ದೃಶ್ಯ ಚೌಕಟ್ಟಿನಲ್ಲಿ ನೆರಳು ಮತ್ತು ಬೆಳಕಿನ ನಿಯಂತ್ರಣವು ಕೇವಲ ತಾಂತ್ರಿಕ ಪ್ರಕ್ರಿಯೆಯಾಗಿರದೆ, ಕಥೆಯ ಭಾವನಾತ್ಮಕ ವಾತಾವರಣವನ್ನು ನಿರ್ಣಯಿಸುವ ಮುಖ್ಯ ಮಾಧ್ಯಮವಾಗಿದೆ. ಈ ಹಿನ್ನೆಲೆಯಲ್ಲಿ, ಸಿನಿಮಾಟೋಗ್ರಫಿಯಲ್ಲಿ ಬಳಕೆಯಾಗುವ ಪ್ರತಿಯೊಂದು ಲೈಟಿಂಗ್ ವಿನ್ಯಾಸದ ಕಲಾತ್ಮಕ ಬೇರುಗಳು ಇತಿಹಾಸದ ಚಿತ್ರಕಲೆಯಲ್ಲಿ ರೂಪುಗೊಂಡ ದೃಶ್ಯ ನಿಯಮಗಳಲ್ಲೇ ಗಟ್ಟಿಯಾಗಿ ನಿಂತಿವೆ.
ಸಿನಿಮಾಟೋಗ್ರಫಿ ಎಂದರೆ ಬೆಳಕಿನ ಪ್ರತಿಫಲನ ಮತ್ತು ನೆರಳುಗಳ ಆಟದ ಮೂಲಕ ಕತ್ತಲೆಗೇ ಒಂದು ರೂಪ ಕೊಡುವ ಕಲೆ. ಮಾನವನ ಕಣ್ಣಿಗೆ ಬೆಳಕು ನೇರವಾಗಿ ಕಾಣಿಸುವುದಿಲ್ಲ, ಅದು ವಸ್ತುಗಳ ಮೇಲೆ ಬಿದ್ದು ಪ್ರತಿಫಲಿಸಿದಾಗ ಮಾತ್ರ ಆಕಾರಗಳು ಗೋಚರವಾಗುತ್ತವೆ. ಬೆಳಕು ದೃಶ್ಯದ ಬಾಹ್ಯ ಸ್ವರೂಪವನ್ನು ತೋರಿಸಿದರೆ, ನೆರಳು ಅದರ ಆಂತರಿಕ ಅರ್ಥ ಮತ್ತು ಮೌನವನ್ನು ಸೂಚಿಸುತ್ತದೆ. ಚಪ್ಪಟೆಯಾದ ಮೇಲ್ಮೈಗೆ ದೃಶ್ಯದ ಆಳ ಮತ್ತು ಭಾವನೆಗಳನ್ನು ತುಂಬುವ ಈ ತಂತ್ರವು ಶತಮಾನಗಳ ಹಿಂದಿನ ಚಿತ್ರಕಾರರಿಗೆ ಸಿದ್ಧಿಸಿತ್ತು. ಮೇಣದಬತ್ತಿಗಳಿಂದ ಇಂದಿನ ಆಧುನಿಕ ಎಲ್‌ಇಡಿ ಪ್ಯಾನಲ್‌ಗಳವರೆಗೆ ತಂತ್ರಜ್ಞಾನ ವಿಕಸನಗೊಂಡಿದ್ದರೂ, ಭಾವನೆಗಳನ್ನು ದೃಶ್ಯೀಕರಿಸಲು ಇಂದಿಗೂ ಜಗತ್ತಿನ ಛಾಯಾಗ್ರಾಹಕರು ಆಶ್ರಯಿಸುವುದು ಅಂದು ಚಿತ್ರಕಾರರು ಕಂಡುಕೊಂಡ ಅದೇ ನೆರಳು-ಬೆಳಕಿನ ಮೂಲ ನಿಯಮಗಳನ್ನು. ಸಿನೆಮಾದಲ್ಲಿ ಚಿತ್ರಕಥೆ ಮತ್ತು ನಟನೆಯಷ್ಟೇ ಪ್ರಮುಖ ಸ್ಥಾನವನ್ನು ಪಡೆಯುವ ಬೆಳಕಿನ ವಿನ್ಯಾಸಕ್ಕೆ, ಚಿತ್ರಕಲೆಯ ಈ ಮೂಲ ತತ್ವಗಳೇ ಅಡಿಪಾಯ.
ಚಲನಚಿತ್ರದ ಚೌಕಟ್ಟಿನಲ್ಲಿ ಲೈಟಿಂಗ್ ಕೇವಲ ವಸ್ತುಗಳನ್ನು ದೃಶ್ಯೀಕರಿಸುವುದಕ್ಕೆ ಸೀಮಿತವಾಗದೆ, ಇಡೀ ಸನ್ನಿವೇಶದ ಭಾವನಾತ್ಮಕ ವಾತಾವರಣವನ್ನು ನಿರ್ಣಯಿಸುತ್ತದೆ. ಉನ್ನತ ವ್ಯತಿರಿಕ್ತ ಅನುಪಾತದ ನೆರಳು-ಬೆಳಕಿನ ವಿನ್ಯಾಸವು ದೃಶ್ಯದಲ್ಲಿ ನಿಗೂಢತೆ ಅಥವಾ ಸಂಘರ್ಷದ ವಾತಾವರಣವನ್ನು ಸೃಷ್ಟಿಸಿದರೆ, ಮೃದುವಾದ ಬೆಳಕು ನಿರಾಳತೆಯನ್ನು ತರುತ್ತದೆ. ಪಾತ್ರದ ಮುಖದ ಒಂದು ಭಾಗವನ್ನು ಮಾತ್ರ ಬೆಳಗಿಸಿ, ಇನ್ನೊಂದು ಭಾಗವನ್ನು ಕತ್ತಲೆಯಲ್ಲಿಡುವ ತಂತ್ರವು ಆ ಪಾತ್ರದ ಒಳಗಿನ ರಹಸ್ಯ ಅಥವಾ ದ್ವಂದ್ವವನ್ನು ಬಿಂಬಿಸುತ್ತದೆ. ಅಷ್ಟೇ ಅಲ್ಲದೆ, ಪ್ರಕಾಶಮಾನವಾದ ಭಾಗದ ಕಡೆಗೆ ಕಣ್ಣುಗಳು ಸ್ವಾಭಾವಿಕವಾಗಿ ಆಕರ್ಷಿತವಾಗುವ ಭೌತಿಕ ನಿಯಮವನ್ನು ಬಳಸಿ ಛಾಯಾಗ್ರಾಹಕರು ಪ್ರೇಕ್ಷಕನ ಗಮನವನ್ನು ಮುಖ್ಯ ಅಂಶದ ಕಡೆಗೆ ಮುನ್ನಡೆಸುತ್ತಾರೆ. ತಾಂತ್ರಿಕವಾಗಿ ಮತ್ತು ಕಲಾತ್ಮಕವಾಗಿ ಸಿನೆಮಾದಲ್ಲಿ ಬಳಕೆಯಾಗುವ ಈ ಎಲ್ಲಾ ದೃಶ್ಯ ತಂತ್ರಗಳ ಮೂಲ ಬೇರುಗಳು ಇರುವುದು ಹಳೆಯ ಪ್ರಸಿದ್ಧ ಚಿತ್ರಕಾರರು ರೂಪಿಸಿದ ನೆರಳು-ಬೆಳಕಿನ ಇತಿಹಾಸದಲ್ಲೇ ಎಂಬುದು ಗಮನಾರ್ಹ.

