“ಖ್ಯಾತ ಪತ್ರಕರ್ತ, ಬಹುಮುಖಿ ಬರಹಗಾರ ಪಿ.ಲಂಕೇಶ್ ಅವರಂತೆ ಲೋಕದ ವೈವಿಧ್ಯಗಳನ್ನು ತೆರೆದಿಡುವ ಪ್ರಯತ್ನಗಳನ್ನು ಬರಹಗಾರ ಹರೀಶ್ ಗಂಗಾಧರ್ ಮಾಡುತ್ತಿದ್ದಾರೆ” ಎಂಬ ಶ್ಲಾಘನೆ ’ಗುರುತಿನ ಬಾಣಗಳು’ ಕೃತಿ ಬಿಡುಗಡೆಯ ವೇಳೆ ವ್ಯಕ್ತವಾಯಿತು.
ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನ ಎಚ್.ನರಸಿಂಹಯ್ಯ ಸಭಾಂಗಣದಲ್ಲಿ ಶನಿವಾರ ಸಂಕಥನ ಪ್ರಕಾಶನ ವತಿಯಿಂದ ಬಿಡುಗಡೆಯಾದ ’ಗುರುತಿನ ಬಾಣಗಳು’ ಕೃತಿಯ ಕುರಿತು ಪ್ರಸಂಸೆಯ ಮಹಾಪೂರವೇ ಹರಿದು ಬಂದಿತು.
ಸಾಮಾಜಿಕ ಮಾಧ್ಯಮವಾದ ಫೇಸ್‌ಬುಕ್‌ನಲ್ಲಿ ಬರಹಗಳನ್ನು ಪ್ರಕಟಿಸುತ್ತಾ ಗಮನ ಸೆಳೆಯುತ್ತಿದ್ದ ಹರೀಶ್ ಗಂಗಾಧರ್ ಅವರು ತಮ್ಮ ಬರಹಗಳನ್ನು ಒಟ್ಟುಗೂಡಿಸಿ 376 ಪುಟಗಳ ಕೃತಿಯನ್ನು ಹೊರತಂದಿದ್ದು, ಕಾರ್ಯಕ್ರಮದಲ್ಲಿ ಇಡೀ ಸಭಾಂಗಣ ಕಿಕ್ಕಿರಿದು ತುಂಬಿತ್ತು.
ಕ್ರೀಡೆ, ಸಾಹಿತ್ಯ, ವ್ಯಕ್ತಿತ್ವ, ಇತಿಹಾಸ/ರಾಜಕೀಯ, ಅನುಭವ, ಅನುವಾದ- ಈ ಆರು ಭಾಗಗಳನ್ನು ಹೊಂದಿರುವ ಕೃತಿಯ ಕುರಿತು ಚಿಂತಕರಾದ ನೆಲ್ಲುಕುಂಟೆ ವೆಂಕಟೇಶ್, ಬಂಜಗೆರೆ ಜಯಪ್ರಕಾಶ್ ಮಾತನಾಡಿದರು. ಕೃಷಿ ಸಚಿವ ಚೆಲುವರಾಯಸ್ವಾಮಿ ಪುಸ್ತಕವನ್ನು ಬಿಡುಗಡೆ ಮಾಡಿದರು.
ವಿಶ್ವಸಂಸ್ಥೆಯ ಮಾನವಹಕ್ಕುಗಳ ವಿಶೇಷ ತಜ್ಞರಾದ ಕೆ.ಪಿ.ಅಶ್ವಿನಿಯವರು ಜಗತ್ತಿನ ಮೂಲೆಮೂಲೆಯಲ್ಲಿ ಫೆಬ್ರುವರಿಯಲ್ಲಿ ನಡೆಯುವ ’ಬ್ಲಾಕ್ ಮನ್ತ್’ ಕುರಿತು ಬೆಳಕು ಚೆಲ್ಲಿ, “ಇದೇ ಹೊತ್ತಿನಲ್ಲಿ ಕಪ್ಪು ಜನರ ಕುರಿತು ಮಾತನಾಡುವ ಹರೀಶ್ ಅವರ ಕೃತಿ ಸಾಂಕೇತಿಕವಾಗಿ ಹೊರಬಂದಿದೆ” ಎಂದರು.
ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಯೂ ಆಗಿರುವ ನೆಲ್ಲುಕುಂಟೆ ವೆಂಕಟೇಶ್ ಮಾತನಾಡಿ, “ಈ ಕೃತಿಯಲ್ಲಿ 59 ಗುರುತಿನ ಬಾಣಗಳಿವೆ. ಈ ಎಲ್ಲಾ ಬಾಣಗಳು ದುಡಿಯುವ ವರ್ಗಕ್ಕೆ ಸೇರಿದವರು, ದಮನಿತ ಸಮುದಾಯವರು” ಎಂದು ತಿಳಿಸಿದರು.
