“ಎಂತಹ ಕಷ್ಟದ ಸಂದರ್ಭದಲ್ಲೂ ಜನಪರ ಧ್ವನಿ ಎತ್ತುವುದು ಅತಿ ಮುಖ್ಯ ಎಂದು ನಮಗೆ ಕಲಿಸಿದವರು ಗೌರಿ ಲಂಕೇಶ್. ಹಲವಾರು ಮಂದಿ ಕಳೆದ ಕೆಲವು ವರ್ಷಗಳಿಂದ ಸರ್ಕಾರದ ವಿರುದ್ಧ ಧ್ವನಿ ಎತ್ತುವುದನ್ನು ನಿಲ್ಲಿಸಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ. ಆದರೆ ಗೌರಿಯಂತಹ ಸಂಗಾತಿಗಳು ನಮಗೆ ಧ್ವನಿ ಎತ್ತಲು ಕಲಿಸಿದ್ದಾರೆ. ಈ ರೀತಿ ಧ್ವನಿ ಎತ್ತುವುದರ ಪರಿಣಾಮ ಗಂಭೀರ ಆಗಿರಬಹುದು ಎಂಬುದು ಗೌರಿ ಅವರಿಗೂ ತಿಳಿದಿತ್ತು. ಆದರೂ ಅವರು ಹಿಂದೆ ಸರಿಯಲ್ಲಿಲ್ಲ” ವಿದ್ಯಾರ್ಥಿ ನಾಯಕಿ, ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಐಶೆ ಘೋಷ್ ಹೇಳಿದರು.
ಬೆಂಗಳೂರು ನಗರದ ಸೇಂಟ್ ಜೋಸೆಫ್ ಸಭಾಂಗಣದಲ್ಲಿ ಗೌರಿ ಮೆಮೋರಿಯಲ್ ಟ್ರಸ್ಟ್ ಹಮ್ಮಿಕೊಂಡಿರುವ ‘ಗೌರಿ ದಿನ ಜೆನ್ ಝೀ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ಯಾರ್ಥಿ ನಾಯಕಿ, “ಗೌರಿ ವಿಚಾರವಾದಿ, ವೈಜ್ಞಾನಿಕವಾಗಿದ್ದವರು, ಧ್ವನಿ ಎತ್ತಲು ಜನರನ್ನು ಪ್ರೋತ್ಸಾಹಿಸಿದವರು, ಈಗ ದೇಶದಲ್ಲಿ ಇಂತಹ ವೈಚಾರಿಕೆ ವಿಚಾರಗಳಿಗೆ ಬೆದರಿಕೆಯಿದೆ. ಗೌರಿ ಅವರು ಬರೀ ಸ್ತ್ರೀವಾದಿ ಎಂದು ಹೆಸರಿಗೆ ಕರೆಸಿಕೊಂಡವರಲ್ಲ, ಅದನ್ನು ತನ್ನ ಜೀವನದಲ್ಲೂ ಪಾಲಿಸಿಕೊಂಡು ಬಂದವರು. ಗೌರಿ ಅವರು ತಮ್ಮ ತಂದೆಯ ತತ್ವಗಳನ್ನು ಮಾತ್ರವಲ್ಲ, ತಮ್ಮ ತಾಯಿಯ ತತ್ವಗಳನ್ನೂ ಪ್ರತಿಪಾದಿಸಿದವರು. ಗೌರಿ ತಮ್ಮ ಸೈದ್ದಾಂತಿಕ ತತ್ವಗಳನ್ನು ಬರೆದವರೂ ಮಾತ್ರವಲ್ಲ ಅದನ್ನು ಜೀವಿಸಿದವರು. ನಮ್ಮಂತ ಹೋರಾಟಗಾರರು ಗೌರಿ ಅವರನ್ನು ಈ ರೀತಿಯಲ್ಲಿ ಕಾಣುತ್ತೇವೆ” ಎಂದು ಹೇಳಿದರು.