ಇಟಾಲಿಯನ್ ಭಾಷೆಯ ‘ಟೆನೆಬ್ರೋಸೊ’ (ಗಾಢ ಕತ್ತಲೆ) ಪದದಿಂದ ಬಂದ ಟೆನೆಬ್ರಿಸಮ್ ಶೈಲಿಯು ಸಿನೆಮಾದ ಕರಾಳ ದೃಶ್ಯಾವಳಿಗಳಿಗೆ ಮೂಲ ಆಧಾರ. ಈ ಶೈಲಿಯಲ್ಲಿ ಕತ್ತಲೆಯು ಕೇವಲ ನೆರಳಾಗಿರದೆ ಇಡೀ ಚೌಕಟ್ಟನ್ನು ಆವರಿಸುವ ಮುಖ್ಯ ಮಾಧ್ಯಮವಾಗಿರುತ್ತದೆ. 16ನೇ ಶತಮಾನದ ಇಟಾಲಿಯನ್ ಕಲಾವಿದ ಕ್ಯಾರವಾಜಿಯೊನ ‘ಜುಡಿತ್ ಬಿಹೆಡಿಂಗ್ ಹೊಲೊಫೆರ್ನೆಸ್’ (Judith Beheading Holofernes) ವರ್ಣಚಿತ್ರದಲ್ಲಿ ಈ ತಂತ್ರದ ಸ್ಪಷ್ಟ ರೂಪವಿದೆ. ದಟ್ಟ ಕತ್ತಲೆಯ ನಡುವೆ ನಿರ್ದಿಷ್ಟ ದಿಕ್ಕಿನಿಂದ ಬರುವ ತೀಕ್ಷ್ಣ ಬೆಳಕು ಪಾತ್ರಗಳ ಮುಖ ಮತ್ತು ಹಾವಭಾವಗಳನ್ನು ಮಾತ್ರ ಅನಾವರಣಗೊಳಿಸುತ್ತದೆ. ಪಾತ್ರದ ಆಂತರಿಕ ಕದನ, ರಹಸ್ಯ ಅಥವಾ ನೈತಿಕ ಸಂಘರ್ಷವನ್ನು ಬಿಂಬಿಸಲು ಸುತ್ತಲಿನ ಪರಿಸರವನ್ನು ಕತ್ತಲೆಯಲ್ಲಿ ಮರೆಮಾಚಿ, ವಿಷಯದ ಮೇಲೆ ಮಾತ್ರ ಕಟುವಾದ ಬೆಳಕನ್ನು ಬೀಳಿಸುವುದು ಈ ಶೈಲಿಯ ವೈಶಿಷ್ಟ್ಯ. ಬೆಲಾ ಟಾರ್ ನಿರ್ದೇಶನದ ‘ವೆಕ್ಮಿಸ್ಟರ್ ಹಾರ್ಮೋನಿಸ್’ (Werckmeister Harmonies) ಚಿತ್ರದಲ್ಲಿ ಪರಿಸರದ ಶೂನ್ಯತೆಯನ್ನು ತರಲು ಮತ್ತು ಕತ್ತಲೆಯ ಹಿನ್ನೆಲೆಯಿಂದ ಪಾತ್ರಗಳನ್ನು ಎದ್ದು ಕಾಣಿಸಲು ಈ ಟೆನೆಬ್ರಿಸಮ್ ಶೈಲಿಯನ್ನೇ ಬಳಸಲಾಗಿದೆ.
