“ಭಾರತೀಯ ಇತಿಹಾಸ ಶುರುವಾಗುವುದೇ ಬುದ್ಧನಿಂದ. ಅದಕ್ಕಿಂತ ಹಿಂದಿನ ಇತಿಹಾಸವೂ ಬೌದ್ಧಗ್ರಂಥಗಳನ್ನೇ ಅವಲಂಬಿಸಿಯೇ ಬರೆಯಲಾಗಿದೆ. ಬುದ್ಧ ಯಾಕೆ ಹೊರಬಂದ ಎಂಬುದನ್ನು ತಿಳಿಯಬೇಕಿದ್ದರೂ ಅವನ ಕಾಲದ ಜೀವನಕ್ರಮ ಹೇಗಿತ್ತು ಎಂಬುದನ್ನು ತಿಳಿಯುವುದು ಬಹಳ ಮುಖ್ಯ. ಬಾಬಾಸಾಹೇಬ್ ಅಂಬೇಡ್ಕರ್ ಕೂಡ ಸಂಪುಟ 17ರ ʼಹಿಂದೂ ಸ್ತ್ರೀ ಉನ್ನತಿ ಅವನತಿʼ ಅಧ್ಯಾಯದಲ್ಲಿ ಬುದ್ಧನಿಗಿಂತ ಹಿಂದೆ ಸ್ತ್ರೀಯರ ಸ್ಥಿತಿಗತಿ ಎಷ್ಟು ಹೀನಾಯವಾಗಿತ್ತು ಮತ್ತು ಬುದ್ಧ ಏನೇನು ಬದಲಾವಣೆ ತಂದ ಎಂದು ವಿವರಿಸಿದ್ದಾರೆ. ಅವೆಲ್ಲ ʼಥೇರಿಗಾಥಾ ಕಾಣಿಸಿದ ಹೆಣ್ಣು; ಬೌದ್ಧಧರ್ಮದಲ್ಲಿ ಮಹಿಳೆʼ ಕೃತಿಯಲ್ಲಿದೆ” ಎಂದು ಹಿರಿಯ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.
ಡಾ ಶೈಲಜಾ ಅವರು ಬರೆದಿರುವ ಜೀರುಂಡೆ ಪ್ರಕಾಶನ ಹೊರತಂದಿರುವ ʼಥೇರಿಗಾಥಾ ಕಾಣಿಸಿದ ಹೆಣ್ಣು; ಬೌದ್ಧಧರ್ಮದಲ್ಲಿ ಮಹಿಳೆʼ ಕೃತಿ ಕುರಿತು ಬೀಟಲ್ ಬುಕ್‌ಹೌಸ್‌ನಲ್ಲಿ ಶನಿವಾರ ಸಂಜೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬುದ್ಧ ತನ್ನ ತಾಯಿಯ ಬಗ್ಗೆ ಪರಿಚಯ ಮಾಡುತ್ತಾ, ಆಕೆ ಮದ್ಯಪಾನ ಮಾಡುತ್ತಿರಲಿಲ್ಲ, ಸುಳ್ಳು ಹೇಳುತ್ತಿರಲಿಲ್ಲ ಎಂದು ಹೇಳಿದ್ದ. ಇದು ಆ ಕಾಲದಲ್ಲಿ ಸ್ತ್ರೀಯರು ಮದ್ಯಪಾನ ಮಾಡುತ್ತಿದ್ದರು, ಜೂಜಾಡುತ್ತಿದ್ದರು, ಬೇಕಾದಷ್ಟು ವ್ಯಸನಗಳಿದ್ದವು ಎಂಬುದನ್ನು ಸೂಚಿಸುತ್ತದೆ. ಈ ರೀತಿ ಅವಸಾನ ಸ್ಥಿತಿಯಲ್ಲಿದ್ದ ಕಾರಣಕ್ಕೆ ಏನಾದರೂ ಮಾಡಬೇಕು ಎಂದು ಮನೆಬಿಟ್ಟು ಹೊರಟಿದ್ದ. ಬಹಳಷ್ಟು ಕವಯತ್ರಿಯರು ʼಬುದ್ಧ ಮಧ್ಯರಾತ್ರಿ ಬಿಟ್ಟು ಹೋದʼ ಎಂಬುದನ್ನು ಬರೆಯುತ್ತಾ ಬಂದಿದ್ದಾರೆ. ಆತ ಮಧ್ಯರಾತ್ರಿ ಬಿಟ್ಟು ಹೋಗದಿದ್ದರೆ ಜಗತ್ತಿಗೆ ಎಷ್ಟು ನಷ್ಟವಾಗುತ್ತಿತ್ತು ಎಂದು ಯಾರೂ ಯೋಚನೆ ಮಾಡಿಲ್ಲ. ಅದು ನಿಜಕ್ಕೂ ಮಹಾಸಂಕ್ರಮಣ ಮತ್ತು ಜಗತ್ತಿನಲ್ಲಿ ಘಟಿಸಿದ ಅಪೂರ್ವ ಘಟನೆ ಎಂದರು.
