ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬೆಳಗಾವಿಯ ಸುವರ್ಣಸೌಧದ ಅಧಿವೇಶನದಲ್ಲಿ ಅವಹೇಳನಾಕಾರಿ ಪದ ಬಳಕೆ ಆರೋಪ ಸಂಬಂಧ ದಾಖಲಾದ ಪ್ರಕರಣ ರದ್ದು ಕೋರಿ ಬಿಜೆಪಿ ಶಾಸಕ ಸಿ ಟಿ ರವಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಸಿ.ಟಿ.ರವಿ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿ, “ಆರೋಪಿಸಿದ ಪದ ಉಚ್ಚರಿಸಿದ್ದರೆ, ಅದು ಮಹಿಳೆಯ ಘನತೆಗೆ ಹಾನಿಯಾಗುತ್ತೆ. ಇದು ಶಾಸನಸಭೆಯ ವಿನಾಯಿತಿಗೆ ಒಳಪಡುವುದಿಲ್ಲ” ಪೀಠ ಹೇಳಿದೆ.
ಕೋರ್ಟ್ ಎಫ್‌ಐಆರ್ ರದ್ದತಿಗೆ ಅರ್ಜಿ ಸಲ್ಲಿಸಿದ್ದ ಸಿ.ಟಿ. ರವಿ ಅವರು, “ನಾನು ಶಾಸಕರಾಗಿದ್ದರಿಂದ ನನ್ನ ಮೇಲೆ ಶಾಸನಸಭೆಯ ವಿನಾಯಿತಿ ಇದೆ. ಈ ವಿಷಯವನ್ನು ಸ್ಪೀಕರ್ ನಿರ್ಧರಿಸಬೇಕು” ಎಂದು ವಿಧಾನ ಪರಿಷತ್ ಸದಸ್ಯ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಎಫ್‌ಐಆರ್ ರದ್ದತಿ ಮಾಡದಂತೆ ಲಕ್ಷ್ಮಿ ಹೆಬ್ಬಾಳ್ಕರ್ ಪರ ವಾದ ಮಂಡಿಸಿದ ವಕೀಲ ಶಿವಶಂಕರ್ ಪಾಟೀಲ್, “ಶಾಸಕರಾಗಿದ್ದರೂ ಸಹ, ಮಹಿಳೆಯ ಘನತೆಗೆ ಹಾನಿ ಮಾಡುವ ಅಶ್ಲೀಲ ಪದ ಬಳಸಿದರೆ ಅದು ಶಾಸನಸಭೆಯ ವಿನಾಯಿತಿಗೆ ಒಳಪಡುವುದಿಲ್ಲ” ಎಂದು ವಾದಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಹುಲ್ ಕಾರ್ಯಸೂಚಿಗೆ ಮೋದಿ ಮಣೆ ಹಾಕಿ ಶರಣಾದ ಗುಟ್ಟೇನು?
ಈ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ದೂರುದಾರರೇ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಪ್ರಶ್ನಿಸಿದ್ದರು. ಆಗ ಹೆಬ್ಬಾಳ್ಕರ್ ಪ್ರಕರಣದಲ್ಲಿ ಕಕ್ಷಿದಾರರಾಗಿ ಇರುವುದಾಗಿ ವಕೀಲರು ದೃಢಪಡಿಸಿದ್ದರು. ವಾದ ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಪೀಠ, ಸಿಟಿ ರವಿ ಅವರ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿತು.
ಪ್ರಕರಣದ ಹಿನ್ನೆಲೆ
ಬೆಳಗಾವಿಯಲ್ಲಿ ನಡೆದ ಅಧಿವೇಶನದ ವೇಳೆ ವಿಧಾನ ಪರಿಷತ್ ಸದಸ್ಯರಾದ ಸಿಟಿ ರವಿ ಅವರು ಶಾಸನಸಭೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಕಾಂಗ್ರೆಸ್ ನಾಯಕರು ಅಶ್ಲೀಲ ಪದ ಬಳಕೆಯನ್ನು ಖಂಡಿಸಿ ಹೋರಾಟ ಮಾಡಿದ್ದರು. ಜೊತೆಗೆ, ಸಿ.ಟಿ. ರವಿ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.