"ಅಮೆರಿಕ ದೇಶವು ಚಾಟ್‌ಜಿಪಿಟಿ ಎಂದು ಮಾತನಾಡುತ್ತಿದೆ. ಚೀನಾ ದೇಶವು ಡೀಪ್ ಸೀಕ್ ಎನ್ನುತ್ತಿದೆ. ಆದರೆ ನಾವು ಕುಂಭಮೇಳಕ್ಕೆ ಹೋಗಿ ಗಲೀಜು ನೀರಿನಲ್ಲಿ ಮಿಂದೇಳುತ್ತಿದ್ದೇವೆ"
“ಭಾರತ ಜಗತ್ತಿನ ಕಾರ್ಖಾನೆಯಾಗಿದೆ ಎಂದು ಅವರು ಮಾತನಾಡುತ್ತಿದ್ದಾರೆ. ಆದರೆ, ಭಾರತವು ಅಸ್ಪೃಶ್ಯತೆ ಆಚರಣೆ, ದಲಿತರ ಮೇಲಿನ ಶೋಷಣೆ ಮತ್ತು ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳ ಕಾರ್ಖಾನೆಯಾಗಿ ರೂಪುಗೊಳ್ಳುತ್ತಿದೆ” ಎಂದು ಉಪನ್ಯಾಸಕ ಡಾ.ರವಿಕುಮಾರ್ ಬಾಗಿ ಕಳವಳ ವ್ಯಕ್ತಪಡಿಸಿದರು.
ಸಂಸದ ಶಶಿಕಾಂತ್ ಸೆಂಥಿಲ್, ವಾರ್ತಾಭಾರತಿ ಪ್ರಧಾನ ಸಂಪಾದಕ ಎ.ಎಸ್.ಪುತ್ತಿಗೆ ಮತ್ತು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರ ಬರಹಗಳನ್ನೊಳಗೊಂಡ, ಕಿರಂ ಪ್ರಕಾಶನ ಹೊರತಂದಿರುವ ‘ಈಗ ಭಾರತ ಮಾತಾಡಬೇಕಾಗಿದೆ..’ ಕೃತಿ ಬಿಡುಗಡೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಧಾನಸೌಧದ ಆವರಣದಲ್ಲಿ ನಡೆಯುತ್ತಿರುವ ಪುಸ್ತಕ ಮೇಳದಲ್ಲಿ ಭಾನುವಾರ ಕೃತಿ ಲೋಕಾರ್ಪಣೆಯಾಯಿತು.

“ಇಲ್ಲಿ ಜಾತಿ ಮತಧರ್ಮಗಳೇ ವಿಜೃಂಭಿಸುತ್ತಿವೆ. ಮಾನವೀಯತೆ, ಕರುಣೆ, ಮೈತ್ರಿ ಇಲ್ಲವಾಗುತ್ತಿದೆ. ವಿಕೃತಿಯನ್ನು ದೇಶವು ತಲುಪುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಭಾರತ ವಿಶ್ವಗುರು ಪಟ್ಟ ಕಳಚಿಕೊಂಡಿದ್ದು ಯಾವಾಗ ಎಂದು ಆಶ್ಚರ್ಯವಾಗುತ್ತಿದೆ. ಭಾರತ ಯಾವುದರ ಕಾರ್ಖಾನೆಯಾಗಿದೆ? ಅಸ್ಪೃಶ್ಯತೆಯ ಕಾರ್ಖಾನೆಯಾಗಿದೆ. ದಲಿತರನ್ನು ಕೊಲ್ಲುವ ಕಾರ್ಖಾನೆಯಾಗಿದೆ. ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡುವ ಕಾರ್ಖಾನೆಯಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿರಿ: ಸರ್ಕಾರದ ಬಳಿ ಹಣ ಇಲ್ಲವೆಂದರೆ ನಾವು ಹಣ ಸಂಗ್ರಹಿಸಿ ವಿಶ್ವವಿದ್ಯಾಲಯ ನಡೆಸುತ್ತೇವೆ: ಆರ್ ಅಶೋಕ್
“ಅಮೆರಿಕ ದೇಶವು ಚಾಟ್‌ಜಿಪಿಟಿ ಎಂದು ಮಾತನಾಡುತ್ತಿದೆ. ಚೀನಾ ದೇಶವು ಡೀಪ್ ಸೀಕ್ ಎನ್ನುತ್ತಿದೆ. ಆದರೆ ನಾವು ಕುಂಭಮೇಳಕ್ಕೆ ಹೋಗಿ ಗಲೀಜು ನೀರಿನಲ್ಲಿ ಮಿಂದೇಳುತ್ತಿದ್ದೇವೆ. ಇದೇ ಬಹಳ ದೊಡ್ಡ ಸಾಧನೆ ಎನ್ನುತ್ತಿದ್ದೇವೆ. ನದಿ ಕಲುಷಿತವಾಗಿದ್ದು, ಇದರಲ್ಲಿ ಮುಳುಗಿದರೆ ರೋಗಗಳು ಬರುತ್ತವೆಂದು ಭಾರತ ಸರ್ಕಾರವೇ ಹೇಳಿದರೂ ಕೇಳುತ್ತಿಲ್ಲ. ದೇಶ ಯಾವ ಕಡೆ ಹೋಗುತ್ತಿದೆ? ಪ್ರಗತಿ ಯಾವುದು? ಸುಧಾರಣೆ ಯಾವುದು? ಇಂತಹ ದುಸ್ಥಿತಿಯ ಕಾಲಘಟ್ಟದಲ್ಲಿ ನಾವಿದ್ದೇವೆ. ಮತ, ಧರ್ಮಗಳ ಗಲೀಜು ಹೆಚ್ಚಾದಷ್ಟು ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಹೀಗಾಗಿ ಭಾರತ ಹೆಚ್ಚು ಮಾತನಾಡಬೇಕಿದೆ” ಎಂದು ಅಭಿಪ್ರಾಯಪಟ್ಟರು.
“ಭಾರತ ಏಕೆ ಮಾತನಾಡಬೇಕಿದೆ ಎಂಬ ಪ್ರಶ್ನೆಗೆ ಉತ್ತರವಾಗಿ ಈ ಕೃತಿಯ ಹಿನ್ನುಡಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಲುಗಳನ್ನು ಬಳಸಲಾಗಿದೆ. ‘ರಾಜಕೀಯ ಪಕ್ಷಗಳು ದೇಶಕ್ಕಿಂತ ಜಾತಿ, ಧರ್ಮವೇ ಮುಖ್ಯವೆಂದು ಭಾವಿಸಿದ್ದರೆ ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಎರಡನೇ ಬಾರಿಗೆ ಗಂಡಾಂತರ ಬಂದಂತೆ’ ಎಂದಿದ್ದರು ಅಂಬೇಡ್ಕರ್. ಈ ಎಚ್ಚರದ ಕಾರಣಕ್ಕೆ ಭಾರತ ಮಾತನಾಡಬೇಕಿದೆ” ಎಂದು ಆಶಿಸಿದರು.
