ಕರಾವಳಿ ಭಾಗದಲ್ಲಿ ದ್ವೇಷ ಭಾಷಣಗಳ ವಿರುದ್ಧ ಪೊಲೀಸ್ ಅಧಿಕಾರಿಗಳು ತೋರಿರುವ ಅಸಡ್ಡೆ ಬಗ್ಗೆ ತನಿಖೆ ನಡೆಸುವಂತೆ ವಿಧಾನಸಭಾ ಸಭಾಧ್ಯಕ್ಷ ಯು ಟಿ ಖಾದರ್ ಅವರು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ದ್ವೇಷಭರಿತ ಭಾಷಣಗಳು, ಪ್ರಚೋದನಾತ್ಮಕ ಹೇಳಿಕೆಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಸಮಾಜಘಾತುಕ ವದಂತಿಗಳು ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಾರಿ ಧಕ್ಕೆ ಉಂಟುಮಾಡುವಂತಹ ಅಪಾಯಕಾರಿ ಸ್ಥಿತಿಯನ್ನು ನಿರ್ಮಾಣ ಮಾಡುತ್ತಿವೆ ಎಂದು ಖಾದರ್ ಪತ್ರದಲ್ಲಿ ತಿಳಿಸಿದ್ದಾರೆ.
ಈ ಹಿಂದಿನ ಕೆಲವು ಪೊಲೀಸ್ ಅಧಿಕಾರಿಗಳು ಈ ದ್ವೇಷಭಾಷಣ, ಪ್ರಚೋದನಕಾರಿ ಹೇಳಿಕೆಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಸಮಾಜಘಾತುಕ ವದಂತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೆ ಅಸಹಾಯಕತೆ ಅಥವಾ ನಿರ್ಲಕ್ಷ್ಯವಹಿಸಿದ್ದಾರೆ. ಆದರೆ ಈಗಿನ ಪೊಲೀಸ್ ಅಧಿಕಾರಿಗಳು ದ್ವೇಷ ಭಾಷಣದ ವಿರುದ್ಧ ಸಮರ್ಪಕ ಹಾಗೂ ತ್ವರಿತ ಕ್ರಮ ಕೈಗೊಂಡಿದ್ದಾರೆ. ಒಂದು ವೇಳೆ ಹಿಂದಿನ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಕ್ರಮ ಕೈಗೊಂಡಿದ್ದರೆ ಕರಾವಳಿ ಭಾಗದಲ್ಲಿ ಒಂದೆರೆಡು ಧರ್ಮಾಧಾರಿತ ಕೊಲೆ ಮತ್ತು ಹಿಂಸಾಚಾರವನ್ನು ತಪ್ಪಿಸಬಹುದಾಗಿತ್ತು ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿಮಾನಯಾನದ ವಿಶ್ವಾಸ ಕುಂದುತ್ತಿದೆ – ಗಂಭೀರ ಚಿಂತನೆ, ಕ್ರಮಗಳ ಅಗತ್ಯವಿದೆ!
ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದರೋಡೆ, ಮಾದಕ ವಸ್ತು ಸಾಗಾಟ ಮತ್ತಿತರ ಸಮಾಜಘಾತುಕ ಕೆಲಸಗಳಲ್ಲಿ ನಿಷ್ಠೆಯಿಂದ ತ್ವರಿತಗತಿಯಲ್ಲಿ ಸೂಕ್ತ ಕ್ರಮ ಕೈಗೊಂಡ ಈ ಹಿಂದಿನ ಪೊಲೀಸ್ ಅಧಿಕಾರಿಗಳು ದ್ವೇಷ ಭಾಷಣಗಳ ವಿರುದ್ಧ ಯಾಕೆ ಸೂಕ್ತ ಕ್ರಮ ಕೈಗೊಳ್ಳಲಿಲ್ಲ? ಅದಕ್ಕೆ ಕಾರಣಗಳೇನು ಅನ್ನುವ ಸೂಕ್ತ ತನಿಖೆಯಾಗಬೇಕಿದೆ ಎಂದು ಪತ್ರದಲ್ಲಿ ಖಾದರ್ ಆಗ್ರಹಿಸಿದ್ದಾರೆ.
ನಮ್ಮ ರಾಜ್ಯದ ಆಂತರಿಕ ಶಾಂತಿ, ಸಾಮರಸ್ಯ ಹಾಗೂ ಸಾರ್ವಜನಿಕ ನಂಬಿಕೆಯನ್ನು ಮತ್ತಷ್ಟು ಬಲಪಡಿಸಬಹುದು ಎಂಬ ಆಶಯದಿಂದ ಈ ಪತ್ರವನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯಕ್ರಮ ಕೈಗೊಳ್ಳಬೇಕು ಸಭಾಧ್ಯಕ್ಷರು ಗೃಹ ಸಚಿವರನ್ನು ಕೋರಿದ್ದಾರೆ.