ರಾಜ್ಯದಲ್ಲಿ ಜಾರಿಯಲ್ಲಿರುವಂತಹ ಮುಟ್ಟಿನ ರಜೆ ನೀತಿಯನ್ನು ಎಲ್ಲ ವಲಯಗಳು ಮತ್ತು ಸಂಸ್ಥೆಗಳಲ್ಲಿ ‘ಕಟ್ಟುನಿಟ್ಟಾಗಿ ಮತ್ತು ಪ್ರಾಮಾಣಿಕವಾಗಿ’ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ. ಹಾಗೆಯೇ ಮುಟ್ಟಿನ ರಜೆ ‘ಬದುಕುವ ಹಕ್ಕು’ ಎಂದು ಪೀಠ ಹೇಳಿದೆ.
ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಮುಟ್ಟಿನ ರಜೆ ನೀಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಪ್ರಶ್ನಿಸಿ ಬೆಂಗಳೂರು ನಗರದ ಕೆಲವು ಉದ್ಯೋಗಸ್ಥ ಮಹಿಳೆಯರು ಹೈಕೋರ್ಟ್ ಮೆಟ್ಟಿಲೇರಿದ್ದರು. “ಈ ರಜೆಯು ಮಹಿಳೆಯರು ಪುರುಷರಿಗಿಂತ ದುರ್ಬಲರು ಎಂಬ ಭಾವನೆ ಮೂಡಿಸುತ್ತದೆ” ಎಂದು ವಾದಿಸಿದ್ದಾರೆ.
ಇದನ್ನು ಓದಿದ್ದೀರಾ? ಮುಟ್ಟಿನ ರಜೆ | ಸರ್ಕಾರದ ಶೋಕಾಸ್ ನೋಟಿಸ್ಗೆ ಹೈಕೋರ್ಟ್ ಕಿಡಿ
ಇವರೊಂದಿಗೆ ಬೆಂಗಳೂರು ಹೋಟೆಲ್ಗಳ ಸಂಘ ಮತ್ತು ಕರ್ನಾಟಕ ಉದ್ಯೋಗದಾತರ ಸಂಘ ಕೂಡ ಈ ಅಧಿಸೂಚನೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿವೆ. ಇನ್ನೊಂದೆಡೆ ಬೆಳಗಾವಿ ಜಿಲ್ಲೆಯ ಹೋಟೆಲ್ ಉದ್ಯೋಗಿಯೊಬ್ಬರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದಾರೆ. ಮುಟ್ಟಿನ ರಜೆ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಕೋರಿ ಬೆಳಗಾವಿಯ ಹೊಟೇಲ್ ಉದ್ಯೋಗಿ ಚಂದ್ರವ್ವ ಹಣುಮಂತ ಗೋಕಾವಿ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ನ ಧಾರವಾಡ ಪೀಠವು ಆದೇಶವನ್ನು ಕಾಯ್ದಿರಿಸಿತ್ತು. ಈ ಆದೇಶ ಪ್ರಕಟಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ, “ಕಾನೂನಿನ ದೃಷ್ಟಿಯಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನರು. ಆದರೂ ಅವರು (ಮಹಿಳೆಯರು) ಜೈವಿಕವಾಗಿ ಭಿನ್ನರು. ಅಂತಹ ವ್ಯತ್ಯಾಸಗಳನ್ನು ಒಪ್ಪಿಕೊಳ್ಳುವುದು ಸಮಾನತೆಯನ್ನು ಉಲ್ಲಂಘಿಸಿದಂತೆ ಅಲ್ಲ. ವಿಶೇಷವಾಗಿ ಆರೋಗ್ಯ, ಘನತೆ ಮತ್ತು ದೈಹಿಕ ಸ್ವಾಯತ್ತತೆಗೆ ಸಂಬಂಧಿಸಿದ ವಿಷಯಗಳಿಗೆ ಬಂದಾಗ ಅದು ಸಮಾನತೆಯನ್ನು ಉಲ್ಲಂಘಿಸುವುದಲ್ಲ. ಬದಲಾಗಿ ಅದಕ್ಕೆ ಗಣನೀಯ ಅರ್ಥವಿದೆ” ಎಂದು ಹೇಳಿದ್ದಾರೆ.
