ತಮಿಳುನಾಡು, ಆಂಧ್ರದಲ್ಲಿ ಉಂಟಾಗಿರುವ ‘ಫೆಂಜಲ್’ ಚಂಡಮಾರುತದ ಪರಿಣಾಮ ಇಂದು ಕೂಡ ಕರ್ನಾಟಕದ ಹಲವು ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜುಗಳಿಗೆ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಂಗನ ವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಮೈಸೂರು, ಮಂಡ್ಯ, ಕೊಡಗು, ಹಾಸನ, ಚಾಮರಾಜನಗರ ಜಿಲ್ಲೆಗಳ ವಿವಿಧೆಡೆಯೂ ಜೋರು ಮಳೆ ಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೈಸೂರು, ಮಂಡ್ಯ ಮತ್ತು ಚಾಮರಾಜನಗರದಲ್ಲಿ ಆಯಾ ಜಿಲ್ಲಾಡಳಿತಗಳಿಂದ ಅಂಗನವಾಡಿ ಕೇಂದ್ರಗಳು, ಶಾಲೆ– ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮೈಸೂರು, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಡಿ.3 ರಂದು ಕೂಡ ರಜೆ ಘೋಷಿಸಲಾಗಿದೆ.
ಸೋಮವಾರ ರಾತ್ರಿ 10 ಗಂಟೆಯ ನಂತರ, ಬೆಂಗಳೂರು ನಗರದ ಹಲವು ಭಾಗಗಳಲ್ಲಿ ಮಳೆ ಆರ್ಭಟ ಹೆಚ್ಚಾಯಿತು. ಗುಡುಗು ಮತ್ತು ಸಿಡಿಲಿನೊಂದಿಗೆ ಬಿರುಸಾಗಿ ಸುರಿಯಿತು. ರಾತ್ರಿ ಮಳೆ ಅಧಿಕವಾಗಿದ್ದರಿಂದ ರಸ್ತೆಯಲ್ಲಿ ನೀರು ನಿಂತ ಪ್ರಮಾಣ ಹೆಚ್ಚಾಗಿತ್ತು. ಗುಂಡಿಗಳಲ್ಲಿ ನೀರು ನಿಂತಿದ್ದನ್ನು ಗ್ರಹಿಸದ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿದರು.
ಈ ಸುದ್ದಿ ಓದಿದ್ದೀರಾ? ನಿವೃತ್ತ ನ್ಯಾ. ಡಿ ವೈ ಚಂದ್ರಚೂಡ್ ಬಿಜೆಪಿ ಕೈಗೊಂಬೆಯಾಗಿದ್ದರೆ?
ಹಗಲಿನ ವೇಳೆ ಹಲವು ಕಡೆ ಸಾಧಾರಣ ಮಳೆಯಾಯಿತು. ಮಳೆ ಮಳೆ ಕಡಿಮೆಯಿದ್ದರೂ, ರಸ್ತೆಗಳಲ್ಲಿ ನೀರು ನಿಂತಿದ್ದು ವಾಹನ ಸವಾರರನ್ನು ಪರದಾಡಿಸಿತು. ಚರಂಡಿಗಳಲ್ಲಿ ಸರಾಗವಾಗಿ ನೀರು ಹರಿಯದೆ, ರಸ್ತೆ ಮೇಲಿದ್ದ ನೀರಿನಿಂದ ದ್ವಿಚಕ್ರ ವಾಹನ ಸವಾರರು ಸಂಕಷ್ಟ ಅನುಭವಿಸಿದರು.
ನಾಗವಾರ ವೃತ್ತ, ಸಿಂಧುರ ಜಂಕ್ಷನ್, ಅಯ್ಯಪ್ಪ ನಗರದಿಂದ ದೇವಸಂದ್ರ ರಸ್ತೆ, ಹಳೆ ಮೈಸೂರು ರಸ್ತೆಯಿಂದ ಖೋಡೆ ಜಂಕ್ಷನ್, ಸಾರಕ್ಕಿ ಮೆಟ್ರೊ ನಿಲ್ದಾಣ, ಆಡುಗೋಡಿಯಿಂದ ಆನೆಪಾಳ್ಯ, ಕೆಂಗೇರಿಯಿಂದ ಉತ್ತರಹಳ್ಳಿ, ಕಲ್ಯಾಣ ನಗರದಿಂದ ಹೊರಮಾವು, ಹೆಬ್ಬಾಳದಿಂದ ಸಂಜಯನಗರ ಕ್ರಾಸ್, ಉತ್ತರಹಳ್ಳಿಯಿಂದ ಚಿಕ್ಕಲಸಂದ್ರ, ವೈಟ್ ಫೀಲ್ಡ್‌ನಿಂದ ಬಿ ನಾರಾಯಣಪುರ, ರಾಮಮೂರ್ತಿನಗರ ಮುಖ್ಯರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ದಟ್ಟಣೆ ಉಂಟಾಗಿತ್ತು.
