ʼಪತ್ನಿಯ ಮೇಲಿನ ಆಸಕ್ತಿ ಕಳೆದುಕೊಂಡಿದ್ದೇನೆʼ ಎಂಬ ಕಾರಣಕ್ಕೆ ಪತಿಯೊಬ್ಬರು ವೈವಾಹಿಕ ಸಂಬಂಧವನ್ನು ಮುರಿದು ವಿಚ್ಛೇದನ ಪಡೆಯಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
“ಹಿಂದೂ ಕಾನೂನಿನ ಪ್ರಕಾರ ವಿವಾಹವು ಕೇವಲ ಒಪ್ಪಂದವಲ್ಲ, ಅದು ಪವಿತ್ರ ಸಂಸ್ಕಾರ. ಒಮ್ಮೆ ವಿವಾಹವಾದ ಬಳಿಕ ಅದು ಜೀವನಪರ್ಯಂತದ ಬಾಂಧವ್ಯವಾಗಿದ್ದು, ವೈಯಕ್ತಿಕ ಆಸಕ್ತಿ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಅದನ್ನು ಮುರಿಯಲು ಅವಕಾಶವಿಲ್ಲ” ಎಂದು ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ.ಎಂ. ನದಾಫ್ ಅವರ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ಈ ಪ್ರಕರಣದಲ್ಲಿ ಮೈಸೂರಿನ ಕೌಟುಂಬಿಕ ನ್ಯಾಯಾಲಯವು ಪತಿಯ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿ, ಪತ್ನಿಯ ವೈವಾಹಿಕ ಸಂಬಂಧ ಪುನರ್ಸ್ಥಾಪನೆ (Restitution of Conjugal Rights) ಅರ್ಜಿಯನ್ನು ಮಾನ್ಯ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತಿಯು ಕುಟುಂಬ ನ್ಯಾಯಾಲಯಗಳ ಕಾಯ್ದೆ, 1984 ಹಾಗೂ ಹಿಂದೂ ವಿವಾಹ ಕಾಯ್ದೆ, 1955ರ ಸೆಕ್ಷನ್ 13(1A) ಅಡಿಯಲ್ಲಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ವಿವರಗಳ ಪ್ರಕಾರ, ದಂಪತಿ 2003ರ ಡಿಸೆಂಬರ್ 15ರಂದು ಪ್ರೇಮ ವಿವಾಹವಾಗಿದ್ದರು. ಅನ್ಯಜಾತಿಯ ಈ ದಂಪತಿಗೆ ವಯಸ್ಕ ಪುತ್ರಿಯೂ ಇದ್ದಾಳೆ. ಪತಿಯು ವಿಚ್ಛೇದನ ಕೋರಿದ್ದರೆ, ಪತ್ನಿ ವೈವಾಹಿಕ ಜೀವನ ಪುನರ್ಸ್ಥಾಪನೆಗೆ ಮನವಿ ಸಲ್ಲಿಸಿದ್ದರು. ಎರಡೂ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯವು ಪತ್ನಿಯ ಅರ್ಜಿಯನ್ನು ಪುರಸ್ಕರಿಸಿ, ಪತಿಯ ಅರ್ಜಿಯನ್ನು ವಜಾಗೊಳಿಸಿತ್ತು.
ಮೇಲ್ಮನವಿಯಲ್ಲಿ, ವೈವಾಹಿಕ ಜೀವನ ಪುನರ್ಸ್ಥಾಪಿಸುವಂತೆ ನ್ಯಾಯಾಲಯ ಆದೇಶಿಸಿದ್ದರೂ ಪತ್ನಿ ತನ್ನೊಂದಿಗೆ ವಾಸಿಸಲು ಒಪ್ಪುತ್ತಿಲ್ಲ. ಆಕೆಯನ್ನು ಮನವೊಲಿಸುವ ಎಲ್ಲ ಪ್ರಯತ್ನಗಳೂ ವಿಫಲವಾಗಿದ್ದು, ವೈವಾಹಿಕ ಸಂಬಂಧ ಸಂಪೂರ್ಣವಾಗಿ ಮುರಿದುಬಿದ್ದಿದೆ ಎಂದು ಪತಿ ವಾದಿಸಿದ್ದರು.