“ಸಂಘಟಿತ ವಲಯಗಳನ್ನು ಸರ್ಕಾರಿ ಆದೇಶಗಳು ಮತ್ತು ಶಾಸಕಾಂಗ ಹಸ್ತಕ್ಷೇಪದ ಮೂಲಕ ನಿಯಂತ್ರಿಸಬಹುದಾದರೂ, ಅಸಂಘಟಿತ ವಲಯಕ್ಕೆ ಹೆಚ್ಚು ಅನುಕೂಲಕರ ಕಾರ್ಯವಿಧಾನದ ಅಗತ್ಯವಿದೆ. ಆದಾಗ್ಯೂ, ಈ ಚೌಕಟ್ಟುಗಳನ್ನು ಮೀರಿ, ಸಮಾಜದ ಎಲ್ಲ ವಿಭಾಗಗಳನ್ನು ಸಂವೇದನಾಶೀಲಗೊಳಿಸುವ, ಜಾಗೃತಿ, ಸಹಾನುಭೂತಿಗೊಳಿಸುವ ಕಾರ್ಯ ಆಗಬೇಕಿದೆ. ರಾಜ್ಯದ ಪ್ರತಿಯೊಂದು ಮೂಲೆಯನ್ನು ತಲುಪುವ ನಿರಂತರ ಮತ್ತು ವ್ಯಾಪಕ ಪ್ರಯತ್ನ ಕಡ್ಡಾಯವಾಗಿದೆ” ಎಂದೂ ಹೈಕೋರ್ಟ್ ಅಭಿಪ್ರಾಯಿಸಿದೆ.
“ಋತುಚಕ್ರವನ್ನು ಸಾಮಾನ್ಯವಾಗಿ ಮುಟ್ಟು ಎಂದು ಕರೆಯಲಾಗುತ್ತದೆ. ಇದು ಅಸಹಜವಲ್ಲ. ಮಹಿಳೆಯರ ಸಂತಾನೋತ್ಪತ್ತಿ ಪ್ರಕ್ರಿಯೆಯ ನೈಸರ್ಗಿಕ ಮತ್ತು ಅನಿವಾರ್ಯ ಅಂಶ. ಇದು ಮಾಸಿಕವಾಗಿ ಆಗುತ್ತದೆ. ರಕ್ತಸ್ರಾವ ಸಾಮಾನ್ಯವಾಗಿ 3 ರಿಂದ 7 ದಿನಗಳವರೆಗೆ ಇರುತ್ತದೆ. ಈ ವೇಳೆ ಅಸ್ವಸ್ಥತೆ, ಆಯಾಸ, ನೋವು ಇರುತ್ತದೆ. ಭಾವನಾತ್ಮಕವಾಗಿ ಏರಿಳಿತಗಳಾಗುತ್ತದೆ” ಎಂದೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು 2025ರ ಡಿಸೆಂಬರ್ನಲ್ಲಿ ಹೈಕೋರ್ಟ್ನ ಬೆಂಗಳೂರು ಪೀಠವು ಈ ಅಧಿಸೂಚನೆಗೆ ಆರಂಭದಲ್ಲಿ ತಡೆಯಾಜ್ಞೆ ನೀಡಿತ್ತು. ಆದರೆ, ಸರ್ಕಾರದ ವಾದ ಆಲಿಸಿದ ನಂತರ ಅದೇ ದಿನ ಆ ತಡೆಯಾಜ್ಞೆಯನ್ನು ಹಿಂಪಡೆಯಲಾಗಿತ್ತು.




