ಕರ್ನಾಟಕದಿಂದ ಆಂಧ್ರಕ್ಕೆ ‘ಕುಮ್ಕಿ ಆನೆ’ಗಳ ಹಸ್ತಾಂತರ: ಕುಮ್ಕಿ ಆನೆಗಳ ಮಹತ್ವ ಏನು?

Date:

Advertisements

ಮೇ 21ರಂದು ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಕೃಷ್ಣ, ಅಭಿಮನ್ಯು, ರಂಜನ್ ಮತ್ತು ದೇವ ಎಂಬ ನಾಲ್ಕು ಕುಮ್ಕಿ ಆನೆಗಳನ್ನು ಇಂದು ವಿಧ್ಯುಕ್ತವಾಗಿ ಹಸ್ತಾಂತರಿಸಲಾಗಿದೆ.

ರಾಜ್ಯದಿಂದ ಆಂಧ್ರ ಪ್ರದೇಶಕ್ಕೆ ಕುಮ್ಕಿ ಆನೆಗಳನ್ನು ಹಸ್ತಾಂತರಿಸುವ ಒಡಂಬಡಿಕೆಗೆ ಸಹಿ ಹಾಕಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಆನೆಗಳನ್ನು ಹಸ್ತಾಂತರಿಸಿದರು. ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಹಸ್ತಾಂತರ ಪ್ರಕ್ರಿಯೆಯು ನಡೆಯಿತು.

ಆಂಧ್ರಪ್ರದೇಶವು ಒಟ್ಟು 8 ಕುಮ್ಕಿ ಆನೆ ನೀಡುವಂತೆ ಮನವಿ ಮಾಡಿತ್ತು. ಇದನ್ನು ಪರಿಗಣಿಸಿದ್ದ ಕರ್ನಾಟಕ, ಸದ್ಯ 6 ಆನೆ ನೀಡಲು ಒಪ್ಪಿಗೆ ಸೂಚಿಸಿದ್ದು, ಆ ಪೈಕಿ ನಾಲ್ಕು ಆನೆಗಳನ್ನು ಬುಧವಾರ ಹಸ್ತಾಂತರಿಸಿದೆ. ಉಳಿದಿರುವ ಇನ್ನೆರಡು ಆನೆಗಳನ್ನು ಸಂಪೂರ್ಣ ತರಬೇತಿಯ ನಂತರ ಹಸ್ತಾಂತರಿಸಲಿದೆ. ಸದ್ಯ ಕುಮ್ಕಿ ಆನೆಗಳ ಜೊತೆ ಆಯಾ ಆನೆಯ ಕಾವಾಡಿ ಮತ್ತು ಮಾವುತರನ್ನು ಆಂಧ್ರಕ್ಕೆ ಕಳುಹಿಸಲಾಗಿದ್ದು, ಅಲ್ಲಿನ ಮಾವುತರಿಗೆ ಒಂದು ತಿಂಗಳು ತರಬೇತಿ ಕೊಟ್ಟ ನಂತರ ಮಾವುತರು ವಾಪಸ್ ಬರಲಿದ್ದಾರೆ.

Advertisements

ಅಷ್ಟಕ್ಕೂ ಕುಮ್ಕಿ ಆನೆಗಳ ಮಹತ್ವ ಏನು?

ಮನುಷ್ಯರಿಂದ ಅಂದರೆ ತರಬೇತುದಾರರ ಮೂಲಕ ತರಬೇತಿ ಪಡೆದ ಆನೆಗಳಿಗೆ ಕುಮ್ಕಿ ಆನೆಗಳು ಎಂದು ಕರೆಯಲಾಗುತ್ತದೆ. ಕರ್ನಾಟಕದ ದುಬಾರೆ ಮತ್ತು ಸಕ್ರೆಬೈಲು ಆನೆ ಶಿಬಿರಗಳಲ್ಲಿ ಆನೆಗಳಿಗೆ ತರಬೇತಿ ನೀಡಲಾಗುತ್ತದೆ. ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ತರಬೇತಿ ಪಡೆದ ಆನೆಗಳನ್ನು ಕಾಡಾನೆ ನಿಯಂತ್ರಣ ಹಾಗೂ ಸೆರೆ ಹಿಡಿಯಲು ಬಳಸಲಾಗುತ್ತದೆ.

