“ಮಹಾತ್ಮ ಗಾಂಧಿ ನಾಯಕತ್ವ ಮತ್ತು ಅಂಬೇಡ್ಕರ್ ಅವರು ವಿದ್ವತ್ತು ಇಡೀ ಕನ್ನಡ ಸಾಹಿತ್ಯ ಮಾತ್ರವಲ್ಲ ದೇಶದ ಸಾಹಿತ್ಯ ರಚನೆಯ ಮೇಲೆಯೂ ಗಾಢ ಪ್ರಭಾವ ಬೀರಿತ್ತು” ಎಂದು ರಾಜಕೀಯ ಚಿಂತಕ, ಕಾಂಗ್ರೆಸ್ ಮುಖಂಡ ಬಿ ಎಲ್ ಶಂಕರ್ ಹೇಳಿದರು.
ಮಂಡ್ಯದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಶನಿವಾರ ನಡೆದ “ಸಾಹಿತ್ಯದಲ್ಲಿ ರಾಜಕೀಯ: ರಾಜಕೀಯದಲ್ಲಿ ಸಾಹಿತ್ಯ” ಗೋಷ್ಠಿಯ ಆಶಯ ಭಾಷಣ ಮಾಡಿದರು.
ರಾಜಕಾರಣ ಮತ್ತು ಸಾಹಿತ್ಯ ಎರಡೂ ಬೇರೆ ಬೇರೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಮನುಷ್ಯ ಮೂಲತಃ ರಾಜಕೀಯ ಪ್ರಾಣಿ. ಒಬ್ಬನೇ ಇದಾಗ ಚಿಂತಿಸುತ್ತಾನೆ, ಇಬ್ಬರು ಇದ್ದಾಗ ಚರ್ಚೆ ಮಾಡುತ್ತಾರೆ. ಮೂವರಿದ್ದಾಗ ವಾಗ್ವಾದ ಮಾಡ್ತಾರೆ ಎಂದು ಅರಿಸ್ಟಾಟಲ್ ಹೇಳಿದ್ದ. ಕೌಟಿಲ್ಯದ ಅರ್ಥಶಾಸ್ತ್ರ ಸಹಸ್ರ ವರ್ಷಗಳಿಂದ ಮಾರ್ಗದರ್ಶಿಯಾಗಿದೆ. ಸರ್ವಜ್ಞ, ಬಸವಣ್ಣ, ಕುಮಾರವ್ಯಾಸ ಮುಂತಾದವರ ವಿಚಾರಗಳು ದೇಶದ ರಾಜನೀತಿ ರೂಪಿಸಲು ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ಹೇಳಿದರು.
ಆದಿಕವಿ ಪಂಪ 10ನೇ ಶತಮಾನದಲ್ಲಿಯೇ ʼಮನುಷ್ಯ ಜಾತಿ ತಾನೊಂದೇ ವಲಂʼ ಎಂದಿದ್ದ. ಇಂದು ನಾವು ಬಹುತ್ವದಲ್ಲಿ ಏಕತೆ ಎನ್ನುತ್ತೇವೆ, ಸೆಕ್ಯುಲರಿಸಂ ಎಂದು ಮಾತಾಡುತ್ತೇವೆ. ಆದರೆ ಪಂಪ ಹತ್ತನೇ ಶತಮಾನದಲ್ಲಿಯೇ ಇದನ್ನು ಹೇಳಿದ್ದ. ಕರ್ನಾಟಕದ ಇತಿಹಾಸದಲ್ಲಿ ನಡೆದ ಹಲವು ಚಳವಳಿಗಳು ಅವುಗಳಲ್ಲಿ ಕನ್ನಡ ಚಳವಳಿ, ರೈತ ಚಳವಳಿ, ದಲಿತ ಚಳವಳಿ, ವಿದ್ಯಾರ್ಥಿ ಚಳವಳಿ, ಇವು ಸಾರ್ವಜನಿಕ ಬದುಕಿನಲ್ಲಿ ನೀತಿ ನಿರೂಪಣೆ ಮಾಡುವುದರಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದರು.
