ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಸುಗ್ರೀವಾಜ್ಞೆ ಸೇರಿದಂತೆ ಮಂಗಳವಾರ ಒಂದೇ ದಿನದಲ್ಲಿ ಮೂರು ಸುಗ್ರೀವಾಜ್ಞೆಗಳಿಗೆ ಅಸ್ತು ಎಂದಿದ್ದಾರೆ.
ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಸುಗ್ರೀವಾಜ್ಞೆ, ಸಿವಿಲ್ ಸೇವೆಗಳ ತಿದ್ದುಪಡಿ ಸುಗ್ರೀವಾಜ್ಞೆ, ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ(ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ. ಈ ಬೆನ್ನಲ್ಲೇ ಈ ಕಾಯ್ದೆಗಳ ಜಾರಿಗೆ ಸರ್ಕಾರ ರಾಜ್ಯಪತ್ರ ಹೊರಡಿಸಿದೆ.
ಇದನ್ನು ಓದಿದ್ದೀರಾ? ಬಜೆಟ್ 2025 | ಗಿಗ್ ಕಾರ್ಮಿಕರಿಗೆ ಗುರುತಿನ ಚೀಟಿ, ಆರೋಗ್ಯ ವಿಮೆ
ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಇ-ಕಾಮರ್ಸ್ ಹಾಗೂ ಫುಡ್ ಡೆಲಿವರಿ ಕಂಪನಿಗಳಲ್ಲಿ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುವವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ರಾಜ್ಯದಲ್ಲಿ ಲಕ್ಷಾಂತರ ಮಂದಿ ಗಿಗ್ ಕಾರ್ಮಿಕರಿದ್ದಾರೆ. ಆದರೆ ಅವರಿಗೆ ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲ. ಅಪಘಾತವಾದರೆ ವಿಮೆಗಳಿಲ್ಲ. ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಕರ್ನಾಟಕ ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ(ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ) ವಿಧೇಯಕ ಜಾರಿಗೊಳಿಸಲಾಗುತ್ತಿದೆ. ಹಂತ ಹಂತವಾಗಿ ಹಲವು ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಲಾಗಿದೆ.
ಕಡ್ಡಾಯ ಸೇವಾ ತಿದ್ದುಪಡಿ ಕಾಯ್ದೆ
ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ(ತಿದ್ದುಪಡಿ) ಆದೇಶಕ್ಕೆ ರಾಜ್ಯಪಾಲರ ಅಂಕಿತ ದೊರೆತ ಬಳಿಕ ಮೇ 27ರಿಂದ ಜಾರಿಗೊಳಿಸಲಾಗಿದೆ. ಎಂಬಿಬಿಎಸ್ ಪದವೀಧರರನ್ನು ಮೊದಲು ಗ್ರಾಮೀಣ ಹುದ್ದೆಗಳಿಗೆ ನೇಮಿಸಿ ಎಲ್ಲಾ ಹುದ್ದೆಗಳು ಭರ್ತಿಯಾದ ಬಳಿಕ ನಗರ ಪ್ರದೇಶಗಳಲ್ಲಿನ ಹುದ್ದೆಗಳಿಗೆ ನೇಮಿಸಲು ಕಡ್ಡಾಯ ಸೇವಾ(ತಿದ್ದುಪಡಿ) ಸುಗ್ರೀವಾಜ್ಞೆ ಅವಕಾಶ ನೀಡುತ್ತದೆ. ಹಾಗೆಯೇ ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಆದ್ಯತೆಯಲ್ಲಿ ಭರ್ತಿ ಮಾಡಲು, ಉಳಿದ ಖಾಲಿ ಹುದ್ದೆಗಳಿಗೆ ಸಾಂಸ್ಥಿಕ ಕೋಟಾದಡಿ ಓದಿದ ವಿದ್ಯಾರ್ಥಿಗಳನ್ನು ತುಂಬಲು, ಉಳಿದ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಕಡ್ಡಾಯ ಸೇವೆಯಿಂದ ವಿನಾಯಿತಿ ನೀಡಲು ಕೂಡಾ ಈ ಸುಗ್ರೀವಾಜ್ಞೆ ಅವಕಾಶ ನೀಡುತ್ತದೆ.
ರಾಜ್ಯ ಸಿವಿಲ್ ಸೇವೆಗಳ ತಿದ್ದುಪಡಿ ಕಾಯ್ದೆ
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ)ತಿದ್ದುಪಡಿ ಸುಗ್ರೀವಾಜ್ಞೆಯೂ ಮೇ 27ರಿಂದಲೇ ಜಾರಿಯಾಗಿದೆ. ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ, ನೇಮಕಾತಿ ಅಥವಾ ಮುಬಂಡ್ತಿಯನ್ನು ಕೌನ್ಸಿಲಿಂಗ್ ಮೂಲಕ ನಡೆಸಬೇಕು ಎಂದು ಈ ತಿದ್ದುಪಡಿ ಕಾಯ್ದೆ ಹೇಳುತ್ತದೆ. ವೈದ್ಯಾಧಿಕಾರಿ ಮತ್ತು ಇತರ ಸಿಬ್ಬಂದಿಯ ಶೇಕಡ 15ರಷ್ಟು ವರ್ಗಾವಣೆ ಹಾಗೂ ಮಹತ್ವದ ಖಾಲಿ ಹುದ್ದೆಗಳಿಗೆ ರಾಜ್ಯ ಸರ್ಕಾರವು ಕೌನ್ಸಿಲಿಂಗ್ ಇಲ್ಲದೆಯೂ ನಿಯೋಜಿಸಲು ಈ ಸುಗ್ರೀವಾಜ್ಞೆಯ ಮೂಲಕ ಅವಕಾಶ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಿಗದಿಪಡಿಸಿದಷ್ಟು ಕರ್ತವ್ಯವನ್ನು ಸಲ್ಲಿಸದ ವೈದ್ಯಾಧಿಕಾರಿ ಅಥವಾ ಸಿಬ್ಬಂದಿಯನ್ನು ಗ್ರಾಮೀಣ ಪ್ರದೇಶಗಳಲ್ಲಿರುವ ಹುದ್ದೆಗೇ ವರ್ಗಾವಣೆ ಮಾಡಬೇಕು.