KUMKI ELEPHANTS

ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕ, ಕೇರಳ ಮತ್ತು ಅಸ್ಸಾಂ, ತಮಿಳುನಾಡಿನಂತಹ ರಾಜ್ಯಗಳಲ್ಲಿ, ಕಾಡಾನೆಗಳನ್ನು ನಿಯಂತ್ರಿಸಲು ಮತ್ತು ಮಾನವ-ಆನೆ ಸಂಘರ್ಷವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಈ ಆನೆಗಳನ್ನು ಸಾಮಾನ್ಯವಾಗಿ ಚಿಕ್ಕ ವಯಸ್ಸಿನಿಂದಲೇ ತರಬೇತಿ ನೀಡಲಾಗುತ್ತದೆ, ಇದರಿಂದ ಅವು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಾಡಾನೆಗಳನ್ನು ಕಾಡಿನ ಒಳಗೆ ಓಡಿಸಲು, ಸೆರೆಹಿಡಿಯಲು ಅಥವಾ ಇತರ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲು ಸಮರ್ಥವಾಗಿರುತ್ತವೆ.

ಕುಮ್ಕಿ ಆನೆಗಳ ವಿಶೇಷತೆಗಳು:

ಕುಮ್ಕಿ ಆನೆಗಳಿಗೆ ಮಾವುತರ (ಗಜಪಾಲಕರು) ಮೂಲಕ ವಿಶೇಷ ತರಬೇತಿ ನೀಡಲಾಗುತ್ತದೆ. ಇವು ಆಜ್ಞೆಗಳನ್ನು ಪಾಲಿಸಲು ಕಲಿತಿರುತ್ತವೆ ಮತ್ತು ಕಾಡಾನೆಗಳ ಜೊತೆ ಸಂವಹನ ನಡೆಸಲು ಸಾಮರ್ಥ್ಯ ಹೊಂದಿರುತ್ತವೆ.

ಕಾಡಾನೆಗಳು ಗ್ರಾಮಗಳಿಗೆ ಅಥವಾ ಕೃಷಿ ಭೂಮಿಗೆ ದಾಳಿ ಮಾಡಿದಾಗ ಅವುಗಳನ್ನು ಕಾಡಿನ ಒಳಗೆ ಓಡಿಸಲು, ಗಾಯಗೊಂಡ ಆನೆಗಳಿಗೆ ಚಿಕಿತ್ಸೆ ನೀಡಲು ಅಥವಾ ಸೆರೆಹಿಡಿಯಲು, ದೇವಸ್ಥಾನಗಳಲ್ಲಿ, ಉತ್ಸವಗಳಲ್ಲಿ (ಉದಾಹರಣೆಗೆ ಮೈಸೂರು ದಸರಾ) ಧಾರ್ಮಿಕ ಕಾರ್ಯಕ್ರಮಗಳಿಗೆ.

ಕುಮ್ಕಿ ಆನೆಗಳು ಸಾಮಾನ್ಯವಾಗಿ ಏಷ್ಯಾದ ಆನೆಗಳಾಗಿರುತ್ತವೆ. ಇವು ಬೃಹತ್ ಗಾತ್ರದವು ಮತ್ತು ಬಲಿಷ್ಠವಾಗಿರುತ್ತವೆ. ಗಂಡಾನೆಗಳು 3.2 ಮೀಟರ್ ಎತ್ತರ ಮತ್ತು 5,400 ಕೆ.ಜಿ.ವರೆಗೆ ತೂಕವಿರಬಹುದು, ಆದರೆ ಹೆಣ್ಣಾನೆಗಳು ತುಸು ಚಿಕ್ಕವಾಗಿರುತ್ತವೆ. ಕರ್ನಾಟಕದಲ್ಲಿ, ಬಂಡೀಪುರ, ನಾಗರಹೊಳೆ ಮತ್ತು ಭದ್ರಾ ವನ್ಯಜೀವಿ ಧಾಮಗಳಂತಹ ಕಾಡುಗಳಲ್ಲಿ ಕುಮ್ಕಿ ಆನೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಕುಮ್ಕಿ ಆನೆಗಳು ಕರ್ನಾಟಕದ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಕುಮ್ಕಿ ಆನೆಗಳ ಸವಾಲುಗಳು:

ತರಬೇತಿ ಪಡೆದ ಕುಮ್ಕಿ ಆನೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಏಕೆಂದರೆ ಹೊಸ ಆನೆಗಳನ್ನು ಪಡೆಯುವುದು ಮತ್ತು ತರಬೇತಿ ನೀಡುವುದು ಬಹಳ ಖರ್ಚು ಮತ್ತು ಸುದೀರ್ಘವಾದ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆ. ಕೆಲವು ಕುಮ್ಕಿ ಆನೆಗಳು ವಯಸ್ಸಾದಂತೆ ನಿವೃತ್ತಿಯಾಗುತ್ತವೆ.