ಬೌದ್ಧ ಧರ್ಮ ಮತ್ತು ಕ್ರೈಸ್ತ ಧರ್ಮಕ್ಕೆ ಸಂಬಂಧವಿದೆ ಎಂದು ವಿದ್ವಾಂಸರೊಬ್ಬರು ಬರೆದಿದ್ದಾರೆ. ಏಸು ಕ್ರಿಸ್ತ 12 ವರ್ಷಗಳ ಕಾಲ ಇರಲಿಲ್ಲ. ಒಂದು ಊಹೆ ಪ್ರಕಾರ ಆತ ಕಾಶ್ಮೀರದಲ್ಲಿ ಬುದ್ಧ ಸನ್ಯಾಸಿಯಾಗಿದ್ದ. ದೇವರಿಲ್ಲ ಎಂದರೆ ಧರ್ಮ ಉಳಿಯಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದ ಕ್ತಿಸ್ತ ದೇವರನ್ನು ಸೃಷ್ಟಿಸಿ ಧರ್ಮ ಸ್ಥಾಪಿಸಿದ. ಬೌದ್ಧ ಮತ್ತು ಕ್ರೈಸ್ತ ಧರ್ಮಕ್ಕೆ ಸಂಬಂಧ ಇದೆ, ಅದೇ ಇಸ್ಲಾಂ ಧರ್ಮಕ್ಕೂ ಬಂದಿದೆ. ಎಲ್ಲಾ ಧರ್ಮದಲ್ಲೂ ಬೌದ್ಧ ದ್ರವ್ಯ ಇದ್ದೇ ಇದೆ. ಇದರಿಂದಾಗಿ ಬುದ್ಧನಿಗೆ ಎಷ್ಟು ಪ್ರಾಮುಖ್ಯತೆ ಇದೆ ಎಂದು ತಿಳಿಯುತ್ತದೆ ಎಂದರು.
ಬುದ್ಧ ಮಹಾಪರಿನಿಬ್ಬಾಣ ಹೊಂದಿದ ನಾನೂರು ವರ್ಷಗಳ ನಂತರ ತ್ರಿಪಿಟಕಗಳು ಬಂದವು. ಬುದ್ಧನ ಬೋಧನೆಗಳನ್ನು ಆತನ ಬೋಧನೆಗಳನ್ನು ಪಠಿಸುವ ಸಂಗೀತಿಗಳ ಮೂಲಕ ಅವು ಪ್ರಚಾರಕ್ಕೆ ಬಂದವು. ಬುದ್ಧ ವಿರೋಧಿಗಳು ಸೇರಿ ಅಪಪ್ರಚಾರಕ್ಕೂ ಬಳಸುತ್ತಿದ್ದರು. ಮೂರನೇ ಸಂಗೀತಿ ಅಶೋಕನ ಕಾಲದಲ್ಲಿ ನಡೆದಿತ್ತು. ನಾಲ್ಕನೇ ಸಂಗೀತಿ ಶ್ರೀಲಂಕಾದಲ್ಲಿ ನಡೆಯುವ ವೇಳೆಗೆ ಬರವಣಿಗೆ ಬಂದಿತ್ತು. ಐದು ಸಾವಿರ ಬಿಕ್ಕುಗಳು ಸೇರಿ ಬುದ್ಧನ ಸಂದೇಶವನ್ನು ತಾಳೆಗರಿಯಲ್ಲಿ ಬರೆದರು. ಹೀಗೆ ಬಾಯಿಯಿಂದ ಬಾಯಿಗೆ ಬಂದಿರುವ ಕಾರಣ ತ್ರಿಪಿಟಕಗಳನ್ನು ಓದಿದರೆ ಪುರಾಣ ಓದಿದ ಅನುಭವವಾಗುತ್ತದೆ. ಪಾಶ್ಚಾತ್ಯ ವಿದ್ವಾಂಸರು ಅವುಗಳನ್ನು ಸೋಸಿ ಉತ್ತಮ ಗ್ರಂಥಗಳನ್ನು ರಚಿಸಿದ್ದಾರೆ.