ಇದನ್ನೂ ಓದಿ: ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲೇ ದೆಹಲಿ ವಿವಿ ಪ್ರಾಧ್ಯಾಪಕರಿಗೆ ಎಬಿವಿಪಿ ಸದಸ್ಯೆಯಿಂದ ಹಲ್ಲೆ
“ಗೌರಿ ಅವರು ಜನರ ಪರವಾಗಿ ಮಾತನಾಡಿದ್ದಕ್ಕೆ ಅವರ ಹತ್ಯೆ ನಡೆದಿದೆ. ಇಂದು ಗೌರಿ ದಿನವನ್ನು ಜೆನ್ ಝೀ ದಿನವನ್ನಾಗಿ ಆಚರಿಸಲಾಗುತ್ತಿದೆ. 2014ರ ಬಳಿಕ ಮಾತನಾಡುವುದೇ ಸವಾಲಾಗಿದೆ. ಇಂದು ದೇಶದಲ್ಲಿ ನೀವು ದಮನಿತರ, ಅಲ್ಪಸಂಖ್ಯಾತರ, ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದವರ ಪರವಾಗಿ ಧ್ವನಿ ಎತ್ತಿದ್ದರೆ ನಿಮ್ಮನ್ನು ಗುರಿಯಾಗಿಸಲಾಗುತ್ತಿದೆ. ಯಾವ ಸಿದ್ಧಾಂತವನ್ನು, ರಾಜಕೀಯವನ್ನು ಆಯ್ಕೆ ಮಾಡಬೇಕು ಎಂಬುದನ್ನು ಅಧಿಕಾರದಲ್ಲಿರುವವರೇ ನಮ್ಮ ಮೇಲೆ ಹೇರುವಂತಹ ಸ್ಥಿತಿ ಇಂದು ಭಾರತದಲ್ಲಿದೆ. ಜನಪರ ಧ್ವನಿ ಎತ್ತಿದವರನ್ನು ದಮನ ಮಾಡಲಾಗುತ್ತಿದೆ” ಎಂದು ತಿಳಿಸಿದರು.
“ಇಂತಹ ಸಂದರ್ಭದಲ್ಲಿ ಹಲವಾರು ಮಂದಿ ಧ್ವನಿ ಎತ್ತುವುದನ್ನು ಬಿಟ್ಟು ಮೌನವಾಗಿರುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜನರು ತಟಸ್ಥರಾಗಿರುವುದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ತಾವು ಸುರಕ್ಷಿತರಾಗಿರಬಹುದು ಎಂಬುದು ಜನರ ಕಲ್ಪನೆಯಾಗಿದೆ. ಆದರೆ ಧ್ವನಿ ಎತ್ತುವುದು ಎಷ್ಟು ಮುಖ್ಯವೆಂಬುದನ್ನು ಗೌರಿಯಂತಹ ಸಂಗಾತಿಗಳು ನಮಗೆ ಕಲಿಸಿದ್ದಾರೆ” ಎಂದರು.
“37 ದಿನಗಳ ಜೆನ್ ಝೀ ಪ್ರತಿಭಟನೆಯು ಕಳೆದ ಕೆಲವು ವರ್ಷಗಳಿಂದ ಜನರು ಶಿಕ್ಷಣ, ಉದ್ಯೋಗ, ಆರ್ಥಿಕ ಸಂಕಷ್ಟಗಳನ್ನು ನೋಡಿ ಯುವಜನರ ತಾಳ್ಮೆಯನ್ನು ಮುರಿದು ನಡೆಸಿದ ಹೋರಾಟ. ನೀಟ್ ಪ್ರಶ್ನಾ ಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳು ತೊಂದೆರೆಗೆ ಒಳಗಾಗಿದ್ದು, 12 ಮಂದಿಗೂ ಅಧಿಕ ವಿದ್ಯಾರ್ಥಿಗಳು ಬಲಿಯಾಗಿದ್ದು ಮಾತ್ರವಲ್ಲ ಕಳೆದ 12 ವರ್ಷಗಳಿಂದ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ನೋಡಬೇಕಾಗುತ್ತದೆ” ಎಂದು ಹೇಳಿದರು.