ರಾಜ್ಯದಲ್ಲಿ 100ರಷ್ಟು ಕುಮ್ಕಿ ಆನೆಗಳಿವೆ. ಅದರಲ್ಲಿ 24 ಕುಮ್ಕಿ ಆನೆಗಳನ್ನು ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ತರಬೇತಿಗೆ ಸುಮಾರು ಮೂರು ವರ್ಷ ಬೇಕಾಗುತ್ತದೆ.

KUMKI

ಟ್ರ್ಯಾಂಕ್ವಿಲೈಸಿಂಗ್ ಮೂಲಕ ಸೆರೆಹಿಡಿಯಲಾದ ಕಾಡಾನೆಯನ್ನು ಮರದ ಆವರಣದಲ್ಲಿ ಇರಿಸಲಾಗುತ್ತದೆ. ಸೆರೆ ಹಿಡಿದ ನಂತರದ ಆರಂಭಿಕ ದಿನಗಳಲ್ಲಿ, ಕಾಡಾನೆಯು ಆವರಣವನ್ನು ಕೆಡವಲು ಪ್ರಯತ್ನಿಸುತ್ತದೆ. ಆನೆಯ ಉಸ್ತುವಾರಿಯನ್ನು ಇಬ್ಬರು ಮಾವುತರಿಗೆ ನೀಡಲಾಗುತ್ತದೆ. ಆನೆ ಶಾಂತವಾಗಲು ಪ್ರಾರಂಭಿಸಿದ ನಂತರ ತರಬೇತಿಯನ್ನು ಆರಂಭಿಸಲಾಗುತ್ತದೆ. ಆರಂಭದಲ್ಲಿ ಕೆಲವು ಮೂಲಭೂತ ಆಜ್ಞೆಗಳನ್ನು ನೀಡಲಾಗುತ್ತದೆ. ಆನೆ ಪಾಲಿಸಿದರೆ, ಅದಕ್ಕೆ ಕಬ್ಬು ಅಥವಾ ಬೆಲ್ಲವನ್ನು ತಿನ್ನಿಸಲಾಗುತ್ತದೆ. ನಂತರ ಮಾವುತರು ಆನೆಯೊಂದಿಗೆ ಬಾಂಧವ್ಯವನ್ನು ವೃದ್ಧಿಸಿಕೊಳ್ಳುತ್ತಾರೆ. ಬಳಿಕ ಆನೆಯನ್ನು ಆವರಣದಿಂದ ಹೊರಗೆ ಬಿಡಲಾಗುತ್ತದೆ ಮತ್ತು ತಜ್ಞರ ತರಬೇತಿ ಪ್ರಾರಂಭವಾಗುತ್ತದೆ. ವೈದ್ಯರು ಮತ್ತು ಅರಣ್ಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ತರಬೇತಿ ಮೂರು ವರ್ಷಗಳವರೆಗೆ ನಡೆಯುತ್ತದೆ.

ಕುಮ್ಕಿ ಆನೆಯನ್ನು ಇತರ ಆನೆಗಳೊಂದಿಗೆ ಬೆರೆಯಲು ಬಿಡಲಾಗುತ್ತದೆ. ಇದು ಕಾಡಾನೆಯನ್ನು ನೋಡಿ ಭಯಪಡುವುದನ್ನು ತಡೆಯಲು ಸಹಾಯ ಮಾಡುತ್ತದೆ. ಮುಂದಿನ ಹಂತದಲ್ಲಿ ಮಾವುತನೊಂದಿಗೆ ಪ್ರವಾಸಕ್ಕೆ ಹೋಗುವ ಮೂಲಕ ಆ ಆನೆಯನ್ನು ಮತ್ತೆ ಕಾಡಿಗೆ ಪರಿಚಯಿಸಲಾಗುತ್ತದೆ. ತರಬೇತಿಯ ಕೊನೆ ಹಂತದಲ್ಲಿ ಆನೆಯನ್ನು ತಾನಾಗಿಯೇ ಕಾಡಿಗೆ ಕಳುಹಿಸಲಾಗುತ್ತದೆ. ಅದು ಹಿಂತಿರುಗಿದ ಬಳಿಕ ತರಬೇತಿ ಪಡೆದ ಕುಮ್ಕಿ ಆನೆಯಾಗುತ್ತದೆ. ತರಬೇತಿ ಪಡೆದ ನಂತರ ಆನೆಗಳು ಕುಮ್ಕಿ ಸೇವೆಗೆ ಸೇರುತ್ತವೆ ಮತ್ತು 60 ವರ್ಷ ವಯಸ್ಸಿನವರೆಗೂ ಸರ್ಕಾರಿ ಸೇವೆ ಸಲ್ಲಿಸುತ್ತವೆ. 60 ವರ್ಷ ವಯಸ್ಸಿನಲ್ಲಿ ನಿವೃತ್ತವಾದ ನಂತರ ಆನೆ ಅಭಯಾರಣ್ಯದಲ್ಲಿ ವಿಶ್ರಾಂತಿ ಪಡೆಯಬಹುದಾಗಿದೆ.

