ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಜೋರಾಗುತ್ತಿದ್ದು, ರಾಜ್ಯದ ಹಲವೆಡೆ ಬುಧವಾರ ಮಳೆ ಸುರಿದಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮತ್ತು ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗಿದೆ.
ಮೇ 20ರವರೆಗೂ ರಾಜ್ಯದಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಳೇ ಮೈಸೂರು ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಮುಂದಿನ 2-3 ದಿನಗಳ ಕಾಲ ಮಳೆ ಜೋರಾಗುವ ಸಾಧ್ಯತೆ ಇದೆ.
ಸಿಂಧನೂರು, ಮಸ್ಕಿ ಹಾಗೂ ಜಿಲ್ಲೆಯ ಕೆಲವೆಡೆ ಸುರಿದ ಗುಡುಗು ಸಹಿತ ಭಾರಿ ಮಳೆಗೆ ಒಬ್ಬರು ಸಿಡಿಲಿಗೆ ಮೃತಪಟ್ಟಿದ್ದು, ಮೂರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಂಧನೂರು ತಾಲೂಕಿನಲ್ಲಿ ಭಾರಿ ಮಳೆಗೆ ಭತ್ತದ ಬೆಳೆ ನಾಶವಾದರೆ ಹಲವು ತಗ್ಗು ಪ್ರದೇಶಗಳಲ್ಲಿ ನೀರು ಹರಿದು ಜಲಾವೃತ್ತವಾಗಿ ಅಪಾರ ಹಾನಿಗೊಂಡಿದೆ.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ಕಟಗೇರಿ ಗ್ರಾಮದಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು ಪಾರ್ವತೆವ್ವ ಹನಮಂತ ಅಪ್ಪನ್ನವರ (56) ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ಮಂಗಳವಾರ ಚರಂಡಿಯಲ್ಲಿ ಮಳೆ ನೀರಿನೊಂದಿಗೆ ಕೊಚ್ಚಿಹೋಗಿದ್ದ ಕಾಟೆಪ್ಪ ದುರಗಪ್ಪ ಶಿರಹಟ್ಟಿ (52) ಎಂಬುವರ ಶವ ಬುಧವಾರ ಪತ್ತೆಯಾದೆ. ಚರಂಡಿ ದಾಟುವ ವೇಳೆ ಅವರು ಆಯ ತಪ್ಪಿ ಬಿದ್ದಿದ್ದರು.
ಗದಗ ಜಿಲ್ಲೆಯ ಲಕ್ಷ್ಮೀಶ್ವರದಲ್ಲಿ, ಕಲಬುರಗಿ ನಗರ ಹಾಗೂ ಬೀದರ್ ಜಿಲ್ಲೆಯ ವಿವಿಧೆಡೆ ಬಿರುಸಿನ ಮಳೆಯಾಗಿದೆ. ರಾಮನಗರ ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿಯಿತು. ಬಾಗೇಪಲ್ಲಿ ಪಟ್ಟಣದಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆ ಸುರಿಯಿತು. ಹೊಲ-ಗದ್ದೆಗಳಲ್ಲಿ ನೀರು ಸಂಗ್ರಹವಾಗಿ ಭತ್ತ, ಜೋಳ, ಹೂವು ಬೆಳೆ ನೆಲ ಕಚ್ಚಿದೆ. ಕುರಿ, ಮೇಕೆ, ಎತ್ತು, ಹಂದಿ ಶೆಡ್‌ಗಳಿಗೆ ಮಳೆ ನೀರು ನುಗ್ಗಿದೆ.
ಮೈಸೂರು ಸೇರಿದಂತೆ ಜಿಲ್ಲೆಯ ಹಲವೆಡೆ ಗುಡುಗು, ಸಿಡಿಲು ಸಹಿತ ಮಳೆಯಾಯಿತು. ಹಾಸನ ಜಿಲ್ಲೆಯ ಅರಕಲಗೂಡು ಹಾಗೂ ಸುತ್ತಮುತ್ತ ಸುಮಾರು ಅರ್ಧಗಂಟೆ ಮಳೆ ಸುರಿದಿದೆ. ಹಾಗೆಯೇ ಕೊಡಗು ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಿರ್ಭೀತ ನ್ಯಾಯಮೂರ್ತಿಗಳು ಮತ್ತು ಕಾಕತಾಳೀಯ ಕಾವ್ಯಾತ್ಮಕ ನ್ಯಾಯ
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹೆಚ್ಚು ಮಳೆ
ಹವಾಮಾನ ಇಲಾಖೆಯ ಪ್ರಕಾರ, ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಗುಡುಗು-ಮಿಂಚಿನೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸಾರ್ವಜನಿಕರಿಗೆ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ. ಕಡಿಮೆ ಒಡನಾಟದ ಪ್ರದೇಶಗಳಲ್ಲಿ ಭೂಕುಸಿತದ ಸಾಧ್ಯತೆಯನ್ನು ತಳ್ಳಿಹಾಕದಿರುವುದರಿಂದ, ಮಲೆನಾಡು ಭಾಗದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಕೋರಲಾಗಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದಿನ ಕೆಲವು ದಿನಗಳವರೆಗೆ ಮಳೆಯ ತೀವ್ರತೆ ಮುಂದುವರಿಯುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ರೈತರು ಮತ್ತು ಸಾರ್ವಜನಿಕರು ಮಳೆಗಾಲಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ಪೂರ್ಣಗೊಳಿಸಿಕೊಳ್ಳುವಂತೆ ಜಿಲ್ಲಾಡಳಿತ ಸಲಹೆ ನೀಡಿದೆ.
ತಂಬಾಕು ಬೆಳೆಗಾರರಲ್ಲಿ ಸಂತಸ
ಹಾಸನ, ಕೊಡಗು, ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಹಾಗೂ ಮೈಸೂರಿನಲ್ಲಿ ಬುಧವಾರ ಸಂಜೆ ಬಿರುಸಿನ ಮಳೆ ಸುರಿದಿದ್ದು, ತಂಬಾಕು, ಜೋಳ ಬೆಳೆಗಾರರ ಮುಖದಲ್ಲಿ ಹರ್ಷ ಮೂಡಿದೆ.