ಬೂಕರ್ ಪ್ರಶಸ್ತಿ ಪಡೆದ ನಂತರ ಲಂಡನ್‌ನಲ್ಲಿ ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ಮತ್ತು ಪುಸ್ತಕ ಮಳಿಗೆಗಳಲ್ಲಿ ಸಂವಾದ ಗೋಷ್ಠಿಗಳಲ್ಲಿ ಮಾತನಾಡುವಾಗ ಕನ್ನಡ ಸಾಹಿತ್ಯ ಚರಿತ್ರೆಯ ಪಾಠ ಮಾಡಿ ಬಂದೆ. ಪುಸ್ತಕಕ್ಕೆ ಸಹಿ ಕೇಳಿದವರಿಗೆಲ್ಲ ಕನ್ನಡದಲ್ಲಿಯೇ ಸಹಿ ಮಾಡಿದ್ದೇನೆ ಎಂದು ಬಾನು ಮುಷ್ತಾಕ್ ಖುಷಿ ಹಂಚಿಕೊಂಡರು.
ಬೂಕರ್ ಪ್ರಶಸ್ತಿ ಸ್ವೀಕರಿಸಿ ಲಂಡನ್‌ನಿಂದ ಬುಧವಾರ ಬೆಂಗಳೂರಿಗೆ ಆಗಮಿಸಿದ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬೂಕರ್ ಪ್ರಶಸ್ತಿ ಘೋಷಣೆಯಾದಾಗ ನಾನು ಎಮೋಷನಲ್ ಆಗಲಿಲ್ಲ. ಬಂಡಾಯ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಹೋದಂತೆ ಎದ್ದು ಹೋದೆ. ಕನ್ನಡಕ್ಕೆ ಪ್ರಶಸ್ತಿ ಬರುವ ಬಗ್ಗೆ ಯಾವುದೇ ಸೂಚನೆ ಇರಲಿಲ್ಲ. ಆದರೂ ನಾಲ್ಕು ದಿನ ಇರುವಾಗ ಪ್ರಶಸ್ತಿ ಸ್ವೀಕಾರದ ಭಾಷಣ ರೆಡಿ ಮಾಡಿಕೊಂಡಿದ್ದೆ. ವೇದಿಕೆಯಲ್ಲಿ ಅದೇ ಭಾಷಣವನ್ನು ಓದಿದೆ. ಆದರೆ ಬೂಕರ್ ಅಧ್ಯಕ್ಷರು ಮೊದಲು ಆಡಿದ ಮಾತುಗಳಿದೆ ಬಹಳಷ್ಟು ಹೊಂದಿಕೆಯಾಗಿತ್ತು. ಅವೆಲ್ಲ ಬಂಡಾಯ ಸಾಹಿತ್ಯದ ವೇದಿಕೆಗಳಲ್ಲಿ ಆಡಿಕೊಂಡ ಮಾತುಗಳೇ ಆಗಿತ್ತು.ಈ ಅನುಭವ ನಿಜಕ್ಕೂ ಕನ್ನಡಕ್ಕೆ ಬೇಕಿತ್ತು ಎಂದರು.
ನನ್ನ ಜೊತೆಗೆ ಸ್ಪರ್ಧೆಯಲ್ಲಿದ್ದ ಐವರು ಕಾದಂಬರಿಕಾರೂ ಸೃಜನಶೀಲ ಬರಹದಲ್ಲಿ ಮಾಸ್ಟರ್ಸ್ ಮಾಡಿದವರಾಗಿದ್ದರು. ಅಲ್ಲಿ ಬರೆಯುವವರೆಲ್ಲ ಸೃಜನಶೀಲ ಬರಹದ ತರಬೇತಿ ಪಡೆದವರು. ಬೂಕರ್ ಸಮಿತಿ ಅಧ್ಯಕ್ಷರು ಮಾತನಾಡುತ್ತಾ, ಬರವಣಿಗೆಯಲ್ಲಿ ಜಡ್ಜ್‌ಮೆಂಟಲ್ ಆಗಬೇಡಿ, ಯಾರ ಪರವಾಗಿಯೂ ಬದ್ಧತೆಯಿಂದ ನಿಲ್ಲಬೇಡಿ ಎಂದು ಹೇಳಿಕೊಡುತ್ತಾರೆ ಅಂದ್ರು. ನಾವು ಸಂಪೂರ್ಣ ಭಿನ್ನ. ಶೋಷಿತರ ಪರ ನಿಲ್ಲಬೇಡಿ ಅಂದ್ರೆ ಹೇಗೆ? ಕನ್ನಡದ ಆಲೋಚನೆ, ಕನ್ನಡದ ಜೀವನಕ್ರಮ, ವ್ಯಾವಹಾರಿಕ ಭಾಷೆ, ಕನ್ನಡದ ರಾಜಕಾರಣದ ಬಗ್ಗೆ, ಭಾಷೆಯಾಗಿ ನಮಗೆ ಯಾಕೆ ಹಾಗೆ ಅನ್ನಿಸಿತು ಎಂದು ಪಾಠ ಮಾಡಿದೆ. ಬಂಡಾಯ ಚಳವಳಿ, ರೈತ ಚಳವಳಿ, ದಲಿತ ಮಹಿಳಾ ಚಳವಳಿಗಳ ಬಗ್ಗೆ ನಮ್ಮ ಕಮಿಟ್‌ಮೆಂಟ್ ಬಗ್ಗೆ ಮಾತನಾಡಿದೆ ಎಂದು ಅನುಭವ ಹಂಚಿಕೊಂಡರು.
ಕನ್ನಡದ ಈ ಕೃತಿ ಜಗತ್ತಿನ 35 ಭಾಷೆಗಳಿಗೆ, ಭಾರತದ ಹನ್ನೆರಡು ಭಾಷೆಗಳಿಗೆ ಅನುವಾದವಾಗಲಿದೆ. ಆಡಿಯೋ ಹಕ್ಕು, ಸಿನಿಮಾ ಹಕ್ಕುಗಳಿಗೆ ಬೇಡಿಕೆ ಬಂದಿದೆ. ಈ ಪುಸ್ತಕದ ಪ್ರಕಾಶಕರಿಗೆ ಈಗಾಗಲೇ ಆರು ಕೋಟಿ ರೂಪಾಯಿಯ ವ್ಯವಹಾರ ಆಗಿದೆ. ಮುಂದಿನ ಆಗಸ್ಟ್‌ವರೆಗೆ ಲಂಡನ್, ಸಿಲೋನ್ ಸೇರಿದಂತೆ ಅನೇಕ ಕಡೆಗಳಲ್ಲಿ ಸಾಹಿತ್ಯೋತ್ಸವ, ಸಂವಾದ ಕಾರ್ಯಕ್ರಮಗಳು ನಿಗದಿಯಾಗಿವೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಲೇಖಕಿಯರ ಸಂಘ, ಕರ್ನಾಟಕ ಪತ್ರಕರ್ತೆಯರ ಸಂಘ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಪದಾಧಿಕಾರಿಗಳು ಸನ್ಮಾನಿಸಿದರು. ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಆಶಯ ಭಾಷಣ ಮಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅಭಿನಂದನಾ ಭಾಷಣ ಮಾಡಿದರು.