1180 ದಿನಗಳಿಂದ ತಮ್ಮ ಭೂಮಿಗಾಗಿ ಹೋರಾಡುತ್ತಿರುವ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರಿಗೆ ಬೆಂಬಲ ಸೂಚಿಸಿ ಮಾತನಾಡಿರುವ ಖ್ಯಾತ ನಟ ಪ್ರಕಾಶ್ ರಾಜ್, “ನಾನು ರೈತರೊಂದಿಗೆ ಇರುತ್ತೇನೆ. ಅವರ ಹೋರಾಟದ ಸ್ಥಳದಲ್ಲಿ ಮಲಗುತ್ತೇನೆ. ಬೇಕಿದ್ದರೆ ಜೈಲಿಗೆ ಹಾಕಿರಿ. ನಾನು ಜಾಮೀನು ಕೂಡ ಪಡೆಯುವುದಿಲ್ಲ” ಎಂದು ಸರ್ಕಾರಕ್ಕೆ ಸವಾಲೆಸಿದಿದ್ದಾರೆ.
‘ಸಂಯುಕ್ತ ಹೋರಾಟ ಕರ್ನಾಟಕ’ದ ನೇತೃತ್ವದಲ್ಲಿ ಇಂದು ನಡೆಯುತ್ತಿರುವ ‘ದೇವನಹಳ್ಳಿ ಚಲೋ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ.
“ಸಿದ್ದರಾಮಯ್ಯನವರೇ ದಯವಿಟ್ಟು ಕೇಳಿ. ಇನ್ನೊಂದು ಹೋರಾಟ ನಡೆದು ನಿಮ್ಮನ್ನು ಇಳಿಸುವುದಕ್ಕೆ ಕಾರಣ ಆಗುವುದು ಬೇಡ. ಮನಸ್ಸಾಕ್ಷಿಯಿಂದ ಜನರ ವೇದನೆಯನ್ನು ಅರ್ಥ ಮಾಡಿಕೊಳ್ಳಿ, ರೈತರನ್ನು ಅರ್ಥ ಮಾಡಿಕೊಳ್ಳಿ. ನಾವು ಭೂಮಿಯನ್ನು ಮಾರುವುದಿಲ್ಲ ಎಂದರೆ ಮಾರುವುದಿಲ್ಲ. ನಮ್ಮ ಬದುಕನ್ನು ಬಿಡುವುದಿಲ್ಲ. ಹಾಗೇನಾದರೂ ಆದರೆ, ಈ ರೈತರ ಜೊತೆಯಲ್ಲಿ ಇಲ್ಲೇ ಮಲಗುತ್ತೇನೆ. ಜೈಲಿಗೆ ಹಾಕುವುದಾದರೆ ನನ್ನನ್ನೂ ಹಾಕಿ, ಬೇಲ್ ಕೂಡ ತೆಗೆದುಕೊಳ್ಳುವುದಿಲ್ಲ” ಎಂದು ಗುಡುಗಿದ್ದಾರೆ.
“ಯಾವ ರಾಜಕಾರಣ ನಡೀತಿದೆ ಇಲ್ಲಿ? ಪೊಲೀಸರನ್ನು ಉಪಯೋಗಿಸುತ್ತೀರಾ? ಯಾವ ಸರ್ವಾಧಿಕಾರ ನಡೆಯುತ್ತಿದೆ? ನಿಮ್ಮ ಮೇಲೆ ತುಂಬಾ ಗೌರವ ಇದೆ. ಜನರಿಗೆ ದಯವಿಟ್ಟು ಸ್ಪಂದಿಸಿ. ಕಿವಿ, ಮನಸ್ಸಾಕ್ಷಿಯನ್ನು ಇಟ್ಟುಕೊಂಡು ಸ್ಪಂದಿಸಿ. ನಮಗೆ ನಮ್ಮ ಭೂಮಿ, ನಮ್ಮ ಹಕ್ಕು , ನಮ್ಮ ಬುದಕು ಬೇಕು. ಒಡೆದು ಆಳುವುದನ್ನು ಬ್ರಿಟಿಷರ ಕಾಲದಿಂದಲೂ ನೋಡಿಕೊಂಡು ಬಂದಿದ್ದೇವೆ. ನಾವು ಒಡೆದು ಹೋಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
“ಸಿಎಂ ಸಿದ್ದರಾಮಯ್ಯನವರೇ, ಕೈಗಾರಿಕಾ ಸಚಿವ ಎಂ ಬಿ ಪಾಟೀಲರೇ, ಏನು ಮಾಡುತ್ತಿದ್ದೀರಿ? ಒಬ್ಬ ಮನುಷ್ಯನಿಗೆ ಒಂದು ಬಾರಿ, ಎರಡು ಬಾರಿ ಹೇಳಬಹುದು. ಮೂರು ವರ್ಷ ಬಾಯಿ ಬಡಿದುಕೊಳ್ಳಬೇಕೇನ್ರಿ? ನಾವು ನಿಮ್ಮ ವಿರುದ್ಧ ಮೂರು ವರ್ಷ ಬಾಯಿ ಬಡ್ಕೊಬೇಕಾ? ನಿಮಗೆ ಅರ್ಥ ಆಗಬೇಕು. ಭಾರತದ ರಾಜಕಾರಣದಲ್ಲಿ ನೀವು, ಪಕ್ಷದ ನಾಯಕರು ಗೆದ್ದಿಲ್ಲ. ನಿಮ್ಮನ್ನು ಜನ ಗೆಲ್ಲಿಸುತ್ತಾರೆ. ನೀವು ಆಳ್ವಿಕೆ ಮಾಡಕ್ಕೆ ಬಂದಿಲ್ಲ. ಪ್ರತಿನಿಧಿಸುವುದಕ್ಕೆ ಬಂದಿದ್ದೀರಿ. ಏನಾಗಿದೆ ನಿಮಗೆ? 13 ಹಳ್ಳಿಯ ಹೆಣ್ಣು ಮಕ್ಕಳು ಅಲ್ಲಿನ ಮಣ್ಣನ್ನು ತಂದು ಗಿಡಕ್ಕೆ ಹಾಕಿ, ನಾವು ಮಣ್ಣನ್ನು ಮಾರುವುದಿಲ್ಲ ಎಂದು ಹೇಳುತ್ತಿದ್ದಾರೆ. ನಿಮಗೆ ಧಿಕ್ಕಾರ ಹಾಕುವ ಸಮಯ ತುಂಬಾ ದೂರ ಇಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದೇವೆ. ಬೇಕಾ ಸಿದ್ದರಾಮಣ್ಣ ನಿಮಗೆ? ಕರ್ನಾಟಕದ ರೈತರ ಬಾಯಿಯಿಂದ ಧಿಕ್ಕಾರ ಕೂಗಿಸಿಕೊಳ್ಳುವ ಪರಿಸ್ಥಿತಿಗೆ ಬರಬೇಕಾ ನೀವು?” ಎಂದು ಪ್ರಶ್ನಿಸಿದರು.
“ಕಿವಿ, ಹೃದಯ, ಮನಸಾಕ್ಷಿ ಇಲ್ಲವಾ? ಅಹಿಂದ, ಜನಪರ, ರೈತರ ಪರ ಅಂತೀರಿ. ವಿರೋಧ ಪಕ್ಷದ ನಾಯಕರಾಗಿದ್ದಾಗ, ಇದೇ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಿರಿ. ಮಾತು ಕೊಟ್ಟಿದ್ದಿರಿ ತಾನೇ? ಮಾತಿಗೆ ನಿಲ್ಲುತ್ತೀರಾ? ಮಾತು ತಪ್ಪುತ್ತೀರಾ? ಎಂ.ಬಿ. ಪಾಟೀಲರೇ ಏನು ಅಂತಹ ತುರ್ತು ಸುದ್ದಿಗೋಷ್ಠಿ? ಏನಷ್ಟು ಅರ್ಜೆಂಟ್ ಬಂದಿತ್ತು? ನಾವು ಮುಖ್ಯಮಂತ್ರಿಯವರನ್ನು ಕಾಯುತ್ತಿದ್ದೇವೆ, ಒಂದು ದಿನ ತಡ ಮಾಡುವುದಕ್ಕೆ ಆಗುವುದಿಲ್ಲವಾ? ಮುಖ್ಯಮಂತ್ರಿಗಳೇನಾದರೂ ಬದಲಾಗುತ್ತಿದ್ದಾರಾ? ಒಳಗಡೆ ಏನಾದರೂ ಮಸಲತ್ತು ನಡೆಯುತ್ತಿದಿಯಾ?” ಎಂದು ಪ್ರಶ್ನೆಗಳ ಸುರಿಮಳೆಗೈದರು.