ಅನಕೃ, ಮರಿಯಪ್ಪ ಭಟ್ಟ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ತರಾಸು, ಗೋವಿಂದ ಪೈ, ಕುವೆಂಪು, ಶಿವರುದ್ರಪ್ಪ, ಚಂಕಂಬಾರ, ಅನಂತಮೂರ್ತಿ, ಚಂಪಾ, ಬೈರಪ್ಪ, ಕಟ್ಟೀಮನಿ, ಮೋರೆ ಹನುಮಂತರಾಯ, ಹರಿದಾಸ ಭಟ್, ಸೀತಾರಾಮ ಶಾಸ್ತ್ರಿ, ಅವರ ಸಾಹಿತ್ಯದ ರಾಜನೀತಿ ವಿಚಾರಗಳು, ಬರಗೂರು ರಾಮಚಂದ್ರಪ್ಪ, ದೇವನೂರ ಮಹಾದೇವ, ಎಸ್ ಜಿ ಸಿದ್ದರಾಮಯ್ಯ ಅವರು ಅಂಕಣ ಬರಹಗಳ ಮೂಲಕ ರಾಜಕೀಯದ ಮೇಲೆ ಪ್ರಭಾವ ಬೀರಿದ್ದಾರೆ. ಸ್ತ್ರೀ ಸ್ವಾತಂತ್ರ್ಯ ಎತ್ತಿ ಹಿಡಿಯುವ ಮಹಿಳಾ ಸಾಹಿತಿಗಳಾದ ತ್ರಿವೇಣಿ, ಅನುಪಮಾ ನಿರಂಜನ, ಪ್ರೇಮಾಭಟ್, ಸಾರಾ ಅಬೂಬಕ್ಕರ್, ಆರ್ಯಾಂಭ ಪಟ್ಟಾಭಿ, ಮಲ್ಲಿಕಾ ಘಂಟಿ, ಕಮಲಾ ಹಂಪನಾ ಅವರ ಬರಹಗಳು ಜನರ ಮೇಲೆ ಪ್ರಭಾವ ಬೀರಿವೆ. ಕರ್ನಾಟಕ ಏಕೀಕರಣ ಆಗಬೇಕಾದರೆ, 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ನ ಪ್ರಥಮ ಅಧಿವೇಶನ ದೇಶದ ಸ್ವಾತಂತ್ರ್ಯ ಚಳವಳಿಯ ಬಗ್ಗೆ ಚರ್ಚೆಗೆ ಮೀಸಲಿದ್ದರೂ, ಅಲ್ಲಿ ಕರ್ನಾಟಕ ಏಕೀಕರಣದ ಮೊದಲ ಸಮ್ಮೇಳನವನ್ನು ಸಿದ್ದಪ್ಪ ಕಂಬಳಿ ಅವರ ಅಧ್ಯಕ್ಷತೆಯಲ್ಲಿ ನಡೆಸಲು ಗಾಂಧೀಜಿ ಅವಕಾಶ ಮಾಡಿಕೊಟ್ಟಿದ್ದರು. ಮೊದಲ ನಾಡಗೀತೆ ಎನಿಸಿದ ಹುಯಿಲಗೋಳ ನಾರಾಯಣ ರಾವ್ ಅವರು ಬರೆದ ʼಉದಯವಾಗಲಿ ನಮ್ಮ ಕನ್ನಡನಾಡುʼ ಕವಿತೆಯನ್ನು ಹನ್ನೊಂದು ವರ್ಷದ ಪುಟ್ಟ ಹುಡುಗಿಯಾಗಿದ್ದ ಗಂಗೂಬಾಯಿ ಹಾನಗಲ್ ಅವರು ಗಾಂಧೀಜಿಯವರ ಮುಂದೆ ಹಾಡಿದ್ದರು ಎಂದು ನೆನಪಿಸಿದರು.