ಇದನ್ನು ಓದಿದ್ದೀರಾ?: ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’: ಪುರಾಣ, ಅಸ್ತಿತ್ವ ಮತ್ತು ಸಿನೆಮಾದ ಹೊಸ ಭಾಷೆ
ಈ ಕಟು ತಂತ್ರಕ್ಕೆ ಭಿನ್ನವಾಗಿ, 17ನೇ ಶತಮಾನದ ಡಚ್ ಚಿತ್ರಕಾರ ರೆಂಬ್ರಾಂಟ್ ಅವರ ಶೈಲಿಯಿಂದ ರೂಪಿತಗೊಂಡ ‘ರೆಂಬ್ರಾಂಟ್ ಲೈಟಿಂಗ್’, ಕಿಯಾರೊಸ್ಕುರೊ ತತ್ವಕ್ಕೆ ಮುಖ್ಯ ಉದಾಹರಣೆ. ಈ ತಂತ್ರದಲ್ಲಿ ಚಪ್ಪಟೆಯಾದ ಮೇಲ್ಮೈಗೆ ಹೊಸ ಆಯಾಮ ತರಲು ಬೆಳಕು ಮತ್ತು ನೆರಳುಗಳನ್ನು ಸಮತೋಲನದಲ್ಲಿ ಬಳಸಲಾಗುತ್ತದೆ. ಇಲ್ಲಿ ಕತ್ತಲೆ ಮತ್ತು ಬೆಳಕಿನ ನಡುವೆ ಮೃದುವಾದ ಪಲ್ಲಟವಿರುತ್ತದೆ. ಪಾತ್ರದ ಮುಖದ ಒಂದು ಭಾಗದಲ್ಲಿ ದಟ್ಟವಾದ ನೆರಳು ಮತ್ತು ಅದರ ನಡುವೆಯೇ ಕೆನ್ನೆಯ ಮೇಲೆ ಮೂಡುವ ಸಣ್ಣ ಬೆಳಕಿನ ತ್ರಿಕೋನ ಈ ವಿನ್ಯಾಸದ ಮುಖ್ಯ ಲಕ್ಷಣ. ಚಿತ್ರಕಲೆಯಲ್ಲಿ ಮುಖದ ರಚನೆಗೆ ಗಾಢತೆ ನೀಡಲು ಬಳಸುತ್ತಿದ್ದ ಈ ಕೌಶಲವು ಪಾತ್ರಗಳ ಆಂತರಿಕ ದ್ವಂದ್ವ ಹಾಗೂ ಗಾಂಭೀರ್ಯವನ್ನು ತೋರ್ಪಡಿಸಲು ನೆರವಾಗುತ್ತದೆ. ಇಂಗ್ಮಾರ್ ಬರ್ಗ್‌ಮನ್ ನಿರ್ದೇಶನದ ‘ಪರ್ಸೋನಾ’ (Persona) ಚಿತ್ರದಲ್ಲಿ ಛಾಯಾಗ್ರಾಹಕ ಸ್ವೆನ್ ನೈಕ್ವಿಸ್ಟ್ ಅವರು ಪಾತ್ರಗಳ ನಡುವಿನ ಗುರುತಿನ ಸಂಘರ್ಷ ಮತ್ತು ತಲ್ಲಣಗಳನ್ನು ಬಿಂಬಿಸಲು ಈ ಮೃದು ನೆರಳಿನ ವಿನ್ಯಾಸವನ್ನೇ ಪ್ರಮುಖವಾಗಿ ಬಳಸಿದ್ದಾರೆ.

ಕ್ಯಾರವಾಜಿಯೊ ಮತ್ತು ರೆಂಬ್ರಾಂಟ್ ಅವರ ನಾಟಕೀಯ ಕತ್ತಲೆಗೆ ಭಿನ್ನವಾಗಿ, 17ನೇ ಶತಮಾನದ ಡಚ್ ಚಿತ್ರಕಾರ ಜೊಹಾನ್ಸ್ ವರ್ಮೀರ್ ಅವರದ್ದು ಮೃದುವಾದ ನೈಸರ್ಗಿಕ ಬೆಳಕಿನ ಶೈಲಿ. ಇವರ ‘ಗರ್ಲ್ ವಿತ್ ಎ ಪರ್ಲ್ ಇಯರಿಂಗ್’ (Girl with a Pearl Earring) ವರ್ಣಚಿತ್ರದಲ್ಲಿ ಬೆಳಕು ಒಂದು ಬದಿಯ ಕಿಟಕಿಯಿಂದ ಪ್ರವೇಶಿಸಿ, ಪಾತ್ರದ ಮೇಲೆ ಸೂಕ್ಷ್ಮವಾಗಿ ಹರಡುವ ಕ್ರಮ ಸ್ಪಷ್ಟವಾಗಿದೆ. ಇಲ್ಲಿ ಕಟುವಾದ ನೆರಳುಗಳಿರುವುದಿಲ್ಲ; ಬೆಳಕು ಮತ್ತು ಕತ್ತಲೆ ಸಹಜವಾಗಿ ಒಂದರೊಳಗೊಂದು ಲೀನವಾಗುತ್ತವೆ. ದೈನಂದಿನ ಬದುಕಿನ ನೈಜತೆ ಹಾಗೂ ಆಂತರಿಕ ಮೌನವನ್ನು ತೋರ್ಪಡಿಸಲು ಛಾಯಾಗ್ರಾಹಕರು ಇಂದಿಗೂ ಈ ಕಿಟಕಿ ಬೆಳಕಿನ ವಿನ್ಯಾಸವನ್ನು ಆಶ್ರಯಿಸುತ್ತಾರೆ. ಆಂಡ್ರೇ ತಾರ್ಕೊವ್ಸ್ಕಿ ನಿರ್ದೇಶನದ ‘ನೋಸ್ಟಾಲ್ಜಿಯಾ’ (Nostalghia) ಚಿತ್ರದಲ್ಲಿ ಪಾತ್ರಗಳ ಒಂಟಿತನ ಮತ್ತು ನಿಶ್ಯಬ್ದವನ್ನು ಬಿಂಬಿಸಲು ಈ ಮೃದುವಾದ ಏಕದಿಕ್ಕಿನ ನೈಸರ್ಗಿಕ ಬೆಳಕನ್ನೇ ಪ್ರಮುಖ ದೃಶ್ಯ ಕ್ರಮವಾಗಿ ಬಳಸಲಾಗಿದೆ.