ಇದನ್ನೂ ಓದಿರಿ: ದೇವನಹಳ್ಳಿ ಚಲೋ | ‘ಪ್ರಾಣ ಬಿಟ್ಟೇವು, ಮಣ್ಣನ್ನು ಮಾರುವುದಿಲ್ಲ’; 13 ಗ್ರಾಮಗಳ ಜನ ಪ್ರತಿಜ್ಞೆ
“ಮೂರುಹಳ್ಳಿಗಳನ್ನು ಮಾತ್ರ ಬಿಡುತ್ತಿರಾ? 400 ಎಕರೆ ಬಿಡ್ತೀರಾ? ನಿಮ್ಮ ಮಾತಿನ ಅರ್ಥ ಏನು? ಭೂಮಿ ಬೆಲೆ ಹೆಚ್ಚಾಗುತ್ತದೆ ಅಂತಲ್ಲವಾ? ಮನುಷ್ಯರಿಗೆ ಬೆಲೆ ಕೊಡಿ. ಭೂಮಿ ಬೆಲೆ ಹೆಚ್ಚಾದರೆ ನಿಮ್ಮ ಬೊಕ್ಕಸ ತುಂಬುತ್ತದೆ. ಸಮಾಜ ಬೆಳೆಯಲ್ಲ. ಭೂಮಿಗೆ ಅಲ್ಲ, ಮನಷ್ಯರಿಗೆ ಬೆಲೆ ಕೊಡಿ. ಈ ಹೋರಾಟ ನಿಲ್ಲಲ್ಲ. ಇದು ಅಂತಃಕರಣದ ಹೋರಾಟ. ಬುದ್ದಿವಂತರ ತರ ಉತ್ತರ ಕೊಡಬೇಡಿ. ನಾವು ನಿಮಗೆ ಪ್ರಶ್ನೆಯೇ ಕೇಳುತ್ತಿಲ್ಲ. ನಮ್ಮ ನೋವನ್ನು ಹೇಳುತ್ತಿದ್ದೇವೆ. ಬದುಕಕ್ಕೆ ಬಿಡಿ ಎಂದು ಮನವಿ ಮಾಡುತ್ತಿದ್ದೇವೆ. ಮನವಿ ಮಾಡಿದರೆ ಸ್ಪಂದಿಸಿ, ಅದು ಬಿಟ್ಟು ಬುದ್ಧಿವಂತರ ತರ ಮಾತನಾಡಬೇಡಿ” ಎಂದು ಕುಟುಕಿದರು.
“ನಮಗೆ ಬೇಕಿರುವುದು ನಿಮ್ಮ ಸ್ಪಂದನೆ. ನಾವು ಮಣ್ಣನ್ನು ಮಾರುವುದಿಲ್ಲ. ಭೂಮಿಯ ಜೊತೆಗೆ ನಮ್ಮ ಸಂವಾದ, ಮಾತನ್ನು ನಿಲ್ಲಿಸುವುದಿಲ್ಲ. ಏನು ಮಾಡ್ತೀರಾ ಕಾರ್ಖಾನೆ ಮಾಡಿ. ಎಷ್ಟು ಜನರ ಬದುಕನ್ನು ಕಿತ್ತುಕೊಳ್ಳುತ್ತದೆ ಎನ್ನುವುದು ನಿಮಗೆ ಗೊತ್ತಿಲ್ಲವಾ? ಕಾರ್ಖಾನೆಗಳನ್ನು ಮಾಡಿ, ಏನು ಮಾಡ್ತೀರಾ ನಮ್ಮ ರೈತರನ್ನು. ಅವರನ್ನು ಕಾರ್ಖಾನೆಯ ಸೆಕ್ಯೂರಿಟಿಗಳನ್ನಾಗಿ ಮಾಡುತ್ತೀರಾ? ಕಸಮುಸರೆ ತಿಕ್ಕಿಸುತ್ತೀರಾ? ಮರ್ಯಾದೆ ಕೊಡಿ” ಎಂದರು.
