ಹಣ್ಣು, ಜೇನು-ಹೈನು, ಅಡುಗೆ ಎಣ್ಣೆ, ಮೌಲ್ಯವರ್ಧಿತ ಉತ್ಪನ್ನಗಳೂ ಸೇರಿದಂತೆ ತಾವು ಬೆಳೆದ ಎಲ್ಲ ರೀತಿಯ ಉತ್ಪನ್ನಗಳನ್ನು ರೈತ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದು ಮಧ್ಯವರ್ತಿಗಳಿಲ್ಲದೆ ಬೆಳೆದವರೇ ತಮ್ಮ ಬೆಳೆಗೆ ಬೆಲೆ ನಿಗದಿಪಡಿಸಿ ಮಾರಾಟ ಮಾಡುವ ವಿಶಿಷ್ಟ ಸಂತೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಪ್ರೊಫೆಸರ್ ಎಂಡಿಎನ್ ಆಶಯದ ರೈತ ಸಂತೆ ಮತ್ತು ನಾಳೆಗಳ ಅನಿವಾರ್ಯತೆ
ಗ್ರಾಹಕರಿಂದ ನಿರಸ ಪ್ರತಿಕ್ರಿಯೆ
ರೈತ ಸಂತೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿದೆ. ಆದರೆ ಮನೆಗೆ ಅಗತ್ಯವಾಗಿ ಬೇಕಾದ ಎಲ್ಲ ತರಕಾರಿಗಳ ಕೊರತೆ ಅಲ್ಲಿ ಕಂಡು ಬಂತು. ಆಲೂಗಡ್ಡೆ, ಹಸಿ ಶುಂಟಿ, ಹುಣಸೆ ಹಣ್ಣು, ಸ್ವಲ್ಪ ಸೊಪ್ಪು, ಅರ್ಧ ಚೀಲ ಕಾಳುಗಳು. 5 ಕೆ ಜಿ ಮೆಣಸಿನಕಾಯಿ, ಒಂದೊಂದು ಟ್ರೇ ದಷ್ಟು ಟೊಮೆಟೊ, ಮೆಣಸಿನಕಾಯಿ, ಹಾಗಲಕಾಯಿ ಹಾಗೂ ಕಲ್ಲಂಗಡಿ ಹಣ್ಣು, ಪಪ್ಪಾಯಿ ಹಣ್ಣು ಇಷ್ಟೇ ರೈತ ಸಂತೆಯಲ್ಲಿ ಕಂಡುಬಂದಿದ್ದು, ಉಳಿದಂತೆ ಮನೆಯಿಂದ ತಯಾರಿಸಿ ಉಪ್ಪಿನಕಾಯಿ, ಹಪ್ಪಳದ ಅಂಗಡಿ ಒಂದಿತ್ತು. ಕೊಬ್ಬರಿ ಎಣ್ಣೆ ಸಹ ಅಲ್ಲಿ ಇಡಲಾಗಿತ್ತು.
ಬೆಳೆಗಾರ ಮತ್ತು ಗ್ರಾಹಕನ ನಡುವೆ ದೊಡ್ದ ಅಂತರವಿದೆ. ಬೆಳೆದವನಿಗೆ 1 ರೂ. ಸಿಕ್ಕರೆ ಕೊಳ್ಳುವವನು 10 ರೂ. ಕೊಡುತ್ತಿದ್ದಾನೆ ಎನ್ನುವುದು ವಾಸ್ತವ. ಆದರೆ ರೈತ ಸಂತೆಯಲ್ಲಿ ದಲ್ಲಾಳಿ ತಪ್ಪಿಸುತ್ತೇವೆ ಎನ್ನುವ ರೈತ ಸಂತೆ ಆಯೋಜಕರು ಹೊರಗಿನ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದು ಸಹ ವಾಸ್ತವ.

