ಬಿಜೆಪಿ ಶಾಸಕರ ಅಮಾನತು ಆದೇಶ ನನ್ನೊಬ್ಬನ ತೀರ್ಮಾನ ಅಲ್ಲ. ಇಡೀ ಸದನದ ತೀರ್ಮಾನ. ಆದೇಶ ವಾಪಸ್ ತೆಗೆದುಕೊಳ್ಳುವ ಬಗ್ಗೆ ಚರ್ಚಿಸುತ್ತೇವೆ. ಈ ವಿಚಾರದಲ್ಲಿ ನಾನು ಸಕಾರಾತ್ಮಕವಾಗಿದ್ದೇನೆ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಮಂಗಳೂರಿನಲ್ಲಿ ಭಾನುವಾರ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, “ಜನರು ವೋಟ್ ಹಾಕಿದ ಕೂಡಲೇ ಅವರು ಶಾಸಕರಾಗುವುದಿಲ್ಲ. ಸ್ಪೀಕರ್ ಎದುರು ಪ್ರಮಾಣವಚನ ಸ್ವೀಕರಿಸಿದ ಬಳಿಕವೇ ಆಗುವಂಥದ್ದು. ಅದನ್ನು ಅರ್ಥ ಮಾಡಿಕೊಂಡು ಸಂವಿಧಾನಕ್ಕೆ ಅವರು ಗೌರವ ನೀಡಬೇಕಾಗುತ್ತದೆ” ಎಂದರು.
“ಆದರೆ, ನಮ್ಮಲ್ಲಿ ಶಾಸಕರಾದ ತಕ್ಷಣ ಏನು ಬೇಕಾದರೂ ಮಾತನಾಡಬಹುದು ಎನ್ನುವ ಮನೋಭಾವ ಇದೆ. ಕೆಲವು ಶಾಸಕರಿಗೆ ಅದೊಂದು ಚಾಳಿಯಾಗಿಬಿಟ್ಟಿದೆ. ತಮ್ಮ ಟಿ.ಆರ್.ಪಿ.ಗಾಗಿ ಏನೇನೋ ಮಾತನಾಡುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ವಿಧಾನಸಭೆಯಿಂದ ಅಮಾನತುಗೊಂಡ ಬಳಿಕ ಸ್ಪೀಕರ್ ವಿರುದ್ಧ ಮಾತನಾಡಿದ ಶಾಸಕ ಹರೀಶ್ ಪೂಂಜಾ ವಿರುದ್ಧ ಹಕ್ಕು ಬಾಧ್ಯತಾ ಸಮಿತಿಗೆ ಐದಾರು ಶಾಸಕರು ದೂರು ನೀಡಿದ್ದಾರೆ. ಈ ಸಮಿತಿಯು ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಅದು ಆ ಕಮಿಟಿಗೆ ಬಿಟ್ಟ ವಿಚಾರ” ಎಂದು ತಿಳಿಸಿದರು.
ಜಮ್ಮು- ಕಾಶ್ಮೀರದ ಭಯೋತ್ಪಾದಕರ ದಾಳಿ ಕುರಿತು ಮಾತನಾಡಿ, “ಭಯೋತ್ಪಾದಕರ ಮುಖ್ಯ ಉದ್ದೇಶ ನಮ್ಮ ಒಗ್ಗಟ್ಟನ್ನು ಮುರಿದು ದೇಶವನ್ನು ದುರ್ಬಲಗೊಳಿಸುವುದು. ಅದಕ್ಕೆ ಅವಕಾಶ ಮಾಡಿಕೊಡಬಾರದು. ನಾವೆಲ್ಲರೂ ಒಗ್ಗಟ್ಟಾಗಿರಬೇಕು” ಎಂದು ಹೇಳಿದರು