ಆಧುನಿಕ ಕ್ಯಾಮೆರಾಗಳು ಆವಿಷ್ಕಾರವಾಗುವ ಎರಡು ಶತಮಾನಗಳ ಮೊದಲೇ ವರ್ಮೀರ್ ಬೆಳಕಿನ ಸ್ವರೂಪವನ್ನು ಅಭ್ಯಸಿಸಲು ‘ಕ್ಯಾಮೆರಾ ಅಬ್ಸ್‌ಕ್ಯೂರಾ’ (Camera Obscura) ಸಾಧನವನ್ನು ಬಳಸುತ್ತಿದ್ದರು. ಇದು ಕತ್ತಲಾವೃತವಾದ ಪೆಟ್ಟಿಗೆಯಾಗಿದ್ದು, ಅದರ ಒಂದು ಬದಿಯ ಸಣ್ಣ ರಂಧ್ರದ ಮೂಲಕ ಹೊರಗಿನ ಬೆಳಕು ಪ್ರವೇಶಿಸಿದಾಗ ಎದುರಿನ ಮೇಲ್ಮೈ ಮೇಲೆ ಹೊರಗಿನ ದೃಶ್ಯವು ತಲೆಕೆಳಗಾಗಿ ಮೂಡುತ್ತದೆ. ಮಾನವನ ಕಣ್ಣು ವಸ್ತುಗಳ ಅಂಚುಗಳನ್ನು ನಿಖರವಾಗಿಯೇ ಗ್ರಹಿಸುತ್ತದೆ; ಆದರೆ ವರ್ಮೀರ್ ಈ ಸಾಧನದ ಲೆನ್ಸ್ ಮೂಲಕ ಮೂಡುತ್ತಿದ್ದ ದೃಶ್ಯದ ಆಳ ಮತ್ತು ಮೃದುತ್ವವನ್ನು ಗುರುತಿಸಿದ್ದರು. ಹೀಗಾಗಿಯೇ ಅವರ ಚಿತ್ರಗಳಲ್ಲಿ ಬಣ್ಣಗಳ ಕಟುವಾದ ಅಂಚುಗಳು ಕಾಣಿಸುವುದಿಲ್ಲ; ಅಲ್ಲಿ ಬೆಳಕು ಮತ್ತು ಕತ್ತಲೆ ಅತ್ಯಂತ ಸಹಜವಾಗಿ ಒಂದರಲ್ಲೊಂದು ಬೆರೆತಿರುತ್ತವೆ. ತಂತ್ರಜ್ಞಾನ ಮತ್ತು ದೃಶ್ಯ ಪ್ರಜ್ಞೆಯ ಈ ಜೋಡಣೆಯಿಂದಾಗಿ, ಕಲಾ ವಿಮರ್ಶಕರು ವರ್ಮೀರ್ ಅವರನ್ನು ಇತಿಹಾಸದ ಮೊದಲ ‘ಛಾಯಾಗ್ರಾಹಕ’ ಎಂದೇ ಪರಿಗಣಿಸುತ್ತಾರೆ.
ಇದನ್ನು ಓದಿದ್ದೀರಾ?: ಪ್ರೀತಮ್ ಅಂಡ್ ಪೆಡ್ರೊ | ಮುದ ನೀಡುವ ಸೈಬರ್ ಕ್ರೈಮ್ ಕಾಮಿಡಿ ಥ್ರಿಲ್ಲರ್
ಕ್ಯಾರವಾಜಿಯೊ ಮತ್ತು ರೆಂಬ್ರಾಂಟ್ ಅವರ ಚಿತ್ರಗಳಲ್ಲಿ ಬೆಳಕು ಬರುವ ಮೂಲವು ಚೌಕಟ್ಟಿನ ಒಳಗೆ ನೇರವಾಗಿ ಕಾಣಿಸುವುದಿಲ್ಲ, ಅದು ಕೇವಲ ಒಂದು ನಿರ್ದಿಷ್ಟ ದಿಕ್ಕಿನಿಂದ ಬೀಳುವ ಬೆಳಕು. ಜಾರ್ಜಸ್ ಡಿ ಲಾ ಟೂರ್ ಅವರ ಶೈಲಿಯು ಸಿನಿಮಾಟೋಗ್ರಫಿಯ ‘ಮೋಟಿವೇಟೆಡ್ ಲೈಟಿಂಗ್’ (Motivated Lighting) ತಂತ್ರಕ್ಕೆ ಸ್ಪಷ್ಟ ಮುನ್ಸೂಚನೆಯಾಗಿದೆ. ಚಲನಚಿತ್ರದ ಚೌಕಟ್ಟಿನ ಒಳಗೆ ಕಾಣಿಸುವ ಬೆಳಕಿನ ವಿನ್ಯಾಸಕ್ಕೆ ಒಂದು ತಾರ್ಕಿಕ ಕಾರಣವನ್ನು ಕೊಡುವುದೇ ಈ ತಂತ್ರದ ಮುಖ್ಯ ಉದ್ದೇಶ. ದೃಶ್ಯದಲ್ಲಿನ ಬೆಳಕು ಕೇವಲ ತಾಂತ್ರಿಕ ಕಸುಬಿನ ಭಾಗವಾಗಿರದೆ, ಅಲ್ಲಿನ ಪರಿಸರಕ್ಕೆ ಸಹಜವಾದ ಮೂಲದಿಂದಲೇ ಬರುತ್ತಿದೆ ಎಂಬ ಭ್ರಮೆಯನ್ನು ಇದು ಸೃಷ್ಟಿಸುತ್ತದೆ. ಇವರ ವರ್ಣಚಿತ್ರಗಳಲ್ಲಿ ಬೆಳಕಿನ ಮೂಲವು ದೃಶ್ಯದ ಒಳಗೇ ಇರುತ್ತದೆ. ಸಾಮಾನ್ಯವಾಗಿ ಒಂದು ಮೇಣದಬತ್ತಿ, ತೈಲ ದೀಪ ಅಥವಾ ಪಂಜು ಇಡೀ ದೃಶ್ಯವನ್ನು