ಗಡಿ ಜಿಲ್ಲೆ ಆನೆ ಸಮಸ್ಯೆಗೂ ಪರಿಹಾರ: ಅರಣ್ಯ ಸಚಿವ ಈಶ್ವರ ಖಂಡ್ರೆ

ಆಂಧ್ರಪ್ರದೇಶದ ಚಿತ್ತೂರು ಗಡಿಗೆ ಹೊಂದಿಕೊಂಡಿರುವ ಕೋಲಾರ ಜಿಲ್ಲೆ ವ್ಯಾಪ್ತಿಯಲ್ಲೂ ಆನೆ- ಮಾನವ ಸಂಘರ್ಷ ಹೆಚ್ಚುತ್ತಿದ್ದು, ಆಂಧ್ರಪ್ರದೇಶದಿಂದ ನಮ್ಮ ರಾಜ್ಯಕ್ಕೆ ಪುಂಡಾನೆಗಳು ಬಾರದಂತೆ ತಡೆಯಲೂ ಆಂಧ್ರ ನಡೆಸಲಿರುವ ಆನೆ ಸೆರೆ ಕಾರ್ಯಾಚರಣೆ ಮುಂದಿನ ದಿನಗಳಲ್ಲಿ ನೆರವಾಗಲಿದೆ. ಈ ನಿಟ್ಟಿನಲ್ಲಿ ಕುಮ್ಕಿ ಆನೆಗಳ ಹಸ್ತಾಂತರ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

‘ಕರ್ನಾಟಕದ ಹೆಮ್ಮೆಯ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಅಥವಾ ದಸರಾ ಮಹೋತ್ಸವಕ್ಕಾಗಿ ಈಗಾಗಲೇ ಗುರುತಿಸಲಾಗಿರುವ ಯಾವುದೇ ಕುಮ್ಕಿ ಆನೆಯನ್ನು ಆಂಧ್ರಪ್ರದೇಶಕ್ಕೆ ನೀಡಲಾಗುತ್ತಿಲ್ಲ’ ಎಂದು ಸಚಿವ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಆಂಧ್ರಪ್ರದೇಶಕ್ಕೆ ನೀಡಲಾದ 4 ಕುಮ್ಕಿ ಆನೆಗಳ ವಿವರ:

  1. ಕೃಷ್ಣ, 16 ವರ್ಷ ವಯಸ್ಸು. 2022ರಲ್ಲಿ ಚಿಕ್ಕಮಗಳೂರಿನಲ್ಲಿ ಈ ಆನೆ ಸೆರೆ ಹಿಡಿಯಲಾಗಿತ್ತು. ಈ ಆನೆ ತೂಕ 3050 ಕೆ.ಜಿ ಇದೆ.
  2. ಶಿವಮೊಗ್ಗ ಅಭಿಮನ್ಯು, 15 ವರ್ಷ ವಯಸ್ಸು. 2023ರಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಸೆರೆ ಹಿಡಿಯಲಾದ ಆನೆ. ಈ ಆನೆ ತೂಕ 3070 ಕೆ.ಜಿ ಇದೆ.
  3. ದೇವ, 39 ವರ್ಷ ವಯಸ್ಸು. ಕೊಡಗು ಜಿಲ್ಲೆ, ಕುಶಾಲನಗರದಲ್ಲಿ 2019ರಲ್ಲಿ ಸೆರೆ ಹಿಡಿಯಲಾದ ಆನೆಯಾಗಿದ್ದು, ತೂಕ 3800 ಕೆ.ಜಿ ಇದೆ.
  4. ರಂಜನ್ ದುಬಾರೆ ಶಿಬಿರದಲ್ಲೇ ಜನಿಸಿದ ಆನೆ. ವಯಸ್ಸು 25 ವರ್ಷ. ಈ ಆನೆಯ ತೂಕ 3700 ಕೆಜಿ ಇದೆ.
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X