ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮನೆಗೆಲಸದಾಕೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಇಂದು ನಡೆಸಿದ್ದು ಅರ್ಜಿಯ ತೀರ್ಪನ್ನು ಕಾಯ್ದಿರಿಸಿದೆ.
ಒಟ್ಟು ನಾಲ್ಕು ಪ್ರಕರಣದಲ್ಲಿ ಜಾಮೀನು ಅರ್ಜಿ ಮತ್ತು ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪನ್ನು ನೀಡಲಾಗುವುದು ಎಂದು ಕೋರ್ಟ್ ಹೇಳಿದೆ. ಈ ಹಿಂದೆ ಒಂದು ಜಾಮೀನು ಅರ್ಜಿ ಹಾಗೂ ಎರಡು ನಿರೀಕ್ಷಣಾ ಜಾಮೀನು ಅರ್ಜಿಗಳ ಆದೇಶವನ್ನು ಕಾಯ್ದಿರಿಸಲಾಗಿತ್ತು.
ಇದನ್ನು ಓದಿದ್ದೀರಾ? ಅತ್ಯಾಚಾರ ಪ್ರಕರಣ | ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ವಿಚಾರಣೆ ವೇಳೆ “ಘಟನೆ ಭಯಾನಕವಾಗಿದೆ. ಆರೋಪ ಪಟ್ಟಿಯಲ್ಲಿ ನೋಡಿದರೆ ಹೀನವಾಗಿದೆ” ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಹೇಳಿದೆ.
ಸಂತ್ರಸ್ತೆ ಪರವಾಗಿ ಎಸ್‌ಪಿಪಿ ಪ್ರೊ. ರವಿವರ್ಮ ಕುಮಾರ್ ವಾದ ಮಂಡಿಸಿದ್ದಾರೆ. ದೂರು ದಾಖಲಾಗುವುದಕ್ಕೂ ಮುನ್ನ ಒಂದು ವರ್ಷದ ಹಿಂದೆ ವಿಚಾರಣಾಧೀನ ನ್ಯಾಯಾಲಯದಿಂದ ಪ್ರಜ್ವಲ್ ರೇವಣ್ಣ ಪ್ರತಿಬಂಧಕಾದೇಶ ಪಡೆದುಕೊಂಡಿದ್ದರು ಎಂಬ ಪ್ರಸ್ತಾಪವನ್ನು ಮಾಡಿದ್ದಾರೆ.
“ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಪ್ರತಿಬಂಧಕಾದೇಶ ಪಡೆದಿದ್ದೇಕೆ” ಎಂದು ಹೈಕೋರ್ಟ್ ಪ್ರಜ್ವಲ್ ಪರ ವಕೀಲರನ್ನು ಪ್ರಶ್ನಿಸಿದೆ. “ಪ್ರಜ್ವಲ್ ಡ್ರೈವರ್ ಆಗಿದ್ದ ಕಾರ್ತಿಕ್ ಈ ವಿಡಿಯೋಗಳನ್ನು ಕಳುಹಿಸಿದ್ದ. ಆ ಕಾರಣದಿಂದಾಗಿ ಪ್ರತಿಬಂಧಕಾದೇಶ ಪಡೆಯಲಾಗಿದೆ” ಎಂದು ಪ್ರಜ್ವಲ್ ಪರ ವಕೀಲ ಪ್ರಭುಲಿಂಗ ನಾವದಗಿ ಹೇಳಿದ್ದಾರೆ.