ಬೆಳಗಿಸುತ್ತವೆ. ಇವರ ‘ಮ್ಯಾಗ್ಡಲೀನ್ ವಿತ್ ದ ಸ್ಮೋಕಿಂಗ್ ಫ್ಲೇಮ್’ (Magdalene with the Smoking Flame) ಚಿತ್ರದಲ್ಲಿ ಜ್ವಾಲೆಯಿಂದ ಹೊರಹೊಮ್ಮುವ ಮೃದುವಾದ ಹಳದಿ ಬಣ್ಣದ ಬೆಳಕು ಪಾತ್ರದ ಮೇಲೆ ಬೀಳುತ್ತದೆ. ಪಾತ್ರವು ತನ್ನ ಕೈಯನ್ನು ದೀಪದ ಜ್ವಾಲೆಗೆ ಅಡ್ಡಲಾಗಿ ಹಿಡಿದಾಗ, ಬೆಳಕು ಚರ್ಮದ ಮೇಲ್ಮೈಯನ್ನು ತೂರಿ ಒಳಗಿನ ರಕ್ತದ ಕೆಂಪು ಛಾಯೆಯನ್ನು ಹೊರಚೆಲ್ಲುವ ನೈಸರ್ಗಿಕ ಸ್ವರೂಪವನ್ನು ಇವರು ತಮ್ಮ ಚಿತ್ರಗಳಲ್ಲಿ ನಿಖರವಾಗಿ ದಾಖಲಿಸಿದ್ದರು. ಗಾಢ ಕತ್ತಲೆಯ ನಡುವೆ ಕೇವಲ ಒಂದು ಮೇಣದಬತ್ತಿಯ ಬೆಳಕಿನಿಂದ ಸೃಷ್ಟಿಯಾಗುವ ಈ ವಿನ್ಯಾಸವು ದೃಶ್ಯದ ಗಾಂಭೀರ್ಯ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ಸ್ಟಾನ್ಲಿ ಕುಬ್ರಿಕ್ ನಿರ್ದೇಶನದ ‘ಬ್ಯಾರಿ ಲಿಂಡನ್’ (Barry Lyndon) ಚಿತ್ರದಲ್ಲಿ ಛಾಯಾಗ್ರಾಹಕ ಜಾನ್ ಅಲ್ಕಾಟ್ ಅವರು ಡಿ ಲಾ ಟೂರ್ ಅವರ ಈ ಚಿತ್ರಕಲಾ ಶೈಲಿಯನ್ನು ನೇರವಾಗಿ ಸಿನಿಮಾಗೆ ಅಳವಡಿಸಿಕೊಂಡಿದ್ದಾರೆ. ಚಿತ್ರದ ರಾತ್ರಿಯ ಆಂತರಿಕ ದೃಶ್ಯಗಳನ್ನು ಕೃತಕ ಲೈಟ್‌ಗಳ ನೆರವಿಲ್ಲದೆ, ಕೇವಲ ಮೇಣದಬತ್ತಿಗಳ ಪ್ರಕಾಶದಲ್ಲೇ ಚಿತ್ರೀಕರಿಸಲಾಗಿದೆ. ಇದಕ್ಕಾಗಿ ಅಪೋಲೋ ಚಂದ್ರಯಾನದ ವೇಳೆ ಕಡಿಮೆ ಬೆಳಕಿನಲ್ಲಿ ಬಾಹ್ಯಾಕಾಶದ ಚಿತ್ರಗಳನ್ನು ತೆಗೆಯಲು ನಾಸಾ (NASA) ಅಭಿವೃದ್ಧಿಪಡಿಸಿದ್ದ ವಿಶೇಷ Zeiss f/0.7 ಲೆನ್ಸ್‌ಗಳನ್ನು ಬಳಸಲಾಗಿತ್ತು. ಮಾನವನ ಕಣ್ಣಿಗಿಂತಲೂ ಹೆಚ್ಚು ಬೆಳಕನ್ನು ಹೀರಿಕೊಳ್ಳುವ ಈ ಲೆನ್ಸ್‌ನ ತಾಂತ್ರಿಕ ಸಾಮರ್ಥ್ಯದಿಂದಾಗಿ, ದೃಶ್ಯದಲ್ಲಿನ ಮೇಣದಬತ್ತಿಯ ಜ್ವಾಲೆಯೇ ಇಡೀ ಚೌಕಟ್ಟನ್ನು ಬೆಳಗಿಸುವ ಮುಖ್ಯ ಮೂಲವಾಗಿರುತ್ತದೆ. ಪಾತ್ರಗಳ ಮುಖದ ಮೇಲೆ ಮೂಡುವ ಮೃದುವಾದ ಹಳದಿ ಪ್ರಕಾಶ ಮತ್ತು ಸುತ್ತಲಿನ ಗಾಢ ಕತ್ತಲೆಯು ಡಿ ಲಾ ಟೂರ್ ಅವರ ವರ್ಣಚಿತ್ರಗಳು ಪರದೆಯ ಮೇಲೆ ಚಲಿಸುವಂತಹ ದೃಶ್ಯಾನುಭವವನ್ನು ನೀಡುತ್ತದೆ. ಚಿತ್ರಕಲೆಯ ಈ ತತ್ವವು ಸಿನಿಮಾಟೋಗ್ರಫಿಯ ಅತ್ಯಂತ ಗಂಭೀರ ಪ್ರಯೋಗವಾಗಿ ರೂಪಾಂತರಗೊಂಡಿರುವುದಕ್ಕೆ ಈ ಚಿತ್ರವೇ ಮುಖ್ಯ ಉದಾಹರಣೆ.
ಇದನ್ನು ಓದಿದ್ದೀರಾ?: ‘ಸಟ್ಲುಜ್’ ಸಿನಿಮಾ: ಹೇಳಬೇಕಾಗಿದ್ದೇನು, ಹೇಳಿದ್ದೇನು?
