ಸಶಸ್ತ್ರ ಹೋರಾಟವನ್ನು ತ್ಯಜಿಸಿ ಮುಖ್ಯವಾಹಿನಿ ಬರಲು ಮತ್ತು ಪ್ರಜಾತಾಂತ್ರಿಕ ಹೋರಾಟದಲ್ಲಿ ತೊಡಗಿಸಿಕೊಳ್ಳಲು ನಕ್ಸಲ್ ಹೋರಾಟಗಾರರು ನಿರ್ಧಾರಿಸಿದ್ದಾರೆ. ಶಾಂತಿಗಾಗಿ ನಾಗರಿಕ ವೇದಿಕೆಯೊಂದಿಗೆ ಚರ್ಚೆ ನಡೆಸಿರುವ ನಕ್ಸಲ್ ಹೋರಾಟಗಾರರು, ಸರ್ಕಾರದ ಕರೆಯನ್ನು ಒಪ್ಪಿಕೊಂಡಿದ್ದಾರೆ.
ಶಾಂತಿಗಾಗಿ ನಾಗರಿಕ ವೇದಿಕೆಯ ಮುಖಂಡರು ಮತ್ತು ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾವೋವಾದಿ ಹೋರಾಟಗಾರರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ತಮ್ಮ ಶರತ್ತುಗಳನ್ನು ಸರ್ಕಾರದ ಮುಂದಿರುವ ನಕ್ಸಲ್ ಹೋರಾಟಗಾರರು ಮುಖ್ಯವಾಹಿನಿ ಬರಲು ಸಮ್ಮತಿ ಸೂಚಿಸಿದ್ದಾರೆ.

ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಮಾಹಿತಿ ನೀಡಿದ್ದಾರೆ. “ಚಿಕ್ಕಮಗಳೂರಿನ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡದ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ ಮತ್ತು ಆಂದ್ರಪ್ರದೇಶದ ಮಾರೆಪ್ಪ ಅರೋಲಿ ಅವರು ಸರ್ಕಾರದ ಮುಂದೆ ಶರಣಾಗುವುದಾಗಿ ಒಪ್ಪಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
“ಆರು ಮಂದಿ ನಕ್ಸಲ್ ಹೋರಾಟಗಾರರು ಬುಧವಾರ ಸರ್ಕಾರದ ಎದುರು ಶರಣಾಗಲಿದ್ದಾರೆ. ಅವರಿಗೆ ಸರ್ಕಾರವು ಶರಣಾಗತಿ ಮತ್ತು ಪುನರ್ವಸತಿಯ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಸೌಲಭ್ಯಗಳನ್ನು ಒದಗಿಸಲಿದೆ” ಎಂದು ಸರ್ಕಾರ ತಿಳಿಸಿದೆ.