“ಆರ್‌ಎಸ್‌ಎಸ್ ಬೆಂಬಲಿತ ಬಿಜೆಪಿ ಚುನಾವಣೆ ಮೂಲಕ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಏನಾಗುತ್ತಿದೆ? ರಾಜಕೀಯದ ಹೆಸರಲ್ಲಿ ದೇಶದಲ್ಲಿ ಏನು ನಡೆಯುತ್ತಿದೆ? ವೀಕ್ಷಿತ ಭಾರತ, ಅಭಿವೃದ್ಧಿ ಹೆಸರಲ್ಲಿ ದೇಶದಲ್ಲಿ ನಡೆಯುತ್ತಿರುವುದೇನು? ಅವರ (ಬಿಜೆಪಿಗರು) ಹೊಸ ಭಾರತದ ನಿಜವಾದ ಅರ್ಥವೇನು? ಅವರ ವೀಕ್ಷಿತ ಭಾರತ, ಅಭಿವೃದ್ಧಿಯ ನಿಜವಾದ ಅರ್ಥವೇನು” ಎಂದು ಪ್ರಶ್ನಿಸಿದರು. ಹಾಗೆಯೇ, “ಇವೆಲ್ಲವುದರ ನಿಜವಾದ ಅರ್ಥ ಸಾಮಾಜಿಕ ಧ್ರುವೀಕರಣ. ಜಾತಿ, ಧರ್ಮ, ಭಾಷೆಯ ಹೆಸರಲ್ಲಿ ಧ್ರುವೀಕರಣ. ಒಟ್ಟಾಗಿ ವೈವಿಧ್ಯತೆಯನ್ನು ತೊಡೆದುಹಾಕುವುದೇ ಅವರ ಈ ಅಭಿವೃದ್ಧಿ ವೀಕ್ಷಿತ ಭಾರತ” ಎಂದರು.
“ಪ್ರಜಾಪ್ರಭುತ್ವದಲ್ಲಿ, ಸಂವಿಧಾನ ಇರುವ ನಮ್ಮ ದೇಶದಲ್ಲಿ ನಾವು ಹೆದರಿದರೆ ನಮ್ಮಲ್ಲಿರುವ ಹೋರಾಟದ ಚೈತನ್ಯ ಕಳೆಗುಂದುತ್ತದೆ. ಆದ್ದರಿಂದ ಹೆದರದೆ ನಾವು ಮುನ್ನುಗ್ಗಬೇಕು. ರಾಜಕೀಯವನ್ನು ಎಂದಿಗೂ ಆಯ್ಕೆ ಮಾಡಿಕೊಳ್ಳಬಾರದು ಎಂಬಂತಹ ಕುಟುಂಬದಿಂದ ಬಂದವಳು ನಾನು. ಆದರೆ ಗೌರಿ ಅವರಂತಹ ಸಂಗಾತಿಗಳು, ಮಹಿಳೆಯರು ಧ್ವನಿ ಎತ್ತುವುದು ಅತಿ ಮುಖ್ಯ ಎಂದು ನಮಗೆ ಕಲಿಸಿ ಕೊಟ್ಟಿದ್ದಾರೆ. ಇಂದಲ್ಲಾದಿದ್ದರೂ ಮುಂದೆ ಒಂದು ದಿನವಾದರೂ ನಾವು ಜನಪರವಾಗಿ ಎತ್ತುವ ಧ್ವನಿಯು ಪ್ರಭಾವ ಬೀರುತ್ತದೆ” ಎಂದು ಅಭಿಪ್ರಾಯಿಸಿದರು.
ಇದನ್ನೂ ಓದಿ: ಎಬಿವಿಪಿ ರ‍್ಯಾಲಿಗೆ ವಿದ್ಯಾರ್ಥಿಗಳನ್ನು ಕಳುಹಿಸುವಂತೆ ಸರ್ಕಾರ ಆದೇಶ; ತೀವ್ರ ವಿರೋಧ
“ನನ್ನ ಮಾತೃಭಾಷೆ ಬೆಂಗಾಳಿ. ನಿರೂಪಕರು ಮಾತನಾಡುವ ಭಾಷೆ ಕನ್ನಡ. ಅದು ನನಗೆ ತಿಳಿದಿಲ್ಲ. ನಾನು ಮಾತನಾಡುವ ಭಾಷೆ ನಿಮಗೆ ತಿಳಿದಿಲ್ಲ. ಆದರೆ ನಮ್ಮ ದೇಶ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ. ಇದುವೇ ನಮ್ಮ ದೇಶದ ಸೌಂದರ್ಯ. ಆದರೆ ಇಂದು ನಾವು ಯಾವ ರೀತಿ ಜೀವಿಸಬೇಕು, ಯಾವ ಬಟ್ಟೆ ಧರಿಸಬೇಕು, ಏನು ಮಾತನಾಡಬೇಕು ಎಂಬುದನ್ನು ಆದೇಶಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ” ಎಂದರು.