ಕ್ಯಾರವಾಜಿಯೊ ಅಥವಾ ವರ್ಮೀರ್ ಅವರಂತಹ ಹಳೆಯ ಚಿತ್ರಕಾರರು ಸ್ಟುಡಿಯೋದ ನಿಯಂತ್ರಿತ ವಾತಾವರಣದಲ್ಲಿ ಚಿತ್ರ ಬಿಡಿಸುತ್ತಿದ್ದರು. ಕ್ಲಾಡ್ ಮೊನೆ ಮತ್ತು ಇಂಪ್ರೆಷನಿಸ್ಟ್ ಕಲಾವಿದರು ಸ್ಟುಡಿಯೋದಿಂದ ಹೊರಬಂದು, ನೈಸರ್ಗಿಕ ಪರಿಸರದಲ್ಲಿ ಚಿತ್ರಿ ರಚಿಸಲು ಆರಂಭಿಸಿದರು. ಬೆಳಕು ಮತ್ತು ಬಣ್ಣಗಳು ಸ್ಥಿರವಾಗಿರದೆ ಸಮಯ ಕಳೆದಂತೆ ಕ್ಷಣಕ್ಷಣಕ್ಕೂ ಬದಲಾಗುತ್ತವೆ ಎಂಬುದನ್ನು ಗ್ರಹಿಸಿದ್ದು ಇವರ ಮುಖ್ಯ ಕೊಡುಗೆ. ಮೊನೆ ಅವರು ಒಂದೇ ವಸ್ತುವನ್ನು ದಿನದ ವಿಭಿನ್ನ ಸಮಯಗಳಲ್ಲಿ ಹಾಗೂ ಬದಲಾಗುವ ಹವಾಮಾನಗಳಲ್ಲಿ ಚಿತ್ರಿಸಿ ಬೆಳಕಿನ ತಾಪಮಾನಕ್ಕೆ ತಕ್ಕಂತೆ ವಸ್ತುವಿನ ಬಣ್ಣ ಬದಲಾಗುವ ಸ್ವರೂಪವನ್ನು ದಾಖಲಿಸಿದರು. ಇವರ ಚಿತ್ರಗಳಲ್ಲಿ ನೆರಳು ಎಂದರೆ ಕೇವಲ ಕಪ್ಪು ಬಣ್ಣವಲ್ಲ, ಅಲ್ಲಿ ಬೆಳಕಿನ ಪ್ರತಿಫಲನದಿಂದಾಗಿ ನೆರಳುಗಳು ನೀಲಿ, ನೇರಳೆ ಅಥವಾ ಹಸಿರು ಛಾಯೆಯನ್ನು ಪಡೆದುಕೊಳ್ಳುತ್ತವೆ ಎಂಬುದನ್ನು ಇವರು ನಿರೂಪಿಸಿದರು.

ಸಿನಿಮಾಟೋಗ್ರಫಿಯಲ್ಲಿ ದಿನದ ಒಂದು ನಿರ್ದಿಷ್ಟ ಸಮಯದ ಬೆಳಕನ್ನು, ಮುಖ್ಯವಾಗಿ ಸೂರ್ಯಾಸ್ತದ ಮುಂಚಿನ ‘Golden hour’ ಅಥವಾ ಸೂರ್ಯಾಸ್ತದ ನಂತರದ ‘Blue hour’ ಅನ್ನು ಸೆರೆಹಿಡಿಯಲು ಕಾಯುವ ತಂತ್ರಕ್ಕೆ ಮೊನೆ ಅವರ ಈ ಸಿದ್ಧಾಂತವೇ ಮೂಲ ಪ್ರೇರಣೆ. ಟೆರೆನ್ಸ್ ಮಾಲಿಕ್ ನಿರ್ದೇಶನದ ‘ಡೇಸ್ ಆಫ್ ಹೆವೆನ್’ ಚಿತ್ರದಲ್ಲಿ ಛಾಯಾಗ್ರಾಹಕ ನೆಸ್ಟರ್ ಅಲ್ಮೆಂಡ್ರೋಸ್ ಅವರು ಈ ಶೈಲಿಯನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡಿದ್ದರು. ಯಾವುದೇ ಕೃತಕ ಲೈಟ್‌ಗಳನ್ನು ಬಳಸದೆ, ಕೇವಲ ದಿನದ ಇಪ್ಪತ್ತು ನಿಮಿಷಗಳ ನೈಸರ್ಗಿಕ ಬೆಳಕಿನ Golden hour ಅವಧಿಯಲ್ಲೇ ಇಡೀ ಚಿತ್ರದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಯಿತು. ಈ ಮೂಲಕ ಮೊನೆ ಅಂದು ಚಿತ್ರಕಲೆಯಲ್ಲಿ ದಾಖಲಿಸಿದ್ದ ಬೆಳಕಿನ ಕ್ಷಣಿಕ ಸ್ವರೂಪವು ಸಿನೆಮಾದ ಚೌಕಟ್ಟಿನಲ್ಲೂ ಸಾಕಾರಗೊಂಡಿತು.
ಇದನ್ನು ಓದಿದ್ದೀರಾ?: ಜಾನಕಿ ಅಮ್ಮ | ಭಾಷೆ, ಸೀಮೆಗಳ ಗಡಿದಾಟಿದ ಸ್ವರಯಾನ; ಕಂಠಸಿರಿಯ ಸಂಗೀತಯಾನ
ಪ್ರಕೃತಿಯ ಬೆಳಕನ್ನು ನೈಜವಾಗಿ ಬಿಂಬಿಸುವ ಸಾಂಪ್ರದಾಯಿಕ ಕ್ರಮವನ್ನು ಜರ್ಮನ್ ಎಕ್ಸ್‌ಪ್ರೆಷನಿಸ್ಟ್ ಶೈಲಿಯು ತಿರಸ್ಕರಿಸಿತು. ನಾರ್ವೆಯ ಚಿತ್ರಕಾರ ಎಡ್ವರ್ಡ್ ಮಂಕ್ ಅವರ ‘ದ ಸ್ಕ್ರೀಮ್’ (The Scream) ವರ್ಣಚಿತ್ರದ ಪ್ರೇರಣೆಯಿಂದ ಮೂಡಿದ ಈ ದೃಶ್ಯ ಕ್ರಮದಲ್ಲಿ, ಬೆಳಕು ಮತ್ತು ನೆರಳು ಕೇವಲ ಭೌತಿಕ ಅಂಶಗಳಾಗಿ ಉಳಿಯುವುದಿಲ್ಲ; ಅವು ಪಾತ್ರಗಳ ಆಂತರಿಕ ಭಯ ಹಾಗೂ ನಿರಾಶೆಯನ್ನು ಬಿಂಬಿಸುವ ಮಾಧ್ಯಮಗಳಾಗುತ್ತವೆ. ಇಲ್ಲಿ ಬೆಳಕು ಮತ್ತು ನೆರಳುಗಳ ಬಳಕೆ ಅಸಹಜವಾಗಿರುತ್ತದೆ. ಗೋಡೆಗಳ ಮೇಲೆ ಮೂಡುವ ನೆರಳುಗಳು ಉದ್ದವಾಗಿ ಮತ್ತು ಕೋನಾಕಾರದಲ್ಲಿ ಇರುತ್ತವೆ. ಕೇವಲ ಬೆಳಕಿನಿಂದ ನೆರಳು ಸೃಷ್ಟಿಸದೆ, ಗೋಡೆ ಮತ್ತು ನೆಲದ ಮೇಲೆಯೇ ಕಪ್ಪು ಬಣ್ಣದಿಂದ ವಿಕೃತ ಆಕಾರಗಳನ್ನು ಚಿತ್ರಿಸುವ ಕ್ರಮ ಈ ಶೈಲಿಯಲ್ಲಿದೆ. ಈ ತಂತ್ರವು ಇಡೀ ದೃಶ್ಯಕ್ಕೆ ಅತಿವಾಸ್ತವಿಕ ರೂಪವನ್ನು ನೀಡುತ್ತದೆ.