‘ಫೆಂಜಲ್ ಚಂಡಮಾರುತದಿಂದ ಗಾಳಿ ವೇಗ ಹಾಗೂ ಮಳೆಯಾಗುವ ಮುನ್ಸೂಚನೆ ಇದೆ. ಈವರೆಗೆ ಸಾಧಾರಣ ಮಳೆಯಾಗಿದೆ. ಆದರೂ, ನಗರದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, 80 ಜೆಸಿಬಿ ಯಂತ್ರಗಳು ಕಾರ್ಯಾಚರಣೆಗೆ ಸಿದ್ಧವಾಗಿವೆ.‘ಗಾಳಿಗೆ ಮರ ಹಾಗೂ ಕೊಂಬೆಗಳು ಬೀಳುವ ಸಾಧ್ಯತೆ ಇದ್ದು, ಕ್ಷಿಪ್ರ ಕಾರ್ಯಾಚರಣೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಮಿಳುನಾಡು, ಕೇರಳದಲ್ಲಿ ಮಳೆ
ಫೆಂಜಲ್ ಚಂಡಮಾರುತದ ಪರಿಣಾಮ, ಉತ್ತರ ತಮಿಳುನಾಡಿನ ಹಲವು ಕಡೆ ನಿರಂತರ ಮಳೆಯಾಗಿದೆ. ವಿಲ್ಲುಪುರಂನಲ್ಲಿ ಸೋಮವಾರ ನಿರಂತರವಾಗಿ ಮಳೆ ಸುರಿದಿದ್ದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಸೇತುವೆಗಳು ಮತ್ತು ರಸ್ತೆಗಳು ಜಲಾವೃತವಾಗಿದ್ದು ಹಲವು ಗ್ರಾಮಗಳು ಮತ್ತು ಕಾಲೊನಿಗಳು ಸಂಪರ್ಕ ಕಳೆದುಕೊಂಡಿವೆ. ನೂರಾರು ಎಕರೆ ಕೃಷಿ ಭೂಮಿ ನೀರಿನಲ್ಲಿ ಮುಳುಗಿ, ಅಪಾರ ಪ್ರಮಾಣದ ಬೆಳೆ ಹಾನಿಗೊಳಗಾಗಿದೆ.
ಪಶ್ಚಿಮ ತಮಿಳುನಾಡಿನ ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳಲ್ಲೂ ಕಳೆದ ಎರಡು ದಶಕಗಳಲ್ಲಿ ಅತೀ ಹೆಚ್ಚು ಮಳೆ ಸುರಿದಿದೆ. 24 ತಾಸುಗಳಲ್ಲಿ ಕೃಷ್ಣಗಿರಿಯ ಉತಂಗರೈನಲ್ಲಿ 50 ಸೆಂಟಿ ಮೀಟರ್‌ನಷ್ಟು ಮಳೆಯಾಗಿದೆ. ವೆಲ್ಲುಪುರಂನಲ್ಲಿ 42 ಸೆಂ.ಮೀ, ಧರ್ಮಪುರಿಯ ಹರೂರಿನಲ್ಲಿ 33 ಸೆಂ.ಮೀ, ಕಡಲೂರು ಮತ್ತು ತಿರುವಣ್ಣಾಮಲೈನಲ್ಲಿ 16 ಸೆಂ.ಮೀ ಮಳೆಯಾಗಿದೆ.
ಕೇರಳದಲ್ಲಿ ಮಂಗಳವಾರ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಸೋಮವಾರ ಕೇರಳದ ಹಲವೆಡೆ ಸಾಧಾರಣ ಮಳೆಯಾಗಿದೆ. ಉತ್ತರ ಮತ್ತು ಕೇಂದ್ರದ ಹಲವು ಪ್ರದೇಶಗಳಲ್ಲಿ ಮಂಗಳವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಐದು ದಿನ ಈ ಭಾಗದಲ್ಲಿ ಗುಡುಗು ಸಹಿತ ಸಾಧರಣ ಮಳೆ ಮುಂದುವರಿಯಲಿದೆ ಎಂದು ತಿಳಿಸಿದೆ. ಕೇರಳದ ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ನಾಲ್ಕು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಿದೆ.