ನಮ್ಮ ರಾಜ್ಯದ ಆಸ್ತಿಗಳನ್ನು ನಾವು ರಕ್ಷಣೆ ಮಾಡಿಕೊಳ್ಳುತ್ತೇವೆ. ಹೆಚ್ಎಎಲ್ ಅನ್ನು ಯಾವುದೇ ಬಿಜೆಪಿ ಸರ್ಕಾರ ನೀಡಿಲ್ಲ. ಮೊದಲಿನಿಂದಲೂ ನಮ್ಮಲಿರುವ ತಾಂತ್ರಿಕ, ಮಾನವ ಸಂಪನ್ಮೂಲದಿಂದ ನೆಹರೂ ಅವರು ಇದನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಹೆಚ್ಎಎಲ್ ಅನ್ನು ಆಂಧ್ರ ಪ್ರದೇಶಕ್ಕೆ ಸ್ಥಳಾಂತರಿಸಲು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರ ಮನವಿ ಬಗ್ಗೆ ಸುದ್ದಿಗಾರರು ಕೆಪಿಸಿಸಿ ಕಚೇರಿಯಲ್ಲಿ ಕೇಳಿದಾಗ ಉತ್ತರಿಸಿದ ಅವರು, “ದಕ್ಷಿಣ ಭಾರತದಲ್ಲಿ ಏರ್ ಬೇಸ್, ಏರ್ ಶೋಗಳನ್ನು ನೀಡಿದ್ದಾರೆ. ಬೆಂಗಳೂರು, ಬೀದರ್ ಗಳಲ್ಲಿ ವಾಯುನೆಲೆ ಸ್ಥಾಪಿಸಲಾಗಿದೆ. ಚಂದ್ರಬಾಬು ನಾಯ್ಡು ಅವರು ರಾಜಕೀಯವಾಗಿ ಮಾಡಿರುವ ಮನವಿ ಬಗ್ಗೆ ನಾನು ಹಸ್ತಕ್ಷೇಪ ಮಾಡುವುದಿಲ್ಲ. ನಮ್ಮಲ್ಲೂ ಹೆಚ್ಎಎಲ್ ಗೆ ಅಗತ್ಯವಾದ ಭೂಮಿಯನ್ನು ನೀಡಲಾಗಿದೆ. ತುಮಕೂರಿನಲ್ಲಿ ಹೆಲಿಕಾಪ್ಟರ್ ವಿಭಾಗಕ್ಕೆ ಜಮೀನು ನೀಡಲಾಗಿದೆ. ಅವರು ಹೊಸದಾಗಿ ಏನಾದರೂ ಮಾಡಿಕೊಳ್ಳಲಿ. ನೆರೆ ರಾಜ್ಯಗಳಲ್ಲಿ ಏನು ಆಗಬಾರದು ಎಂಬ ಉದ್ದೇಶ ನಮ್ಮದಲ್ಲ” ಎಂದರು.
“ನಮ್ಮ ರಾಜ್ಯದಲ್ಲಿನ ಆಸ್ತಿಯನ್ನು ನಮ್ಮ ಸರ್ಕಾರ ಕಾಪಾಡಲಿದೆ. ನಮ್ಮ ಆಸ್ತಿ, ನಮ್ಮ ನವರತ್ನಗಳು ಅವು. ಇವುಗಳನ್ನು ಉಳಿಸಿಕೊಳ್ಳುತ್ತೇವೆ. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಏನು ಮಾಡುತ್ತಿದ್ದಾರೆ? ಕೇಂದ್ರ ಸಚಿವರು ಮಾತನಾಡುತ್ತಿಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮುತ್ತುರತ್ನಗಳನ್ನು ಬಿಜೆಪಿಯಲ್ಲೇ ಇಟ್ಟುಕೊಳ್ಳಲಿ
ಎಸ್.ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಬಗ್ಗೆ ಕೇಳಿದಾಗ, “ಇದು ಬಿಜೆಪಿ ಪಕ್ಷದ ಆಂತರಿಕ ವಿಚಾರ. ಸೋಮಶೇಖರ್ ಆಗಲಿ, ಹೆಬ್ಬಾರ್ ಅವರಾಗಲಿ, ವಿಧಾನಸೌಧದಲ್ಲಿ ಯಾರನ್ನೂ ರೇಪ್ ಮಾಡಿಲ್ಲ, ಯಾರಿಗೂ ಏಡ್ಸ್ ಸೋಂಕನ್ನು ಚುಚ್ಚಲು ಹೋಗಿಲ್ಲ. ವಿರೋಧ ಪಕ್ಷದ ನಾಯಕರಿಗೆ ಏಡ್ಸ್ ಚುಚ್ಚುಲು ಪ್ರಯತ್ನಿಸಿದವರು, ಯಡಿಯೂರಪ್ಪ ಅವರನ್ನು ಟ್ರ್ಯಾಪ್ ಮಾಡಲು ಯತ್ನಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರೇಪ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೆ. ಇಲ್ಲಿ ಬಿಜೆಪಿ ಸಂಸ್ಕೃತಿ ಕಾಣುತ್ತಿದೆ. ಅವರು ತಮ್ಮ ಮುತ್ತು ರತ್ನಗಳನ್ನು ಅವರೇ ಇಟ್ಟುಕೊಳ್ಳಲಿ” ಎಂದು ತಿಳಿಸಿದರು.
ಬಿಜೆಪಿ ಎಂಎಲ್‌ಸಿ ವಿರುದ್ಧ ಕಾನೂನು ಕ್ರಮ
ಬಿಜೆಪಿ ಎಂಎಲ್ ಸಿ ರವಿಕುಮಾರ್ ಅವರು ಕಲಬುರ್ಗಿ ಜಿಲ್ಲಾಧಿಕಾರಿಯನ್ನು ಪಾಕಿಸ್ತಾನಿ ಎಂದು ನಿಂದಿಸಿರುವ ಬಗ್ಗೆ ಮಾಧ್ಯಮಗಳು ಕೆಪಿಸಿಸಿ ಕಚೇರಿ ಆವರಣದಲ್ಲಿ ಕೇಳಿದಾಗ, “ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಈ ವಿಚಾರದಲ್ಲಿ ಕಾನೂನು ಕ್ರಮ ಕೈಗೊಳ್ಳದೇ ಬೇರೆ ದಾರಿ ಇಲ್ಲ. ಕಲಬುರ್ಗಿಯ ಜಿಲ್ಲಾಧಿಕಾರಿ ರಾಷ್ಟ್ರಮಟ್ಟದ ಅಧಿಕಾರಿಯಾಗಿದ್ದು, ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಆವರು ತಮ್ಮದೇ ಆದ ಘನತೆಯನ್ನು ಹೊಂದಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ ಅವರ ಬೆನ್ನಿಗೆ ನಿಲ್ಲಲಿದೆ. ಮಹಿಳಾ ಅಧಿಕಾರಿಯನ್ನು ಬಿಜೆಪಿಯವರು ನಡೆಸಿಕೊಳ್ಳುವ ರೀತಿ ಇದೇನಾ? ಈ ವಿಚಾರವಾಗಿ ಬಿಜೆಪಿ ನಾಯಕರು ಅದರಲ್ಲೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಕೇಂದ್ರ ಸಚಿವರುಗಳು ಪ್ರತಿಕ್ರಿಯೆ ನೀಡಬೇಕು” ಎಂದು ಆಗ್ರಹಿಸಿದರು.
ರವಿಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, “ಇಂದು ಬೆಳಗ್ಗೆ ಅನೇಕ ಐಎಎಸ್ ಅಧಿಕಾರಿಗಳು ನನ್ನನ್ನು ಭೇಟಿ ಮಾಡಿದ್ದಾರೆ. ಈ ವಿಚಾರವನ್ನು ಕಾನೂನು ದೃಷ್ಟಿಕೋನದಲ್ಲಿ ಪರಿಶೀಲನೆ ಮಾಡುತ್ತೇವೆ” ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಹೊಸ ಪರ್ವ
ಬಂಗಾರಪೇಟೆ ಮಾಜಿ ಶಾಸಕ ಎಂ ನಾರಾಯಣ ಸ್ವಾಮಿ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕುಮಾರ್ ಅವರು, “ಎರಡು ವರ್ಷಗಳ ನಂತರ ಬೇರೆ ಪಕ್ಷದಿಂದ ಅನೇಕ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಮುಂದಾಗಿದ್ದಾರೆ. ಆಮೂಲಕ ಹೊಸ ಪರ್ವ ಆರಂಭವಾಗಿದೆ. ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಂ.ನಾರಾಯಣ ಸ್ವಾಮಿ ಹಾಗೂ ನಮ್ಮ ಮಾಜಿ ಜಿಲ್ಲಾಧ್ಯಕ್ಷರಾಗಿದ್ದ ಚನ್ನಾರೆಡ್ಡಿ ಅವರು ಕೂಡ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಇವರ ಜತೆಗೆ ಇಂದು ಬಿಜೆಪಿಯಿಂದ ಸುಮಾರು 50 ಜನ ಪ್ರಮುಖ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಎರಡು ವರ್ಷಗಳ ನಂತರ ನಾವು ಮತ್ತೆ ಹೊಸ ಪರ್ವವನ್ನು ಆರಂಭಿಸಿದ್ದೇವೆ” ಎಂದರು.