ಬರಹಗಾರ ಜಿ.ಎನ್. ಮೋಹನ್ ಮಾತನಾಡಿ, “ಕೆಂಡದ ಮೇಲೆ ನಡೆಯುತ್ತಿರುವ ಅನುಭವ ಎಲ್ಲರಿಗೂ ಆಗುತ್ತಿದೆ. ಇಷ್ಟು ದಿನ ನಮ್ಮನ್ನು ಕಾಪಾಡಿರುವ, ಕಾಪಾಡುವುದಕ್ಕಾಗಿಯೇ ಇರುವ ಸಂವಿಧಾನವನ್ನು ಅಸ್ಥಿರಗೊಳಿಸುವ ದೊಡ್ಡ ಹುನ್ನಾರ ಈ ದೇಶದಲ್ಲಿ ನಡೆಯುತ್ತಿದೆ. ಈಗ ಇರುವ ಸಂವಿಧಾನಕ್ಕೆ ಪ್ರತಿಯಾಗಿ ಇನ್ನೊಂದು ಸಂವಿಧಾನವನ್ನು ನಾವು ಮಂಡಿಸುತ್ತೇವೆ ಎಂದು ಕುಂಭಮೇಳದ ಧರ್ಮ ಸಂಸತ್ ಘೋಷಣೆ ಮಾಡಿದೆ. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪಿಸಿದಂತಹ ಸಂವಿಧಾನ ಮಾತ್ರವೇ ಈ ದೇಶದ ಸಂವಿಧಾನ. ಅದು ದೇಶದ ಎಲ್ಲರ ನೋವುಗಳಿಗೂ ಪರಿಹಾರಗಳನ್ನು ಸೂಚಿಸುವ ಕಾರ್ಯಸೂಚಿಯೂ ಹೌದು” ಎಂದು ಬಣ್ಣಿಸಿದರು.
ಇದನ್ನೂ ಓದಿರಿ: ರಾಜ್ಯದಲ್ಲಿ ಉಷ್ಣಾಂಶ ಗಣನೀಯ ಏರಿಕೆ| ಮಾರ್ಚ್‌ನಲ್ಲಿ ಅಧಿಕ ಮಳೆ; ಸುಳ್ಯದಲ್ಲಿ 40.1 ಡಿಗ್ರಿ ದಾಖಲು
“ನಮ್ಮ ಸಂವಿಧಾನಕ್ಕೆ ಯಾವ ರೀತಿಯ ಧಕ್ಕೆ ಬರುತ್ತಿದೆ ಎಂದು ನಾವು ಯೋಚಿಸಬೇಕು. ಈ ನಿಟ್ಟಿನಲ್ಲಿ ಈ ಕೃತಿ ಹೊರಬಂದಿದೆ. ಇದು ಪುಟ್ಟ ಪುಸ್ತಕವಾದರೂ ಪರಿಣಾಮಕಾರಿಯಾಗಿದೆ. ಸಿಎಎ ಜಾರಿ, ಸಂವಿಧಾನ ಬದಲಿಸುವ ಹುನ್ನಾರ, ಮನುಶಾಸ್ತ್ರದ ಹೇರುವಿಕೆಯ ಕುರಿತು ಈ ಕೃತಿ ಮಾತನಾಡುತ್ತದೆ” ಎಂದು ವಿವರಿಸಿದರು.
ಸಾಹಿತಿ ಡಾ.ರಾಜಪ್ಪ ದಳವಾಯಿ ಮಾತನಾಡಿ, “ಧರ್ಮ ಲೇಪನ ಕೇಳುವುದಕ್ಕೆ, ಬಳಸುವುದಕ್ಕೆ ಚೆನ್ನಾಗಿರುತ್ತದೆ. ಆದರೆ ಧರ್ಮದ ಹೆಸರಲ್ಲಿ ನಡೆಯುವ ಶೋಷಣೆಯು ಅಮಾನವೀಯ. ಈ ಕುರಿತು ಯೋಚಿಸಿದಾಗ ನಮಗೆ ಧರ್ಮ ಮುಖ್ಯವಲ್ಲ ಮನುಷ್ಯತ್ವವೇ ಮುಖ್ಯವಾಗುತ್ತದೆ” ಎಂದರು.
ಅಭಿರುಚಿ ಪ್ರಕಾಶನದ ಅಭಿರುಚಿ ಗಣೇಶ್, ಲೇಖಕಿ ಡಾ.ನಮನಾ, ಕಿರಂ ಪ್ರಕಾಶನದ ಧನಂಜಯ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್, ಕವಿ ಸುಬ್ಬು ಹೊಲೆಯಾರ್ ಮೊದಲಾದವರು ಹಾಜರಿದ್ದರು.