ಡಿವಿಜಿ ಅವರು ಮಡಿಕೇರಿಯಲ್ಲಿ 1932ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಏಕೀಕರಣದ ಪ್ರಸ್ರಾಪ ಮಾಡಿದ್ದರು. ಬೇಂದ್ರೆಯವರೂ ತಮ್ಮ ಕವಿತೆಯಲ್ಲಿ ಕನ್ನಡಿಗರು ಹೇಡಿಗಳಾಗಬಾರದು ಎಂದಿದ್ದರು. 20ನೇ ಶತಮಾನದಲ್ಲಿ ಅತಿ ಹೆಚ್ಚು ಸಾರ್ವಜನಿಕ ಬದುಕಿನ ಮೇಲೆ ಪ್ರಭಾವ ಬೀರಿದವರ ಸಾಲಿನಲ್ಲಿ ಮೊದಲ ಜ್ಞಾನಪೀಠ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಪ್ರಮುಖ ಪಾತ್ರ ವಹಿಸಿದ್ದರು. 1947ರಲ್ಲಿ ಅವರು ಮಹಾರಾಜ ಕಾಲೇಜಿನಲ್ಲಿ ಭಾಷಣ ಮಾಡುತ್ತಾ ಕರ್ನಾಟಕದ ಏಕೀಕರಣದ ಬಗ್ಗೆ ಪ್ರಸ್ತಾಪ ಮಾಡಿದ್ದು. ಅವರು ಸರ್ಕಾರಿ ಪ್ರಾಧ್ಯಾಪಕರಾಗಿದ್ದ ಕಾರಣ ಆಗಿನ ಕೆ ಸಿ ರೆಡ್ಡಿ ಸರ್ಕಾರ ಅವರಿಗೆ ನೋಟಿಸ್ ಕಳಿಸಿತ್ತು.”ಸರ್ಕಾರಿ ನೌಕರನಾಗಿರುವ ನೀನು ಹೇಗೆ ರಾಜ್ಯದ ಬಗ್ಗೆ ಮಾತಾಡಿದೆ” ಎಂದು ಹೇಳಿದ್ದರು. ಆ ನೋಟಿಸ್ ಗೆ ಕುವೆಂಪು ಕವಿತೆಯ ಮೂಲಕ ಉತ್ತರಿಸಿದ್ದರು. “ಇಂದು ಬಂದು ನಾಳೆ ಹೋಗುವ ಸಚಿವಸಂಪುಟವಲ್ಲ, ಸರಸ್ವತಿಯೇ ರಚಿಸಿದ ನಿತ್ಯ ಸಚಿವಸಂಪುಟ ನನಗೆ ಮುಖ್ಯ. ಇಲ್ಲಿ ನೃಪತುಂಗನೇ ಚಕ್ರವರ್ತಿ, ಪಂಪನಲ್ಲಿ ಮುಖ್ಯಮಂತ್ರಿ…” ಎಂದು ಕವಿತೆಯ ಮೂಲಕ ಉತ್ತರಿಸಿದ್ದರು. ನಂತರ ಸರ್ಕಾರ ನೋಟಿಸ್ ವಾಪಸ್ ಪಡೆದಿತ್ತು. ಹೀಗೆ ರಾಜಕೀಯದ ಲೋಕದೋಷಗಳು ಸಾಹಿತ್ಯದ ಸಾಕ್ಷಿ ಪ್ರಜ್ಞೆಗೆ ಹೊಳೆಯುತ್ತವೆ. ರಾಜಕೀಯದಲ್ಲಿ ಮುಳುಗಿರುವ ನಮ್ಮಂಥ ರಾಜಕಾರಣಿಗಳಿಗೆ ಹೊಳೆಯುವುದಲ್ಲ. ಅರಿವಾಗುವಾಗ ಅನಾಹುತಗಳು ಆಗಿ ಹೋಗಿರುತ್ತದೆ ಎಂದು ವಿಶ್ಲೇಷಿಸಿದರು.
ರಾಜಕಾರಣಿಯಾಗಿದ್ದು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರ ಬಗ್ಗೆ ಅವರು ಪ್ರಸ್ತಾಪ ಮಾಡಿದರು. ರಾಮ ಮನೋಹರ ಲೋಹಿಯಾ, ಅರುಣ್ ಶೌರಿ, ಶಶಿ ತರೂರ್, ವೀರಪ್ಪ ಮೊಯ್ಲಿ,ಅಟಲ್ ಬಿಹಾರಿ ವಾಜಪೇಯಿ ಅವರ ಸಾಹಿತ್ಯ ಕೊಡುಗೆಗಳನ್ನು ಪ್ರಸ್ತಾಪ ಮಾಡಿದರು.
ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ ʼಸಾಹಿತ್ಯ ಕೃತಿಗಳಲ್ಲಿ ಕಂಡುಬರುವ ಸಾಹಿತ್ಯ ಚಿತ್ರಣʼ ವಿಷಯದಲ್ಲಿ ಮಾತನಾಡಿದರು. ಮಾಜಿ ಶಾಸಕ ಡಾ ಕೆ ಅನ್ನದಾನಿ, ʼರಾಜಕಾರಣಿಗಳಿಗೆ ಇರಬೇಕಾದ ರಾಜಕೀಯ ಪ್ರಜ್ಞೆʼ ಕುರಿತು ಮಾತನಾಡಿದರು. ಕಾನೂನು ಸಚಿವ ಎಚ್ ಕೆ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಮತ್ತೋರ್ವ ಪ್ರಬಂಧ ಮಂಡನೆಕಾರ ಸಿ ಟಿ ರವಿ ಗೈರಾಗಿದ್ದರು.