ಮಳೆ ನಿಂತರೂ, ಮಳೆಯ ಹನಿ ಮುಗಿಯದು ಎನ್ನುವ ರೀತಿ ದಾವಣಗೆರೆ ದಕ್ಷಿಣ ಉಪಚುನಾವಣೆ ಕಣದಲ್ಲಿ, ಚುನಾವಣೆ ಮುಗಿದರೂ ಸೋಲು ಗೆಲುವಿನ ಲೆಕ್ಕಾಚಾರ ಮಾತ್ರ ಬಿಸಿಯಾಗಿದೆ. ಅದರಲ್ಲೂ ದಾವಣಗೆರೆ ಉಪಸಮರದ ನಂತರ ಕಾಂಗ್ರೆಸ್‌ನಲ್ಲಿ ಮುಸ್ಲಿಮರಿಗೊಂದು ನ್ಯಾಯ, ಲಿಂಗಾಯತರಿಗೊಂದು ನ್ಯಾಯ ಎನ್ನುವ ಪರಿಸ್ಥಿತಿ ಬಂದೊದಗಿದೆ. ಎಲ್ಲರಿಗೂ ಗೊತ್ತಿರುವ ಹಾಗೇ ಕಾಂಗ್ರೆಸ್‌ನಲ್ಲಿ ಅನೇಕ ಮುಸ್ಲಿಂ ನಾಯಕರ ತಲೆದಂಡ ಆಗಿದೆ, ಆಗುತ್ತಲೇ ಇದೆ.
ಮೊನ್ನೆ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮತ್ತು ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅವರ ಪ್ರಾಥಮಿಕ ಸದಸ್ಯತ್ವವನ್ನು ಕಸಿದುಕೊಳ್ಳಲಾಯಿತು. ನೆನ್ನೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್ ಅವರ ಸ್ಥಾನದಿಂದ ತೆರವುಗೊಳಿಸಿ ಆದೇಶ ಹೊರಡಿಸಲಾಯಿತು. ಈ ಎರಡೂ ಆದೇಶಗಳ ಹಿಂದೆ ದಾವಣಗೆರೆ ಉಪಸಮರವೇ ಕಾರಣ ಎಂದು ಹೇಳಲಾಗುತ್ತಿದೆ. ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿರುವ ಕಾರಣ ಅವರ ಹುದ್ದೆಯಿಂದ ಹಿಂದೆ ಸರಿಸಲಾಗಿದೆ ಎಂದು ಉಪಮುಖ್ಯಮಂತ್ರಿಯಿಂದ ಹಿಡಿದು, ಕಾಂಗ್ರೆಸ್‌ನ ಹಿರಿಯ ನಾಯಕರೆಲ್ಲ ಮಾಧ್ಯಮಗಳ ಮುಂದೆ ಬಂದು ಹೇಳುತ್ತಿದ್ದಾರೆ.
ದಾವಣಗೆರೆ ಉಪಚುನಾವಣೆಯ ಫಲಿತಾಂಶ ಇನ್ನೂ ಬಂದಿಲ್ಲ. ಆದರೂ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಸೋತರೆ ಪಕ್ಷದ ಮುಸ್ಲಿಮ್ ನಾಯಕರೇ ಷಡ್ಯಂತ್ರ ರೂಪಿಸಿದ್ದರೆಂಬ ಆರೋಪ ಮಾಡಲಾಗುತ್ತಿದೆ. ಷಡ್ಯಂತ್ರ ಮಾಡಿದವರು ಯಾರೆಂದು ನೇರವಾಗಿ ಹೇಳದೆ, ಪಕ್ಷದ ನಿಷ್ಠಾವಂತರನ್ನೇ ತೆಗೆಯಲಾಗಿದೆ ಎಂದು ಕೂಡ ಆರೋಪ ಕೇಳಿ ಬಂದಿದೆ. ಇದರ ಜೊತೆಗೆ ಸಚಿವ ಸಂಪುಟ ಪುನರ್ ರಚನೆ ವೇಳೆ ಜಮೀರ್ ಅವರನ್ನು ಕೈಬಿಡಲಾಗುತ್ತದೆಯಾ ಎಂಬ ಚರ್ಚೆ ಕೂಡ ನಡೆಯುತ್ತಿದೆ. ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಕಣಕ್ಕೆ ಇಳಿಸಿದ್ದೆ ಜಮೀರ್, ಪಕ್ಷ ಸೂಚನೆ ನೀಡದರೂ ಸಾದಿಕ್ ಪೈಲ್ವಾನ್ ಮನವೊಲಿಸಿ ತೆಗೆಯಲಿಲ್ಲ. ಜಮೀರ್ ಮನಸ್ಸು ಮಾಡಿದ್ದರೆ ಇನ್ನು ಕೆಲವು ಸ್ವಾತಂತ್ರ ಮುಸ್ಲಿಂ ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್ಸು ಪಡೆಯಬಹುದಿತ್ತು. ಜಮೀರ್ ನೆಪಮಾತ್ರಕ್ಕೆ ದಾವಣಗೆರೆಗೆ ಹೋದರು ಎನ್ನುವ ಆರೋಪಗಳನ್ನು ಮಾಡಲಾಗುತ್ತಿದೆ.