ಬುದ್ಧನ ಪರಿನಿಬ್ಬಾಣದ ಕೊನೆಯ ಕ್ಷಣದಲ್ಲಿ ಒಬ್ಬ ಓಡೋಡಿ ಬಂದು, “ಒಂದು ಪ್ರಶ್ನೆ ಇದೆ ಅದಕ್ಕೆ ಉತ್ತರ ಬೇಕಿದೆ” ಎಂದು ಕೇಳುತ್ತಾನೆ. ಆಗ ಬುದ್ಧನ ಸಹಾಯಕ ಆನಂದ ತಡೆಯುತ್ತಾನೆ. ಆದರೆ ಬುದ್ಧ ಕಣ್ಸನ್ನೆ ಮೂಲಕ ಕರೆಯುತ್ತಾನೆ. “ಭಂತೇಜಿ ನೀವು 45 ವರ್ಷ ಬೋಧನೆ ಮಾಡಿದ್ದೀರಿ. ಇದು ನೀವು ಹೇಳಿದ್ದು ಅಂತ ಯಾರ್ಯಾರೋ ಬಂದು ಹೇಳುತ್ತಾರೆ. ಅದನ್ನು ನೀವೇ ಹೇಳಿದ್ದು ಎಂದು ಹೇಗೆ ನಂಬಲಿ” ಎಂದು ಹೇಳುತ್ತಾನೆ. ಅದಕ್ಕೆ ಬುದ್ಧ, “ಹಿರಿಯ ಬಿಕ್ಕು ಹೇಳಿದ್ರು, ಗುರುಗಳು ಹೇಳಿದ್ರು ಅಂತ ಒಪ್ಪಬೇಡ. ನೀನು ನನ್ನ ಮಾತುಗಳನ್ನು ಕೇಳಿಸಿಕೊಂಡಿದ್ದಿ. ಬೇರೆ ಯಾರೋ ಹೇಳಿದರೆ ತುಲನೆ ಮಾಡು. ಸರಿಯಿದೆ ಎಂದರೆ ನಂಬು, ಇಲ್ಲದಿದ್ದರೆ ನಂಬಬೇಡ” ಎನ್ನುತ್ತಾನೆ.
ಮಹಾಪ್ರಜಾಪತಿ ಗೌತಮಿ ತಾನು ಬಿಕ್ಕು ಆಗಬೇಕು ಎಂದು ಬಂದಾಗ ಬುದ್ಧ ಒಪ್ಪುವುದಿಲ್ಲ. ನಿಮಗೆ ತೊಂದರೆ ಆಗುತ್ತದೆ ಎಂದು ಹೇಳುತ್ತಾನೆ. ನಂತರ ಆಕೆ ಐನೂರು ಮಂದಿ ಮಹಿಳೆಯರ ಜೊತೆ ಬಂದು “ನಮ್ಮನ್ನು ಸೇರಿಸಿಕೊಳ್ಳಿ. ನಾವು ಬಿಕ್ಕುಗಳಿಗೆ ತೊಂದರೆ ಕೊಡಲ್ಲ, ಸಮಾಜಸೇವೆಗೆ ಆವಕಾಶ ಮಾಡಿಕೊಡಿ” ಎಂದು ವಿನಂತಿಸಿದಾಗ, ಶಿಷ್ಯ ಆನಂದ ಬುದ್ಧನಿಗೆ ಹೇಳುತ್ತಾನೆ, “ನೀವು ಸೇರಿಸಿಕೊಳ್ಳದಿದ್ದರೆ ಇದು ಲಿಂಗ ಅಸಮಾನತೆಯಾಗುತ್ತದೆ. ವೈದಿಕ ಧರ್ಮಕ್ಕೂ ನಮಗೂ ವ್ಯತ್ಯಾಸವಿಲ್ಲ ಎನಿಸುತ್ತದೆ” ಎಂದು ಹೇಳುತ್ತಾನೆ. ಆಗ ಒಪ್ಪಿಕೊಂಡ ಬುದ್ಧ, ಕೆಲವು ಷರತ್ತುಗಳನ್ನು ಹಾಕುತ್ತಾನೆ. ಬಾಲಬಿಕ್ಕುಗಳಿಗೂ ಬಾಗಿ ನಮಸ್ಕರಿಸಬೇಕು, ಬಿಕ್ಕುಗಳು ಹೇಳಿದಂತೆ ಕೇಳಬೇಕು ಎಂಬ ಷರತ್ತು ವಿಧಿಸಲಾಗುತ್ತದೆ ಎಂದು ತ್ರಿಪಿಟಕದಲ್ಲಿ ಇದೆ. ಆದರೆ ಈ ಪುಸ್ತಕದಲ್ಲಿ ಅದನ್ನು ವಿಶ್ಲೇಷಣೆಗೆ ಒಳಪಡಿಸಿ ಬುದ್ಧ ಹೀಗೆ ಹೇಳಿರಲು ಸಾಧ್ಯವಿಲ್ಲ ಎಂದು ನಿರೂಪಿಸಲಾಗಿದೆ. ಇದು ಬೌದ್ಧ ಧರ್ಮ ಬೆಳೆಯುವ ಪರಿ ಎಂದರು.
ಬುದ್ಧನ ಕಾಲದಲ್ಲಿ ವೇಶ್ಯೆಯರಿಗೂ ಗೌರವ ಇತ್ತು. ಅಮೃಪಾಲಿ ಎಂಬ ವೇಶ್ಯೆ ಬುದ್ಧನನ್ನು ತನ್ನ ಮನೆಗೆ ಊಟಕ್ಕೆ ಕರೆದಾಗ ಬುದ್ಧ ಹೋಗುತ್ತಾನೆ. ರಾಜನೊಬ್ಬ ತನ್ನ ಮನೆಗೆ ಕರೆದರೂ ಅಮ್ರಪಾಲಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನೆ ಎಂಬ ಕತೆಯನ್ನು ಉಲ್ಲೇಖಿಸಿದರು.
ಬುದ್ಧ ನಿಜವಾದ ಕಮ್ಯುನಿಸ್ಟ್- ದು ಸರಸ್ವತಿ
ಸಂಘರ್ಷಕ್ಕೆ ಸದಾ ಒಡ್ಡಿಕೊಂಡ ಬುದ್ಧ ನಿಜವಾದ ಕಮ್ಯುನಿಸ್ಟ್ ಅಂತ ಅನ್ನಿಸುತ್ತದೆ ಎಂದು ಚಿಂತಕಿ ದು ಸರಸ್ವತಿ ಹೇಳಿದರು.
ಹೆಣ್ಣುಮಕ್ಕಳನ್ನು ಗೌರವಿಸುವ ಬಗೆಯ ಬಗ್ಗೆ ಬುದ್ಧನ ಮಾತುಗಳನ್ನು ಅವರು ಉಲ್ಲೇಖಿಸಿದರು. ಪತಿ ಪತ್ನಿಯನ್ನು ನಿಂದಿಸಿ ಕಡೆಗಣಿಸದಿರುವ ಮೂಲಕ, ಪತ್ನಿಗೆ ನಿಷ್ಠನಾಗಿರುವ ಮೂಲಕ, ಅಧಿಕಾರ ನೀಡುವ ಮೂಲಕ, ಆಭರಣ ಕೊಡಿಸುವ ಮೂಲಕ ಗೌರವಿಸಬೇಕು ಎಂದು ಹೇಳುತ್ತಾನೆ. ಆತ ತನ್ನ ಸಂಘ ಸೇರಿಕೊಂಡ ಮಹಿಳೆಯರನ್ನು ಗೌರವಿಸಿ ಅವರಿಗೆ ಜವಾಬ್ದಾರಿಗಳನ್ನು ನೀಡಿದ್ದ. ಪ್ರಜಾಪತಿ ಗೌತಮಿ ಎಲ್ಲರನ್ನೂ ಸಮಾನವಾಗಿ ಕಾಣುವ ಎಲ್ಲರವ ಗೌರವಕ್ಕೆ ಪಾತ್ರರಾಗಿರುವವರು, ಉಪ್ಪಲವಣ್ಣ ದಿವ್ಯಶಕ್ತಿ ಉಳ್ಳವಳು, ಕಿಸಾಗೋತಮಿ ತಪಸ್ಸಿನ ಹನ್ನೊಂದು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವವಳು, ಸಕುಲಾ ದಿವ್ಯದೃಷ್ಟಿಯುಳ್ಳವಳು, ಮನಸ್ಸು ಸ್ವಲ್ಪವೂ ವಿಚಲಿತಳಾಗದವಳು ಸಾಮಾ, ಧರ್ಮವನ್ನು ಸರಿಯಾಗಿ ವಿಶ್ಲೇಷಿಸಿ ಧಮ್ಮಮಾರ್ಗವನ್ನು ಬೆಳೆಸುತ್ತಿರುವವಳು… ಹೀಗೆ ಪ್ರತಿಯೊಬ್ಬ ಬಿಕ್ಕುಣಿಯರ ಕುರಿತು ಬುದ್ಧ ಮೆಚ್ಚುಗೆಯ ಮಾತುಗಳನ್ನಾಡಿದ್ದಾನೆ ಎಂದು ಹೇಳಿದರು.
ಕೃತಿಕಾರರಾದ ಶೈಲಜಾ ಅವರು, “ನಿರಂತರ ಬದಲಾವಣೆ ಬುದ್ಧನ ಮೂಲಭೂತ ಚಿಂತನೆ. ಬುದ್ಧ ಮಹಿಳೆಯರ ಒಡನಾಟದಿಂದ ತುಂಬ ದೊಡ್ಡ ಪ್ರಕ್ರಿಯೆಯಾಯಿತು. ಬುದ್ಧನ ಬಳಿ ಹಟ ಮಾಡಿ ಸೇರಿಕೊಂಡ ಮಹಿಳೆಯರ ಕಾರಣಕ್ಕೆ ಬುದ್ಧ ಹೆಚ್ಚು ಹೆಚ್ಚು ಮನುಷ್ಯನಾದ. ಎಲ್ಲರನ್ನೂ ಒಳಗೊಂಡ ಬುದ್ಧ ತನ್ನ ಸಂಘಕ್ಕೆ, ಗಂಡನನ್ನು ಬೆಟ್ಟದ ಮೇಲಿಂದ ನೂಕಿ ಕೊಂದ ಖೇಮಾಳನ್ನೂ ಸೇರಿಸಿಕೊಂಡ, ವೇಶ್ಯೆಯರನ್ನೂ ಸೇರಿಸಿಕೊಂಡ. ಅವರು ಎದುರಿಗೆ ಆಗುತ್ತಿರುವುದನ್ನೂ ಪ್ರಶ್ನೆ ಮಾಡಿದರು, ಒಳಗಾಗುತ್ತಿರುವ ತಳಮಳವನ್ನೂ ಪ್ರಶ್ನೆ ಮಾಡಿದರು. ಇದರಿಂದ ಜ್ಞಾನಾರ್ಜನೆ ಆಯಿತು. ಬುದ್ಧನ ಸಂಘಕ್ಕೆ ಬಂದಿದ್ದರಿಂದ ಇದು ಸಾಧ್ಯವಾಯಿತು” ಎಂದರು.
ಡಾ ವಿಜಯಮ್ಮ, ಡಾ ಎನ್ ಗಾಯತ್ರಿ, ಜಿ ರಾಮಕೃಷ್ಣ, ಡಾ ಟಿ ಎಸ್ ವೇಣುಗೋಪಾಲ್, ಡಾ ಎಚ್‌ಎಸ್ ಶ್ರೀಮತಿ ಸೇರಿದಂತೆ ಹಲವು ಸಾಹಿತಿಗಳು ಉಪಸ್ಥಿತರಿದ್ದರು. ಪ್ರಕಾಶಕ ಧನಂಜಯ ಎನ್ ಕಾರ್ಯಕ್ರಮ ನಿರೂಪಿಸಿದರು.