ಉದಾಹರಣೆಗೆ ಬಿಳಿಜೋಳ. ರೈತ ಸಂತೆಯಲ್ಲಿ 2 ಕೆ.ಜಿ ಬಿಳಿ ಜೋಳದ ದರ 180 ರೂ. ಇದೆ. ಮಾರುಕಟ್ಟೆಯಲ್ಲಿ ದಲ್ಲಾಳಿ ಕಮಿಷನ್ ಸೇರಿ ಜೋಳದ ದರ 80 ರೂ. ಇದೆ. ಸೂಪರ್ ಮಾರ್ಕೇಟ್‌ಗಳಲ್ಲಿ ಜೋಳ 50 ರೂ ಇದೆ. ಉಳಿದಂತೆ ಹಾಗಲಕಾಯಿ ಕೆ.ಜಿಗೆ 80 ರೂ. ಇದೆ. ಹೊರಗಿನ ಮಾರುಕಟ್ಟೆಯಲ್ಲಿ ಕೆ.ಜಿ 60 ರೂ. ಇದೆ. 1 ಕೆ. ಜಿ ಕಾರದ ಪುಡಿಗೆ ರೈತ ಸಂತೆಯಲ್ಲಿ 500 ರೂ. ಬೆಲೆ ನಿಗದಿ ಮಾಡಲಾಗಿದೆ. ಇದೆಲ್ಲ ಸಹಜವಾಗಿಯೇ ಗ್ರಾಹಕರಿಗೆ ದುಬಾರಿಯಾಗಲಿದೆ.
“ಕೇವಲ ಎಂಟು ದಿನದಲ್ಲಿ ರೈತ ಸಂತೆಯನ್ನು ಆಯೋಜನೆ ಮಾಡಿದ್ದೇವೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ. ಹೀಗಾಗಿ ನಾವೇ ಬೆಲೆ ನಿರ್ಧರಿಸಿ ಮಾರಾಟ ಮಾಡುವ ಮೊದಲ ಪ್ರಯತ್ನ ಇದಾಗಿದೆ. ಇನ್ನೂ ಅಚ್ಚುಕಟ್ಟಾಗಿ ಮಾಡಬಹುದಿತ್ತು. ಮತ್ತೆ ನಾವೆಲ್ಲ ಸಭೆ ಸೇರಿ ಇದನ್ನು ಹೇಗೆ ವಿಸ್ತರಿಸಬೇಕು ಎಂದು ಯೋಚಿಸುತ್ತೇವೆ. ನಿರೀಕ್ಷೆಯಂತೆ ಗ್ರಾಹಕರು ಬಂದಿಲ್ಲ. ಆದರೆ, ಗ್ರಾಹಕರು ನಮ್ಮಿಂದ ಏನೂ ನಿರೀಕ್ಷೆ ಮಾಡುತ್ತಾರೆ ಎಂಬುದು ಅರ್ಥವಾಗಿದೆ. ಬರುವ ದಿನಗಳಲ್ಲಿ ಬಹಳಷ್ಟು ಉತ್ಪನ್ನಗಳ ಜೊತೆ ರೈತ ಸಂತೆ ಮಾಡುತ್ತೇವೆ. ಹೊರಗಿನ ರೈತರು ಯಾರು ತಮ್ಮ ಬೆಳೆಗಳನ್ನು ಇಲ್ಲಿ ತಂದಿಲ್ಲ. ಸಂಘಟನೆಯಲ್ಲಿರುವವರು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ರಾಜ್ಯಾದ್ಯಂತ ಪ್ರಯೋಗ ಮಾಡುತ್ತೇವೆ” ಎಂದು ರೈತ ಸಂತೆಯ ಆಯೋಜಕರಾದ ಚುಕ್ಕಿ ನಂಜುಂಡಸ್ವಾಮಿ ಅವರು ಈ ದಿನ.ಕಾಮ್‌ಗೆ ತಿಳಿಸಿದರು.