ರಾಜ್ಯದಲ್ಲಿ ಇತ್ತೀಚೆಗೆ ವೃದ್ಧ ಪೋಷಕರನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಬಿಟ್ಟು ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಅದೂ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಗೆ ಬಿಟ್ಟು ಮಕ್ಕಳು ನಾಪತ್ತೆಯಾಗುತ್ತಿದ್ದಾರೆ. ಈ ಸಂಬಂಧ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ವಿಲ್‌ಗಳು ಮತ್ತು ಆಸ್ತಿ ವರ್ಗಾವಣೆಗಳನ್ನು ರದ್ದುಗೊಳಿಸುವಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಪೋಷಕರನ್ನು ಅನಾಥರನ್ನಾಗಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಅಮಾನವೀಯ ಕೃತ್ಯಗಳಿಗೆ ತಡೆ ಹಾಕಲು ವೈದ್ಯಕೀಯ ಶಿಕ್ಷಣ ಇಲಾಖೆ ಮುಂದಾಗಿದೆ. ಕರ್ನಾಟಕದಲ್ಲಿ ಇತ್ತೀಚೆಗೆ ವೃದ್ಧ ಪೋಷಕರನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಬಿಟ್ಟು ಹೋಗುತ್ತಿರುವ ಉದಾಹರಣೆಗಳು ಹೆಚ್ಚಾಗಿದೆ. ಅದೂ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಗೆ ಬಿಟ್ಟು ಮಕ್ಕಳು ನಾಪತ್ತೆಯಾಗುತ್ತಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಐಎಂಎಸ್) ಒಂದರಲ್ಲೇ, 150ಕ್ಕೂ ಹೆಚ್ಚು ಹಿರಿಯ ನಾಗರಿಕರನ್ನು ಮಕ್ಕಳು ತೊರೆದ ಪ್ರಕರಣಗಳು ವರದಿಯಾಗಿವೆ. ರಾಜ್ಯಾದ್ಯಂತ ಇತರ ವೈದ್ಯಕೀಯ ಸಂಸ್ಥೆಗಳಲ್ಲಿ ಇಂಥ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಈ ವಿಷಯವನ್ನು ಅರಿತ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ತೀವ್ರ ಬೇಸರ ವ್ಯಕ್ತಪಡಿಸಿದರಲ್ಲದೇ, ಕೂಡಲೇ ವಿಲ್‌ಗಳು ಮತ್ತು ಆಸ್ತಿ ವರ್ಗಾವಣೆಗಳನ್ನು ರದ್ದುಗೊಳಿಸುವಂತೆ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದಾರೆ. ಕಳೆದ ಒಂದು ವಾರದಿಂದ ವಿಕಾಸ ಸೌಧದಲ್ಲಿ ರಾಜ್ಯದ ವಿವಿಧ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಇತರ ಸದಸ್ಯರ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಸಚಿವರು, ಪ್ರಕರಣಗಳು ಕಂಡು ಬಂದ ಕೂಡಲೇ ವೈದ್ಯಕೀಯ ಶಿಕ್ಷಣ ನಿರ್ದೇಶಕರು (ಡಿಎಂಇ) ಕೂಡಲೇ ಸಹಾಯಕ ಆಯುಕ್ತರಿಗೆ (ಕಂದಾಯ ಉಪವಿಭಾಗ) ದೂರುಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ತಮ್ಮ ಮಕ್ಕಳ ಪರವಾಗಿ ಮಾಡಿದ ವಿಲ್‌ಗಳು ಮತ್ತು ಆಸ್ತಿ ವರ್ಗಾವಣೆಗಳನ್ನು ರದ್ದುಗೊಳಿಸುವಂತೆ ಪರಿತ್ಯಕ್ತ ಪೋಷಕರಿಗೆ ಸಚಿವರು ಕರೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತಕ್ಕೆ ಬೇಕಿರುವುದು ಬಣ್ಣಗಳ ಸಂಗಮ, ಸಂಘರ್ಷದ ಸಂಭ್ರಮವಲ್ಲ!