“ಸಹನೆ, ಪ್ರೀತಿ, ಸಮನ್ವಯ ತುಂಬಾ ಮುಖ್ಯವೆಂದು ಹರೀಶ್ ಹೇಳುತ್ತಿದ್ದಾರೆ. ಜಾಗತಿಕ ಸಮಸ್ಯೆಗಳಿಗೆ ಜಾಗತಿಕ ಉತ್ತರಗಳೇ ಬೇಕು. ಜಾಗತಿಕ ಭಾಷೆಯಲ್ಲಿ ಹರೀಶ್ ಮಾತನಾಡುತ್ತಿರುವುದರಿಂದ ಇದು ಬಹಳ ಮುಖ್ಯವಾದ ವಿದ್ಯಮಾನ” ಎಂದು ಬಣ್ಣಿಸಿದರು.
“ಲಂಕೇಶ್ ಈ ಕೆಲಸವನ್ನು ಮಾಡುತ್ತಿದ್ದರು. ಕಳೆದ ಇಪ್ಪತ್ತು ವರ್ಷಗಳಿಂದ ಜಾಗತಿಕವಾಗಿ ಪ್ರತಿಕ್ರಿಯಿಸುವುದು ಕನ್ನಡ ಸಾಹಿತ್ಯದಲ್ಲಿ ನಿಂತೇ ಹೋಗಿತ್ತು. ಆದರೆ ಹರೀಶ್ ಇದಕ್ಕೆ ಮರುಚಾಲನೆ ನೀಡಿದ್ದಾರೆ” ಎಂದು ಅಭಿಪ್ರಾಯಪಟ್ಟರು.
“ಫೇಸ್‌ಬುಕ್, ಅಲ್ಫಾಬೆಟ್, ನೆಟ್‌ಪ್ಲಿಕ್ಸ್, ಗೂಗಲ್- ಈ ನಾಲ್ಕು ಸಂಸ್ಥೆಗಳು ಮನುಷ್ಯನನ್ನು ನಿಯಂತ್ರಿಸುತ್ತಿವೆ. ಮಾಸ್ ಸೈಕಾಲಜಿಯನ್ನು ಸೃಷ್ಟಿಸಲು ಈ ನಾಲ್ಕು ಸಂಸ್ಥೆಗಳನ್ನು ಬಳಸಲಾಗುತ್ತಿದೆ” ಎಂದ ಅವರು, “ಈ ಕೃತಿಯಲ್ಲಿನ ಬರಹಗಳು ಹೋರಾಟದ ಕಥೆಗಳನ್ನು ಹೇಳುತ್ತವೆ. ವ್ಯಕ್ತಿ ವಿಮೋಚನೆಗಾಗಿ ಇಲ್ಲಿನ ಪಾತ್ರಗಳು ಹೋರಾಡುತ್ತಿವೆ. ಆದರೆ ಆಧುನಿಕ ಜಗತ್ತು ವ್ಯಕ್ತಿ ವಿಘಟನೆಯ ಕಡೆಗೆ ಹೋಗುತ್ತಿದೆ” ಎಂದು ವಿಷಾದಿಸಿದರು.
“ಇಡೀ ಪುಸ್ತಕದ ಕೇಂದ್ರ ಬಿಂದು ಗಾಂಧಿ ಮತ್ತು ಅಂಬೇಡ್ಕರ್. ಆ ಕೇಂದ್ರದಿಂದಲೇ ಎಲ್ಲಾ ಬಾಣಗಳು ಹೊರಟಿವೆ. ತಲುಪಿದ ಗುರಿ ಕೂಡ ಗಾಂಧಿ- ಅಂಬೇಡ್ಕರ್ ಚಿಂತನೆಗಳಾಗಿವೆ. ಗಾಂಧಿ- ಅಂಬೇಡ್ಕರ್ ಚಿಂತನೆಗಳೇ ಜಾಗತಿಕ ಚಿಂತನೆಗಳು ಎಂಬುದನ್ನು ಕಂಡುಕೊಳ್ಳಲು ಹರೀಶ್ ಹೊರಟಿದ್ದಾರೆ” ಎಂದು ವಿಶ್ಲೇಷಿಸಿದರು.
“ಹೋರಾಟ ಮಾಡಿಯೇ ನಾವೆಲ್ಲ ಬಂದವರು. ಆಗಿರುವ ಗಾಯಗಳಿಗೆ ಲೆಕ್ಕವೇ ಇಲ್ಲ. 59 ಬಾಣಗಳ ಮೂಲಕ ದಾಖಲಾಗಿರುವ ಗಾಯಗಳು ಹಿರೋಗಳ ಥರ ಕಾಣುತ್ತವೆ. ಪದೇ ಪದೇ ಹೋಲಿಸುವ ಮೆಥಡಾಲಜಿಯನ್ನು ಹರೀಶ್ ಸಮರ್ಥವಾಗಿ ಕಂಡುಕೊಂಡಿದ್ದಾರೆ. ಇಲ್ಲಿನ ಕನಿಷ್ಠ 35 ಲೇಖನಗಳು ಮಕ್ಕಳಿಗೆ ಪಠ್ಯಗಳಾಗಬಹುದು” ಎಂದು ಸೂಚಿಸಿದರು.
ಚಿಂತಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, “ಈ ಕೃತಿಯಲ್ಲಿ ಹರೀಶ್ ಅವರಿಗಿರುವ ವಿಷಯವ್ಯಾಪ್ತಿ, ತಿಳಿವಳಿಕೆ ಕಾಣಿಸುತ್ತಿದೆ. ಲಂಕೇಶ್ ಕಾಣಿಸುತ್ತಾರೆ. ಸಿನಿಮಾ, ಸಾಹಿತ್ಯ, ಕ್ರೀಡೆ, ಜೂಜು ಎಲ್ಲದರ ಕುರಿತು ಲಂಕೇಶ್ ಬರೆಯುತ್ತಿದ್ದರು” ಎಂದು ಸ್ಮರಿಸಿದರು.
“ಸಾಮಾಜಿಕ ಚಳವಳಿಯಲ್ಲಿ ಇದ್ದದ್ದಕ್ಕೆ ನಮಗೊಂದು ಸ್ಪಷ್ಟತೆ ಇದೆ. ಹಾಗೆಯೇ ಹರೀಶ್ ಗಂಗಾಧರ್ ಅವರ ಬರಹದಲ್ಲಿಯೂ ಅದೇ ಸ್ಪಷ್ಟತೆ ಇದೆ. ಅವರು ಚಳವಳಿಗಳೊಂದಿಗೆ ಇದ್ದಾರೆಯೋ ಇಲ್ಲವೋ ಗೊತ್ತಿಲ್ಲ” ಎಂದರು.
ಬರಹಗಾರ ಹರೀಶ್ ಗಂಗಾಧರ್ ಮಾತನಾಡಿ, “ಹಿಸ್ಟರಿ ಎಂದರೆ ವೈಯಕ್ತಿಕ ನಿರ್ಧಾರಗಳು ಮತ್ತು ಅದರ ಪರಿಣಾಮಗಳು ಎಂದೂ ನೋಡಬಹುದು. ಉತ್ಪ್ರೇಕ್ಷ ಭರಿತ ಇತಿಹಾಸ ಈಗ ತುಂಬಾ ಚಲಾವಣೆಯಲ್ಲಿದೆ. ಅದಕ್ಕೆ ಹೆಚ್ಚಿನ ಬೇಡಿಕೆ ಇದೆ. ಸತ್ಯ ಹೇಳಿದರೆ ನಂಬಲ್ಲ. ಉತ್ಪ್ರೇಕ್ಷ ಭರಿತ ಇತಿಹಾಸವನ್ನು ತಡೆಯಲು ನಾವು ನಮ್ಮದೇ ಕಥೆಗಳನ್ನು ಹೇಳಬೇಕೆಂದು ಹೊರಟೆ” ಎಂದು ತಮ್ಮ ಬರಹದ ಪಯಣವನ್ನು ಹಂಚಿಕೊಂಡರು.
“ಗುರುತಿನ ಬಾಣ- ಯಾವ ದಿಕ್ಕಿನಲ್ಲಿ ಹೋಗಬೇಕು ಎಂದು ತೋರುತ್ತದೆ. ನಾವು ಪ್ರಪಾತಕ್ಕೆ ಬೀಳದಂತೆ ಯಾವ ಧಿಕ್ಕಿನಲ್ಲಿ ಹೋಗಬೇಕೆಂದು ಹೇಳುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಿದ್ದೇನೆ” ಎಂದು ವಿವರಿಸಿದರು.
ಕೃತಿ ಬಿಡುಗಡೆ ಮಾಡಿ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ, “ಸಾಹಿತ್ಯ, ಇತಿಹಾಸ ವಾಸ್ತವಗಳನ್ನು ತಿಳಿದಾಗ ಮಾತ್ರ ಗುರಿ ಮುಟ್ಟುತ್ತೇವೆ. ಇತಿಹಾಸ ತಿಳಿಯದಿದ್ದರೆ ಇತಿಹಾಸ ಸೃಷ್ಟಿಸಲಾರೆವು ಎಂಬ ಮಾತಿದೆ. ಇತಿಹಾಸವನ್ನು ಮೆಲುಕು ಹಾಕದಿದ್ದರೆ ನಮ್ಮ ದೇಶದ ಸಾಧನೆ ನಿಂತುಹೋಗುತ್ತದೆ” ಎಂದು ಎಚ್ಚರಿಸಿದರು.
“ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳದೆ ಇರದೆ ಇರುವ ಕೆಟ್ಟ ಸ್ಥಿತಿಯಲ್ಲಿ ಇದ್ದೇವೆ. ದೇಶದ ಇತಿಹಾಸವನ್ನು ಮತ್ತು ಕುವೆಂಪು ಅವರನ್ನು ಯುವಕರಿಗೆ ತಿಳಿಸಬೇಕಿದೆ” ಎಂದರು.
ಸಂಕಥನದ ರೂವಾರಿ ಮತ್ತು ಬರಹಗಾರ ರಾಜೇಂದ್ರ ಪ್ರಸಾದ್, ಕಸಾಪ ಮಾಜಿ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಸೇರಿದಂತೆ ಹಲವು ಪ್ರಗತಿಪರ ಚಿಂತಕರು, ಬರಹಗಾರರು, ಹೋರಾಟಗಾರರು, ಓದುಗರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.