ನಸೀರ್ ಅಹ್ಮದ್ ವಿಚಾರದಲ್ಲಿ ಕಾಂಗ್ರೆಸ್ ದೊಡ್ಡ ತಪ್ಪನ್ನೇ ಮಾಡಿದೆ. ನಸೀರ್ ಅಹ್ಮದ್ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಕ್ಯಾಬಿನೆಟ್ ಸ್ಥಾನಮಾನವನ್ನು ಹೊಂದಿದ್ದರು. ಮುಸ್ಲಿಮ್ ಅಭ್ಯರ್ಥಿಗಳಿಗೆ ನ್ಯಾಯಯುತವಾಗಿ ಸಿಗಬೇಕಿದ್ದ ಸಚಿವ ಸ್ಥಾನ ಕೊಡದಿದ್ದಕ್ಕೆ ಸಮಾಧಾನಕರ ಬಹುಮಾನದಂತಿದ್ದ ಸ್ಥಾನವದು. ದಶಕಗಳ ಕಾಲ ಪಕ್ಷಕ್ಕಾಗಿ ದುಡಿದ ಹಿರಿಯ ರಾಜಕಾರಣಿಯ ಸ್ಥಾನವನ್ನು ವಜಾ ಮಾಡಿ ಕಾಂಗ್ರೆಸ್ ಅವಮಾನ ಮಾಡಿದೆ ಅಂತಾನೇ ಹೇಳಬೇಕು. ʼನಸೀರ್ ಅಹ್ಮದ್ ಅವರು ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಿಲ್ಲ. ಸಮರ್ಥ್ ಏನಾದರೂ ಸೋತರೆ ನಸೀರ್ ಅಹ್ಮದ್ ಕೂಡ ಕಾರಣʼ ಎಂದು ಆರೋಪಿಸಿ ಅವರ ಹುದ್ದೆಯಿಂದ ವಜಾ ಮಾಡಲಾಗಿದೆ ಎಂಬ ಮಾತು ಚರ್ಚೆಯಾಗುತ್ತಿದೆ.
ಇನ್ನೊಂದು ಕಡೆ ಅಬ್ದುಲ್ ಜಬ್ಬಾರ್ ಅವರ ಮೇಲೆ ಶಿಸ್ತು ಕ್ರಮಕೈಗೊಂಡಾಗಲೂ ಕೂಡ ಇದೇ ರೀತಿ ಸಬೂಬನ್ನು ಹೇಳಲಾಗಿತ್ತು. ಆದರೆ ಜಬ್ಬಾರ್ ಅವರೇ, ಚುನಾವಣೆಯ ವಾರದ ಮುಂಚೆ ಮಾಧ್ಯಮ ಮುಂದೆ ಬಂದು, ʼನನ್ನನ್ನು ಚುನಾವಣಾ ಪ್ರಚಾರಕ್ಕೆ ಕರೆಯುತ್ತಿಲ್ಲ. ನಾನು ದಾವಣಗೆರೆಯವನೇ. ಮಲ್ಲಿಕಾರ್ಜುನ್ ಒಂದು ಮಾತನ್ನು ಕರೆದಿಲ್ಲ. ನಾವಿಲ್ಲದೆ ಗೆಲ್ಲುತ್ತೀವಿ ಅಂತ ಹೇಳಿದ್ದಾರೆ. ಅವರು ಕರೆಯದೆ ಹೋದರೂ ನಾನು ಪಕ್ಷದ ಪರವಾಗಿ ಮನೆಯಿಂದಲೇ ಕುಳಿತು ಕೆಲಸ ಮಾಡುತ್ತಿದ್ದೇನೆʼ ಎಂದು ಹೇಳಿದ್ದರು. ಚುನಾವಣೆ ಆಗುವ ತನಕ ಕಾದು ಜಬ್ಬಾರ್ ಅವರು ರಾಜೀನಾಮೆ ಕೊಡಬೇಕು ಎಂದು ಕೆಪಿಸಿಸಿಯಿಂದಲೇ ಆದೇಶವನ್ನು ಹೊರಡಿಸಲಾಯಿತು. ಸ್ವತಃ ಡಿ ಕೆ ಶಿವಕುಮಾರ್ ಅವರೇ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಹೇಳಿಕೆಯನ್ನು ಕೊಟ್ಟರು.
