- ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಗುಲಾಮರಂತೆ ವರ್ತಿಸುತ್ತಿದೆ
- ‘ಖಡ್ಗದ ಮೂಲಕ ಹಿಂದೂ ಸಮಾಜಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ’
ಶಿವಮೊಗ್ಗದಲ್ಲಿ ಗಲಾಟೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ತಲ್ವಾರ್‌ಗೆ ತಲ್ವಾರ್ ಹಿಡಿದು ಉತ್ತರ ಕೊಡಲು ಹಿಂದೂ ಸಮಾಜಕ್ಕೂ ಬರುತ್ತದೆ. ಕಾಂಗ್ರೆಸ್ ಸರ್ಕಾರ ಇದನ್ನು ಅರಿತುಕೊಳ್ಳಲಿ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ ನೀಡಿದರು.
ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಗುಲಾಮರಂತೆ ವರ್ತಿಸುತ್ತಿದೆ. ಮೆರವಣಿಗೆಗೆ ಹೋಗುವ ಸಂದರ್ಭದಲ್ಲಿ ಕೈಯಲ್ಲಿ ತಲ್ವಾರ್ ಹಿಡಿದುಕೊಂಡು ಹೋಗುತ್ತಾರೆ. ಯಾರಿಗೆ ಎಚ್ಚರ ಅದು, ಹಿಂದೂ ಸಮಾಜಕ್ಕಾ?” ಎಂದು ಪ್ರಶ್ನಿಸಿದರು.
“ಶಿವಮೊಗ್ಗ ನಗರದಲ್ಲಿ ದೊಡ್ಡ ದೊಡ್ಡ ತಲ್ವಾರ್ ನೇತು ಹಾಕಿದ್ದಾರೆ. ಕೋಲಾರದಲ್ಲೂ ಹಾಕಿದ್ದರು. ಆದರೆ ಅಲ್ಲಿನ ಸಂಸದರ ಎಚ್ಚರಿಕೆ ಬಳಿಕ ತೆಗೆದರು. ಅದು ಗೊತ್ತಿದ್ದರೂ ಇಲ್ಲಿ ದೊಡ್ಡ ಖಡ್ಗ ಹಾಕಲು ಯಾಕೆ ಬಿಟ್ಟರು? ಪೊಲೀಸಿನವರು ಸರ್ಕಾರಕ್ಕೆ ಹೆದರಿ ಹೋಗಿದ್ದಾರೆ. ತಲ್ವಾರ್‌ಗೆ ತಲ್ವಾರ್ ಹಿಡಿದು, ಉತ್ತರ ಕೊಡಲು ಹಿಂದೂ ಸಮಾಜಕ್ಕೆ ಬರುತ್ತದೆ” ಎಂದರು.
“ಖಡ್ಗ ಹಾಕಿ ಯಾರಿಗೆ ಸ್ಫೂರ್ತಿ ಕೊಡುತ್ತಾರೆ. ಅವರೆಲ್ಲ ದೇಶ ದ್ರೋಹಿಗಳು. ಮುಸ್ಲಿಂ ಸಮಾಜ ಹಬ್ಬವನ್ನು ಮಾಡಿಲ್ಲ, ಅವರು ಹಿಂದೂ ಸಮಾಜಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಇದೆಲ್ಲ ಸರ್ಕಾರಕ್ಕೆ ಗೊತ್ತಿಲ್ಲವೇ? ರಾಗಿಗುಡ್ಡಕ್ಕೆ ನಮ್ಮ ಶಾಸಕರು ಹೋಗಿ ಬಂದಿದ್ದಾರೆ. ಮನೆಗಳಿಗೆ ನುಗ್ಗಿ ನುಗ್ಗಿ ಹೊಡೆದಿದ್ದಾರೆ. ಕಲ್ಲು ತೂರಾಟ ಮಾಡಿದ್ದಾರೆ. ಹಿಂದೂ ಮನೆಗಳಿಗೆ ಮಾತ್ರ ಕಲ್ಲು ಹೊಡೆದು, ಒಳ ನುಗ್ಗಿದ್ದಾರೆ” ಎಂದು ಹೇಳಿದರು.
“ಮುಸ್ಲಿಂ ಮನೆಗಳಿಗೆ ಯಾವುದೇ ಕಲ್ಲು ಬಿದ್ದಿಲ್ಲ. ಕರ್ತವ್ಯದಲ್ಲಿದ್ದ ಹಲವು ಪೊಲೀಸರಿಗೂ ಕಲ್ಲು ಬಿದ್ದಿದೆ. ಪೊಲೀಸರು ಮೆರವಣಿಗೆಗೆ ಅನುಮತಿ ಕೊಟ್ಟ ರೂಟ್ ಬೇರೆ ಆದರೆ ಅವರು ಹೋಗಿದ್ದೇ ಬೇರೆ. ಸಂಜೆ 6 ಗಂಟೆಗೆ ಮೆರವಣಿಗೆ ಮುಗಿಸಲು ಹೇಳಿದರೂ 7.30 ವರೆಗೂ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ ಬದುಕಿದೆಯಾ” ಎಂದು ವಾಗ್ದಾಳಿ ನಡೆಸಿದರು.
“ಗೃಹಮಂತ್ರಿಗಳು ಬರಲಿ, ಆ ಏರಿಯಾದ ಮನೆಗಳಿಗೆ ಹೋಗಿ ನೋಡಲಿ. ಸಣ್ಣಪುಟ್ಟ ಗಲಾಟೆ, ತಲ್ವಾರ್ ಹಿಡಿದಿಲ್ಲ ಎನ್ನುವ ಸಚಿವರು ಗೃಹಮಂತ್ರಿ ಅಗಲು ಅನ್ ಫಿಟ್, ರಾಜೀನಾಮೆ ಕೊಡಲಿ. ಶಿವಮೊಗ್ಗದಲ್ಲಿ ಹಿಂದೂ ಸಮಾಜ ಎದ್ದು ನಿಂತರೇ, ಮುಸಲ್ಮಾನ ಸಮಾಜ ಉಳಿಯುತ್ತಾ?” ಎಂದು ಹೇಳಿದರು.
ಮುಸಲ್ಮಾನರ ರಕ್ಷಣೆಗೆ ಮಾತ್ರ ಕಾಂಗ್ರೆಸ್ ಸರ್ಕಾರ, ಪೊಲೀಸ್ ಇಲಾಖೆ ಇರುವುದಾ? ಹಿಂದೂಗಳ ರಕ್ಷಣೆ ಮಾಡಲ್ವಾ? ಹಿಂದೂ ಸಮಾಜದ ಯಾರು ಕೂಡ ಕಲ್ಲು ಹೊಡೆದಿಲ್ಲ. ಸಂಘಟನೆಗಳಲ್ಲಿ ಸಕ್ರಿಯರಾದ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದ್ದಾರೆ” ಎಂದರು.