- ಸಿಎಂ ಸಿದ್ದರಾಮಯ್ಯ ಬಳಿಯಿರುವ ಆಡಳಿತ ಸುಧಾರಣೆ ಇಲಾಖೆಯಿಂದ ನಿರ್ದೇಶನ
- ಹೆಚ್ಚು ಬಾರಿ ಅರ್ಜಿ ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಒದಗಿಸಲು ಸೂಚನೆ
ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ಅರ್ಜಿ ಸಲ್ಲಿಸುವ ಕಾರ್ಯಕರ್ತರ ಮಾಹಿತಿ ಕಲೆ ಹಾಕಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆಯಾ? ಎನ್ನುವ ಅನುಮಾನ ಸರ್ಕಾರದ ನಡೆಯಿಂದಲೇ ವ್ಯಕ್ತವಾಗಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯೂ ಸೇರಿದಂತೆ ಇಲಾಖೆಗಳು, ಸಚಿವಾಲಯಗಳಿಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ಹೆಚ್ಚು ಬಾರಿ ಅರ್ಜಿ ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಒದಗಿಸಬೇಕು ಎಂದು ಸರ್ಕಾರದ ಎಲ್ಲ ಅಪರ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಸರ್ಕಾರದ ಕಾರ್ಯದರ್ಶಿಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ವೈ ಆರ್ ಜಾನಕಿ ಅವರು ನಿರ್ದೇಶನ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ಮಾಹಿತಿ ಆಯುಕ್ತರು 2023 ಏಪ್ರಿಲ್ 10ರಂದು ಆದೇಶ ನೀಡಿದ್ದು, “ರಾಜ್ಯದ ಎಲ್ಲ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳು ತ್ರೈಮಾಸಿಕ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್ಟಿಐ ಅಡಿ ಅರ್ಜಿಗಳನ್ನು ಸಲ್ಲಿಸುವಂತಹ ಅರ್ಜಿದಾರರ ಪಟ್ಟಿ ಒದಗಿಸುವಂತೆ ನಿರ್ದೇಶಿಸಿದ್ದಾರೆ. ಆದ್ದರಿಂದ ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಇಲಾಖೆ, ನಿಗಮ ಮಂಡಳಿಗಳಿಂದ ಸದರಿ ಮಾಹಿತಿಯನ್ನು ಪಡೆದು, ಕ್ರೋಡೀಕೃತ ಮಾಹಿತಿಯನ್ನು ಸೆ.20ರೊಳಗೆ ಕಳುಹಿಸುವಂತೆ” ಆಡಳಿತ ಸುಧಾರಣಾ ಇಲಾಖೆಯು ಸರ್ಕಾರದ ಎಲ್ಲ ಅಪರ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಸರ್ಕಾರದ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದೆ.
ಕಲ್ಬುರ್ಗಿ ಪೀಠದ ಮಾಹಿತಿ ಆಯುಕ್ತರು 2023ರ ಏಪ್ರಿಲ್ನಲ್ಲೇ ಪತ್ರ ಬರೆದಿತ್ತಾದರೂ ಹಿಂದಿನ ಬಿಜೆಪಿ ಸರ್ಕಾರವು ಯಾವುದೇ ಕ್ರಮವಹಿಸಿರಲಿಲ್ಲ. ಆದರೀಗ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನೂರು ದಿನ ಪೂರೈಸಿದ ಬೆನ್ನಲ್ಲೇ ಅರ್ಜಿದಾರರ ಪಟ್ಟಿಯನ್ನು ಕ್ರೋಡೀಕರಿಸಲು ಆದೇಶಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಭಾಯಿಸುತ್ತಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇನ್ನಷ್ಟು ಮದ್ಯದಂಗಡಿಗಳ ಸಿದ್ದು ಕ್ರಮ ಸಮಾಜಘಾತಕ- ಕೈಬಿಡುತ್ತೇವೆಂದು ಆರನೆಯ ‘ಗ್ಯಾರಂಟಿ’ ನೀಡಲಿ
ವಾಣಿಜ್ಯ ತೆರಿಗೆ ಆಯುಕ್ತರು, ಅಬಕಾರಿ ಆಯುಕ್ತರು, ಖಜಾನೆ ಆಯುಕ್ತರು, ಪಿಂಚಣಿ, ಸಣ್ಣ ಉಳಿತಾಯ, ವಿಮಾ ಇಲಾಖೆ, ಲೆಕ್ಕಪತ್ರ ಇಲಾಖೆ, ಕೆಎಸ್ಎಫ್ಸಿ, ಪಾನೀಯ ನಿಗಮ, ಬಿಎಂಟಿಸಿ, ವಿತ್ತೀಯ ಕಾರ್ಯನೀತಿ ಸಂಸ್ಥೆಗೆ ಲಿಖಿತವಾಗಿ ಮಾಹಿತಿ ಕಳುಹಿಸಲು ನಿರ್ದೇಶನ ನೀಡಲಾಗಿದೆ ಎಂದು ‘ದಿ ಫೈಲ್’ ವರದಿ ಮಾಡಿದೆ.
ಮಾಹಿತಿ ಹಕ್ಕು ಕಾರ್ಯಕರ್ತರು ಈಗಾಗಲೇ ಸಾಕಷ್ಟು ಜೀವ ಬೆದರಿಕೆ ಎದುರಿಸುತ್ತಿದ್ದಾರೆ. ಕೆಲವೊಮ್ಮೆ ಆರ್ಟಿಐ ಕಾರ್ಯಕರ್ತರ ಕೊಲೆಗಳು ನಡೆದಿವೆ. ಹಲವರ ಮೇಲೆ ಹಲ್ಲೆಗಳಾಗಿವೆ. ಇಂತಹ ಆತಂಕದ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಕಲೆ ಹಾಕಲು ಮುಂದಾಗಿರುವುದು ಮತ್ತಷ್ಟು ಅನುಮಾನವನ್ನು ಹೆಪ್ಪುಗಟ್ಟುವಂತೆ ಮಾಡಿದೆ.
