ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ಮಹೇಶ್ ಜೋಶಿ ಅವರಿಗೆ ಬಿಜೆಪಿ ಸರ್ಕಾರ ನೀಡಿದ್ದ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನು ಸರ್ಕಾರ ವಾಪಸ್ ಪಡೆದು ಆದೇಶ ಹೊರಡಿಸಿದೆ. ಮೇ 31 ಸಂಜೆ ಈ ಆದೇಶ ಹೊರಬಿದ್ದಿದೆ.
ಡಾ ಮಹೇಶ್ ಜೋಶಿ ಅವರು ಅಧ್ಯಕ್ಷರಾಗಿ ಆಯ್ಕೆಯಾದ ನಂತರ, 2022ರಲ್ಲಿ ಬೊಮ್ಮಾಯಿ ಸರ್ಕಾರ ಮೊದಲ ಬಾರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿತ್ತು. ಅಂತಹ ಸೌಲಭ್ಯ ಹಿಂದಿನ ಕಸಾಪ ಅಧ್ಯಕ್ಷರಾರೂ ಪಡೆದಿರಲಿಲ್ಲ. ಜೋಶಿ ಅವರು ಅಧ್ಯಕ್ಷರಾದ ನಂತರ ಎರಡು ಬಾರಿ ಕಸಾಪದ ಬೈಲಾ ತಿದ್ದುಪಡಿ ಮಾಡಿ ಕಸಾಪದ ಸದಸ್ಯರು ಮತ್ತು ಸಾಹಿತಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು. ಈ ಬಾರಿ ಮೂರನೇ ತಿದ್ದುಪಡಿಗೆ ಹೊರಟ ಜೋಶಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಜೋಶಿ ಅವರು ಜಿಲ್ಲಾ ಅಧ್ಯಕ್ಷರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ತಾಲ್ಲೂಕು ಸಮ್ಮೇಳನಗಳಿಗೆ ಸರ್ಕಾರ ಅನುದಾನ ನೀಡಿದರೂ ಅಧ್ಯಕ್ಷರು ಅದನ್ನು ನೀಡುತ್ತಿಲ್ಲ. ಪದೇ ಪದೇ ಬೈಲಾ ತಿದ್ದುಪಡಿ ಮಾಡಿ ಅಧಿಕಾರ ಕೇಂದ್ರೀಕರಣ ಮಾಡಲು ಹೊರಟಿದ್ದಾರೆ. ಅವರ ನಿಲುವನ್ನು ವಿರೋಧಿಸುವ ಜಿಲ್ಲಾಧ್ಯಕ್ಷರಿಗೆ ಸಭೆಯಲ್ಲಿ ಮಾತನಾಡದಂತೆ ನಿರ್ದೇಶನ ನೀಡುತ್ತಾರೆ. ಅವರ ಮಾತುಗಳನ್ನು ದಾಖಲಿಸುತ್ತಿಲ್ಲ. ಸಭೆಗೆ ಅಡ್ಡಿಪಡಿಸುತ್ತಾರೆ ಎಂದು ಆರೋಪಿಸುತ್ತಾರೆ ಎಂದು ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಮಂಜುನಾಥ್ ಮತ್ತು ಬೆಂಗಳೂರು ನಗರ ಕಸಾಪ ಅಧ್ಯಕ್ಷ ಪ್ರಕಾಶ್ ಮೂರ್ತಿ ಇತ್ತೀಚೆಗೆ ʼಈ ದಿನʼದ ಜೊತೆಗೆ ಮಾತನಾಡುತ್ತ ಅಸಮಾಧಾನ ಹೊರ ಹಾಕಿದ್ದರು.
ಮಂಡ್ಯದಲ್ಲಿ ಕಳೆದ ಡಿಸೆಂಬರ್‌ನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಂತರ ಜೋಶಿ ಅವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿತ್ತು. ಮಂಡ್ಯ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚದ ವಿಚಾರದಲ್ಲೂ ಜೋಶಿಯವರು ಪಾರದರ್ಶಕವಾಗಿ ನಡೆದುಕೊಂಡಿಲ್ಲ ಎಂದು ಮಂಡ್ಯದ ಸಮಾನ ಮನಸ್ಕರು ಅಸಮಾಧಾನ ಹೊರ ಹಾಕಿದ್ದರು. ಸಾಹಿತ್ಯ ಸಮ್ಮೇಳನ ನಡೆದ ನಂತರ ಮಂಡ್ಯಕ್ಕೆ ಜೋಶಿ ಅವರು ಕಾಲಿಟ್ಟಿಲ್ಲ. ʼಬೆಲ್ಲದಾರತಿʼ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲು ಎರಡು ವಾರಗಳ ಹಿಂದೆ ಮಂಡ್ಯಕ್ಕೆ ಹೊರಟಿದ್ದ ಜೋಶಿ ಅವರಿಗೆ ಪ್ರತಿಭಟನೆಯ ಸೂಚನೆ ಸಿಕ್ಕಿದ ನಂತರ ಕಾರ್ಯಕ್ರಮ ಮೊಟಕುಗೊಳಿದ್ದರು.
ಬೆಂಗಳೂರಿನಲ್ಲಿ ಸಭೆ ಸೇರಿದ್ದ ಸಮಾನ ಮನಸ್ಕರು ಕಸಾಪ ಉಳಿಸಿ ಅಭಿಯಾನ ನಡೆಸುವ ತೀರ್ಮಾನ ತೆಗೆದುಕೊಂಡಿದ್ದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಹಿರಿಯ ಸಾಹಿತಿ ಡಾ ಹಂಪ ನಾಗರಾಜಯ್ಯ ಅವರಿದ್ದ ನಿಯೋಗ ಕಸಾಪ ಅಧ್ಯಕ್ಷರನ್ನು ಕೆಳಗಿಳಿಸಿ, ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ಮನವಿ ಮಾಡಿದ್ದರು. ಅಷ್ಟೇ ಅಲ್ಲ ಬಿಜೆಪಿ ನೀಡಿದ್ದ ಸಂಪುಟ ದರ್ಜೆ ಸವಲತ್ತನ್ನು ವಾಪಸ್ ಪಡೆಯಬೇಕು ಎಂದು ಕೋರಿದ್ದರು. ಮಂಡ್ಯದಲ್ಲಿ ಪ್ರೊ ಜಯಪ್ರಕಾಶ್ ಗೌಡ ನೇತೃತ್ವದಲ್ಲಿ ಮೇ 17ರಂದು ಜಾಗೃತಿ ಸಮಾವೇಶ ನಡೆಸಲಾಗಿತ್ತು. “ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಕೇಂದ್ರ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರಿಗೆ ರಾಜ್ಯ ಸರ್ಕಾರ ನೀಡಿರುವ ಸಚಿವ ಸ್ಥಾನಮಾನವನ್ನು ಹಿಂಪಡೆದು, ಹುದ್ದೆಯಿಂದ ವಜಾಗೊಳಿಸಬೇಕು. ಅಲ್ಲದೇ ಆತ ಬೈಲಾಗೆ ತಂದಿರುವ ತಿದ್ದುಪಡಿಗಳನ್ನು ರದ್ದು ಮಾಡಬೇಕು” ಎಂದು ನಿರ್ಣಯ ಅಂಗೀಕರಿಸಲಾಗಿತ್ತು.
ಈ ಮಧ್ಯೆ ಕೋರ್ಟ್ ಮೆಟ್ಟಿಲೇರಿದ ಜೋಶಿ ಅವರು ತಮ್ಮ ಜೀವಕ್ಕೆ ಅಪಾಯವಿದೆ. ಪೊಲೀಸ್ ಭದ್ರತೆ ವಹಿಸಬೇಕು ಎಂದು ಮನವಿ ಮಾಡಿದ್ದರು. ಅಧ್ಯಕ್ಷರಿಗೆ ಸೂಕ್ತ ಭದ್ರತೆ ಕೊಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇದೀಗ ಸರ್ಕಾರ ಸಂಪುಟ ದರ್ಜೆಯ ಸ್ಥಾನಮಾನ ವಾಪಸ್ ಪಡೆದಿದೆ.