ರಾಬರ್ಟ್ ವೀನೆ ನಿರ್ದೇಶನದ ‘ದ ಕ್ಯಾಬಿನೆಟ್ ಆಫ್ ಡಾ. ಕ್ಯಾಲಿಗಾರಿ’ (The Cabinet of Dr. Caligari- 1920) ಚಿತ್ರದಲ್ಲಿ ಈ ಶೈಲಿಯನ್ನು ಸಂಪೂರ್ಣವಾಗಿ ಬಳಸಲಾಯಿತು. ಪಾತ್ರದ ಮನಸ್ಥಿತಿಯಲ್ಲಿನ ಗೊಂದಲ ಮತ್ತು ಹತಾಶೆಯನ್ನು ತೋರ್ಪಡಿಸಲು ಇಡೀ ಸೆಟ್‌ಗಳ ಮೇಲೆ ಜ್ಯಾಮಿತೀಯ ಕತ್ತಲೆಯ ಆಕಾರಗಳನ್ನು ಬಿಡಿಸಲಾಗಿತ್ತು. ಚಲನಚಿತ್ರ ಇತಿಹಾಸದಲ್ಲಿ ಮುಂದೆ ಹಾಲಿವುಡ್‌ನಲ್ಲಿ ಹುಟ್ಟಿಕೊಂಡ ಕರಾಳ ಸಿನೆಮಾ ಶೈಲಿಯಾದ ‘ಫಿಲ್ಮ್ ನೋಯ್ರ್’ (Film Noir) ಚಿತ್ರಗಳಿಗೆ ಜರ್ಮನ್ ಎಕ್ಸ್‌ಪ್ರೆಷನಿಸಮ್‌ನ ಈ ಕೃತಕ ಹಾಗೂ ತೀಕ್ಷ್ಣ ನೆರಳುಗಳ ವಿನ್ಯಾಸವೇ ಪ್ರಮುಖ ಪ್ರೇರಣೆಯಾಯಿತು.
19ನೇ ಶತಮಾನದ ಸ್ಪ್ಯಾನಿಷ್ ಚಿತ್ರಕಾರ ಫ್ರಾನ್ಸಿಸ್ಕೋ ಗೋಯಾ ತಮ್ಮ ಬದುಕಿನ ಅಂತಿಮ ಘಟ್ಟದಲ್ಲಿ ಬಿಡಿಸಿದ ‘ಬ್ಲಾಕ್ ಪೇಂಟಿಂಗ್ಸ್’ (Black Paintings) ಸರಣಿಯು ಮನುಷ್ಯನ ಆಂತರಿಕ ಅಂಧಕಾರ ಮತ್ತು ನೈತಿಕ ಪತನವನ್ನು ಬಿಂಬಿಸುವ ಶ್ರೇಷ್ಠ ಉದಾಹರಣೆ. ಇವರ ಚಿತ್ರಗಳಲ್ಲಿ ಬೆಳಕು ಕೇವಲ ವಸ್ತುವನ್ನು ತೋರಿಸದೆ, ದೃಶ್ಯದ ಭಯಾನಕ ವಾತಾವರಣವನ್ನು ಕಟ್ಟಿಕೊಡುತ್ತದೆ. ಗೋಯಾ ಅವರ ಈ ಕರಾಳ ಶೈಲಿಯು ಆಧುನಿಕ ಫ್ಯಾಂಟಸಿ ಮತ್ತು ಹಾರರ್ ಸಿನಿಮಾಗಳ ದೃಶ್ಯ ವಿನ್ಯಾಸಕ್ಕೆ ಪ್ರಮುಖ ಆಧಾರವಾಗಿದೆ.

ಗಿಲ್ಲೆರ್ಮೊ ಡೆಲ್ ಟೊರೊ ನಿರ್ದೇಶನದ ‘ಪ್ಯಾನ್ಸ್ ಲ್ಯಾಬಿರಿಂತ್’ (Pan’s Labyrinth – 2006) ಚಿತ್ರದ ‘ಪೇಲ್ ಮ್ಯಾನ್’ ದೃಶ್ಯವು ಗೋಯಾ ಅವರ ‘ಸ್ಯಾಟರ್ನ್ ಡಿವೌರಿಂಗ್ ಹಿಸ್ ಸನ್’ ವರ್ಣಚಿತ್ರದ ನೇರ ದೃಶ್ಯ ರೂಪ. ಈ ಸನ್ನಿವೇಶದಲ್ಲಿ ಗೋಯಾ ಶೈಲಿಯ ತೀಕ್ಷ್ಣ ನೆರಳುಗಳು ಮತ್ತು ಕರಾಳ ಜಗತ್ತನ್ನು ಬಿಂಬಿಸುವ ಬೆಚ್ಚಗಿನ ಹಳದಿ-ಕೆಂಪು ಪ್ರಕಾಶದ ವಿನ್ಯಾಸವು ದೃಶ್ಯದ ದಿಗಿಲು ಹಾಗೂ ಗಾಂಭೀರ್ಯವನ್ನು ಹೆಚ್ಚಿಸುತ್ತದೆ.