ಇದಕ್ಕೆ ಪ್ರತಿಯಾಗಿ ಪತ್ನಿ, ತಾನು ಪತಿ ಹಾಗೂ ಅವರ ಪೋಷಕರನ್ನು ಜವಾಬ್ದಾರಿಯಿಂದ ನೋಡಿಕೊಂಡಿದ್ದೇನೆ. ಪ್ರತ್ಯೇಕ ಮನೆ ಮಾಡುವಂತೆ ಎಂದಿಗೂ ಒತ್ತಾಯಿಸಿಲ್ಲ. ಪತಿಯ ಕುಟುಂಬದ ಸಂಪ್ರದಾಯಗಳನ್ನು ಗೌರವಿಸಿ ಯಾವುದೇ ಕಲಹವಿಲ್ಲದೆ ಬದುಕಿದ್ದೇನೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಪ್ರಕರಣದ ವಿಚಾರಣೆ ವೇಳೆ ಪತಿಯು, ತಾನು ವೈವಾಹಿಕ ಜೀವನದಲ್ಲಿ ಆಸಕ್ತಿ ಕಳೆದುಕೊಂಡ ಕಾರಣ ಸಹಜೀವನ ನಡೆಸಿಲ್ಲ ಎಂದು ಒಪ್ಪಿಕೊಂಡಿರುವುದನ್ನೂ ಹೈಕೋರ್ಟ್ ಗಮನಿಸಿತು. ಕೌಟುಂಬಿಕ ನ್ಯಾಯಾಲಯವೂ ಪತ್ನಿಯಿಂದ ಕ್ರೌರ್ಯ ನಡೆದಿರುವುದು ಸಾಬೀತಾಗಿಲ್ಲ ಎಂದು ಹೇಳಿತ್ತು.
ಇದನ್ನೂ ಓದಿ: ‘ನಿಮ್ಮ ಬಾಯ್ಫ್ರೆಂಡ್ಗೆ ರಾಜೀನಾಮೆ ಕೊಡಲು ಹೇಳಿ’; ಮೆಲೋನಿ ಪೋಸ್ಟ್ಗೆ ರಾಖಿ ಸಾವಂತ್ ಕಾಮೆಂಟ್ ವೈರಲ್
ಪತಿಯ ಪರ ವಕೀಲರು, “ವೈವಾಹಿಕ ಸಂಬಂಧವನ್ನು ಮುಂದುವರಿಸಲು ಪತಿಗೆ ಯಾವುದೇ ಆಸಕ್ತಿ ಉಳಿದಿಲ್ಲ. ಪ್ರಾಯೋಗಿಕವಾಗಿ ಈ ಮದುವೆ ಅಂತ್ಯಗೊಂಡಿರುವುದರಿಂದ ವಿಚ್ಛೇದನ ನೀಡಬೇಕು” ಎಂದು ವಾದಿಸಿದರು.
ಆದರೆ ಈ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, “ಪ್ರೇಮ ವಿವಾಹವಾಗಿ, ವಯಸ್ಕ ಮಗಳ ತಂದೆಯಾಗಿರುವ ವ್ಯಕ್ತಿ ನಂತರ ‘ಮದುವೆಯಲ್ಲಿ ಆಸಕ್ತಿ ಇಲ್ಲ’ ಎಂಬ ಕಾರಣ ಹೇಳಿ ವಿಚ್ಛೇದನ ಕೋರುವುದು ತನ್ನದೇ ತಪ್ಪಿನ ಲಾಭ ಪಡೆಯುವ ಪ್ರಯತ್ನವಾಗಿದೆ. ಹಿಂದೂ ಕಾನೂನಿನಡಿ ವಿವಾಹವು ಪವಿತ್ರ ಸಂಸ್ಕಾರವೇ ಹೊರತು ಸಾಮಾನ್ಯ ಒಪ್ಪಂದವಲ್ಲ. ಆಸಕ್ತಿ ಕಳೆದುಕೊಂಡಿದ್ದೇನೆ ಎಂಬ ಕಾರಣ ಮಾತ್ರಕ್ಕೆ ವೈವಾಹಿಕ ಸಂಬಂಧವನ್ನು ಮುರಿಯಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಹೇಳಿ, ಪತಿಯ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.





