ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಐವರು ಸದಸ್ಯರನ್ನು ಮುಂದಿನ ಮೂರು ವರ್ಷದ ಅವಧಿಗೆ ನೇಮಿಸಿ ಶುಕ್ರವಾರ ಸರ್ಕಾರ ಆದೇಶ ಹೊರಡಿಸಿದೆ.
ಮೈಸೂರಿನ ಶಿವಣ್ಣಗೌಡ, ಧಾರವಾಡದ ಡಾ.ಸಿ.ಎಂ.ಕುಂದಗೋಳ, ಕಲಬುರ್ಗಿಯ ಚಂದ್ರಪ್ಪ, ರಾಮನಗರದ ಡಾ.ಜಿ.ಎನ್.ಶ್ರೀಕಂಠಯ್ಯ, ದಕ್ಷಿಣ ಕನ್ನಡದ ಪ್ರತಿಭಾ ಕುಲಾಯಿ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಜಯಪ್ರಕಾಶ್ ಹೆಗ್ಡೆ ಅವರ ಅವಧಿ ಮುಗಿದ ನಂತರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸ್ಥಾನ ಖಾಲಿಯಾಗಿತ್ತು. ಬಳಿಕ ಕಳೆದ ಜನವರಿಯಲ್ಲಿ ಹಿರಿಯ ವಕೀಲ ಮತ್ತು ಮಾಜಿ ಅಡ್ವೊಕೇಟ್ ಜನರಲ್ ಮಧುಸೂದನ್ ನಾಯಕ್ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ಮುಂದಿನ ಮೂರು ವರ್ಷಕ್ಕೆ ನೇಮಕ ಮಾಡಲಾಗಿದೆ. ಆದರೆ, ಆಯೋಗದ ಸದಸ್ಯರ ನೇಮಕ ವಿಳಂಬವಾಗಿತ್ತು. ಇದೀಗ ರಾಜ್ಯ ಸರ್ಕಾರ ಐದು ಮಂದಿ ಸದಸ್ಯರನ್ನು ನೇಮಿಸಿದೆ.
ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದ್ದ ಈ ಹಿಂದಿನ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಕಾಂಗ್ರೆಸ್ ಸರ್ಕಾರ ಕೈ ಬಿಟ್ಟಿದೆ. ಹಿಂದುಳಿದ ವರ್ಗಗಳ ಜಾತಿ ಮರು ಸಮೀಕ್ಷೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಈ ಹಿನ್ನೆಲೆ ಹೊಸದಾಗಿ ಮರು ಸಮೀಕ್ಷೆ ಮಾಡಲು ತೀರ್ಮಾನಿಸಲಾಗಿದೆ.
90 ದಿನಗಳಲ್ಲಿ ಮರುಸಮೀಕ್ಷೆ ಕಾರ್ಯ ಮುಗಿಯಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಎಲ್ಲ ಸದಸ್ಯರನ್ನು ನೇಮಕವನ್ನು ಸರ್ಕಾರ ಮಾಡಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಬಗ್ಗೆ…
ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ಅಧ್ಯಯನ ಮಾಡುವ ಒಂದು ಸಂಸ್ಥೆಯಾಗಿದೆ. ಈ ಆಯೋಗವನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯಿದೆ, 1995 ರ ಅಡಿಯಲ್ಲಿ ಸ್ಥಾಪಿಸಲಾಗಿದೆ.
ಆಯೋಗದ ಮುಖ್ಯ ಕಾರ್ಯಗಳು
- ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳನ್ನು ತನಿಖೆ ಮಾಡುವುದು.
- ಅವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಧ್ಯಯನ ಮಾಡುವುದು ಮತ್ತು ಶಿಫಾರಸುಗಳನ್ನು ನೀಡುವುದು.
- ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ರೂಪಿಸಲಾದ ಯೋಜನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವುದು.
- ಸರ್ಕಾರಕ್ಕೆ ಸಲಹೆ ಮತ್ತು ಮಾರ್ಗದರ್ಶನ ನೀಡುವುದು.