ಕರಾವಳಿ ಜಿಲ್ಲೆಗಳು ಮತ್ತು ಕೊಡಗು ಜಿಲ್ಲೆಯಲ್ಲಿ ಎಡಬಿಡದೆ ಭಾರೀ ಮಳೆ ಸುರಿಯುತ್ತಿದ್ದು, ಆರು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಮಳೆಯಿಂದಾಗಿ ಹಾನಿಯೂ ಕೂಡಾ ಹೆಚ್ಚಾಗುತ್ತಿದ್ದು, ಅಲ್ಲಲ್ಲಿ ಭೂಕುಸಿತ, ಬೆಟ್ಟ ಕುಸಿತ, ವಿದ್ಯುತ್ ಅವಘಡ, ರಸ್ತೆ ಕುಸಿತ ಸಂಭವಿಸುತ್ತಿದೆ.
ಇಂದು (ಜುಲೈ 20) ಮತ್ತು ನಾಳೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಹಾಸನ ಮತ್ತು ಬೆಳಗಾವಿಯಲ್ಲಿ ಆರೆಂಜ್ ಅಲರ್ಟ್ ಅನ್ನು ಹವಾಮಾನ ಇಲಾಖೆ ಘೋಷಿಸಿದೆ.
ಜುಲೈ 20ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೆಳಗಾವಿ, ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗಾಳಿಯ ವೇಗವು ಪ್ರತಿ ಗಂಟೆಗೆ 40-50 ಕಿ. ಮೀ. ತಲುಪುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಇನ್ನು ನಾಳೆ (ಜುಲೈ 21) ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕೆಲವು ಪ್ರದೇಶದಲ್ಲಿ ಅತೀ ಅಧಿಕ ಮಳೆಯಾಗುವ ಸಾಧ್ಯತೆಯಿದೆ. ಗಾಳಿಯ ವೇಗವು ಪ್ರತಿ ಗಂಟೆಗೆ 30-40 ಕಿ. ಮೀ. ತಲುಪುವ ಸಾಧ್ಯತೆಯಿದೆ. ಒಳನಾಡಿನ ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿಯೂ ಮಳೆ ಸುರಿಯಲಿದೆ.
ಇದನ್ನು ಓದಿದ್ದೀರಾ? ಭಾರೀ ಮಳೆ | ತಾಪ ಏರಿಕೆಯಿಂದ ದೆಹಲಿಗೆ ಮುಕ್ತಿ, ಮುಂಬೈನಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದ್ದು, ಹಗುರವಾದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಉಕ್ಕಿ ಹರಿಯುತ್ತಿವೆ ನದಿಗಳು
ಉತ್ತರ ಕನ್ನಡದ ಅಘನಾಶಿನಿಯ ಸಂತೆಗುಳಿ ಭಾಗ, ಶಿವಮೊಗ್ಗದ ತುಂಗಾ ನದಿ ಮಹಿಷಿ, ಶಿವಮೊಗ್ಗ, ಹರಿಹರಪುರ (ಚಿಕ್ಕಮಗಳೂರು), ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ನೇತ್ರಾವತಿ ನದಿ, ಕೊಡಗಿನ ಮುಕ್ಕೋಡ್ಲಿನಲ್ಲಿ ಹಾರಂಗಿ, ಮೈಸೂರಿನ ಹೊಮ್ಮರಗಳ್ಳಿಯಲ್ಲಿ ಕಬಿನಿ, ವಯನಾಡಿನ ಮುತಂಕೆರದಲ್ಲಿ ನದಿಗಳು ಉಕ್ಕಿ ಹರಿಯುತ್ತಿದ್ದು ಗಂಭೀರ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಮುಂದಿನ 5 ದಿನಗಳ #ಮಳೆ #ಮುನ್ಸೂಚನೆ: (ಮೂಲ:IMD)
ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಇಂದು ಜೋರಾದ ಗಾಳಿಯೊಂದಿಗೆ ಅತ್ಯಧಿಕ ಮಳೆ, IMD ಯಿಂದ #ರೆಡ್ಅಲರ್ಟ್ ನೀಡಲಾಗಿದೆ ಹಾಗೂ ಕರಾವಳಿ ಜಿಲ್ಲೆಗಳಿಗೆ ನಾಳೆ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. IMD ಯಿಂದ #ಆರೆಂಜ್ಅಲರ್ಟ್ ನೀಡಲಾಗಿದೆ, pic.twitter.com/4cRwMXKO3N— Karnataka State Natural Disaster Monitoring Centre (@KarnatakaSNDMC) July 20, 2024