ಈ ಮೇಲಿನ ಮುಸ್ಲಿಮ್ ನಾಯಕರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಆರೋಪಿಸಿ, ಪಕ್ಷದ ಉನ್ನತ ಸ್ಥಾನದಿಂದ ಕೈಬಿಟ್ಟ ಕಾಂಗ್ರೆಸ್ ತನ್ನ ಗುಂಡಿಯನ್ನು ತಾನೇ ತೋಡಿಕೊಂಡಂತೆ ಕಾಣುತ್ತಿದೆ. ಇದರಿಂದ ಒಂದಂತು ಸ್ಪಷ್ಟವಾಗುತ್ತದೆ. ಕಾಂಗ್ರೆಸ್‌ನಲ್ಲಿ ಮುಸ್ಲಿಮರಿಗೊಂದು ನ್ಯಾಯ, ಲಿಂಗಾಯತರೊಂದು ನ್ಯಾಯ.
ಯಾವುದೇ ಪಕ್ಷವು ಅಭ್ಯರ್ಥಿಯನ್ನು ಘೋಷಣೆ ಮಾಡಿದ ನಂತರವಷ್ಟೇ ನಾಮಪತ್ರವನ್ನು ಸಲ್ಲಿಸಬೇಕು. ಆದರೆ ಶಾಮನೂರು ಅವರ ಮೊಮ್ಮಗ, ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆಯಾಗುವ ಮೊದಲೇ ʼಸಮರ್ಥ್ʼ ನಾಮಪತ್ರವನ್ನು ಸಲ್ಲಿಸಿ ಬಂದಿದ್ದರು. ಇದು ಪಕ್ಷ ವಿರೋಧಿ ಚಟುವಟಿಕೆಯಾಗಿ ಕಾಣುವುದಿಲ್ಲವೇ? ಇದೇ ಶಾಮನೂರು ಶಿವಶಂಕರಪ್ಪ ಅವರು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಪರವಾಗಿ ಮತಯಾಚನೆಯನ್ನು ಮಾಡಿದ್ದರು. ಆಗ ಕಾಂಗ್ರೆಸ್ ಪಕ್ಷದ ವಿರುದ್ಧ ನಡೆದುಕೊಂಡಿದ್ದು ಪಕ್ಷ ವಿರೋಧಿಯಲ್ಲವೇ?
ದಾವಣಗೆರೆಯಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ಮಾಡಿಕೊಂಡಿದ್ದ ಶಾಮನೂರು ಶಿವಶಂಕರಪ್ಪ ಗೆದ್ದು ಬರುತ್ತಿದ್ದದ್ದು, ಮುಸ್ಲಿಮ್ ಮತದಾರರಿಂದಲೇ ಎನ್ನುವುದನ್ನು ಮರೆಯಬಾರದು. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಇಷ್ಟು ದೊಡ್ಡ ಮಟ್ಟದಲ್ಲಿ ಗೆಲ್ಲಲು ಮುಸ್ಲಿಮ್ ಅಭ್ಯರ್ಥಿಗಳು ಹಾಗೂ ಮತದಾರರು ಕಾಂಗ್ರಸ್ ಪರವಾಗಿ ಶ್ರಮಿಸಲೇ ಇಲ್ಲವೆ. ಹಾಗೇ ನೋಡಿದರೆ, ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸಿದ್ದರಾಮಯ್ಯ ಅವರನ್ನೂ ಘೋಷಿಸಿದಾಗಲೂ, ಕುರುಬ ಸಮುದಾಯದ ಬಹುತೇಕ ಮತಗಳು ಕಾಂಗ್ರೆಸ್‌ಗೆ ಬರಲೇ ಇಲ್ಲ. ಇಡೀ ಮುಸ್ಲಿಂ ಸಮುದಾಯದ ಒಟ್ಟು ಶೇ.88 ರಷ್ಟು ಮತಗಳು ಕಾಂಗ್ರೆಸ್‌ಗೆ ಬಂದಿವೆ. ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 136 ಸ್ಥಾನಗಳಲ್ಲಿ ಗೆದ್ದು ಬರಲು ಮುಸ್ಲಿಮ್ ಮತದಾರರೇ ಪ್ರಮುಖ ಕಾರಣ.
ಬೇರೆ ಬೇರೆ ಯಾವ ಸಮುದಾಯಗಳು ಎಂದು ಗಮನಿಸಿದರೆ, ಎಸ್‌ಟಿ ಸಮುದಾಯದ್ದು ಶೇ.44, ಎಸ್‌ಸಿ ಸಮುದಾಯದ್ದು ಶೇ.66 ಮತಗಳು, ಕುರುಬ ಸಮುದಾಯದ್ದು ಶೇ.63ರಷ್ಟು ಮತಗಳು, ಮುಸ್ಲಿಂ ಸಮುದಾಯದ್ದು ಶೇ.88 ರಷ್ಟು ಮತಗಳು, ಒಕ್ಕಲಿಗ ಸಮುದಾಯದ್ದು ಶೇ.24 ಮತಗಳು, ಲಿಂಗಾಯತ ಸಮುದಾಯದ್ದು ಶೇ. 20 ಮತಗಳು, ಇತರ ಹಿಂದುಳಿದ ವರ್ಗದ್ದು ಶೇ.31ರಷ್ಟು ಮತಗಳನ್ನು ಕಾಂಗ್ರೆಸ್ ಪಕ್ಷ ಪಡೆದಿತ್ತು.
ದಾವಣಗೆರೆ ದಕ್ಷಿಣವು ಅಹಿಂದ ಮತದಾರರಿರುವ ಕ್ಷೇತ್ರ. ಅಹಿಂದ ಸಮುದಾಯಕ್ಕೆ, ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯಕ್ಕೆ ಟಿಕೆಟ್ ಕೊಡಬೇಕು ಎನ್ನುವ ಬೇಡಿಕೆ ಇದ್ದಾಗಲೂ ಕೂಡ, ಕಾಂಗ್ರೆಸ್ ವಂಶ ಪಾರಂಪರ್ಯ ರಾಜಕಾರಣಕ್ಕೆ ತಲೆಬಾಗಿ ಸಾಹುಕಾರ್ ಶಾಮನೂರು ಶಿವಶಂಕರಪ್ಪನವರ ಮೊಮ್ಮಗನಿಗೆ ಟಿಕೆಟ್ ನೀಡಿ, ರಾಜಕೀಯ ಮೌಲ್ಯ, ಸಿದ್ಧಾಂತಕ್ಕೆ ಎಳ್ಳುನೀರು ಬಿಟ್ಟಿತು. ದಾವಣಗೆರೆ ದಕ್ಷಿಣ ಮುಸ್ಲಿಮರು ಗೆಲ್ಲುವ ಕ್ಷೇತ್ರವಾಗಿದ್ದರೂ, ಕಾಂಗ್ರೆಸ್ ಟಿಕೆಟ್ ನೀಡದೆ ಮುಸ್ಲಿಮರನ್ನು ಕಡೆಗಣಿಸಿತು. ಮುಸ್ಲಿಮ್ ಸಮುದಾಯದ ಮತಗಳನ್ನು ಪಡೆದು ಅಧಿಕಾರವನ್ನು ಹಿಡಿದ ಪಕ್ಷ, ಈಗ ಮುಸ್ಲಿಮರ ಮೇಲೆಯೇ ಗೂಬೆ ಕೂರಿಸಿ, ಮುಸ್ಲಿಮ್ ಸಮುದಾಯಕ್ಕೆ ಕೊಡುತ್ತಿರುವುದು ಮಾತ್ರ, ರಾಜೀನಾಮೆ ಮತ್ತು ವಜಾ ಆದೇಶಗಳು. ಒಟ್ಟಿನಲ್ಲಿ ಗೆದ್ದರೆ ಲಿಂಗಾಯತರು, ಸೋತರೆ ಮುಸ್ಲಿಮರು ಎನ್ನುವ ಅನ್ಯಾಯದ ಸಿದ್ದಾಂತಕ್ಕೆ ಕಾಂಗ್ರೆಸ್ ಬಂದು ನಿಂತಂತೆ ಕಾಣುತ್ತಿದೆ. ಮೊದಲೇ ಹೇಳಿದಂತೆ ತನ್ನ ಗುಂಡಿಯನ್ನು ತಾನೇ ತೋಡಿಕೊಂಡು ಬಿಳುವ ಪರಿಸ್ಥಿತಿಗೆ ಕಾಂಗ್ರೆಸ್ ಬಂದು ನಿಂತಿದೆ.