20ನೇ ಶತಮಾನದ ಅಮೆರಿಕನ್ ಚಿತ್ರಕಾರ ಎಡ್ವರ್ಡ್ ಹಾಪರ್ ಅವರ ಕಲಾಕೃತಿಗಳು ಆಧುನಿಕ ನಗರ ಜೀವನದ ಒಂಟಿತನ ಮತ್ತು ಶೂನ್ಯತೆಯನ್ನು ಪ್ರತಿಫಲಿಸುತ್ತವೆ. ಹಾಪರ್ ತಮ್ಮ ಚಿತ್ರಗಳಲ್ಲಿ ದೊಡ್ಡ ಗಾಜಿನ ಕಿಟಕಿಗಳು, ಹೋಟೆಲ್ ಕೊಠಡಿಗಳು ಅಥವಾ ನಿರ್ಜನ ರಸ್ತೆಗಳ ಚೌಕಟ್ಟನ್ನು ಬಳಸಿ ಪಾತ್ರಗಳನ್ನು ಪರಿಸರದಿಂದ ಪ್ರತ್ಯೇಕಿಸಿ ತೋರಿಸುತ್ತಿದ್ದರು. ‘ನೈಟ್‌ಹಾಕ್ಸ್’ (Nighthawks) ವರ್ಣಚಿತ್ರದಲ್ಲಿ ಕತ್ತಲೆಯ ರಸ್ತೆಯ ಮಧ್ಯೆ ಇರುವ ಕೆಫೆಯೊಳಗಿನ ತೀಕ್ಷ್ಣವಾದ ಫ್ಲೋರೊಸೆಂಟ್ (Fluorescent) ಬೆಳಕು ಈ ಒಂಟಿತನವನ್ನು ತೀವ್ರಗೊಳಿಸುತ್ತದೆ. ಹಾಪರ್ ಅವರ ಈ ದೃಶ್ಯ ವಿನ್ಯಾಸವು ಹಾಲಿವುಡ್‌ನ ‘ಫಿಲ್ಮ್ ನೋಯ್ರ್’ ಶೈಲಿಗೆ ಮತ್ತು ಆಲ್ಫ್ರೆಡ್ ಹಿಚ್‌ಕಾಕ್ ನಿರ್ದೇಶನದ ‘ಸೈಕೋ’ (Psycho) ಹಾಗೂ ‘ರಿಯರ್ ವಿಂಡೋ’ (Rear Window) ಚಿತ್ರಗಳ ದೃಶ್ಯ ಸಂಯೋಜನೆಗೆ ನೇರ ಪ್ರೇರಣೆ ನೀಡಿದೆ. ವಿಮ್ ವೆಂಡರ್ಸ್ ಅಥವಾ ಡೇವಿಡ್ ಲಿಂಚ್ ಅವರ ಚಿತ್ರಗಳಲ್ಲಿ ಕಾಣುವ ನಿರ್ಜನ ನಗರದ ದೃಶ್ಯಗಳಿಗೆ ಹಾಪರ್ ಅವರ ಚಿತ್ರಕಲೆಯೇ ಮೂಲ ಆಧಾರ.
ಇದನ್ನು ಓದಿದ್ದೀರಾ?: A Foggy Tale: ಇತಿಹಾಸದ ಮಂಜಿನೊಳಗೆ ಮಾನವೀಯತೆಯ ಹುಡುಕಾಟ
ದೃಶ್ಯ ಚೌಕಟ್ಟಿನಲ್ಲಿ ನೆರಳು ಮತ್ತು ಬೆಳಕಿನ ನಿಯಂತ್ರಣವು ಕೇವಲ ತಾಂತ್ರಿಕ ಪ್ರಕ್ರಿಯೆಯಾಗಿರದೆ, ಕಥೆಯ ಭಾವನಾತ್ಮಕ ವಾತಾವರಣವನ್ನು ನಿರ್ಣಯಿಸುವ ಮುಖ್ಯ ಮಾಧ್ಯಮವಾಗಿದೆ. ಈ ಹಿನ್ನೆಲೆಯಲ್ಲಿ, ಸಿನಿಮಾಟೋಗ್ರಫಿಯಲ್ಲಿ ಬಳಕೆಯಾಗುವ ಪ್ರತಿಯೊಂದು ಲೈಟಿಂಗ್ ವಿನ್ಯಾಸದ ಕಲಾತ್ಮಕ ಬೇರುಗಳು ಇತಿಹಾಸದ ಚಿತ್ರಕಲೆಯಲ್ಲಿ ರೂಪುಗೊಂಡ ದೃಶ್ಯ ನಿಯಮಗಳಲ್ಲೇ ಗಟ್ಟಿಯಾಗಿ ನಿಂತಿವೆ.

ಬಾಬು ಈಶ್ವರ್ ಪ್ರಸಾದ್
ಲೇಖಕರು, ಚಿತ್ರನಿರ್ದೇಶಕರು, ದೃಶ್ಯ ಕಲಾವಿದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ BFA ಹಾಗೂ ಮಹಾರಾಜಾ ಸಾಯೋಜಿರಾವ್ ವಿಶ್ವವಿದ್ಯಾಲಯ, ವಡೋದರದ ಫೈನ್ ಆರ್ಟ್ಸ್ ಫ್ಯಾಕಲ್ಟಿಯಿಂದ MA ಪದವಿಯನ್ನು ಪಡೆದಿರುತ್ತಾರೆ. 1993ರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಚಿತ್ರಕಲಾ ಪ್ರದರ್ಶನಗಳನ್ನು ಮಾಡಿರುತ್ತಾರೆ. ಚಿತ್ರಕಲೆಯ ಹೊರತಾಗಿಯೂ, ಇವರಿಗೆ ಶಿಲ್ಪ, ಧ್ವನಿ ವಿನ್ಯಾಸ, ಫೋಟೋಗ್ರಫಿ ಮತ್ತು ವಿಶೇಷವಾಗಿ ವೀಡಿಯೊ ಮತ್ತು ಚಲನಚಿತ್ರಗಳಂತಹ ಇತರ ಮಾಧ್ಯಮಗಳನ್ನು ಅನ್ವೇಷಿಸುವಲ್ಲಿ ಆಳವಾದ ಆಸಕ್ತಿ ಇದೆ. ಇವರು 'ಗಾಳಿಬೀಜ' ಹಾಗೂ 'ಹರಿವ ನದಿಗೆ ಮೈಯೆಲ್ಲಾ ಕಾಲು' ಎಂಬ ಎರಡು ಚಿತ್ರಗಳನ್ನು ಹಾಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾರೆ.




