ಅಲ್ ಅಹ್ಮದೀಯ ಎ ಒನ್ ಹುಮನ್ ರೈಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನಗರದ ಉಸ್ಮಾನ್ ನಗರದ ಸುಲ್ತಾನ್ ತಿಪ್ಪಸಂದ್ರದಲ್ಲಿ 10 ಬಡ ಜೋಡಿಗಳಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿವಾಹವಾದ ಜೋಡಿಗಳಿಗೆ ಜೀವನಕ್ಕೆ ಅಗತ್ಯವಾದ ಗೃಹೋಪಯೋಗಿ ವಸ್ತುಗಳನ್ನು ವಿತರಿಸುವ ಮೂಲಕ ನವಜೀವನಕ್ಕೆ ಶುಭ ಹಾರೈಸಲಾಯಿತು.
ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ. ಶಾಹೀದ್ ತೆಕ್ಕಿಲ್ ಮಾತನಾಡಿ, ರಿಜ್ವಾನ್ ಅವರ ನೇತೃತ್ವದ ಟ್ರಸ್ಟ್ ಬಡ ಕುಟುಂಬಗಳ ನೆರವಿಗೆ ನಿಂತು ಪ್ರತಿವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ. ಇದರೊಂದಿಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಮುಂದೆಯೂ ಟ್ರಸ್ಟ್‌ನ ಸಮಾಜ ಸೇವಾ ಕಾರ್ಯಗಳಿಗೆ ನಮ್ಮ ಸಹಕಾರ ಇರಲಿದೆ ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಸಲಾವುದ್ದೀನ್ ಬಾಬು ಮಾತನಾಡಿ, 10 ಬಡ ಜೋಡಿಗಳಿಗೆ ಸಾಮೂಹಿಕ ವಿವಾಹ ನೆರವೇರಿಸುವ ಮೂಲಕ 10 ಕುಟುಂಬಗಳಿಗೆ ಅನುಕೂಲ ಕಲ್ಪಿಸಿರುವುದು ಉತ್ತಮ ಸಮಾಜಮುಖಿ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಟ್ರಸ್ಟ್ ಅಧ್ಯಕ್ಷ ರಿಜ್ವಾನ್ ಮಾತನಾಡಿ, ಬಡ ಕುಟುಂಬಗಳಿಗೆ ಮದುವೆ ಮಾಡಿಸುವುದು ಆರ್ಥಿಕವಾಗಿ ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ಪ್ರತಿವರ್ಷ ಹಲವಾರು ಬಡ ಜೋಡಿಗಳ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗುತ್ತಿದೆ. ಇದರ ಜೊತೆಗೆ ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಈ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಇದನ್ನು ಓದಿದ್ದೀರಾ..?ಕೋಲಾರ |ಜಿಲ್ಲಾಡಳಿತದಿಂದ ಶಿಷ್ಟಾಚಾರ ಉಲ್ಲಂಘನೆ ವಿರುದ್ಧ ಸಂಸದ ಮಲ್ಲೇಶ್ ಬಾಬು ಕಾರ್ಯಕ್ರಮ ಬಹಿಷ್ಕಾರ
ಕಾರ್ಯಕ್ರಮದಲ್ಲಿ ಸೀಪುರ್ ಅಕ್ರಂ, ಶಾಂತಕುಮಾರಿ, ಕಾಂಗ್ರೆಸ್ ಮುಖಂಡರಾದ ರಫೀ ಪಾಷ, ಅಡ್ವೊಕೇಟ್ ದಿವಾಕರ್, ಸಮೀರ್, ಇಮ್ರಾನ್, ತಬ್ರೇಜ್, ರಸೂಲ್ ಸಾಬ್, ಆರೀಫ್, ಮೊಹನುದ್ದೀನ್, ನವಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