“ಶಿಕ್ಷಣದ ಹೆಸರಲ್ಲಿ ದೇಶದಲ್ಲಿ ಏನಾಗುತ್ತಿದೆ? ಖಾಸಗೀಕರಣವಾಗುತ್ತಿದೆ, ಸಮಾನತೆ ಇಲ್ಲದಂತಾಗಿದೆ. ಶಿಕ್ಷಣದ ಖಾಸಗೀಕರಣದಿಂದ ಆಗುವ ಸಮಸ್ಯೆಗಳನ್ನು ನಾವು ಹಲವು ವರ್ಷಗಳಿಂದ ಹೇಳುತ್ತಲೇ ಇದ್ದೇವೆ. ಖಾಸಗೀಕರಣದಿಂದಾಗಿ ಸಂಪತ್ತು ಇರುವವರು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ, ಆದರೆ ಹಣ ಇಲ್ಲದವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ” ಎಂದು ಹೇಳಿದರು.
“ಕಳೆದ ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಜಿಡಿಪಿ ಶೇ. 7.8 ಇದೆ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ನಾವು ದೇಶದಲ್ಲಿ ಯಾವ ಆರ್ಥಿಕ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದೇವೆ? ಒಂದೆಡೆ ನಾವು ಆರ್ಥಿಕ ಅಭಿವೃದ್ಧಿ ಬಗ್ಗೆ ಮಾತನಾಡುತ್ತೇವೆ, ಇನ್ನೊಂದೆಡೆ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನೇ ಮಕ್ಕಳಿಗೆ ನೀಡಲಾಗುತ್ತಿಲ್ಲ. ಫಂಡ್ ಇಲ್ಲ ಎಂದು ಬಿಸಿಯೂಟದಲ್ಲಿ ಮೊಟ್ಟೆ ನೀಡುವುದನ್ನು ನಿಲ್ಲಿಸಲಾಗಿದೆ. ಹೀಗಿರುವಾಗ ನಾವು ಯಾವ ರೀತಿಯ ಆರ್ಥಿಕ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದೇವೆ” ಎಂದು ಪ್ರಶ್ನಿಸಿದರು.
“ನಾವು ಕೆಲವೇ ಕೆಲವೇ ಕಾರ್ಪೋರೇಟ್ ದೊರೆಗಳು ಎಲ್ಲವನ್ನೂ ಕೊಂಡುಕೊಳ್ಳಬಲ್ಲ ಸಾಮರ್ಥ್ಯ ಉಲ್ಲವಳ ಆರ್ಥಿಕ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದೇವೆಯೇ ಅಥವಾ ಅತಿಯಾಗಿ ಹಿಂದುಳಿದ ಸಮುದಾಯದ ಆರ್ಥಿಕ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದೇವೆಯೇ? ಇದನ್ನು ನಾವು ಗಂಭೀರವಾಗಿ ಪ್ರಶ್ನಿಸಬೇಕಾಗಿದೆ” ಎಂದು ವಿದ್ಯಾರ್ಥಿ ನಾಯಕಿ ಐಶೆ ಘೋಷ್ ಕರೆ ನೀಡಿದರು.
“ಕೋಮುವಾದವೂ ಅತಿರೇಕಕ್ಕೆ ಏರಿದೆ. ಪಠ್ಯಪುಸ್ತಕದಲ್ಲಿ ಇತಿಹಾಸವನ್ನೇ ತಿರುಚಲಾಗುತ್ತಿದೆ. ಅಧಿಕಾರದಲ್ಲಿರುವವರು ತಮ್ಮ ಅಜೆಂಡಾಕ್ಕಾಗಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಇಂದು ಪತ್ರಿಕೋದ್ಯಮವು ನಿಜವಾದ ಬಿಕ್ಕಟ್ಟಿನಲ್ಲಿದೆ. ಪತ್ರಿಕೋದ್ಯಮ ಬರೀ ಉದ್ಯೋಗವಲ್ಲ ಎಂಬುದನ್ನು ತೋರಿಸಿಕೊಟ್ಟವರು ಗೌರಿ. ಅವರಿಂದ ಇಂದಿನ ಪತ್ರಕರ್ತರು ಕಲಿಯಬೇಕಾಗಿದೆ” ಎಂದು ಅಭಿಪ್ರಾಯಿಸಿದರು.