ಏನಿದು ಮಾಹಿತಿ ಹಕ್ಕು ಕಾಯ್ದೆ?
ಮಾಹಿತಿ ಹಕ್ಕು ಕಾಯ್ದೆಯನ್ನು ಸಂಸತ್ತು 2005ರಲ್ಲಿ ಅಂಗೀಕರಿಸಿತು. ಇದರಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಗೂ ಸರ್ಕಾರಿ ಸಂಸ್ಥೆಗಳಿಂದ ಮಾಹಿತಿ ಪಡೆಯುವ ಹಕ್ಕನ್ನು ನೀಡಲಾಯಿತು. ಈ ಕಾನೂನಿನ ಅಡಿಯಲ್ಲಿ, ಸರ್ಕಾರಿ ಕಚೇರಿಗಳು, ಇಲಾಖೆಗಳು, ಸಚಿವಾಲಯಗಳು ಮತ್ತು ಸರ್ಕಾರಿ ಸಂಸ್ಥೆಗಳಿಂದ ಮಾಹಿತಿಯನ್ನು ಪಡೆಯುವ ಹಕ್ಕನ್ನು ಸಾರ್ವಜನಿಕರು ಹೊಂದಿರುತ್ತಾರೆ.
ಮಾಹಿತಿ ಹಕ್ಕು ಕಾಯ್ದೆಯ ಮೂಲ ಉದ್ದೇಶವು ಸರ್ಕಾರದ ಇಲಾಖೆಗಳ ವ್ಯವಹಾರಗಳ ಬಗ್ಗೆ ಮಾಹಿತಿ ತಿಳಿಯುವ ಅಧಿಕಾರವನ್ನು ಜನರಿಗೆ ನೀಡುವುದಾಗಿದೆ. ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸುವುದು, ಭ್ರಷ್ಟಾಚಾರವನ್ನು ನಿಯಂತ್ರಿಸುವುದು ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ನಿಜವಾದ ಅರ್ಥದಲ್ಲಿ ಜನರಿಗಾಗಿ ಕೆಲಸ ಮಾಡುವಂತೆ ಮಾಡುವ ಉದ್ದೇಶದೊಂದಿಗೆ ಈ ಕಾಯ್ದೆ ಜಾರಿಗೆ ತರಲಾಗಿದೆ.
ಆರ್ಟಿಐ ಅರ್ಜಿದಾರರ ಗೌಪ್ಯತೆ
ಸಾಮಾಜಿಕ ಕಾರ್ಯಕರ್ತ ಹಾಗೂ ರಾಜ್ಯಸಭೆ ಹಾಲಿ ಸದಸ್ಯ ಸಾಕೇತ್ ಎಸ್. ಗೋಖಲೆ ಅವರ ಪ್ರಕರಣದಲ್ಲಿ ಆರ್ಟಿಐ ಅರ್ಜಿದಾರರ ವೈಯಕ್ತಿಕ ವಿವರಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆ ಬಗ್ಗೆ ನ್ಯಾಯಾಧೀಶರು ವಿವರಿಸಿದ್ದು, “ಆರ್ಟಿಐ ಅರ್ಜಿದಾರರ ವೈಯಕ್ತಿಕ ವಿವರಗಳನ್ನು ಅಪ್ಲೋಡ್ ಮಾಡುವುದು ಅನಗತ್ಯ ಮಾತ್ರವಲ್ಲದೆ ಕೆಲವು ಅರ್ಜಿದಾರರನ್ನು ಕಡಕು ಅಂಶಗಳಿಗೆ ಗುರಿಯಾಗುವಂತೆ ಮಾಡುತ್ತದೆ. ಅಲ್ಲದೇ ಅರ್ಜಿದಾರರ ಗೌಪ್ಯತೆಯ ವೈಯಕ್ತಿಕ ಉಲ್ಲಂಘನೆ ಮಾತ್ರವಲ್ಲದೆ ಅದು ಅಪಾಯದ ಸಂಭಾವ್ಯ ಸಾಧ್ಯತೆಗಿಂತ ಹೆಚ್ಚಿನದು” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಅರ್ಜಿದಾರರು ತಮ್ಮ ವೈಯಕ್ತಿಕ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕಾದ ಸ್ಥಿತಿ ಬಂದಲ್ಲಿ ಭಯದಿಂದ ಅರ್ಜಿಗಳನ್ನು ಸಲ್ಲಿಸುವುದನ್ನು ತಡೆದಂತಾಗುತ್ತದೆ. ಮುಂದುವರಿದು, ಕಾಯಿದೆಯ ಉದ್ದೇಶವು ವಿಫಲಗೊಳ್ಳಲು ಕಾರಣವಾಗಲಿದೆ” ಎಂದು ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನೆಯಬಹುದು.
ಈ ಸುದ್ದಿ ನಿಜವಾಗಿದ್ದಲ್ಲಿ, ಇದು ಕಂಡನಾರ್ಹ. ಬಿ.ಜೆ.ಪಿ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಗೆಡವುತ್ತಿದೆ. ಅಧಿಕಾರಕ್ಕೆ ಬಂದಮೇಲೆ ಕಾಂಗ್ರೆಸ್ ಸಹ ಬಿ.ಜೆ.ಪಿ.ಯ ಹಾದಿಯನ್ನೇ ಹಿಡಿಯುವುದು ಅಕ್ಷಮ್ಯ.