“ತಮ್ಮ ಮಕ್ಕಳು ನಮ್ಮನ್ನು ನೋಡಿಕೊಳ್ಳಲು ಆಗದೇ, ತೊರೆದಿದ್ದಾರೆ. ಕೆಲವರು ಆರ್ಥಿಕ ಸಂಕಷ್ಟಗಳಿಂದ ನಮ್ಮನ್ನು ಇಲ್ಲಿ ಬಿಟ್ಟಿದ್ದಾರೆ. ನಮ್ಮ ಆಸ್ತಿಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡ ನಂತರ ಮಕ್ಕಳು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಗೆ ಸೇರಿಸಿ ಹೊರಟುಹೋಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಊಟ, ವಸತಿ, ಆಶಯ ಉಚಿತವಾಗಿ ಸಿಗುತ್ತದೆ ಎಂಬ ಉದ್ದೇಶದಿಂದ ನಮ್ಮನ್ನು ಇಲ್ಲಿ ಬಿಟ್ಟುಹೋಗಿದ್ದಾರೆ ಎಂದು ಪರಿತ್ಯಕ್ತ ಪೋಷಕರು ತಿಳಿಸಿದ್ದಾರೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂತಹ ಪರಿತ್ಯಕ್ತ ಹಿರಿಯ ನಾಗರಿಕರನ್ನು ಬಿಐಎಂಎಸ್ ಅಧಿಕಾರಿಗಳು ಬೆಳಗಾವಿ ಮತ್ತು ಸುತ್ತಮುತ್ತಲಿನ 70 ಹಿರಿಯ ನಾಗರಿಕರ ನಿವೃತ್ತಿ ಗೃಹಗಳಲ್ಲಿ ಅಥವಾ ವೃದ್ಧಾಶ್ರಮಗಳಲ್ಲಿ ಆಶ್ರಯ ಕಲ್ಪಿಸಿಕೊಟ್ಟಿದ್ದಾರೆ. ಆದರೆ ಇನ್ನೂ ಅನೇಕರು ಆಸ್ಪತ್ರೆಗಳಲ್ಲಿಯೇ ಇದ್ದಾರೆ.
“ವೈದ್ಯಕೀಯ ಸಂಸ್ಥೆಗಳ ನಿರ್ದೇಶಕರು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ, 2007 ರ ಅಡಿಯಲ್ಲಿ ಸಹಾಯಕ ಆಯುಕ್ತರು ಕ್ರಮ ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ದೂರುಗಳನ್ನು ಸಲ್ಲಿಸಬೇಕು” ಎಂದು ಡಾ. ಪಾಟೀಲ್ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
“ಈ ಕಾನೂನಿನ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರಿಕರಿಗೆ ಆರ್ಥಿಕ ಮತ್ತು ವೈದ್ಯಕೀಯ ಬೆಂಬಲವನ್ನು ಒದಗಿಸಬೇಕು ಎಂಬ ನಿಯಮವಿದೆ. ಅವರು ಹಾಗೆ ಮಾಡಲು ವಿಫಲವಾದರೆ, ಪೋಷಕರು ತಮ್ಮ ಮಕ್ಕಳ ಪರವಾಗಿ ಮಾಡಿದ ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸುವ ಕಾನೂನುಬದ್ಧ ಹಕ್ಕು ಹೊಂದಿರುತ್ತಾರೆ” ಎಂದು ಡಾ. ಪಾಟೀಲ್ ಹೇಳಿದರು.
ಕಾಯ್ದೆಯ ಸೆಕ್ಷನ್ 23 ರ ಪ್ರಕಾರ, ಮಕ್ಕಳು ಆಸ್ತಿಯನ್ನು ಆನುವಂಶಿಕವಾಗಿ ಪಡೆದ ನಂತರ ಹೆತ್ತವರನ್ನು ನಿರ್ಲಕ್ಷಿಸಿದರೆ ಅಥವಾ ತ್ಯಜಿಸಿದರೆ, ವಿಲ್ ಅಥವಾ ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸಲು ಮತ್ತು ವಯಸ್ಸಾದ ಪೋಷಕರಿಗೆ ಮಾಲೀಕತ್ವವನ್ನು ಪುನಃ ಪಡೆಯಲು ಕಾಯ್ದೆಯಲ್ಲಿ ಅನುಮತಿ ಇದೆ ಎಂದು ತಿಳಿಸಲಾಗಿದೆ.
