ಜಾತಿ ಸಮೀಕ್ಷೆಯ ವರದಿಗೆ ತಾತ್ವಿಕ ಒಪ್ಪಿಗೆ ನೀಡಿರುವ ಕಾಂಗ್ರೆಸ್ ಹೈಕಮಾಂಡ್, ಗಣತಿ ಮಾತ್ರ ಮತ್ತೆ ಮಾಡಲು ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ. ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಸಮೀಕ್ಷೆಯು ಈಗಾಗಲೇ ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದ ನೇತೃತ್ವದಲ್ಲಿ ನಡೆಯುತ್ತಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ಕುರಿತು ಚರ್ಚಿಸಲು ಜೂ.12ರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿಸಚಿವ ಸಂಪುಟದ ವಿಶೇಷ ಸಭೆಯನ್ನು ಕರೆಯಲಾಗಿದೆ. ಈ ನಡುವೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಗಣತಿ ಮಾತ್ರ ಮತ್ತೆ ನಡೆಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದ್ದಾರೆ.
ಇದನ್ನು ಓದಿದ್ದೀರಾ? ಜಾತಿ ಗಣತಿ | ವೈಜ್ಞಾನಿಕ ಸಮೀಕ್ಷೆಗೆ ಹಲವು ಸಮುದಾಯಗಳ ಆಗ್ರಹ: ಡಿಕೆ ಶಿವಕುಮಾರ್
ಮಂಗಳವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ವೇಣುಗೋಪಾಲ್ ಅವರು, “ಜೂನ್ 12ರಂದು ನಡೆಯಲಿರುವ ವಿಶೇಷ ಸಂಪುಟದಲ್ಲಿ ಸರ್ಕಾರ ಜಾತಿ ಸಮೀಕ್ಷೆ ಬಗ್ಗೆ ಚರ್ಚಿಸಲಿದೆ. ಜಾತಿ ಗಣತಿಯ ಈವರೆಗಿನ ವರದಿಯನ್ನು ಕರ್ನಾಟಕ ಸರ್ಕಾರ ತಾತ್ವಿಕವಾಗಿ ಒಪ್ಪುತ್ತದೆ. ಆದರೆ ಜಾತಿ ಗಣತಿಯ ಬಗ್ಗೆ ಕೆಲವು ಜಾತಿಯ ಜನರಿಗೆ ಅನುಮಾನವಿದೆ. ಆದ್ದರಿಂದ ಗಣತಿಯನ್ನು ಮತ್ತೆ ನಡೆಸುವಂತೆ ಕಾಂಗ್ರೆಸ್ ಪಕ್ಷವು ಕರ್ನಾಟಕ ಸರ್ಕಾರಕ್ಕೆ ಸಲಹೆ ನೀಡಿದೆ. ಅದಕ್ಕಾಗಿ ನಿಗದಿತ ಸಮಯ ವಿಧಿಸಲೂ ತಿಳಿಸಲಾಗಿದೆ” ಎಂದು ಹೇಳಿದರು.
ಹೈಕಮಾಂಡ್ ಸಭೆಯ ಬಳಿಕ ಮತ್ತೊಮ್ಮೆ ಜಾತಿ ಗಣತಿ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಘೋಷಿಸಿದ್ದಾರೆ.
ಇನ್ನೊಂದೆಡೆ ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಸಮೀಕ್ಷೆಯು ಈಗಾಗಲೇ ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದ ನೇತೃತ್ವದಲ್ಲಿ ನಡೆಯುತ್ತಿದೆ. ಸಮಿತಿಯು ಮಧ್ಯಂತರ ವರದಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ಪರಿಶಿಷ್ಟ ಜಾತಿಗಳಲ್ಲಿರುವ ಉಪ ಜಾತಿಗಳ ವರ್ಗೀಕರಣಕ್ಕೆ ಹೊಸದಾಗಿ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಬೇಕು ಎಂದು ಹೇಳಿದೆ. ಈ ವರದಿಯನ್ನು ಕರ್ನಾಟಕ ಸರ್ಕಾರ ಒಪ್ಪಿದೆ. ಹಾಗೆಯೇ ಜಾತಿ ಗಣತಿ ಸದ್ಯ ನಡೆಯುತ್ತಿದೆ.
ಆದರೆ ಹವಾಮಾನ ವೈಪರೀತ್ಯ ಸೇರಿದಂತೆ ಹಲವು ಕಾರಣಗಳಿಂದಾಗಿ ಸದ್ಯ ಸಮಗ್ರ ಸಮೀಕ್ಷೆಯ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ. ಈಗಾಗಲೇ ಜೂನ್ 6ರವರೆಗೆ ರಾಜ್ಯದಲ್ಲಿ ಸಮೀಕ್ಷೆಯಲ್ಲಿ ಶೇಕಡ 90ರಷ್ಟು ಪ್ರಗತಿಯಾಗಿದೆ. ಉಳಿದಂತೆ ಸುಮಾರು ಶೇ.10ರಷ್ಟು ಪ್ರಗತಿಯನ್ನು ಸಾಧಿಸಬೇಕಾಗಿದೆ. ಆದ್ದರಿಂದ ಸಮೀಕ್ಷೆಯ ಅವಧಿಯನ್ನು ಜೂ.22ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ವರದಿಯಾಗಿದೆ.
