ಮಹಿಳಾ ಮೀಸಲಾತಿ ಜಾರಿಯಾದರೆ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ 74 ಕ್ಷೇತ್ರಗಳಲ್ಲಿ ಮಹಿಳೆಯರೇ ಅಭ್ಯರ್ಥಿಗಳಾಗುತ್ತಾರೆ. ಹೀಗಾಗಿ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಅಭ್ಯರ್ಥಿಗಳನ್ನು ತಯಾರು ಮಾಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಭಾರತ ಜೋಡೋ ಭವನದಲ್ಲಿ ಶನಿವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, “ಮಹಿಳೆಯರಿಗಾಗಿ ನಮ್ಮ ಪಕ್ಷ ಇಷ್ಟು ಕಾರ್ಯಕ್ರಮ ನೀಡಿದೆ. ಈಗ ನೀವೆಲ್ಲರೂ ಸೇರಿ ನಮ್ಮ ಪಕ್ಷಕ್ಕೆ ಏನು ಮಾಡುತ್ತೀರಿ ಎಂದು ಅಧ್ಯಕ್ಷನಾಗಿ ಕೇಳುತ್ತೇನೆ. ನೀವು ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಪಕ್ಷಕ್ಕೆ ಏನು ಕೊಡುಗೆ ನೀಡುತ್ತೀರಿ ಎಂಬುದು ಮುಖ್ಯ. ಸೌಮ್ಯ ರೆಡ್ಡಿ ಸೇರಿದಂತೆ ನಾನು ಎಲ್ಲರಿಗೂ ಹೇಳುವುದು ಒಂದೇ. ರಾಣಿ ಸತೀಶ್ ಅವರ ಕಾಲದಿಂದ ಇಲ್ಲಿಯವರೆಗೂ ಮಹಿಳಾ ಕಾಂಗ್ರೆಸ್ ಬಗ್ಗೆ ನನಗೆ ತೃಪ್ತಿ ಇಲ್ಲ. ನೀವು ನಿಮ್ಮ ಒತ್ತಡಗಳ ಮಧ್ಯೆ ಪಕ್ಷ ಸಂಘಟನೆಗೆ ನನ್ನ ನಿರೀಕ್ಷೆ ಮಟ್ಟದಲ್ಲಿ ಕೆಲಸ ಮಾಡಲು ಆಗಿಲ್ಲ. ಇದಕ್ಕಾಗಿ ನನಗೆ ಬೇಸರವಿಲ್ಲ. ಇಂದು ಕೂಡ ಅವಕಾಶಗಳು ನಿಮ್ಮ ಮನೆ ಬಾಗಿಲ ಮುಂದಿದೆ” ಎಂದರು.
50 ಸದಸ್ಯೆಯರನ್ನು ನೋಂದಾಯಿಸಿದರೆ ನಿರ್ದೇಶಕ ಹುದ್ದೆ
“ಪ್ರತಿ ಗೃಹಲಕ್ಷ್ಮಿ ಫಲಾನುಭವಿಗಳಿಂದ 50 ಜನ ಕಾಂಗ್ರೆಸ್ ಸದಸ್ಯರನ್ನಾಗಿ ಮಾಡಿಸಿ ಸಾಕು. ಪ್ರತಿ ವಿಧಾನಸಭೆಯಲ್ಲಿ ಕ್ಷೇತ್ರ ಅಥವಾ ತಾಲೂಕು ಮಟ್ಟದಲ್ಲಿ ಯಾರು ಅತಿ ಹೆಚ್ಚು ಮಹಿಳೆಯರನ್ನು ಪಕ್ಷದ ಸದಸ್ಯೆಯರನ್ನಾಗಿ ಮಾಡುತ್ತೀರೋ ಅವರಿಗೆ ತಾಲೂಕು ಮಟ್ಟದಲ್ಲಾದರೂ ನಿರ್ದೇಶಕ ಹುದ್ದೆ ನೀಡಲಾಗುವುದು. ಇದು ನನ್ನ ವಾಗ್ದಾನ, ಬದ್ಧತೆ. ಕರಾವಳಿ ಭಾಗದಲ್ಲಿ ನಮ್ಮ ಶಾಸಕರು ಹೆಚ್ಚಾಗಿ ಗೆದ್ದಿಲ್ಲ. ಅಲ್ಲಿನ ಮಹಿಳೆಯರು ಈ ಯೋಜನೆಗಳ ಫಲಾನುಭವಿಗಳಾಗಿಲ್ಲವೇ? ನೀವು ಅವರ ಬಳಿ ಹೋಗಿ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಚರ್ಚೆ ಮಾಡಿ. ಈ ಪಕ್ಷವನ್ನು ಉಳಿಸಿಕೊಳ್ಳಿ ಎಂದು ಪಕ್ಷದ ಸದಸ್ಯತ್ವ ಅಭಿಯಾನ ಮಾಡಿ” ಎಂದು ಕರೆ ನೀಡಿದರು.
“ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂದು ಕಾಂಗ್ರೆಸ್ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿತ್ತು. ರಾಜ್ಯಸಭೆಯಲ್ಲಿ ಸಂಖ್ಯಾಬಲದ ಕೊರತೆಯಿಂದ ಸಾಧ್ಯವಾಗಲಿಲ್ಲ. ಈಗ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಪ್ರಣಾಳಿಕೆಯಲ್ಲಿ ಈ ವಿಚಾರ ಪ್ರಸ್ತಾಪಿಸಿವೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ 224 ಕ್ಷೇತ್ರಗಳ ಪೈಕಿ 74 ಮಹಿಳಾ ಅಭ್ಯರ್ಥಿಗಳು ಬೇಕಾಗುತ್ತಾರೆ. ಈಗ ನಾವು 10-12 ಅಭ್ಯರ್ಥಿಗೆ ಟಿಕೆಟ್ ನೀಡುತ್ತಿದ್ದೇವೆ. ಈ 74 ಅಭ್ಯರ್ಥಿಗಳನ್ನು ಯಾರು ತಯಾರು ಮಾಡಬೇಕು? ನನಗೆ ನನ್ನ ಮಗಳು, ಪತ್ನಿಯನ್ನು ಅಭ್ಯರ್ಥಿ ಮಾಡುವುದು ಮುಖ್ಯವಲ್ಲ. ನಿಮ್ಮಂತಹ ಕಾರ್ಯಕರ್ತರು, ಜನಸಾಮಾನ್ಯರು ಪಕ್ಷದ ಅಭ್ಯರ್ಥಿಯಾಗುವ ಮಟ್ಟಕ್ಕೆ ಬೆಳೆಯಬೇಕು. ಆಗ ಮಾತ್ರ ನಾವು ನಿಮಗೆ ಶಕ್ತಿ ನೀಡಿದಂತಾಗುತ್ತದೆ” ಎಂದರು.
ತ್ಯಾಗದ ಮನೋಭಾವದಿಂದ ಶ್ರಮವಹಿಸಿ
“ನಮ್ಮ ಸಮಾಜ ಸೇವೆ ಮಾಡುವವರನ್ನು ಸ್ಮರಿಸುತ್ತದೆ. ನಮ್ಮಲ್ಲಿ ರಾಮನ ತಂದೆ ದಶರಥ ಮಹರಾಜನಿಗಿಂತ, ರಾಮನ ಭಂಟ ಹನುಮಂತನ ದೇವಾಲಯಗಳು ಹೆಚ್ಚಾಗಿವೆ. ಮಹಿಳೆ ಎಂದರೆ ತ್ಯಾಗ. ತ್ಯಾಗದ ಮನೋಭಾವದಲ್ಲಿ ನೀವು ಶ್ರಮಿಸಿ. ಇದಕ್ಕೆ ಸೂಕ್ತ ಉದಾಹರಣೆ ನಮ್ಮ ನಾಯಕಿ ಸೋನಿಯಾ ಗಾಂಧಿ. ಅವರು ದೇಶಕ್ಕಾಗಿ ತನ್ನ ಪತಿ, ಅತ್ತೆಯನ್ನು ಕಳೆದುಕೊಂಡರು. ಪಕ್ಷ ಮುಳುಗಿಹೋಗುತ್ತಿದೆ ಎಂಬ ಸಂದರ್ಭದಲ್ಲಿ ನಾವು ಬಲವಂತವಾಗಿ ಅವರಿಗೆ ಪಕ್ಷದ ಜವಾಬ್ದಾರಿ ನೀಡಿದೆವು. ಸಂಕಷ್ಟದ ಸಮಯದಲ್ಲಿ ಪಕ್ಷದ ಜವಾಬ್ದಾರಿ ವಹಿಸಿಕೊಂಡರು. ಕೊನೆಗೆ ದೇಶದ ಪ್ರಧಾನಮಂತ್ರಿ ಹುದ್ದೆ ಅಲಂಕರಿಸುವ ಸಂದರ್ಭದಲ್ಲಿ ತ್ಯಾಗ ಮಾಡಿದರು. ರಾಜೀವ್ ಗಾಂಧಿ ಅವರು ಸತ್ತಾಗಲೂ ತ್ಯಾಗ ಮಾಡಿ ನರಸಿಂಹರಾವ್ ಅವರನ್ನು ಪ್ರಧಾನಿ ಮಾಡಿದರು. ನಂತರ ಯುಪಿಎ ಸರ್ಕಾರದ ಅವಧಿಯಲ್ಲಿ ಬಿಜೆಪಿ ನಾಯಕಿಯರಾದ ಉಮಾ ಭಾರತಿ, ಸುಷ್ಮಾ ಸ್ವರಾಜ್ ಅವರು ತಲೆ ಬೋಳಿಸಿಕೊಳ್ಳುತ್ತೇವೆ ಎಂದು ಸವಾಲು ಹಾಕಿದಾಗ, ಈ ದೇಶಕ್ಕೆ ಆರ್ಥಿಕ ತಜ್ಞರ ಅಗತ್ಯವಿದೆ ಎಂದು ಮನಮೋಹನ್ ಸಿಂಗ್ ಅವರಿಗೆ ತಮ್ಮ ಬಳಿಗೆ ಬಂದ ಹುದ್ದೆಯನ್ನು ತ್ಯಾಗ ಮಾಡಿದರು. ನಾವು ಒಂದು ಪಂಚಾಯ್ತಿ ಅಧ್ಯಕ್ಷ ಸ್ಥಾನ ಬಿಡುತ್ತೇವಾ?” ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಸೊಬಗು ಸಾಮಾಜಿಕ ಸಂಸ್ಥೆ ವತಿಯಿಂದ ‘ಮಹಿಳಾ ಸಮಾನತೆ ಮತ್ತು ಸಮತೆ ಕಡೆಗೆ ನಾವು ನೀವು’ ಎಂಬ ಮಹಿಳಾ ಜಾಗೃತಿ ನಾಟಕ ಪ್ರದರ್ಶಿಸಲಾಯಿತು. ಇನ್ನು 52 ದಿನಗಳ ಕಾಲ ಏಕಾಂಗಿಯಾಗಿ ಅಟ್ಲಾಂಟಿಕ್ ಮಹಾಸಾಗರದ ಸ್ಪಾನಿಶ್ ದ್ವೀಪದಿಂದ ಆಂಟಿಗುವಾವರೆಗೂ 3 ಸಾವಿರ ಮೈಲು ದೂರವನ್ನು ದೋಣಿಯಲ್ಲಿ ಸಾಗಿದ ಭಾರತದ ಮೊದಲ ಮಹಿಳೆ ಎಂಬ ಸಾಧನೆ ಮಾಡಿರುವ ಖ್ಯಾತ ಸಾಹಿತಿ ಜಿ.ಎಸ್ ಶಿವರುದ್ರಪ್ಪ ಅವರ ಮೊಮ್ಮಗಳಾದ ಅನನ್ಯ ಪ್ರಸಾದ್ ಅವರಿಗೆ ಡಿ.ಕೆ. ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸನ್ಮಾನಿಸಿದರು.
ಕಾರ್ಯಾಧ್ಯಕ್ಷರಾದ ಜಿ.ಸಿ ಚಂದ್ರಶೇಖರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ ಅವರು ಉಪಸ್ಥಿತರಿದ್ದರು.